ಗುರುವಾರ , ಮೇ 19, 2022
21 °C

ಮಾತೃ ಹೃದಯದ ಗುಟ್ಟು

ಎಸ್.ಆರ್.ರಾಮಕೃಷ್ಣ Updated:

ಅಕ್ಷರ ಗಾತ್ರ : | |

ಬೆಂಗಳೂರಿನ ಬಗ್ಗೆ ದಕ್ಷಿಣ ಭಾರತದ ಎಲ್ಲ ರಾಜ್ಯಗಳ ಜನರಿಗೂ ವ್ಯಾಮೋಹ ಇರುವುದು ಅಷ್ಟೇನೂ ಹೊಸ ವಿಷಯವಲ್ಲ. ಇಲ್ಲಿನ ಹವಾಗುಣ, ಕೆಲಸದ ಅವಕಾಶ, ಬಹುಕೋಮು ಬಾಳ್ವೆ, ವ್ಯಾಪಾರಕ್ಕೆ ಅನುಕೂಲವಾದ ವಾತಾವರಣ, ಶಾಪಿಂಗ್ ಆಕರ್ಷಣೆಗಳು, ಫ್ಯಾಶನ್ನಿನ ಉಮೇದು... ಹೀಗೆ ಹಲವು ಅಂಶಗಳ ಬಗ್ಗೆ ನಮಗೆಲ್ಲ ಗೊತ್ತೇ ಇದೆ. ಆದರೆ ಬೆಂಗಳೂರಿಗೆ ವಲಸಿಗರು ಬರುವುದಕ್ಕೆ ಇನ್ನೊಂದು ಮಹತ್ವದ, ಸೂಕ್ಷ್ಮ ಕಾರಣವಿದೆ.ಬೇರೆ ಊರುಗಳಿಗಿಂತ ಉದಾರವಾಗಿ ಚಿಂತಿಸುವ ಊರು ನಮ್ಮದು. ರೂಢಿಗತವಲ್ಲದ ಜೀವನಶೈಲಿಗಳಿಗೆ ಇಲ್ಲಿ ಸಿಗುವ ಸ್ವಾತಂತ್ರ್ಯ ಬೇರೆ ರಾಜ್ಯದ ರಾಜಧಾನಿಗಳಲ್ಲಿ ಸಿಗುವುದಿಲ್ಲ ಎಂದು ಹಲವರು ಹೇಳುವುದನ್ನು ನಾನು ಕೇಳಿದ್ದೇನೆ.ಸುನಿಲ್ ಎಂದು ಕರೆಸಿಕೊಳ್ಳುವ ಒಬ್ಬರು ನನಗೆ ಪರಿಚಯ. ಕೇರಳದವರು. ಮಲಯಾಳಂ ಅಲ್ಲದೆ ಚೆನ್ನಾಗಿ ಕನ್ನಡ, ಇಂಗ್ಲಿಷ್ ಮಾತಾಡುತ್ತಾರೆ. ಹುಟ್ಟಿದಾಗ ಹೆಣ್ಣಾಗಿ ಕಂಡಿದ್ದರಿಂದ ಮನೆಯವರು ಲಕ್ಷ್ಮಿ ಎಂದು ಹೆಸರಿಟ್ಟಿದ್ದರು. ಬೆಳೆಯುತ್ತಿದಂತೆ ಲಕ್ಷ್ಮಿಗೆ ತಾನು ಹೆಣ್ಣಲ್ಲ ಎಂಬ ಅರಿವು ಮೂಡಿ ಯಾವಾಗಲೂ ಶರ್ಟು ಪ್ಯಾಂಟು ತೊಡುತ್ತಿದ್ದರು. ಮನೆಯವರಿಗೆ ಮತ್ತು ನೆರೆ ಹೊರೆಯವರಿಗೆ ಇದು ಇರುಸುಮುರುಸುಗೊಳಿಸುತ್ತಿತ್ತು. ಕೆಲವರು ಕೊಂಕು ಮಾತು ಆಡುತ್ತಿದ್ದರು. 