ಸೋಮವಾರ, ಮಾರ್ಚ್ 1, 2021
23 °C

ಮಾತು ಮನೆ ಕೆಡಿಸೀತು...!

ಸುಚೇತನಾ ನಾಯ್ಕ Updated:

ಅಕ್ಷರ ಗಾತ್ರ : | |

ಮಾತು ಮನೆ ಕೆಡಿಸೀತು...!

ದಂಪತಿಯ ನಡುವೆ ಬಾಂಧವ್ಯದ ಕೊಂಡಿ ಚಿಕ್ಕಪುಟ್ಟ ವಿಷಯಗಳಿಗೂ ಕಳಚಿ ಕೊಳ್ಳುತ್ತಿರುವುದು ಕೌಟುಂಬಿಕ ಕೋರ್ಟ್‌ಗಳಲ್ಲಿ ದಾಖಲಾಗುತ್ತಿರುವ ಕೇಸುಗಳನ್ನು ನೋಡಿದರೆ ತಿಳಿಯುತ್ತದೆ. ಗಂಡ–ಹೆಂಡಿರ ನಡುವೆ ಸಾಮರಸ್ಯವನ್ನು ಹದಗೆಡಿಸುವುದಕ್ಕೆ ಮುಖ್ಯ ಕಾರಣಗಳಲ್ಲಿ ಒಂದಾಗಿರುವುದು ಮಾತು.ಗಂಡ ಹೆಂಡಿರ ಜಗಳ... ಈ ವಾಕ್ಯ ಮುಂದುವರಿಸಿ ಎಂದು ಯಾರನ್ನೇ ಕೇಳಿದರೂ ಎಲ್ಲರೂ ಥಟ್‌ ಅಂತ ‘ಉಂಡು ಮಲಗುವ ತನಕ’ ಎಂದುಬಿಡುತ್ತಾರೆ.  ಆದರೆ ಈಗಿನ ಸನ್ನಿವೇಶ ಹಾಗಿಲ್ಲ. ‘ಗಂಡ ಹೆಂಡಿರ ಜಗಳ, ಕೋರ್ಟ್‌ ಮೆಟ್ಟಿಲೇರುವ ತನಕ, ವಿಚ್ಛೇದನ ಪಡೆಯುವ ತನಕ...’  ಎಂಬಂತಾಗಿದೆ. ಕಾಲ ಬದಲಾಗಿದೆಯೋ, ಜನರು ಬದಲಾಗಿದ್ದಾರೋ ಗೊತ್ತಿಲ್ಲ. ಒಟ್ಟಿನಲ್ಲಿ ಈಗಿನ ಪರಿಸ್ಥಿತಿಯಲ್ಲಿ ದಾಂಪತ್ಯದ ಕೊಂಡಿ ಕಳಚಿ ಬೀಳಲು ಇಬ್ಬರ ನಡುವೆ ಮಹಾ ಸಮರವೇ ನಡೆಯಬೇಕೆಂದೇನಿಲ್ಲ. ಒಂದೆರಡು ಮಾತೇ ಸಾಕು.

