ಬುಧವಾರ, ಜೂನ್ 16, 2021
28 °C

ಮಾತು ಮುರಿಯದಿರಿ: ವಕೀಲರಿಗೆ ಸಿ.ಜೆ ತರಾಟೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಬಹಿಷ್ಕಾರದ ಹೆಸರಿನಲ್ಲಿ ಕೋರ್ಟ್ ಕಲಾಪಕ್ಕೆ ಅಡ್ಡಿಪಡಿಸುತ್ತಿರುವ ವಕೀಲರ ವರ್ತನೆಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿರುವ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ವಿಕ್ರಮಜಿತ್ ಸೇನ್, `ವಕೀಲರು ಬಲವಂತದಿಂದ ನ್ಯಾಯಾಲಯದ ಕೈ ಕಟ್ಟಿಹಾಕಲು ಸಾಧ್ಯವಿಲ್ಲ. ಇಂತಹ ಬೆಳವಣಿಗೆಗಳಿಂದ ನ್ಯಾಯಾಂಗದ ವಿಶ್ವಾಸಾರ್ಹತೆಗೆ ಧಕ್ಕೆಯಾಗುತ್ತದೆ~ ಎಂದು ಹೇಳಿದ್ದಾರೆ.

ವಿಕ್ರಮಜಿತ್ ಸೇನ್

ಕಲಾಪ ಬಹಿಷ್ಕಾರಕ್ಕೆ ಕರೆ ನೀಡಿರುವ ಬೆನ್ನಲ್ಲೇ ಮಂಗಳವಾರ ಕೆಲ ವಕೀಲರು ಕಲಾಪಕ್ಕೆ ಹಾಜರಾಗಿದ್ದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ವಕೀಲರ ಗುಂಪೊಂದು ನ್ಯಾಯಾ ಲಯದ ಒಳಗೆ ಬಂದು ಗದ್ದಲ ನಡೆಸುತ್ತಿದ್ದಾಗ ಪ್ರತಿಕ್ರಿ ಯಿಸಿದ ನ್ಯಾ.ಸೇನ್, `ಜನರು ವಕೀಲರ ಬಗ್ಗೆ ಎಳ್ಳಷ್ಟೂ ನಂಬಿಕೆ ಹೊಂದಿಲ್ಲ. ಅಲ್ಪಸ್ವಲ್ಪ ಉಳಿದುಕೊಂಡಿದ್ದ ಅನುಕಂಪವನ್ನೂ ನೀವು ಈ ಮುಷ್ಕರದ ಮೂಲಕ ಕಳೆದುಕೊಳ್ಳುತ್ತಿದ್ದೀರಿ~ ಎಂದು ಚಾಟಿ ಬೀಸಿದರು.ಇದೇ 2ರಂದು ನಗರ ಸಿವಿಲ್ ನ್ಯಾಯಾಲಯದಲ್ಲಿ ನಡೆದ ಅಹಿತಕರ ಘಟನೆ ಖಂಡಿಸಿ ಮುಷ್ಕರ ನಡೆಸುತ್ತಿರುವುದಾಗಿ ವಕೀಲರ ಗುಂಪು ನ್ಯಾ. ಸೇನ್ ಮತ್ತು ನ್ಯಾ.ಬಿ.ವಿ.