2003ರಲ್ಲಿ ಲಕ್ಷ್ಮಿ ಬೆಂಗಳೂರಿಗೆ ಬಂದರು. `ಸಹಯಾತ್ರಿಕ~ ಎಂಬ ಕೇರಳದ ಸಂಸ್ಥೆಯ ಸಹಾಯದಿಂದ ಇಲ್ಲಿನ `ಸಂಗಮ~ ಎಂಬ ಲೈಂಗಿಕ ಅಲ್ಪಸಂಖ್ಯಾತರ ಸಂಸ್ಥೆಗೆ ಬಂದರು. ಇಲ್ಲಿ ಕೆಲ ದಿನ ಅನುವಾದಕರಾಗಿ ಕೆಲಸ ಮಾಡಿದರು. ಈಗ ಕೆಲವು ಸ್ನೇಹಿತರೊಡನೆ ಕೂಡಿ `ಲೆಸ್ಬಿಟ್~ ಎಂಬ ಸಂಸ್ಥೆಯನ್ನು ಸ್ಥಾಪಿಸಿ ಅದರ ಚಟುವಟಿಕೆಯಲ್ಲಿ ತೊಡಗಿದ್ದಾರೆ. ಲಕ್ಷ್ಮಿಗೆ ಸುನಿಲ್ ಎಂದು ನಾಮಕರಣ ಮಾಡಿದ್ದು ಬೆಂಗಳೂರಿನ ಸ್ನೇಹಿತರು. ಆದರೆ ಇಂದು ಸುನಿಲ್ ಗಂಡು ಎಂದು ಹೇಳಿಕೊಳ್ಳುವುದಿಲ್ಲ.`ಹಾಗಂದುಕೊಂಡಿದ್ದೆ ನಿಜ. ಅದಕ್ಕೆ ಕಾರಣ ಗಂಡಾಗಿರಬೇಕು ಇಲ್ಲ ಹೆಣ್ಣಾಗಿರಬೇಕು ಎಂಬ ಸಮಾಜದ ಒತ್ತಡ. ನಾನೀಗ ಗಂಡೂ ಹೆಣ್ಣೂ ಎರಡೂ ಒಟ್ಟೊಟ್ಟಿಗೆ ಆಗಿರಬಹುದು ಎಂದು ನಂಬಿದ್ದೇನೆ~ ಎನ್ನುತ್ತಾರೆ.ಇನ್ನು ಚಾರು ಎಂಬುವರು ತಮಿಳುನಾಡಿನ ಈರೋಡ್‌ನಿಂದ ಬೆಂಗಳೂರಿಗೆ ಬಂದು ನೆಲೆಸಿದ್ದಾರೆ. ಹೀಗೆ ಬರುವುದಕ್ಕೆ ಕಾರಣ ಅವರ ಊರಿಗಿಂತ ಇಲ್ಲಿ ಸಿಗುವ ಮನೋ ಸ್ಥೈರ್ಯ ಮತ್ತು ಒಡನಾಡಿಗಳ ಬೆಂಬಲ. ಅವರಿಗೆ ಬೆಂಗಳೂರು ಸುರಕ್ಷಿತ ಊರಾಗಿ ತೋರುತ್ತದೆ. ತಮ್ಮ ಊರುಗಳಲ್ಲಿನ ಉಸಿರು ಕಟ್ಟಿಸುವ ವಾತಾವರಣದಿಂದ ಬೆಂಗಳೂರಿಗೆ ಬಂದು ಇಲ್ಲಿನ ಜನಜಂಗುಳಿಯಲ್ಲಿ ಕರಗಿ ಬಾಳುವ ಅನಾಮಧೇಯತೆ ಮತ್ತು ಮುಕ್ತತೆಯನ್ನು ಅಪ್ಪಿಕೊಳ್ಳುತ್ತಾರೆ. ಲಿಂಗ ಬದಲಾಯಿಸಿಕೊಳ್ಳಬೇಕು ಎಂಬ ಅಭಿಲಾಷೆಗೆ ಇಲ್ಲಿ ಯಾರೂ ಹಿಂಸೆಯಿಂದ ಪ್ರತಿಕ್ರಿಯಿಸುವುದಿಲ್ಲ. ಚಾರು ಹೆಣ್ಣಾಗಿ ಹುಟ್ಟಿ ಗಂಡಾಗ ಬಯಸಿದವರು.ಸುಮತಿ ಎಂಬ ಹಾಡುಗಾರ್ತಿ ಬೆಂಗಳೂರಿನ ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತ ಪ್ರೇಮಿಗಳಿಗೆಲ್ಲ ಪರಿಚಿತ. ಸುಮಾರು ಇಪ್ಪತ್ತು ವರ್ಷ ಆಗ್ರಾ ಘರಾಣೆಯ ಪಂಡಿತ್ ರಾಮರಾವ್ ನಾಯಕ್‌ರಂಥ ಮಹಾನ್ ವಿದ್ವಾಂಸರಿಂದ ವಿದ್ಯೆ ಕಲಿತ ಇವರು ಮದುವೆ ಬೇಡ ಎಂದು ನಿರ್ಧರಿಸಿದ್ದಾರೆ. ಈ ನಿರ್ಧಾರಕ್ಕೆ ಒಂದು ಕಾರಣ ಅವರಲ್ಲಿದ್ದ ಲೆಸ್ಬಿಯನ್ (ಅಂದರೆ ಹೆಣ್ಣು ಹೆಣ್ಣನ್ನೇ ಪ್ರೀತಿಸುವ) ಪ್ರವೃತ್ತಿ. ತಮ್ಮ ಲೈಂಗಿಕತೆಯ ಬಗ್ಗೆ ಗೊಂದಲವಿದ್ದು ಕೊನೆಗೆ ತಾವು ಸಂಪ್ರದಾಯಸ್ಥ ಮದುವೆ, ಸಂಸಾರಕ್ಕೆ ಅನುಗುಣವಾಗಿ ಬದುಕಲು ಸಾಧ್ಯವೇ ಇಲ್ಲ ಎಂದು ತೀರ್ಮಾನಿಸಿದ್ದಾರೆ. `ಲೆಸ್‌ಬಿಟ್~ನ ಸ್ಥಾಪಕರಲ್ಲಿ ಇವರೂ ಒಬ್ಬರು.ಹೀಗೆ ಬೇರೆ ಬೇರೆ ರೀತಿಯ ಚಿಂತನೆಗಳನ್ನು ಸಾಕ್ಷಾತ್ಕಾರಗೊಳಿಸಿಕೊಳ್ಳುತ್ತಿರುವ ಇವರೆಲ್ಲ ಬೆಂಗಳೂರನ್ನು ಪ್ರೀತಿಸುತ್ತಾರೆ. ಇಲ್ಲಿನ ಜನರ ಸ್ನೇಹಪರತೆಯನ್ನು ಕೊಂಡಾಡುತ್ತಾರೆ. ಬೇರೆ ಊರುಗಳಿಗಿಂತ ಇ್ಲ್ಲಲಿ ಬಾಡಿಗೆಗೆ ಮನೆ ಹಿಡಿಯುವುದು ಸುಲಭವಂತೆ. ಇಲ್ಲಿನ ಟೀವಿ ಮತ್ತು ಪತ್ರಿಕೆಗಳಲ್ಲಿ ಬರುವ ವರದಿ, ಚರ್ಚೆ, ವಾಗ್ವಾದ ಎಲ್ಲ ತಮ್ಮ ಬದುಕಿಗೆ ಸಹಾನುಭೂತಿಯಿಂದಲೇ ಸ್ಪಂದಿಸುತ್ತವೆ ಎಂದು ಹೇಳುತ್ತಾರೆ. ಈ ಊರನ್ನು ಸ್ವಲ್ಪ ಸಿನಿಕತನದಿಂದಲೇ ನೋಡುವ ನನ್ನಂಥವರಿಗೆ ಇಂಥ ಅನುಭವಗಳು ಕಣ್ತೆರೆಸುವಂತಿರುತ್ತವೆ. ಇಲ್ಲಿನ ರಿಯಲ್ ಎಸ್ಟೇಟ್ ಹುಚ್ಚು, ಲಂಚಗುಳಿತನ, ಸಂಚಾರಿ ಗೊಂದಲ ಎಲ್ಲ ಕಂಡು ಬೇಸತ್ತ ನಮಗೆ ಈ ಊರಿನ ಎಷ್ಟೋ ಸದ್ಗುಣಗಳು ಕಣ್ಣಿಗೆ ಬಿದ್ದೇ ಇರುವುದಿಲ್ಲ ಎಂದು ಅರಿವಾಗುತ್ತದೆ. ಈಚೆಗೆ ಈ ಗುಂಪಿನವರು ಆತಂಕಗೊಂಡಿರುವುದು `ಲೆಸ್ಬಿಯನ್~ ಆತ್ಮಹತ್ಯೆಗಳ ಬಗ್ಗೆ. ಇಬ್ಬಿಬ್ಬರು ಹುಡುಗಿಯರು ಒಟ್ಟಿಗೆ ಆತ್ಮಹತ್ಯೆ ಮಾಡಿಕೊಂಡ ಸುದ್ದಿ ಕೇಳಿದ ಕೂಡಲೇ ಅದು ಲೆಸ್ಬಿಯನ್ ಜೋಡಿ ಇದ್ದಿರಬಹುದೇ ಎಂದು ಇವರು ಚಿಂತಿಸತೊಡಗುತ್ತಾರೆ. ಹೋದವರ್ಷ ಡಿಸೆಂಬರ್‌ನಲ್ಲಿ  ಬೆಂಗಳೂರಿನ ಮೂರು ಗಾರ್ಮೆಂಟ್ ಕೆಲಸದ ಹುಡುಗಿಯರು ಶರಾವತಿ ನದಿಗೆ ಧುಮುಕಿ ಆತ್ಮಹತ್ಯೆ ಮಾಡಿಕೊಂಡರು. 1993ರಿಂದ  2003ರವರೆಗಿನ ಅಂಕಿ ಅಂಶ ಶೋಧಿಸಿ ಕೇರಳದಲ್ಲಿ 35 ಲೆಸ್ಬಿಯನ್ ಆತ್ಮಹತ್ಯೆಗಳು ನಡೆದಿವೆ ಎಂದು ಒಂದು ವರದಿ ಹೇಳುತ್ತದೆ. ಹಾಗೆಯೇ 2009ರಿಂದ ಮೂರು ವರ್ಷದಲ್ಲಿ ಕನಿಷ್ಠ ಆರು ಆತ್ಮಹತ್ಯೆಗಳು ತಮಿಳುನಾಡಿನಲ್ಲಿ ಇದೇ ಕಾರಣಕ್ಕೆ ಆಗಿವೆ ಎಂದು ಮತ್ತೊಂದು ವರದಿ ಸೂಚಿಸುತ್ತದೆ. ತಮ್ಮ ಪ್ರೇಮ ಕಾನೂನು ಬಾಹಿರ ಎಂಬ ಶಂಕೆ ಮತ್ತು ಸಮಾಜ ತಮ್ಮ ಲೈಂಗಿಕ ವ್ಯಕ್ತಿತ್ವದ ಸತ್ಯವನ್ನು ಎಂದೂ ಒಪ್ಪಿಕೊಳ್ಳಲಾರದು ಎಂಬ ನಿರಾಶೆಯಿಂದ ಹೀಗಾಗುತ್ತಿದೆ ಎಂಬುದು ಲೆಸ್ಬಿಟ್ ಸದಸ್ಯರ ಅಳಲು. ದೆಹಲಿ ಹೈ ಕೋರ್ಟ್ ಸಲಿಂಗ ಪ್ರೇಮದ ಪರ ತೀರ್ಪೊಂದನ್ನು ಇತ್ತಿದೆ. ಆ  ವಿಷಯ ಈಗ ಸುಪ್ರೀಂ ಕೋರ್ಟ್‌ನಲ್ಲಿದೆ.`ಅದೇನೇ ಆದರೂ ನ್ಯಾಯಾಲಯಗಳು ಸೆಕ್ಷನ್ 377 ಸಲಿಂಗ ಕಾಮದ ವಿರುದ್ಧ ಎಂದು ವ್ಯಾಖ್ಯಾನ ಮಾಡಿಲ್ಲ. ಲೈಂಗಿಕ ಅಲ್ಪಸಂಖ್ಯಾತರು ಜಿಗುಪ್ಸೆ ಪಡಬೇಕಾದ ಅಗತ್ಯವಿಲ್ಲ~ ಎಂದು ಲೆಸ್ಬಿಟ್ ಸದಸ್ಯರು ಹೇಳುತ್ತಾರೆ. ತಮ್ಮ ಭಾವನೆಗಳ ಬಗ್ಗೆ ಅಪರಾಧಿ ಪ್ರಜ್ಞೆ ಮೂಡಬಾರದು ಎಂಬುದು ಸಂಸ್ಥೆಯ ಸಲಹೆ.ಕೋರ್ಟು, ಕಚೇರಿ, ಮನೆಯವರಿಗೆ ಮನವರಿಕೆ ಮಾಡುವುದು, ಹೀಗೆ ಯಾವುದೇ ಸಹಾಯ ಬೇಕಾದರೂ ಲೆಸ್ಬಿಟ್ ಸಂಸ್ಥೆಯ ಸಹಾಯವಾಣಿಗೆ ಯಾವುದೇ ಸಮಯದಲ್ಲಾದರೂ ಕರೆ ಮಾಡಬಹುದು: 96323 88261.ಆಟೋ ಹಾಸ್ಯ

ಬೆಂಗಳೂರಿನ ಆಟೋ ಡ್ರೈವರ್ ಗಳ ಹಾಸ್ಯ ಪ್ರಜ್ಞೆ ಮತ್ತು ಪ್ರಾಸ ಪ್ರೇಮ ಸೂಚಿಸುವ ಹಲವು ಭಿತ್ತಿಗಳನ್ನು ನೀವು ನೋಡಿರುತ್ತೀರಿ. ಈ ಬರಹ ಎಂದಾದರೂ ನಿಮ್ಮ ಕಣ್ಣಿಗೆ ಬಿದ್ದಿದೆಯೇ?- `ಲವ್ ಮಾಡಿದ್ರೆ ರೋಮಾನ್ಸು. ಕೈ ಕೊಟ್ಟರೆ ನಿಮ್ಹೋನ್ಸು.~

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.