ಮಾತೃಭಾಷಾ ಶಿಕ್ಷಣದ ಮಹತ್ವ

7

ಮಾತೃಭಾಷಾ ಶಿಕ್ಷಣದ ಮಹತ್ವ

Published:
Updated:

ಎ ಷ್ಟ್  ಓ ಕ್ಲಾಕು? ಅಂಕಲ್!’’, ‘‘ಸಂಡೇ ಕ್ಲಾಸಿಲ್ವಲ್ಲ?’’, ‘‘ಸ್ವಲ್ಪ ಆ ಸೈಡ್ ಮೂವ್ ಮಾಡ್ತೀರಾ’’? ಇದೇನಿದು  ಕನ್ನಡ ಪದಗಳನ್ನು ಭೂತ ಕನ್ನಡಿ ಹಾಕಿ ಹುಡುಕ್ಬೇಕು ಅಂತೀರಾ? ಇದು ಪೂರ್ತಿ ಇಂಗ್ಲೀಷಾಗುವ ಮೊದಲು, ಕನ್ನಡ ಮಂಗಮಾಯವಾಗುವ ಮೊದಲು ನಾವು ಸ್ವಲ್ಪ ಗಂಭೀರವಾಗಿ ಅಂದರೆ ‘ಸೀರಿಯಸ್ಸಾ’ಗಿ ಇದರ ಬಗ್ಗೆ ಯೋಚಿಸಬೇಕಾದ ಪರಿಸ್ಥಿತಿ . ನಮ್ಮೆಲ್ಲರ ಇಂಗ್ಲಿಷ್ ವ್ಯಾಮೋಹದ ಪರಾಕಾಷ್ಠೆಯಲ್ಲಿ ಇಂದು ಮಕ್ಕಳು ಒಳ್ಳೆಯ ಇಂಗ್ಲಿಷನ್ನೂ ಮಾತಾಡದ, ಸ್ವಚ್ಛ ತಿಳಿಗನ್ನಡವನ್ನೂ ಉಪಯೋಗಿಸದ ಕೆಟ್ಟ ಕಂಗ್ಲೀಷ್‌ನಷ್ಟೇ ಅರ್ಧಂಬರ್ಧ ಬಲ್ಲ ತ್ರಿಶಂಕು ಸ್ಥಿತಿಯಲ್ಲಿದ್ದಾರೆ.‘ವಿಶ್ವ ಮಾತೃಭಾಷಾ ದಿನ’ವನ್ನು ಜಗತ್ತಿನ ಸಾವಿರಾರು ಮಾತೃಭಾಷೆಗಳ ಉಳಿವಿನ ದೃಷ್ಟಿಯಿಂದ ವಿಶ್ವಸಂಸ್ಥೆ ಫೆಬ್ರುವರಿ 2000ದಿಂದ ಆಚರಿಸಿಕೊಂಡು ಬಂದಿದೆ. ಫೆಬ್ರುವರಿ 21 ವಿಶ್ವ ಮಾತೃಭಾಷಾ ದಿನ. ಮಾತೃಭಾಷೆ ಕೇವಲ ಒಂದು ಭಾಷೆಯಷ್ಟೇ ಆಗಿರದೆ ಪ್ರತಿಯೊಂದು ವ್ಯಕ್ತಿಯ ಸಾಂಸ್ಕೃತಿಕ-ಸಾಮಾಜಿಕ ವ್ಯಕ್ತಿತ್ವದೊಂದಿಗೆ ಬೆರೆತು ಹೋಗಿರುತ್ತದೆ.ಹಾಗೆಯೇ  ಮಾತೃಭಾಷೆಯ ಮೇಲೆ ಆಕ್ರಮಣ ಮಾಡುವ, ಅದರ ಮೇಲೆ ತನ್ನ ಅತಿಯಾದ ಪ್ರಭಾವ ಬೀರುವ ಪರ ಭಾಷೆಗಳು ತಮ್ಮೊಂದಿಗೆ ಭಾಷಾ ಪ್ರಭಾವವನ್ನಷ್ಟೇ ತರದೆ ಸಾಂಸ್ಕೃತಿಕ-ಸಾಮಾಜಿಕ ಪ್ರಭಾವಗಳನ್ನು ತರುತ್ತವೆ. ಬ್ರಿಟಿಷರ ಬಳುವಳಿಯಾಗಿ ಬಂದ ಇಂಗ್ಲಿಷ್ ಭಾಷೆ ರಾಜಕೀಯ-ಸಾಂಸ್ಕೃತಿಕ-ತಾಂತ್ರಿಕ ಪ್ರಭಾವಗಳನ್ನೂ ತಂದಿತು. ಕನ್ನಡ ಕಾವ್ಯ-ಸಾರಸ್ವತ ಪ್ರಪಂಚಕ್ಕೆ ಈ ಪ್ರಭಾವ ಮಾಡಿದ ಉಪಕಾರವೂ ಮಹತ್ತರವೇ. ಆದರೆ ಇದರೊಂದಿಗೇ ಬಂದ ಸಮಸ್ಯೆಗಳೂ ಬಹಳಷ್ಟು.ಈ ಸಮಸ್ಯೆಗಳ ನೇರ ಪರಿಣಾಮ ನಮ್ಮ ವಿದ್ಯಾಭ್ಯಾಸ ಕ್ರಮದ ಮೇಲೆ. ಅದರಲ್ಲೂ ಪ್ರಾಥಮಿಕ ಶಿಕ್ಷಣದ ಮೇಲೆ. ಕನ್ನಡ ಶಾಲೆಗಳಲ್ಲಿ ಮಕ್ಕಳೇ ಇಲ್ಲದೆ ಸರ್ಕಾರಿ ಶಾಲೆಗಳನ್ನು ಮುಚ್ಚಬೇಕಾದ ಪರಿಸ್ಥಿತಿ ಇಂದು ನಮ್ಮ ಮುಂದಿದೆ. ಕನ್ನಡದ ಬಗ್ಗೆ ದೊಡ್ಡ ಮಾತುಗಳನ್ನಾಡಿ, ಇಂಗ್ಲಿಷ್ ವಿರುದ್ಧ ಹರಿಹಾಯುವ ಬದಲು ಮಾತೃಭಾಷಾ ಶಿಕ್ಷಣದ ವೈಜ್ಞಾನಿಕ ಉಪಯುಕ್ತತೆಯನ್ನು ಪ್ರಚುರಪಡಿಸುವ ಬಗ್ಗೆ ಶಿಕ್ಷಣ ತಜ್ಞರು, ಸರ್ಕಾರ ಚಿಂತನೆ ನಡೆಸಬೇಕಾಗಿದೆ.ವಿದ್ಯಾವಂತರೆನಿಸಿಕೊಂಡವರೂ, ಕನ್ನಡದ ಅತೀವ ಅಭಿಮಾನಿಗಳೂ, ಉನ್ನತ ಮಟ್ಟದ ವೈಜ್ಞಾನಿಕ-ತಾಂತ್ರಿಕ-ಸಾಂಸ್ಕತಿಕ ಸಭೆಗಳಲ್ಲಿ, ಕೂಟಗಳಲ್ಲಿ ಕನ್ನಡದಲ್ಲಿ ವ್ಯವಹರಿಸಲು ಸಂಕೋಚಿಸುತ್ತಾರೆ. ಸ್ವತಃ ಕನ್ನಡದಲ್ಲಿ ಮಾತನಾಡುವುದು ಸರಾಗ-ವಿಚಾರಗಳನ್ನು ಸ್ಪಷ್ಟವಾಗಿ ಹೇಳಲು ಸುಲಭ ಎನಿಸಿದರೂ ಹಾಗೆ ಮಾಡಿದಲ್ಲಿ ಅದು ತನ್ನ ಸಾಮರ್ಥ್ಯದ ಕೊರತೆ ಎಂದು ಭಾವಿಸುತ್ತಾರೆ. ಇನ್ನು ವೈಜ್ಞಾನಿಕ  ವಿಷಯಗಳಿಗೆ ಸಂಬಂಧಿಸಿದ, ಆದರೆ ಇಡೀ ಸಮಾಜಕ್ಕೆ ಅವಶ್ಯವೇ ಆದ ವೈದ್ಯಕೀಯ -ತಾಂತ್ರಿಕ ವಿಜ್ಞಾನಗಳಂತೂ ಪೂರ್ತಿಯಾಗಿ ಬೋಧಿಸಲ್ಪಡುವುದು ಆಂಗ್ಲ ಭಾಷೆಯಲ್ಲಿಯೇ. ಇಲ್ಲಿಯೇ ನಡೆದ ಸಂಶೋಧನೆಗಳೂ ಮಂಡಿಸಲ್ಪಡಬೇಕಾದ ಭಾಷೆ ಆಂಗ್ಲ ಭಾಷೆಯೇ.

