ಮಾತೃ ಹೃದಯದ ರವಿಶಂಕರ್

7
ಸಿತಾರ್ ಮಾಂತ್ರಿಕನಿಗೆ ಸರೋದ್ ಮಾಂತ್ರಿಕನ ನುಡಿ ನಮನ

ಮಾತೃ ಹೃದಯದ ರವಿಶಂಕರ್

Published:
Updated:

ಮೈಸೂರು: `ತಾಯಿ ಮಮತೆಯ ಮಡಿಲು ಅದು. ತಂದೆ ಮಗನನ್ನು ಮನೆಯಿಂದ ಹೊರಕ್ಕೆ ಹಾಕಬಹುದು. ಏನ್ ಸಿಗರೇಟ್ ಸೇದುತ್ತೀಯಾ, ಹೊರಟು ಹೋಗ್ ಎಂದು ದಬ್ಬಿ ಬಿಡಬಹುದು. ಆದರೆ ತಾಯಿ ಹಿಂಬಾಗಿಲಿನಿಂದ ಮಗನನ್ನು ಕಂಡು, ಏನ್ ಮಗಾ ಎಲ್ಲಿ ಊಟ ಮಾಡುತ್ತೀಯಾ? ಮುಂದೇನು ಮಾಡ್ತೀಯಾ? ಎಂದು ಕೇಳುತ್ತಾಳೆ. ಅದಕ್ಕೇ ಅದು ತಾಯಿ ಕರುಳು ಅನ್ನೋದು. ಪಂಡಿತ್ ರವಿಶಂಕರ್ ಅವರದು ಅಂತಹ ಮಾತೃ ಹೃದಯ'.ಸಿತಾರ್ ಮಾಂತ್ರಿಕ ಪಂಡಿತ್ ರವಿಶಂಕರ್ ಅವರನ್ನು ಸರೋದ್ ಮಾಂತ್ರಿಕ ರಾಜೀವ್ ತಾರಾನಾಥ್ ಬಣ್ಣಿಸುವುದು ಹೀಗೆ.

