ಗುರುವಾರ , ಜುಲೈ 29, 2021
21 °C

ಮಾತೃಕೆಯರ ನಾಡಲ್ಲಿ ಹೆಚ್ಚಿದ್ದಾರೆ ಭಾಗ್ಯಲಕ್ಷ್ಮಿಯರು

ಉದಯ ಯು Updated:

ಅಕ್ಷರ ಗಾತ್ರ : | |

ಮಾತೃಕೆಯರ ನಾಡಲ್ಲಿ ಹೆಚ್ಚಿದ್ದಾರೆ ಭಾಗ್ಯಲಕ್ಷ್ಮಿಯರು

ಹಾಸನ: ಸಪ್ತ ಮಾತೃಕೆಯರ ನಾಡು ಹಾಸನದಲ್ಲಿ ಮಹಿಳೆಯರು ಸಂತಸಪಡುವಂಥ ವಿಚಾರವೊಂದು ಈ ಬಾರಿಯ ಜನಗಣತಿಯಿಂದ ವ್ಯಕ್ತವಾಗಿದೆ. ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಮಹಿಳೆಯರ ಸಂಖ್ಯೆ ಪುರುಷರಿಗಿಂತ ಕಡಿಮೆ ಇದ್ದರೆ, ಹಾಸನದಲ್ಲಿ ಮಹಿಳೆಯರ ಸಂಖ್ಯೆಯೇ ಹೆಚ್ಚಾಗಿದೆ.ಹಾಗೆ ನೋಡಿದರೆ ಐತಿಹಾಸಿಕವಾಗಿ ಹಾಸನದಲ್ಲಿ ಮಹಿಳೆಯರಿಗೇ ಹೆಚ್ಚಿನ ಪ್ರಾಧಾನ್ಯ. ಹಾಸನಾಂಬೆಯೇ ಇಲ್ಲಿಯ ದೇವತೆ. ಸಪ್ತ ಮಾತೃಕೆಯರಲ್ಲಿ ಒಬ್ಬಳಾದ ಹಾಸನಾಂಬೆ ತನ್ನ ಇಬ್ಬರು ಸಹೋದರಿಯರೊಂದಿಗೆ ಹಾಸನದಲ್ಲಿ ನೆಲೆಸಿದ್ದಾಳೆ ಎಂಬುದು ನಂಬಿಕೆ. ಉಳಿದ ನಾಲ್ಕು ಸಹೋದರಿಯರು ಜಿಲ್ಲೆಯ ಬೇರೆ ಬೇರೆ ತಾಲ್ಲೂಕುಗಳಲ್ಲಿ ನೆಲೆಸಿದ್ದಾರೆ.

 

