ಮಾತೆಂದರೆ ಮನದ ಭಾವನೆ

7

ಮಾತೆಂದರೆ ಮನದ ಭಾವನೆ

Published:
Updated:
ಮಾತೆಂದರೆ ಮನದ ಭಾವನೆ

ಹಿರಿಯರು ನೆಟ್ಟಿದ್ದ ಗಿಡ ನಮ್ಮ ಕಾಲಕ್ಕೆ ಬೃಹತ್ ವೃಕ್ಷವಾಗಿ ಬೆಳೆದು ಧಾರಾಳ ನೆರಳು ಹಣ್ಣು ನೀಡುತ್ತಿತ್ತು. ಅವರ ಹೋರಾಟದಿಂದ ನಮಗೂ ತಕ್ಕ ಸ್ಥಾನಮಾನ ದೊರೆಯಿತು.ಚಿತ್ರರಂಗದಲ್ಲಿ ಡಬ್ಬಿಂಗ್ ಕಲಾವಿದರಿಗೆ ಮಾನ್ಯತೆ ಇಲ್ಲ, ಅವರನ್ನು ಕೀಳಾಗಿ ಕಾಣಲಾಗುತ್ತದೆ ಎಂಬ ಕೂಗು ಈಗ ಹಳೆಯದು. ನಾಯಕ ನಾಯಕಿಯ ಅಯ್ಕೆಯಲ್ಲಿ ತೆಗೆದುಕೊಳ್ಳುವಷ್ಟೇ ಕಾಳಜಿ ಕಂಠದಾನ ಕಲಾವಿದರ ಆಯ್ಕೆಯಲ್ಲೂ ನಡೆಸುತ್ತಿರುವುದು ಇತ್ತೀಚಿನ ವಿದ್ಯಮಾನ.ಹಾಗೆಂದಮಾತ್ರಕ್ಕೆ ನಾಯಕಿಯಿಂದ ಅದೇ ಪ್ರೀತಿಯನ್ನು ನಿರೀಕ್ಷಿಸಲು ಸಾಧ್ಯವಿಲ್ಲ. ಕಂಠದಾನ ಕಲಾವಿದರ ಜತೆ ಕೂತು ಸ್ವರದಲ್ಲಿ ನಟನೆಗೆ ತಕ್ಕ ಭಾವ ತುಂಬಲು ಸಹಕರಿಸುತ್ತಿದ್ದ ನಟಿಯರಲ್ಲಿ ಮಾಲಾಶ್ರೀ ಕೊನೆಯವರು. ಅವರು ಸ್ವರದ ಏರಿಳಿತಗಳನ್ನು ಅಷ್ಟೇ ಸೂಕ್ಷ್ಮವಾಗಿ ಗಮನಿಸಿ ಅದರಂತೆ ದನಿ ಬರಬೇಕೆಂದು ಸಲಹೆ ನೀಡುತ್ತಿದ್ದರು.

 