ನಾಗ ರತ್ನಾ ಅವರಿದ್ದ ವಿಭಾಗೀಯ ಪೀಠಕ್ಕೆ ಮನವರಿಕೆ ಮಾಡಿಕೊಡಲು ಯತ್ನಿಸಿತು. ಆಗ ಪ್ರತಿ ಕ್ರಿಯಿಸಿದ ಮುಖ್ಯ ನ್ಯಾಯ ಮೂರ್ತಿಯವರು, `ಕೇವಲ ಒಂದು ದಿನದ ಮುಷ್ಕರ ನಡೆಸು ವುದಾಗಿ ನಿಮ್ಮ ನಾಯಕರು ನನಗೆ ಭರವಸೆ ನೀಡಿದ್ದರು. ಆದರೆ, ಈಗ ಅವರು ಮಾತನ್ನು ಮುರಿಯಲು ಹೇಗೆ ಸಾಧ್ಯ? ನಿಮ್ಮ ಮೇಲೆ ನಂಬಿಕೆ ಇಡುವುದು ಹೇಗೆ~ ಎಂದು ಪ್ರಶ್ನಿಸಿದರು.`ನ್ಯಾಯಾಲಯದ ಅಧಿಕಾರಿಗಳಾಗಿ ನೀವು ನ್ಯಾಯಾಂಗದ ಕಲಾಪಕ್ಕೆ ಅಡ್ಡಿಪಡಿಸುತ್ತಿದ್ದೀರಿ. ಇದು ಅತ್ಯಂತ ನೋವಿನ ಸಂಗತಿ. ನ್ಯಾಯಾಲಯದ ಹೊರಗೆ ಪುಂಡಾಟಿಕೆ ನಡೆಸುವುದನ್ನು ನಾನು ಬೆಂಬಲಿಸಲು ಸಾಧ್ಯವಿಲ್ಲ. ಒಂದು ದಿನದ ಮುಷ್ಕರಕ್ಕೆ ನಿಮಗೆ ಅವಕಾಶ ಕಲ್ಪಿಸಿದ ತಪ್ಪಿಗಾಗಿ ನಾನು ಮುಜುಗರ ಅನುಭವಿಸಬೇಕಾಗಿ ಬಂದಿದೆ~ ಎಂದು ನೋವಿನಿಂದ ನುಡಿದರು.`ವಿವೇಕಯುತ ವಕೀಲರ ಭಾವನೆಗಳನ್ನು ಯಾರೂ ಆಲಿಸಿಲ್ಲ ಎಂಬ ಭಾವನೆ ಬರುತ್ತಿದೆ. ಎಲ್ಲವೂ ಭಿನ್ನರ ಹಿಡಿತದಲ್ಲಿದೆ. ನಿಮ್ಮ ಪ್ರಕರಣವನ್ನು ಅನುಕಂಪದಿಂದ ನೋಡಲು ನ್ಯಾಯಾಲಯ ನಿರಾಕರಿಸಿದಲ್ಲಿ ಅದು ನಿಮ್ಮ ಪಾಲಿಗೆ ಅಂತ್ಯವಾಗುತ್ತದೆ. ನಾನು ಪ್ರಮಾಣ ಸ್ವೀಕರಿಸಿದ್ದೇನೆ ಮತ್ತು ಅದನ್ನು ಮೀರಲು ಇಚ್ಛಿಸುವುದಿಲ್ಲ. ವಕೀಲ ಸಮುದಾಯದ ನಂಬಿಕೆ ಉಳಿಸುವುದು ನಿಮ್ಮ ಸಮಸ್ಯೆ. ನ್ಯಾಯಾಂಗ ಮತ್ತು ಜನತೆಯ ವಿಶ್ವಾಸವನ್ನು ಬಲಿಕೊಡಲಾಗದು~ ಎಂದು ನ್ಯಾ.ಸೇನ್ ಹೇಳಿದರು.ಈ ವೇಳೆಗೆ ಮುಖ್ಯ ನ್ಯಾಯಮೂರ್ತಿಯವರ ನ್ಯಾಯಾಂಗಣಕ್ಕೆ ಬಂದ ಬೆಂಗಳೂರು ವಕೀಲರ ಸಂಘದ ಅಧ್ಯಕ್ಷ ಕೆ.ಎನ್.