`ನಾನು ಇಂದು ಸಂಗೀತಗಾರನಾಗಿದ್ದರೆ ಅದಕ್ಕೆ ಅವರೂ ಕಾರಣ. ಆ ದೊಡ್ಡ ಮನುಷ್ಯನಿಂದಾಗಿ ಇಂದು ನನಗೂ ಗೌರವ ಬಂದು ಬಿಟ್ಟಿದೆ.949ರಿಂದ ನಾನು ರವಿಶಂಕರ್ ಅವರನ್ನು ಬಲ್ಲೆ. ಅವರು ಯಾವಾಗ ಬೆಂಗಳೂರಿಗೆ ಬಂದರೂ ನಾನು ಹೋಗಿ ಅವರನ್ನು ಕಾಣುತ್ತಿದ್ದೆ. ಆದರೆ 1952ರಲ್ಲಿ ಅವರು ಅಲಿ ಅಕ್ಬರ್ ಖಾನ್ ಅವರೊಂದಿಗೆ ಬಂದರು. ಅವರಿಬ್ಬರ ಜುಗಲ್ ಬಂದಿ ಇತ್ತು. ಆ ಕಛೇರಿಯನ್ನು ಕೇಳಿದ ನಂತರ ನಾನು ಸರೋದ್‌ಗೆ ಮಾರು ಹೋದೆ. ನನ್ನ ಸಂಗೀತದ ಮಾರ್ಗ ನಿಚ್ಚಳವಾಯಿತು. ಅಲಿ ಅಕ್ಬರ್ ಖಾನ್ ಅವರೇ ನನ್ನ ಗುರುಗಳು ಎನ್ನುವುದು ಖಚಿತವಾಯಿತು. ನಾನೂ ಅವರ ಕುಟುಂಬದವರಲ್ಲಿ ಒಬ್ಬನಾದೆ. ನನ್ನ ಗುರುಗಳಾದ ಅಲಿ ಅಕ್ಬರ್ ಖಾನ್, ರವಿಶಂಕರ್, ಅನ್ನಪೂರ್ಣಮ್ಮ ಎಲ್ಲಾ ಒಂದೇ ಕುಟುಂಬದವರು. ನಂತರ ನಾನೂ ಆ ಕುಟುಂಬವನ್ನು ಸೇರಿಕೊಂಡೆ'.`ಯಾರಾದರೊಬ್ಬರಲ್ಲಿ ಸಂಗೀತದ ಅಭಿರುಚಿ ಇದೆ. ಏನನ್ನಾದರೂ ಸಾಧಿಸಬಹುದು ಎಂಬುದು ರವಿಶಂಕರ್‌ಗೆ ಅನ್ನಿಸಿದರೆ ಅವರ ಬಗ್ಗೆ ನಿರಂತರ ಕಾಳಜಿ ವಹಿಸುತ್ತಿದ್ದರು. ನನ್ನ ಬಗ್ಗೆ ಕೂಡ ಅಂತಹ ದೃಷ್ಟಿ ಯಾವಾಗಲೂ ಇತ್ತು. ನಾನು ಸರೋದ್ ಕಲಿಯಲು ಅಲಿ ಅಕ್ಬರ್ ಖಾನ್ ಅವರ ಬಳಿಗೆ ಹೋಗಿ ಮತ್ತೆ ವಾಪಸು ಮೈಸೂರಿಗೆ ಬಂದಿದ್ದೆ. ಇಂಗ್ಲಿಷ್ ಪ್ರಾಧ್ಯಾಪಕನಾಗಿದ್ದೆ.ಮದುವೆ ಆಗಿತ್ತು. ಇಂಗ್ಲಿಷ್ ಪ್ರಾಧ್ಯಾಪಕ ಕೆಲಸ ನನಗಲ್ಲ ಅನ್ನಿಸುತ್ತಿತ್ತು. ಆದರೆ, ನಾನು ಆ ವರ್ತುಲದಲ್ಲಿ ಸಿಕ್ಕಿ ಹಾಕಿಕೊಂಡಿದ್ದೆ. ಅಲ್ಲಿಂದ ನನ್ನನ್ನು ಬಿಡಿಸಿ ಸಂಗೀತದ ಮಾರ್ಗಕ್ಕೆ ಎಳೆದು ತಂದವರು ಪಂಡಿತ್ ರವಿಶಂಕರ್'.`1982ರಲ್ಲಿ ನಾನು ಹೈದರಾಬಾದ್‌ನಲ್ಲಿ ಅಧ್ಯಾಪಕನಾಗಿದ್ದೆ. ನನಗೆ 52 ವರ್ಷ. ವಿವಾಹ ವಿಚ್ಛೇದನವಾಗಿತ್ತು. ಒಂದು ದಿನ ಹೈದರಾಬಾದ್‌ನಲ್ಲಿ ಕಾರ್ಯಕ್ರಮ ನೀಡಲು ರವಿಶಂಕರ್ ಬಂದರು. ನಿನ್ನ ಜೊತೆ ಮಾತನಾಡಬೇಕು ಎಂದರು. ಅವರು ಉಳಿದುಕೊಂಡಿದ್ದ ವಸತಿ ಗೃಹಕ್ಕೆ ಹೋಗಿ ನಾನು ಅವರನ್ನು ಭೇಟಿ ಮಾಡಿದೆ. ನೀನು ಇಲ್ಲಿ ಅಧ್ಯಾಪಕನೋ? ಸಂಬಳ ಚೆನ್ನಾಗಿ ಬರುತ್ತಿದೆಯೇ? ಶೇಕ್ಸ್‌ಪಿಯರ್ ಕಲಿಸುತ್ತಿದ್ದೀಯಾ? ಎಂದೆಲ್ಲಾ ಪ್ರಶ್ನೆಗಳನ್ನು ಕೇಳಿದರು. ನಾನು ಎಲ್ಲದಕ್ಕೂ ಹೌದು ಎಂದೆ. ನಂತರ ಒಮ್ಮೆಲೆ, ನಿನಗೆ ನಾಚಿಕೆ ಆಗೋಲ್ವಾ ಎಂದರು. ನಾನು ಗಾಬರಿಯಾದೆ. ನಿನ್ನ ಗುರುಗಳು ನಿನಗೆ ಏನೆಲ್ಲಾ ಕೊಟ್ಟಿದ್ದಾರೆ; ಒಂದು ಪೈಸೆ ಹಣ ತೆಗೆದುಕೊಳ್ಳದೆ ಸಂಗೀತ ಧಾರೆ ಎರೆದಿದ್ದಾರೆ. ಅವರ ಋಣ ತೀರಿಸಬಾರದಾ? ನೀನು ಋಣ ಮುಕ್ತನಾಗೋದು ಹ್ಯಾಗೆ? ಎಂದು ಕೇಳಿದರು. ನಾನು ಅವರ ಕಾಲಿನ ಬುಡಕ್ಕೆ ಸುಮ್ಮನೆ ಕುಳಿತಿದ್ದೆ. ನಾನು ಏನು ಮಾಡಬೇಕು ಎಂದು ನೀವೇ ಹೇಳಿ ಎಂದೆ. ನಾನು ಹೇಳಿದ ಹಾಗೆ ಮಾಡುತ್ತೀಯಾ? ಎಂದು ಮತ್ತೆ ಕೇಳಿದರು. ಹೌದು ಎಂದೆ. ಹಾಗಾದರೆ ಕೆಲಸ ಬಿಡು; ಸಂಗೀತ ಮುಂದುವರಿಸು ಎಂದರು. ನಾನು ಕೆಲಸ ಬಿಟ್ಟೆ. ಸಂಗೀತ ಅಪ್ಪಿಕೊಂಡೆ. ಒಪ್ಪಿಕೊಂಡೆ. ಈಗ ನಾನು ಸಂಗೀತಗಾರನಾಗಿದ್ದರೆ ಅದು ಅವರ ಕೃಪೆ.`ಒಂದಿನ ಬೆಂಗಳೂರಿನಲ್ಲಿ ನಮ್ಮ ಮನೆಗೆ ರವಿಶಂಕರ್ ಬಂದರು. ಶುಕ್ಲ ಬಿಲಾವಲ್ ನುಡಿಸು ಎಂದರು. ನನಗೆ ಬರಲ್ಲ ಎಂದೆ. ನಾನು ಹೇಳಿ ಕೊಡುತ್ತೀನಿ. ನೀನು ನುಡಿಸು ಎಂದರು. ಇಬ್ಬರೂ ನುಡಿಸಿದೆವು. ಎಷ್ಟೋ ಹೊತ್ತಿನ ನಂತರ ಅವರು ಹಾಡಲು ಆರಂಭಿಸಿದರು.ನಾನು ಹಾಡಲು ಆರಂಭಿಸಿದೆ. ಹೀಗೆ 3-4 ರಾಗಗಳನ್ನು ನನಗೆ ಕಲಿಸಿದರು. ಬೆಳಿಗ್ಗೆ ಆದ ನಂತರ ಮತ್ತೆ ಸಂಜೆ ಇದೇ ಮುಂದುವರಿಯಿತು. ಇನ್ನೊಮ್ಮೆ ಅವರು, ನಾನು ಏರುವ ಮಟ್ಟಕ್ಕೆ ನಿನ್ನ ಸರೋದ್ ಏರುತ್ತದಾ ಎಂದು ಕೇಳಿದರು. ನಾನು ಏರುತ್ತದೆ ಎಂದೆ. ತಂತಿ ತುಂಡಾಗಲ್ವ ಎಂದು ಪ್ರಶ್ನೆ ಮಾಡಿದರು. ಪ್ರತಿ ದಿನ ಅಭ್ಯಾಸ ಮಾಡುವ ಸರೋದ್ ಅದು. ತಂತಿ ಗಟ್ಟಿ ಇದೆ ಎಂದೆ. ನಂತರ ಇಬ್ಬರೂ ಒಟ್ಟಿಗೆ ನುಡಿಸಿದೆವು'.`ನೀನು ನಿಜವಾಗಿ ಏನೆಲ್ಲ ಮಾಡಬಲ್ಲೆ. ನಿನ್ನನ್ನು ನೀನು ಮರೆತು ಬಿಟ್ಟಿದ್ದೀಯ. ಮತ್ತೆ ವಾಪಸು ಸಂಗೀತಕ್ಕೆ ಬಾ ಎಂದು ನನ್ನನ್ನು ಈ ಮಾರ್ಗಕ್ಕೆ ತಂದವರು ಅವರು. ಬಹಳ ದೊಡ್ಡ ಮನುಷ್ಯ'.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry