ಶನಿವಾರ, ನವೆಂಬರ್ 16, 2019
24 °C
ಮಾತ್‌ಮಾತಲ್ಲಿ

ಮಾತೆಂದರೆ ಬದ್ಧತೆ

Published:
Updated:

“ಮಾತುಗಾರಿಕೆಯ ವಿಷಯ ಬಂದಾಗ ನನಗೆ ಕಡಿಮೆ ಅಂಕ. ಯಾಕೆಂದರೆ ಮಾತಿನಲ್ಲಿ ನಾನು ಬಹಳ ಹಿಂದೆ. ಸಣ್ಣ ವಯಸ್ಸಿನಿಂದಲೂ ನನಗೆ ಕ್ರೀಡೆಯಲ್ಲಿ ಆಸಕ್ತಿ ಹೆಚ್ಚು. ಹುಡಗರು ಆಡೋ ಫುಟ್‌ಬಾಲ್, ಕ್ರಿಕೆಟ್‌ನಲ್ಲೇ ಹೆಚ್ಚು ಕಾಲ ಕಳೆಯುತ್ತಿದ್ದೆ. ಈಗಲೂ ಮಾತಿನಲ್ಲಿ ನಾನು ಜಾಣೆ ಅಲ್ಲ. ನನ್ನ ಮಾತಿನ ಲಯ ತಪ್ಪಿದ್ದೇ ಇಲ್ಲ.ಮಾತುಗಾತಿ ಅಲ್ಲದಿದ್ದರೂ ಶಾಲಾ ದಿನಗಳಲ್ಲೇ ನಾಟಕಗಳಲ್ಲಿ ಉತ್ತಮವಾಗಿ ಅಭಿನಯಿಸುತ್ತಿದ್ದೆ. ಆಗಲೂ ಅಷ್ಟೇ, ನನ್ನ ಪಾತ್ರಕ್ಕೆ ಮೀಸಲಾಗಿರುವ ಸಂಭಾಷಣೆಯನ್ನು ಅಚ್ಚುಕಟ್ಟಾಗಿ ಒಪ್ಪಿಸುತ್ತಿದ್ದೆ. ಅದು ಬಿಟ್ಟು ಒಂದು ಸಾಲು ಕೂಡ ಸೇರಿಸುತ್ತಿರಲಿಲ್ಲ. ಸೇರಿಸಲೇಬೇಕಾದ ಅನಿವಾರ್ಯತೆ ಎದುರಾದರೂ ನನ್ನಿಂದಾಗುತ್ತಿರಲಿಲ್ಲ. ಆದರೂ, ನೀವು ನಂಬ್ತೀರೋ ಇಲ್ವೋ ಕಾಲೇಜು ಸಮಾರಂಭಗಳಲ್ಲಿ ನಾನು ಕಾರ್ಯಕ್ರಮ ನಿರೂಪಣೆ ಮಾಡುತ್ತಿದ್ದೆ. ಆಗ `ನಿನ್ನ ಮಾತಿನಲ್ಲಿ ಹಾಸ್ಯದ ಸ್ಪರ್ಶ ಇರುತ್ತದೆ. ಗಂಭೀರವಾಗಿದ್ದುಕೊಂಡೂ ನೀನು ಹಾಸ್ಯ ಮಾಡುತ್ತೀ. ಅದನ್ನೇ ಸ್ವಲ್ಪ ದುಡಿಸಿಕೊಂಡರೆ ನೀನು ಒಳ್ಳೆಯ ಮಾತುಗಾತಿ, ನಿರೂಪಕಿಯಾಗಬಹುದು' ಎಂದು ನನ್ನ ಸಹಪಾಠಿಗಳು ಮತ್ತು ಅಧ್ಯಾಪಕರು ಹೇಳುತ್ತಿದ್ದರು.ಚಂದ್ರು ಉತ್ತಮ ಮಾತುಗಾರ. ಮಾತ್ರವಲ್ಲ ಪುಸ್ತಕ ಹುಳು ಕೂಡ. ಅವರು ಓದೋದನ್ನು ನೋಡಿದರೆ ನನಗೆ ತಲೆ ತಿರುಗಿಹೋಗುತ್ತದೆ. ಶಾಪಿಂಗ್ ಅಂತ ಹೋದರೆ ಇವರು `ಲ್ಯಾಂಡ್‌ಮಾರ್ಕ್' ಪುಸ್ತಕ ಮಳಿಗೆಯಲ್ಲಿ ಹೊಸ ಪುಸ್ತಕಗಳಿಗಾಗಿ ಹುಡುಕಾಡುತ್ತಿರುತ್ತಾರೆ. ಏನಿಲ್ಲವೆಂದರೂ ಆರೇಳು ಪುಸ್ತಕ ಖರೀದಿಸ್ತಾರೆ. ತಂದರೆ ಮುಗೀತಾ? ಒಂದೊಂದು ಪುಸ್ತಕ ಮುಗಿಯೋವರೆಗೂ ಮಧ್ಯರಾತ್ರಿ ಕಳೆದರೂ ಓದ್ತಾರೆ, ಮುಂಜಾನೆ 4 ಗಂಟೆಗೆ ಮತ್ತೆ ಎದ್ದುಕೂರ‌್ತಾರೆ. ಊಟ ತಿಂಡಿ ಹೊತ್ತಿಗೆ ಹೋಗಿ, ನಿಮ್ಮ ಪುಸ್ತಕ ಬಿಟ್ಟು ಊಟಕ್ಕೆ ಬರ‌್ತೀರೋ ಇಲ್ವೋ ಅಂತ ರೇಗಿದ್ರೆ `ಇಲ್ಲಿ ಕೂತ್ಕೋ, ಇಲ್ಲಿ ಏನು ಬರೆದಿದ್ದಾರೆ ಗೊತ್ತಾ?' ಅಂತ ನನಗೂ ಓದಿಹೇಳ್ತಾರೆ. ನನಗೆ ಓದೋದು ಅಂದ್ರೆ ಆಗಲ್ಲ. ಹಾಗಾಗಿ ಅವರು ಹಾಗೆ ಹೇಳೋ ಮುಖ್ಯಾಂಶಗಳನ್ನಷ್ಟೇ ಕೇಳಿ ತಿಳಿದುಕೊಳ್ಳುತ್ತೇನೆ. ಅವರ `ಸಹವಾಸ' ನನಗೆ ಮಾತೂ ಕಲಿಸಿದೆ, ಸತ್ಸಂಗವನ್ನೂ ಕೊಟ್ಟಿದೆ.ನನ್ನ ಪ್ರಕಾರ ಮಾತೆಂದರೆ ಬದ್ಧತೆ. ಕೊಟ್ಟ ಮಾತನ್ನು ತಪ್ಪಬಾರದು ಎಂಬುದು ನನ್ನ ಮತ್ತು ಚಂದ್ರು ಸಿದ್ಧಾಂತ.