ಸುಬ್ಬಾರೆಡ್ಡಿ, ಪ್ರಕರಣಕ್ಕೆ ಸಂಬಂಧಿಸಿದಂತೆ ವಿವರಣೆ ನೀಡಲು ಯತ್ನಿಸಿದರು. ಕಲಾಪಕ್ಕೆ ಹಾಜರಾಗಲು ತಾವು ಸಿದ್ಧ. ಆದರೆ, ವಿವಾದ ಇನ್ನೂ ಬಗೆಹರಿಯದ ಹಿನ್ನೆಲೆಯಲ್ಲಿ ಕೆಲವರು ಇದಕ್ಕೆ ಸಿದ್ಧರಿಲ್ಲ. ಸರ್ಕಾರ ವಿವಾದ ಬಗೆಹರಿಸಲು ಸಭೆ ಕರೆಯಲಿದೆ ಎಂದು ಹೇಳಿದರು.ಆಗ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ ನ್ಯಾ,ಸೇನ್, `ಸಂಘದ ಅಧ್ಯಕ್ಷರೇ ಕಲಾಪದಲ್ಲಿ ಭಾಗವಹಿಸಲು ಸಿದ್ಧರಿರುವುದಾದರೆ `ಬ್ಲಾಕ್‌ಮೇಲ್~ ಮಾಡುತ್ತಿರುವವರು ಯಾರು? ಕಿರಿಯ ವಕೀಲರಿಗೆ ಹಿರಿಯರು ಬುದ್ಧಿವಾದ ಹೇಳಬೇಕು. ವಕೀಲರು ತಮ್ಮ ವಾದಕ್ಕೆ ಪೂರಕವಾಗಿ ಬಲವಾದ ಸಾಕ್ಷ್ಯ ಹೊಂದಿದ್ದಾರೆ ಎಂದು  ಕೇಳಿದ್ದೇನೆ. ಮುಷ್ಕರದಿಂದ ಅದನ್ನು ಏಕೆ ಕೆಡಿಸುತ್ತಿದ್ದೀರಿ~ ಎಂದರು.ಹೈಕೋರ್ಟ್ ನ್ಯಾಯಮೂರ್ತಿ ಕೆ.ಶ್ರೀಧರ ರಾವ್ ಅವರು ವಕೀಲರನ್ನು ಭೇಟಿಮಾಡಿ ಮನವೊಲಿಸುತ್ತಾರೆ ಎಂದು ಸುಬ್ಬಾರೆಡ್ಡಿ ತಿಳಿಸಿದರು. ಅದಕ್ಕೆ ಪ್ರತಿಕ್ರಿಯಿಸಿದ ಮುಖ್ಯ ನ್ಯಾಯಮೂರ್ತಿಯವರು, `ಅವರು ಮನವೊಲಿಸಲು ಭೇಟಿ ಮಾಡುವುದಿಲ್ಲ. ವಕೀಲರ ಅಹವಾಲುಗಳನ್ನು ಮಾತ್ರ ಆಲಿಸುತ್ತಾರೆ~ ಎಂದರು.ಅಂತಿಮವಾಗಿ ಕಲಾಪ ಮುಂದೂಡಲು ನಿರಾಕರಿಸಿದ ಮುಖ್ಯ ನ್ಯಾಯಮೂರ್ತಿಯವರು, ವಕೀಲರು ಅಥವಾ ಕಕ್ಷಿದಾರರು ಖುದ್ದು ಹಾಜರಿದ್ದ ಪ್ರಕರಣಗಳ ವಿಚಾರಣೆ ನಡೆಸಿದರು. ಬೆಳಿಗ್ಗೆ 10.30ಕ್ಕೆ ಆರಂಭವಾದ ಕಲಾಪ ಮಧ್ಯಾಹ್ನ ಒಂದರ ವರೆಗೆ ನಡೆಯಿತು. ನಂತರ ಯಾವುದೇ ವಕೀಲರು ಹಾಜರಾಗದ ಹಿನ್ನೆಲೆಯಲ್ಲಿ ಕಲಾಪ ಮುಂದೂಡಿದರು. ಅರ್ಜಿಯೊಂದರ ವಿಚಾರಣೆ ವೇಳೆ ಸರ್ಕಾರದ ವಕೀಲರನ್ನು ಉದ್ದೇಶಿಸಿ ಮಾತನಾಡಿದ ನ್ಯಾ.