ಹಾಸನಾಂಬಾ ದೇವಸ್ಥಾನವೂ ಸೇರಿದಂತೆ ಎಲ್ಲ ಕಡೆಗಳಲ್ಲೂ ಪ್ರತಿ ವರ್ಷ ದೇವಿಯರ ಉತ್ಸವ ವಿಜೃಂಭಣೆಯಿಂದ ನಡೆಯುತ್ತದೆ.  ಚಾರಿತ್ರಿಕವಾಗಿ ನೋಡಿದರೂ ಹಾಸನ ‘ಶಾಂತಲೆ ಕಟ್ಟಿದ ನಾಡು’. ವಿಶ್ವ ವಿಖ್ಯಾತ ಶಿಲಾಬಾಲಿಕೆಯರು ಇರುವುದು ಈ ನಾಡಿನಲ್ಲೇ. ಹಲವು ದಶಕಗಳ ಬಳಿಕ ಈಗ ಮತ್ತೆ ಜಿಲ್ಲೆಯಲ್ಲಿ ‘ಭಾಗ್ಯಲಕ್ಷ್ಮಿ’ಯರು ಹೆಚ್ಚಾಗುತ್ತಿದ್ದಾರೆ.2011ರ ಜನಗಣತಿಯ ಅಂಕಿ ಅಂಶಗಳು ಅಧಿಕೃತವಾಗಿ ಇನ್ನೂ ಪ್ರಕಟವಾಗಿಲ್ಲ.ಆದರೆ ಲಭ್ಯ ವಾಗಿರುವ ಮಾಹಿತಿಯ ಪ್ರಕಾರ ಹಾಸನದ ಒಟ್ಟು ಜನಸಂಖ್ಯೆ 17,76,221 ಅದರಲ್ಲಿ 8,85,807 ಪುರುಷರಿದ್ದರೆ 8,90,414 ಮಹಿಳೆಯರಿದ್ದಾರೆ. ಅಂದರೆ ಪ್ರತಿ ಸಾವಿರ ಪುರುಷರಿಗೆ 1005 ಮಹಿಳೆಯರಿದ್ದಾರೆ. ದೇಶದಲ್ಲಿ ಈ ಸಂಖ್ಯೆ 940ರಷ್ಟಿದ್ದರೆ ಕರ್ನಾಟಕದಲ್ಲಿ 968ರಷ್ಟಿದೆ.ಹಿಂದಿನ ದಾಖಲೆಗಳನ್ನು ನೋಡುತ್ತ ಹೋದರೆ 1911ರವರೆಗೂ ಇಲ್ಲಿ ಮಹಿಳೆಯರ ಸಂಖ್ಯೆಯೇ ಹೆಚ್ಚಾಗಿತ್ತು. ಇದಾದ ಬಳಿಕ ಪ್ರಮಾಣ ಕಡಿಮೆಯಾಗುತ್ತ ಹೋಗಿದೆ. ಅದಾಗಿ ಸರಿಸುಮಾರು ಒಂದು ಶತಮಾನದ ಬಳಿಕ 2001ರಲ್ಲಿ ಮಹಿಳೆಯರ ಸಂಖ್ಯೆ ಏರಿಕೆಯಾಗಲು ಆರಂಭವಾಗಿದೆ. 1900ರಲ್ಲಿ ಜಿಲ್ಲೆಯಲ್ಲಿ ಸಾವಿರ ಪುರುಷರಿಗೆ 1010 ಮಹಿಳೆಯರಿದ್ದರು. 1911 ರಲ್ಲಿ ಅದು 1019ಕ್ಕೆ ಏರಿಕೆಯಾಗಿತ್ತು. ಇದಾದ ಬಳಿಕ 1969ರವರೆಗೂ ಮಹಿಳೆಯರ ಪ್ರಮಾಣ ಕಡಿಮೆಯಾಗುತ್ತಲೇ ಬಂದಿದೆ.(1921ರಲ್ಲಿ 998, 1931ರಲ್ಲಿ 985, 1941ರಲ್ಲಿ 977, 1951ರಲ್ಲಿ 970, 1961ರಲ್ಲಿ 969) 1971ರಲ್ಲಿ ಮಹಿಳೆಯರ ಪ್ರಮಾಣ 974ಕ್ಕೆ ಏರಿತು. ಇದಾದ ಬಳಿಕ 1981ರಲ್ಲಿ 987ಕ್ಕೆ, 1991ರಲ್ಲಿ 991ಕ್ಕೆ ಏರಿದರೆ 2001ರಲ್ಲಿ ಪುನಃ ಮಹಿಳೆಯರು ಪುರುಷರನ್ನು ಮೀರಿಸಿದರು. 2001ರ ಜನಗಣತಿಯಲ್ಲಿ ಪ್ರತಿ ಸಾವಿರ ಪುರುಷ ರಿಗೆ 1004 ಮಹಿಳೆಯರಿರುವುದು ದಾಖಲಾ ಯಿತು. 2011ರಲ್ಲಿ ಈ ಸಂಖ್ಯೆ 1005ಕ್ಕೆ ಏರಿದೆ.ಕಾಕತಾಳೀಯವೋ ಎಂಬಂತೆ ಈ  ಬಾರಿ ನಡೆದ ಜಿಲ್ಲಾ ಪಂಚಾಯಿತಿ ಚುನಾವಣೆಯಲ್ಲೂ ಒಟ್ಟು 40 ಸ್ಥಾನಗಳಲ್ಲಿ 21ಕಡೆ ಮಹಿಳೆಯರೇ ಆಯ್ಕೆಯಾಗಿದ್ದಾರೆ.ರಾಜ್ಯದ ಬೆರಳೆಣಿಕೆಯಷ್ಟು ಜಿಲ್ಲೆಗಳಲ್ಲಿ ಮಹಿಳೆಯರ ಸಂಖ್ಯೆ ಹೆಚ್ಚಿದೆ. ಅದರಲ್ಲಿ ಮೊದಲ ಸ್ಥಾನ ದಲ್ಲಿರುವುದು ಉಡುಪಿ ಜಿಲ್ಲೆ. 2001ರಲ್ಲಿ ಅಲ್ಲಿ ಸಾವಿರ ಪುರುಷರಿಗೆ ಮಹಿಳೆಯರ ಸಂಖ್ಯೆ 1130 ಇತ್ತು. ಕಳೆದ ಒಂದು ದಶಕದಲ್ಲಿ ಅಲ್ಲಿಯೂ ಈ ಪ್ರಮಾಣದಲ್ಲಿ ಕುಸಿತವಾಗಿದೆ. 2011ರ ಗಣತಿ ಪ್ರಕಾರ ಅಲ್ಲಿಸಾವಿರ ಪುರುಷರಿಗೆ 1093 ಮಹಿಳೆಯರಿದ್ದಾರೆ.ಜನಗಣತಿಯ ಅಂಕಿ ಅಂಶಗಳನ್ನು ನೋಡಿದರೆ ಹಾನದ ಮಹಿಳೆಯರು ಹೆಮ್ಮೆಪಡಲು ಕಾರಣವಿದೆ. ಆದರೆ ಜಿಲ್ಲೆಯ ಇನ್ನೊಂದು ಮುಖವನ್ನೂ ಗಮನಿಸಲೇಬೇಕಾಗುತ್ತದೆ. ಪ್ರತಿ ವರ್ಷ ಜಿಲ್ಲೆಯಲ್ಲಿ ಸರಾಸರಿ 250 ರಿಂದ 300 ಸ್ತ್ರೀಯರು ಕಾಣೆಯಾಗಿರುವ ದೂರುಗಳು ದಾಖಲಾಗುತ್ತಿವೆ. ಇವುಗಳಲ್ಲಿ ಶೇ 50ಕ್ಕೂ ಹೆಚ್ಚು ಪ್ರೀತಿ-ಪ್ರಣಯದ ಪ್ರಕರಣಗಳೆಂದು ಪರಿಗಣಿಸಬಹುದು. ಉಳಿದ ಪ್ರಕರಣಗಳ ಬಗ್ಗೆ ಮಾಹಿತಿ ಲಭಿಸುವುದಿಲ್ಲ.