`ಸಿಹಿಕಹಿ' ಧಾರಾವಾಹಿ ಬಳಿಕ ನಮ್ಮ ಮದುವೆಯಾಯ್ತು. ಇಬ್ಬರೂ ದುಡಿಯಲೇಬೇಕಾದ ಅನಿವಾರ್ಯತೆ ಎದುರಾದಾಗ ನನಗೆ ಕನ್ನಡ ಚಿತ್ರರಂಗದಲ್ಲಿ ತೆರೆಯಾಚೆಗೆ ಒಂದು ಅವಕಾಶ ಸಿಕ್ಕಿತು. ಪರಭಾಷಾ ನಟಿಯರಿಗೆ ಕಂಠದಾನ (ಡಬ್ಬಿಂಗ್ ಆರ್ಟಿಸ್ಟ್) ಮಾಡೋದು. ಸುಹಾಸಿನಿ, ಶ್ರುತಿ, ಊರ್ವಶಿ, ಖುಷ್ಬೂ ಅವರಂತಹ- ಆಗ ಉತ್ತಮ ಬೇಡಿಕೆಯಲ್ಲಿದ್ದ- ನಟಿಯರಿಗೆ ಕಂಠದಾನ ಮಾಡಿದೆ.ನಟಿ ಉಮಾಶ್ರೀಯವರ ಕಾಳಜಿಯಿಂದಾಗಿ ಈಗ ಕಂಠದಾನ ಕಲಾವಿದರಿಗೂ ಪ್ರಶಸ್ತಿ, ಗೌರವ ಸಿಗುತ್ತಿದೆ. ಆದರೆ ನಾವು ಎಂಟ್ರಿ ಕೊಟ್ಟ ಕಾಲದಲ್ಲಿ ಕಂಠದಾನ ಮಾಡೋದು ಒಂದು ಕಲೆ ಅಂತ ಗುರುತಿಸ್ತಾ ಇರಲಿಲ್ಲ. ಅದಕ್ಕೊಂದು ಸ್ಥಾನಮಾನ ಅನ್ನೋದೂ ಇರಲಿಲ್ಲ. ರೇಣುಕಾಶರ್ಮ ಎಂಬ ಮಹಾನುಭಾವ ನನ್ನ ಕಂಠವನ್ನು ಗುರುತಿಸಿ ಅವಕಾಶ ಕೊಡಿಸಿದ್ರು. ಅಲ್ಲಿಂದೀಚೆ 750ಕ್ಕೂ ಹೆಚ್ಚು ಸಿನಿಮಾಗಳಿಗೆ ಕಂಠದಾನ ಮಾಡಿದೆ.ಪರಭಾಷಾ ಕಲಾವಿದರು ಕನ್ನಡದವರ ಸ್ಥಾನವನ್ನು ಆಕ್ರಮಿಸಿಕೊಳ್ಳುತ್ತಿದ್ದಾರೆ ಎಂದು ತೀವ್ರ ಆಕ್ಷೇಪ ಬಂದಿತ್ತು ಆ ಕಾಲದಲ್ಲಿ. ಆದರೆ ನಿಜ ಹೇಳ್ಲಾ? ಅವರು ಬಾರದೇ ಇದ್ದಿದ್ದರೆ ನನಗೆ ಮತ್ತು ನನ್ನಂತಹ ಕಂಠದಾನ ಕಲಾವಿದರಿಗೆ ಬದುಕು ದುಸ್ತರವಾಗುತ್ತಿತ್ತು. ಅವರಿಂದ ನನಗೆ ಉಪಕಾರವಾಯಿತು. ಮಾತು ನನಗೆ ಅನ್ನ ನೀಡಿತು!