ಪತಿಯ ಜೊತೆ ಮಾತನಾಡುವಾಗ ಪತ್ನಿ ಎಷ್ಟು ಜಾಗರೂಕಳಾಗಿರಬೇಕೋ ಹಾಗೆನೇ, ಪತ್ನಿಗೆ ಏನಾದರೊಂದು ಮಾತು ಹೇಳುವಾಗ ಪತಿಯೂ ಎಚ್ಚರಿಕೆ ವಹಿಸಬೇಕು. ಸಿಟ್ಟಿನ ಭರದಲ್ಲೋ ಇಲ್ಲವೇ ಹಾಸ್ಯ ಮಾಡಲು ಹೋಗಿಯೋ ಏನೋ ಒಂದು ಮಾತು ಹೇಳಿದರೂ ಅದು ಸಂಸಾರದಲ್ಲಿ ಬಿರುಕು ಮೂಡಿಸಲು ಕಾರಣ ಆಗಬಹುದು.‘ಅವಳನ್ನು ನೋಡಿಯಾದರೂ ಕಲಿ..’ ಇದು ಎಲ್ಲರ ಮನೆಯಲ್ಲೂ ಪತಿಯಂದಿರು ಹೇಳುವ ಮಾಮೂಲಿ ವಾಕ್ಯ. ಈ ಮಾತನ್ನು ನೀವು ಸಹಜವಾಗಿಯೇ ಹೇಳಿರಬಹುದು. ಆದರೆ ಈ ವಾಕ್ಯದ ಒಳಾರ್ಥದಲ್ಲಿ ಬೇರೆ ಹೆಣ್ಣಿನ ಜೊತೆ ನಿಮ್ಮ ಪತ್ನಿಯ ಹೋಲಿಕೆಯಾಗುತ್ತಿದೆ ಎನ್ನುವುದನ್ನು ಮರೆಯಬಾರದು. ಸಾಮಾನ್ಯವಾಗಿ ಯಾವುದೇ ಹೆಣ್ಣು ತನ್ನನ್ನು ಬೇರೆಯವರ ಜೊತೆ ಹೋಲಿಕೆ ಸಹಿಸಳು. ‘ನಿನಗಿಂತ ಅವಳೇ ಸುಂದರವಾಗಿದ್ದಾಳೆ’, ‘ನಿನಗಿಂತ ಅವಳೇ ಚೆನ್ನಾಗಿ ಅಡುಗೆ ಮಾಡುತ್ತಾಳೆ’, ‘ಅವಳೇ ಚೆನ್ನಾಗಿ ಡ್ರೆಸ್‌ ಮಾಡಿಕೊಳ್ಳುತ್ತಾಳೆ’, ‘ಅವಳನ್ನು ನೋಡಿ ನೀನು ಕಲಿ’. ‘ಅವಳು ನೋಡು ನಿನಗಿಂತ ಮನೆ ಚೆನ್ನಾಗಿ ಇಟ್ಟುಕೊಂಡಿದ್ದಾಳೆ’,  ‘ಅಂಥವಳನ್ನು ಪಡೆಯಲು ಅವಳ ಗಂಡ ಪುಣ್ಯ ಮಾಡಿರಬೇಕು’... ಹೀಗೆ ‘ಅವಳೇ’ ‘ಅವಳೇ’... ಎನ್ನುವಾಗಲೆಲ್ಲಾ ಇವಳ (ನಿಮ್ಮ ಪತ್ನಿಯ) ಬಗ್ಗೆ  ತಾತ್ಸಾರ ಮನೋಭಾವ ಎದ್ದು ಕಾಣಿಸುತ್ತದೆ. ಅವಳನ್ನು ನೋಡಿ ಇವಳು ಕಲಿಯಲಿ ಎಂಬ ಸದುದ್ದೇಶ ನಿಮ್ಮದು ಇದ್ದರೂ, ಮಾತಿನ ಶೈಲಿ ನಿಮ್ಮಾಕೆಗೆ ಹಾಗೆ ಅನ್ನಿಸದೇ ಇರಲಾರದು.‘ನೀನು ಯಾವಾಗಲೂ ಹೀಗೆ...’ ಎಂಬ ಹೀಯಾಳಿಕೆ ಮಾತು ಪತ್ನಿಗೆ ಹೇಳುವುದು ನಿಷಿದ್ಧ. ನೀವು ಬೇರೆಯವರಂತೆ ಆಗುವುದು ಅಸಾಧ್ಯವಿದ್ದಂತೆ ನಿಮ್ಮ ಪತ್ನಿಗೂ ಈ ನಿಯಮ ಅನ್ವಯವಾಗುತ್ತದೆ. ಈ ಮಾತನ್ನು ಒಂದೆರಡು ಸಲ ಹೇಳಿದರೆ  ಪತ್ನಿ ಅಷ್ಟಾಗಿ ತಲೆ ಕೆಡಿಸಿಕೊಳ್ಳಲಾರಳು. ಆದರೆ  ‘ನಿನ್ನದು ಯಾವಾಗಲೂ ಹೀಗೆ’, ‘ನೀನು ಬದಲಾಗಲ್ಲ, ನನ್ನ ಕರ್ಮ’, ‘ನಿನ್ನದು ಸದಾ ಇದೇ ಆಯ್ತು’, ‘ನಿನ್ನನ್ನು ಬದಲಾಯಿಸಲು ಆ ದೇವರಿಂದಲೂ ಸಾಧ್ಯವಿಲ್ಲ’... ಹೀಗೆ ಮೇಲಿಂದ ಮೇಲೆ ಈ ವಾಕ್ಯಗಳು ಹೆಂಡತಿಯ ಕಿವಿಯ ಮೇಲೆ ಬೀಳುತ್ತಿದ್ದರೆ ನಂತರ ಅವಳು ತೆಗೆದುಕೊಳ್ಳುವ ‘ಕಠೋರ ನಿರ್ಧಾರ’ವನ್ನು ಬದಲಿಸಲು ಸಾಧ್ಯವಾಗದೆ ಹೋದೀತು!ಕುಟುಂಬದ ಅಗತ್ಯಕ್ಕೆ ತಕ್ಕಷ್ಟು ತಾನು ದುಡಿಯಲು ಶಕ್ಯನಿಲ್ಲ ಎಂಬ ಕೀಳರಿಮೆ ಗಂಡನನ್ನು ಕಾಡುತ್ತಿದ್ದ ಸಂದರ್ಭದಲ್ಲಿ ಅದನ್ನು ಮರೆಮಾಚಲು ಅಥವಾ ಆ ಬಗ್ಗೆ ಹೆಂಡತಿ  ಧ್ವನಿ ಎತ್ತಬಾರದು ಎಂಬ ಕಾರಣಕ್ಕೆ ‘ನೀನೇನು ಮಹಾ ಗಳಸ್ತೀಯಾ’, ‘ನಿನ್ನ ಸ್ಯಾಲರಿ ನಂಬಿಕೊಂಡರೆ ಅಷ್ಟೇ ಗತಿ’, ‘ನೀನು ತರುವ ಸಂಬಳ ನಮ್ಮ ಬಾಡಿಗೆ ಕಟ್ಟಲೂ ಸಾಲಲ್ಲ’... ಹೀಗೆ ಪದೇ ಪದೇ ಮೂದಲಿಸುವ ಉದಾಹರಣೆಗಳು ಸಾಕಷ್ಟು ಸಿಗುತ್ತವೆ. ಇದೇ ಮಾತನ್ನು ಹೆಂಡತಿಯಾದವಳು ಗಂಡನ ಸಂಬಳದ ಕುರಿತಾಗಿ ಹೇಳಿದರೆ ಹೇಗಿರುತ್ತೆ?ಇದನ್ನು ಕೇಳಿದರೇನೇ ಗಂಡನಿಗೆ ಮೈ ಉರಿದು ಹೋಗುವ ಅನುಭವ ಆಗುತ್ತದೆಯಲ್ಲವೇ? ಹಾಗೆನೇ ಹೆಂಡತಿ ಕೂಡ. ಮಹಿಳೆ ಹೊರಗೆ ದುಡಿಯಲು ಹೋಗಲು ನಾನಾ ಕಾರಣ ಇರಬಹುದು. ಆದರೆ ಅನೇಕ ಮಹಿಳೆಯರು ದುಡಿಯುವುದಕ್ಕೆ ಕಾರಣ, ಕುಟುಂಬ ನಿರ್ವಹಣೆಯಲ್ಲಿ ತನ್ನದೂ ಒಂದು ಪಾಲು ಇರಲು ಎಂಬುದನ್ನು ಮರೆಯಬಾರದು. ಗಂಡನೊಬ್ಬನ ಸಂಬಳ ಸಾಕಾಗಲ್ಲ ಎಂದೇ ಆಕೆ ದುಡಿಯಲು ಹೋಗುತ್ತಿರಬಹುದು. ಆದರೆ ಗಂಡ ಪದೇ ಪದೇ ಹೀಗೆ ಮೂದಲಿಸುತ್ತಿದ್ದರೆ, ಆವೇಶದಲ್ಲಿ ಆಕೆಯೂ ಸತ್ಯವನ್ನು ಹೊರಗೆಡವಿ ಬಿಟ್ಟರೆ ಮುಗಿಯಿತು ಅಲ್ಲಿಗೆ.