 

ಮಹಿಳೆಯರ ಮೇಲಿನ ದೌರ್ಜನ್ಯದ ಪ್ರಕರಣಗಳು ಜಿಲ್ಲೆಯಲ್ಲಿ ಸಾಕಷ್ಟು ಪ್ರಮಾಣದಲ್ಲಿ ನಡೆಯುತ್ತಲೇ ಇವೆ. ಪಾಲಕರು ಮಕ್ಕಳನ್ನು ತ್ಯಜಿಸಿ ಹೋಗುವ ಪ್ರಕರಣಗಳಿಗೂ ಕಡಿಮೆ ಇಲ್ಲ. ಸಪ್ತ ಮಾತೃಕೆಯರ ನಾಡಿನ ಜನತೆ ಈ ವಿಚಾರಗಳತ್ತಲೂ ಗಮನ ಹರಿಸಬೇಕಾಗಿದೆ.ಕಳೆದ ಒಂದು ದಶಕದಲ್ಲಿ ಜಿಲ್ಲೆಯ ಶೈಕ್ಷಣಿಕ ಸ್ಥಿತಿಯಲ್ಲೂ ಸಾಕಷ್ಟು ಅಭಿವೃದ್ಧಿಯಾಗಿದೆ. 2001ರಲ್ಲಿ ಜಿಲ್ಲೆಯಲ್ಲಿ ಸಾಕ್ಷರತೆ ಪ್ರಮಾಣ ಶೇ 68.63 ಇದ್ದರೆ ಈಗ ಅದು 75.89ಕ್ಕೆ ಏರಿಕೆಯಾಗಿದೆ. ಜಿಲ್ಲೆಯಲ್ಲಿ 34ಸಾವಿರ ಕುಟುಂಬಗಳು ಸರ್ಕಾರದ ಭಾಗ್ಯಲಕ್ಷ್ಮಿ ಯೋಜನೆಯ ಫಲಾನುಭವಿಗಳಿದ್ದಾರೆ. ಜನಗಣತಿಯ ಅಂತಿಮ ಅಂಕಿ ಅಂಶಳು ಪ್ರಕಟವಾಗುತ್ತಿದ್ದಂತೆ ರಾಜ್ಯ ಸರ್ಕಾರ ಸಪ್ತ ಮಾತೃಕೆಯರ ಈ ನಾಡನ್ನು ‘ಭಾಗ್ಯಲಕ್ಷ್ಮಿ’ಯರ ನಾಡು ಎಂದು ಕರೆಯುವ ಬಗ್ಗೆ ಚಿಂತಿಸಬಹುದೇನೋ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.