ಸೇನ್, ಮುಷ್ಕರದ ಬದಲಿಗೆ ಬುದ್ಧಿ ಉಪಯೋಗಿಸುವಂತೆ ವಕೀಲರಿಗೆ ಸಲಹೆ ಮಾಡಿದರು. ವಕೀಲರ ಬಳಿ ಇರುವ ವಿಡಿಯೊ ತುಣುಕುಗಳನ್ನು ಟೆಲಿವಿಷನ್ ಚಾನೆಲ್‌ಗಳಿಗೆ ನೀಡುವಂತೆ ಸೂಚಿಸಿದರು. ವಕೀಲರು ನೀಡುವ ವಿಡಿಯೊ ತುಣುಕುಗಳನ್ನು ಪ್ರಸಾರ ಮಾಡಲು ಕೆಲ ಚಾನೆಲ್‌ಗಳು ನಿರಾಕರಿಸಿವೆ ಎಂದು ವಕೀಲರು ತಿಳಿಸಿದರು. ಆಗ, ಒಂದು ಚಾನೆಲ್ ನಿರಾಕರಿಸಿದರೆ ಮತ್ತೊಂದಕ್ಕೆ ನೀಡಬಹುದು ಎಂದು ನ್ಯಾ.ಸೇನ್ ಹೇಳಿದರು.ಸರ್ಕಾರಿ ಸ್ವಾಮ್ಯದ ಟೆಲಿವಿಷನ್ ವಾಹಿನಿ ದೂರದರ್ಶನಕ್ಕೆ ನೀಡಬಹುದು ಎಂದೂ ಸಲಹೆ ಮಾಡಿದರು. ಆಗ, ದೂರದರ್ಶನದಲ್ಲಿ ವಿಷಯ ಆಯ್ಕೆ ಸಮಿತಿ ಇದ್ದು, ಅದು ತಿರಸ್ಕರಿಸಬಹುದು ಎಂಬ ಅನುಮಾನ ವಕೀಲರಿಂದ ವ್ಯಕ್ತವಾಯಿತು. ಮೊದಲು ದೂರದರ್ಶನಕ್ಕೆ ವಿಡಿಯೊ ತುಣುಕು ಕಳುಹಿಸಿ, ನಂತರ ಸ್ಪಂದನೆಗಾಗಿ ಕಾದುನೋಡಿ ಎಂದು ಮುಖ್ಯ ನ್ಯಾಯಮೂರ್ತಿ ಸೂಚಿಸಿದರು. ಪೊಲೀಸರು ವಕೀಲರ ಮೇಲೆ ಹಲ್ಲೆ ನಡೆಸಿದ್ದಾರೆ ಎಂಬ ಆರೋಪಕ್ಕೆ ಸಂಬಂಧಿಸಿದ ವಿಡಿಯೊ ಸಿ.ಡಿ ನೀಡಲು ಮಾಧ್ಯಮದವರನ್ನು ಆಹ್ವಾನಿಸುವ ಪ್ರಕ್ರಿಯೆ ಜಾರಿಯಲ್ಲಿದೆ ಎಂದು ವಕೀಲರು ತಿಳಿಸಿದರು. `ಅವರು ಬರದೇ ಇದ್ದರೆ ನೀವೇ ಅವರಲ್ಲಿಗೆ ವಿಡಿಯೊ ಸಿ.ಡಿ ಕಳುಹಿಸಿ~ ಎಂದು ನ್ಯಾ.ಸೇನ್ ಸಲಹೆ ಮಾಡಿದರು.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.