ಇನ್ನು ಕೆಲವರು ಇರುತ್ತಾರೆ. ಹೆಂಡತಿ ದುಡಿಯಬೇಕು, ಆಕೆಯ ಸಂಬಳವೂ ಬೇಕು. ಆದರೆ ಕಚೇರಿಯಲ್ಲಿ ಪುರುಷರ ಜೊತೆ ಮಾತ ನಾಡಿದರೂ ಅವರಿಗೆ ಸಂಶಯ, ಕಚೇರಿಗೆ ಹೋಗುವಾಗ ಚೆನ್ನಾಗಿ ಡ್ರೆಸ್‌ ಮಾಡಿಕೊಂಡು ಹೋದರೂ ಸಂದೇಹ. ಫೋನ್‌ನಲ್ಲಿ ಸಹೋದ್ಯೋಗಿಗಳ ಜೊತೆ ನಗುತ್ತಾ ಮಾತನಾಡಿದರೂ ಅನುಮಾನ.  ಅಂಥ ವರು ಸಾಮಾನ್ಯವಾಗಿ ಹೇಳುವುದು, ‘ನಂಗೊತ್ತಿಲ್ಲವಾ ಆಫೀಸಿನಿಂದ ಬರಲು ಇಷ್ಟು ಹೊತ್ತು ಯಾಕೆ ಆಗಿದೆ ಎಂದು?’,  ‘ಇವತ್ತ್ಯಾಕೆ ಕನ್ನಡಿ ಮುಂದೆ ಇಷ್ಟು ಹೊತ್ತು ಕೂತಿದ್ಯಾ?’, ‘ಆಫೀಸಿಗೆ ಹೋಗುವುದು ಕೆಲಸ ಮಾಡಲೋ ಅಥವಾ...’,‘ಅದೇನೋ ನಿನ್ನೆ ಫೋನ್‌ನಲ್ಲಿ ಕಿಸಕಿಸ ಅಂತಿದ್ಯಲ್ಲ– ಯಾಕೆ ಅಂತ ನಂಗೊತ್ತು’... ಇತ್ಯಾದಿ ಮಾತುಗಳು ಬರುತ್ತವೆ. ಅವಳ ಬಗ್ಗೆ ಸಂದೇಹ ಬಂದರೆ ‘ನಂಗೊತ್ತು, ನಂಗೊತ್ತು’ ಎನ್ನುವ ಬದಲು ಅದು ಹೌದೋ, ಅಲ್ಲವೋ ಎಂದು ಅವಳಲ್ಲಿಯೇ ಕೇಳಿ  ಸಂದೇಹ ಬಗೆಹರಿಸಿ ಕೊಳ್ಳಬಹುದಲ್ಲವೇ? ಹೆಚ್ಚಿನವರಿಗೆ ಒಂದು ಕೆಟ್ಟ ಚಟವಿರುತ್ತದೆ. ಅದೇನೆಂದರೆ ಮಾತಿನ ಮಧ್ಯೆ ಹೆಂಡತಿಯ ಅಪ್ಪ ಅಥವಾ ಹೆಚ್ಚಾಗಿ ಅಮ್ಮನನ್ನು ಎಳೆದು ತರುವುದು. ‘ನೀನು ನಿಮ್ಮ ಅಮ್ಮನ ಹಾಗೆ’, ‘ಅದೇನು ನಿನ್ನ ಅಪ್ಪ– ಅಮ್ಮ ಕಲಿಸಿದ್ದಾರೋ’, ‘ಅಮ್ಮ – ಅಪ್ಪ ಸರಿ ಇದ್ದರೆ ನೀನೂ ಸರಿ ಇರ್ತಿದ್ದೆ’... ಹೀಗೆಲ್ಲಾ ಪತ್ನಿಯನ್ನು ಮೂದಲಿಸುತ್ತಾರೆ. ಇಂಥ ಮಾತು ಎಂಥ ಹೆಣ್ಣುಮಗಳನ್ನೂ ಕೆರಳಿಸದೇ ಇರಲಾರದು.