`ಆಮೇಲೆ ಈ ಎಲ್ಲಾ ಪರಭಾಷಾ ನಟಿಯರೂ ಡಬ್ಬಿಂಗ್ ಮಾಡಲು ಶುರುಮಾಡಿದರೆನ್ನಿ. ಆದರೆ ಕೆಲ ವರ್ಷ `ಯಾರಿಗೆ ಸಾಲುತ್ತೆ ಸಂಬಳ' ಚಿತ್ರದ ಡಬ್ಬಿಂಗ್ ವೇಳೆ ಸುಹಾಸಿನಿ ಅವರಿಗೆ ಕಿವಿಯ ಸೋಂಕು ಆಗಿದ್ದರಿಂದ ನಾನೇ ಕಂಠದಾನ ಮಾಡಿದೆ. ಚಿತ್ರದ ಪತ್ರಿಕಾಗೋಷ್ಠಿಯಲ್ಲಿ ಅವರು, `ನಾನೇ ಡಬ್ಬಿಂಗ್ ಮಾಡಿದ್ದರೂ ಇಷ್ಟು ಪರಿಣಾಮಕಾರಿಯಾಗಿ ಬರುತ್ತಿರಲಿಲ್ಲ. ನನ್ನ ಪಾತ್ರ ಗೆದ್ದರೆ ಅದಕ್ಕೆ ಗೀತಾ ಅವರೇ ಕಾರಣ' ಎಂದು ಮುಕ್ತಕಂಠದಿಂದ ಹೊಗಳಿದರಂತೆ. ಇಂತಹ ಪ್ರೋತ್ಸಾಹದಾಯಕ ಮಾತುಗಳು ಪ್ರಶಸ್ತಿಗಿಂತಲೂ ಎತ್ತರದಲ್ಲಿ ನಿಲ್ಲುತ್ತವೆ.ಇತ್ತೀಚೆಗೆ ನಮ್ಮ ಪ್ರೊಡಕ್ಷನ್‌ನ ಧಾರಾವಾಹಿಗಳ ಸಂಭ್ರಮಾಚರಣೆಯಲ್ಲಿ ನಿರೂಪಣೆ ಮಾಡಿದೆ. ಜಹಾಂಗೀರ್ ಮತ್ತು ಚಂದ್ರು ಜತೆಯಲ್ಲಿದ್ದರು. ನಿರೂಪಕರ ಮಾತು ಸಭೆಯಲ್ಲಿ ಮೆಚ್ಚುಗೆಯ ನಗುವಿಗೂ ಕಾರಣವಾದೀತು. ಲೇವಡಿಗೂ ಹೇತುವಾದೀತು. ಕಂಠದಾನ ಮತ್ತು ನಿರೂಪಣೆ, ನಿರ್ವಹಣೆಯ ಕಾರಣದಿಂದ ಮಾತು ಒಂದು `ಇಂಡಸ್ಟ್ರಿ' ಆಗಿ ಮಾರ್ಪಟ್ಟಿದೆ. ಮಾತು ಇಡಿಯ ಮುತ್ತಾಗಿ ಇರಬೇಕು. ಎಡವಿದರೆ ಒಡೆಯುತ್ತದೆ. ಜೋಡಿಸಲು ಸಾಧ್ಯವಿಲ್ಲ.”

ಪ್ರತಿಕ್ರಿಯಿಸಿ (+)