 

ಭಾರತೀಯರ ಅದರಲ್ಲೂ ಕನ್ನಡಿಗರ ಈ ‘ಕ್ಷಮತೆ’ಯಿಂದಾಗಿಯೇ ಜಪಾನೀಯರು - ಚೀನೀಯರು ನಮಗಿಂತ ಬೇರೆಲ್ಲದರಲ್ಲಿ ಬುದ್ಧಿವಂತರಾದರೂ ಇಂಗ್ಲಿಷಿನಲ್ಲಿ ನಾವೇ ಮುಂದೆ! ಪರಿಣಾಮ ಭಾರತೀಯರಿಗೆ, ಅದರಲ್ಲೂ ಕನ್ನಡಿಗರಿಗೆ ವಿದೇಶಗಳಲ್ಲಿ ಸುಲಭವಾಗಿ ಸಿಕ್ಕುವ ಉನ್ನತ ಮಟ್ಟದ ಉದ್ಯೋಗಾವಕಾಶಗಳು. ತತ್‌ಪರಿಣಾಮ ನಮಗೆ ಇಂಗ್ಲಿಷ್ ಭಾಷೆ ಸಹಜವಾಗಿ ರಕ್ತದಲ್ಲಿ ಬರದ್ದಾಗ್ಯೂ ಕನ್ನಡದಲ್ಲಿ ನಮ್ಮ ವಿಚಾರ ಹೆಚ್ಚು ಸ್ಪಷ್ಟ ಎನಿಸಿದರೂ, ನಮಗೇ ಇಂಗ್ಲಿಷ್ ‘‘ಆರಾಮ’’ ಎನಿಸದಿದ್ದರೂ ನಾವು ಮಕ್ಕಳನ್ನು ಇಂಗ್ಲಿಷ್ ಶಾಲೆಗೇ ಕಳಿಸುತ್ತೇವೆ.ಹಾಗಿದ್ದರೆ ಮುಂದಿನ ಸಹಜವಾದ ಪ್ರಶ್ನೆ ಇಂಗ್ಲಿಷ್ ಬೇಡವೆ? ಕನ್ನಡದಲ್ಲಿ ಪ್ರಾಥಮಿಕ ಶಿಕ್ಷಣದ ಕಡ್ಡಾಯಗೊಳಿಸುವಿಕೆ ಎಷ್ಟು ಸೂಕ್ತ? ಸದ್ಯಕ್ಕೆ ಇರುವ ಶಿಕ್ಷಣ ಕ್ರಮದಲ್ಲಿ, ಕನ್ನಡ ಪ್ರಾಥಮಿಕ ಶಿಕ್ಷಣದ ಕಡ್ಡಾಯಗೊಳಿಸುವಿಕೆ  ಒಂದು ಬಹು ದೊಡ್ಡ ಕನಸೇ. ಆದರೆ ವೈಜ್ಞಾನಿಕವಾಗಿ ಉತ್ತಮ ಗುಣಮಟ್ಟದ ಪ್ರಾಥಮಿಕ ಶಿಕ್ಷಣಕ್ಕೆ ಪೂರಕವಾಗುವ ಹಲವು ಅಂಶಗಳಲ್ಲಿ ಮಾತೃಭಾಷಾ ಶಿಕ್ಷಣ ಮುಖ್ಯವಾದದ್ದು. ಸಂವಹನ ಮತ್ತು ಅರ್ಥೈಸುವಿಕೆಯಲ್ಲಿ ಮಾತೃಭಾಷೆಯ ಪಾತ್ರ ಅತ್ಯಂತ ಮಹತ್ವದ್ದು. ಮಕ್ಕಳು ಮನೆಯಲ್ಲಿ, ಸಾಮಾಜಿಕವಾಗಿ ಮಾತನಾಡದ ಭಾಷೆಯಲ್ಲಿ ಕಲಿಸುವುದನ್ನು ಶಿಕ್ಷಣ ವಿಜ್ಞಾನ - ‘Submersion’ ಎಂದು ಕರೆಯುತ್ತದೆ. ಅಂದರೆ ಕಲಿಯುವವರನ್ನು ನೀರಿನ ಕೆಳಗೆ ಕೂಡಿ ಹಾಕಿ, ಈಜಲು ಕಲಿಸದೇ ಇರುವ ಪ್ರಕ್ರಿಯೆ.ಇದರ ಜೊತೆಗೇ ಸ್ವತಃ ಆಂಗ್ಲ ಮಾಧ್ಯಮದಲ್ಲಿ ಓದದಿರುವ ಶಿಕ್ಷಕ, ತಂದೆ-ತಾಯಿಗಳು, ಸರಿಯಾಗಿ ರೂಪಿಸದ ಪಠ್ಯ ಸಾಮಗ್ರಿ, ಶಾಲಾ ಸೌಲಭ್ಯಗಳ ಕೊರತೆ ಆಂಗ್ಲ ಮಾಧ್ಯಮ ಶಿಕ್ಷಣವನ್ನು ತಂದೆ-ತಾಯಿ, ಶಿಕ್ಷಕ, ವಿದ್ಯಾರ್ಥಿ ಮೂವರಿಗೂ ‘ಶಿಕ್ಷೆ’ ಯಾಗಿ ಮಾರ್ಪಡಿಸಬಹುದು. ಇದರ ಪರಿಣಾಮ ಮಗು ಆಂಗ್ಲಭಾಷೆಯಲ್ಲಿ ವಿಜ್ಞಾನ-ಗಣಿತದ, ಸಮಾಜ ವಿಜ್ಞಾನದ ಪರಿಕಲ್ಪನೆಗಳನ್ನು ಬಾಯಿಯಲ್ಲಿ ಹೇಳಿದರೂ, ಅದರ ಪ್ರಾಯೋಗಿಕತೆಯನ್ನು ಕಲಿಯದಿರುವುದು. ಕನ್ನಡದಲ್ಲಿ ಪ್ರಾಥಮಿಕ ಶಿಕ್ಷಣದ ಕಡ್ಡಾಯಗೊಳಿಸುವಿಕೆಯಲ್ಲಿ ಶಿಕ್ಷಣ ಕ್ಷೇತ್ರ ಅವಶ್ಯವಾಗಿ ಮಾಡಬೇಕಾದ ಕಾರ್ಯ ಆಂಗ್ಲಭಾಷೆಯನ್ನು ಒಂದು ‘ಭಾಷೆ’ ಯಾಗಿ ಕಲಿಸುವುದು.ಕನ್ನಡದ ಮೂಲಕ ಆಂಗ್ಲಭಾಷೆಯ ಪರಿಣತಿ ಸಾಧಿಸುವುದು. ಎರಡೂ ಭಾಷೆಗಳಲ್ಲಿರುವ ಸಾಮ್ಯ-ವ್ಯತ್ಯಾಸ-ಆಸಕ್ತಿಕಾರಕ ವಿಷಯಗಳ ಬೋಧನೆ. ಮಾತೃ ಭಾಷಾಧಾರಿತ ಪ್ರಾಥಮಿಕ ಶಿಕ್ಷಣ ಬರೆಯುವ-ಓದುವ ಎರಡೂ ಕೌಶಲಗಳನ್ನು ಏಕಕಾಲದಲ್ಲಿ ಸಾಧ್ಯವಾಗಿಸುತ್ತದೆ. ಜೊತೆಗೇ ಏಕಮುಖೀಯ ಬೋಧನೆಗಿಂತ ತರಗತಿಯಲ್ಲಿ ವಿದ್ಯಾರ್ಥಿ ಸಕ್ರಿಯವಾಗಿ ಭಾಗವಹಿಸುವಂತೆ ಮಾಡುತ್ತದೆ.ಇದರ ಫಲ ಪರಿಕಲ್ಪನೆಗಳ ಬಲವಾದ ಗ್ರಹಿಕೆ. ಜೊತೆಯಲ್ಲಿ ‘ಭಾಷೆ’ಯಾಗಿ ಕಲಿಸಲಾಗುವ ಇನ್ನೊಂದು ‘ಪರಭಾಷೆ’(ಇಲ್ಲಿ ಇಂಗ್ಲೀಷ್)ಗೂ ಈ ಪರಿಕಲ್ಪನೆಗಳನ್ನು ವರ್ಗಾಯಿಸುವಲ್ಲಿ, ಪರಿವರ್ತಿಸುವಲ್ಲಿ ಮಕ್ಕಳು ಯಶಸ್ವಿಗಳಾ ಗುತ್ತಾರೆ.  ಅಂದರೆ ಕನ್ನಡದಲ್ಲೆೀ ಪ್ರಾಥಮಿಕ ಶಿಕ್ಷಣ ಪಡೆದು ಇಂದು ಸರಾಗವಾಗಿ ಇಂಗ್ಲಿಷಿನಲ್ಲಿ ಮಾತನಾಡಬಲ್ಲ-ವ್ಯವಹರಿಸಬಲ್ಲ ವಿಜ್ಞಾನಿ-ಸಾಹಿತಿ-ತಂತ್ರಜ್ಞ ಮಹನೀಯರು ಮಾಡುವಂತೆ ಕನ್ನಡದಲ್ಲಿ ‘ಯೋಚಿಸಿ’ದರೂ ಇಂಗ್ಲಿಷಿನಲ್ಲಿ ಅದನ್ನು ವ್ಯಕ್ತಪಡಿಸಬಲ್ಲವ ರಾಗುತ್ತಾರೆ.  ಕಂಗ್ಲೀಷು, ಕೆಟ್ಟ-ತಪ್ಪು ಇಂಗ್ಲಿಷ್‌ಗಳ ಬದಲು ಕನ್ನಡದ ಉಳಿವಿಗೆ, ಸರಿಯಾದ ಇಂಗ್ಲಿಷ್ ಕಲಿಕೆಗೆ ಕನ್ನಡ ಮಾತೃಭಾಷಾ ಶಿಕ್ಷಣವೇ ಮಂತ್ರ ಎಂಬ ಸತ್ಯವನ್ನು ನಾವಿಂದು ಮನಗಾಣಬೇಕಾಗಿದೆ.

ಬರಹ ಇಷ್ಟವಾಯಿತೆ?

 • 0

  Happy
 • 1

  Amused
 • 1

  Sad
 • 1

  Frustrated
 • 0

  Angry