ಹೆಣ್ಣಿನ ಸೌಂದರ್ಯ ನೋಡಿ, ಆಕೆಯ ಪೂರ್ವಪರ ಎಲ್ಲಾ  ವಿಚಾರಿಸಿ ಮದುವೆಯಾಗಿರುತ್ತದೆ. ಆದರೂ ಪದೇ ಪದೇ ‘ನೀನೇನು ಮಹಾ ಸುಂದರಿಯಾ?’ ಎಂದೋ, ‘ನೀನು ಹೀಗಂತ ಮೊದಲೇ ಗೊತ್ತಿದ್ದರೆ ಮದುವೇನೇ ಆಗುತ್ತಿರಲಿಲ್ಲ’ ಎಂದೋ, ‘ನಾನು ನಿನ್ನನ್ನು ಯಾಕೆ ಮದುವೆಯಾದೆ ಎಂಬುದೇ ಅರ್ಥವಾಗುತ್ತಿಲ್ಲ’ ಎಂದೋ ಹೇಳುವುದನ್ನು ರೂಢಿಮಾಡಿಕೊಂಡಿರುತ್ತೀರಿ. ಇದನ್ನು ಮೊದಲು ನಿಲ್ಲಿಸಬೇಕು. ಇಬ್ಬರ ನಡುವೆ ಸಮಸ್ಯೆ ಹೇಗೆ ಶುರುವಾಗುತ್ತದೆ ಎಂದು ಇಬ್ಬರಿಗೂ ತಿಳಿದಿರುವುದಿಲ್ಲ. ಆದರೂ ‘ಇದು ನಿನ್ನಿಂದಲೇ ಶುರುವಾದ ಸಮಸ್ಯೆ’ ಎನ್ನುವ ಗಂಡನ ಮಾಮೂಲಿ ಮೂದಲಿಕೆ ಮಾತನ್ನು ಪತ್ನಿ ಸಹಿಸಲಾರಳು. ಇವೆಲ್ಲಾ ಮಾತುಗಳನ್ನು ಪತ್ನಿಗೆ ಹೇಳುವ ಮುನ್ನ, ಅವೇ ಮಾತುಗಳನ್ನು ಆಕೆ ನಿಮಗೆ ಹೇಳಿದರೆ ಹೇಗನಿಸುತ್ತದೆ ಎಂಬುದನ್ನು ಯೋಚನೆ ಮಾಡಿ ನೋಡಿ. ಆಕೆಯ ಜಾಗದಲ್ಲಿ ನಿಮ್ಮನ್ನು ಕಲ್ಪಿಸಿಕೊಂಡರೆ ಸಾಕು, ಉಳಿದೆಲ್ಲವೂ ಸಲೀಸು. ಹಾಗೆನೇ ಒಂದು ಮಾತು. ಕ್ಷುಲ್ಲಕ ಕಾರಣಕ್ಕೆ ಶುರುವಾದ ಜಗಳ ಏನೇನೋ ಮಾತು ಆಡಿಸಿಬಿಡುತ್ತದೆ. ಮನಸ್ಸಿನಲ್ಲಿ ಅದುಮಿಟ್ಟುಕೊಂಡ ಮಾತುಗಳೂ ಜಗಳದ ವೇಳೆ ಬಂದುಬಿಡುತ್ತವೆ. ಕೆಲವೊಮ್ಮೆ ಪತ್ನಿಯ ಬಗ್ಗೆ ನೀವು ಹೇಳುವ ವಿಷಯ ಸರಿಯೇ ಇದ್ದರೂ, ಅದು ಸಂಗಾತಿಯನ್ನು ಗಾಸಿಗೊಳಿಸಿದರೆ ‘ಸಾರಿ’, ‘ಕ್ಷಮಿಸು’ ಎಂದುಬಿಡಿ ಸಾಕು. ಅದರ ಜೊತೆ ‘ಐ ಲವ್‌ ಯು’ ಎಂಬುದನ್ನು ಸೇರಿಸಿಬಿಟ್ಟರೆ ಪತ್ನಿ ಅಲ್ಲೇ ಕರಗಿ ನೀರಾಗುವುದೂ ಅಷ್ಟೇ ದಿಟ! ಎಷ್ಟೆಂದರೂ ‘ಮಾತು ಬಲ್ಲವನಿಗೆ ಜಗಳವಿಲ್ಲ’ ಅಲ್ಲವೆ...? 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.