ಇಂದಿನ ನಟೀಮಣಿಯರಲ್ಲಿ ಬಹುತೇಕರು ತಮಗೆ ದನಿ ನೀಡಿದವರ ಹೆಸರು ತಿಳಿಯಲೂ ಹೋಗುವುದಿಲ್ಲ. ಇನ್ನು ಕೃತಜ್ಞತೆ ಸಲ್ಲಿಸುವುದು ದೂರದ ಮಾತೇ ಸರಿ. `ದೀಪಾ~ ಎಂಬಾಕೆ ಹಿನ್ನೆಲೆ ದನಿ ನೀಡುವ ಕಲಾವಿದೆ ಎಂಬುದು ನಾನು ದನಿ ನೀಡಿದ ಹಲವಾರು ಕಲಾವಿದರಿಗೆ ತಿಳಿದಿರದು. ಕನ್ನಡದ ನಟಿಯರಾದ ರಮ್ಯಾ, ರಾಗಿಣಿ, ಐಂದ್ರಿತಾ ರೈ, ಪೂಜಾ ಗಾಂಧಿ, ನಿಧಿಸುಬ್ಬಯ್ಯ, ದೀಪಾ ಸನ್ನಿಧಿ ಮೊದಲಾದವರ ಪೈಕಿ ರಾಧಿಕಾ ಪಂಡಿತ್ ಒಬ್ಬರೇ ನೆನಪಿನಿಂದ ಧನ್ಯವಾದ ತಿಳಿಸಿದ್ದು. ಮತ್ತೊಬ್ಬ ನಟಿ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ `ಡಬ್ಬಿಂಗ್ ತುಂಬಾ ಕೆಟ್ಟದಾಗಿದೆ~ ಎಂದು ಮಾಧ್ಯಮದ ಮುಂದೆ ಹೇಳಿಕೆ ನೀಡಿದ್ದರು.ಹಾಗೆಂದು ಈ ನಿರ್ಲಕ್ಷ್ಯ ನಿರ್ದೇಶಕರ ಕಡೆಯಿಂದಿಲ್ಲ. ಪೋಷಕ ನಟ ನಟಿಯರಿಗೂ ದನಿ ನೀಡುವ ಕಲಾವಿದರೂ ಇಂದು ಚಿತ್ರರಂಗದಲ್ಲಿ ಗುರುತಿಸಿಕೊಳ್ಳುತ್ತಿರುವುದು ಸಂತಸದ ವಿಷಯವೂ ಹೌದು.ಎಲ್ಲಾ ನಟಿಯರೂ ಕಂಠದಾನ ಕಲಾವಿದರಾಗಲು ಸಾಧ್ಯವಿಲ್ಲ. ಪರಭಾಷಾ ನಟಿಯರಿಗೆ ದನಿ ನೀಡುವಾಗ ಅವರ ತುಟಿಚಲನೆ ಗಮನಿಸುತ್ತಿರಬೇಕು. ಬಾರದ ಕನ್ನಡ ಭಾಷೆಯನ್ನು ಅವರು ಹೇಗ್ಹೋಗೋ ಉಚ್ಚರಿಸಿರುತ್ತಾರೆ. ಇನ್ನು ಶೂಟಿಂಗ್ ವೇಳೆ ನವರಸ ಭಾವಗಳ ತೋರ್ಪಡಿಕೆಗೆ ಕೃತಕ ಸೆಟ್ಟಿಂಗ್ ತಯಾರಾಗಿರುತ್ತದೆ. ಸಂದರ್ಭಕ್ಕೆ ತಕ್ಕಂತೆ ಭಾವಾಭಿನಯ ಮಾಡಬಹುದು. ಆದರೆ ನಮಗಿಲ್ಲಿ ಆ ಸಾಧ್ಯತೆಗಳಿಲ್ಲ. ಮುಂದೆ ಕಾಣುವ ಸ್ಕ್ರೀನ್ ನೋಡಿ ಮಾತು ಜೋಡಿಸಬೇಕು. ಆ ಭಾವಕ್ಕೆ ಜೀವ ತುಂಬಬೇಕು.ನಾನು ಚಿತ್ರರಂಗಕ್ಕೆ ಬಂದಿದ್ದು ಬಾಲನಟಿಯಾಗಿ. 1992ರಲ್ಲಿ ದಿನೇಶ್‌ಬಾಬು ನಿರ್ದೇಶನದ ದೀಪಾವಳಿ ಚಿತ್ರಕ್ಕಾಗಿ ಮೊದಲು ಬಣ್ಣ ಹಚ್ಚಿದೆ. ಕಂಠದಾನ ಕಲಾವಿದೆಯಾಗಿ ನನ್ನ ಮೊದಲ ಚಿತ್ರ `ಅಭಿ~. ಹೊಸ ನಟಿಯನ್ನು ಪರಿಚಯಿಸಿದ್ದರಿಂದ ಹೊಸ ದನಿಗಾಗಿ ಹುಡುಕಾಟ ನಡೆಯುತ್ತಿತ್ತು. ಪರೀಕ್ಷೆಯ ಬಳಿಕ ನನ್ನ ದನಿಗೂ ಒಪ್ಪಿಗೆ ದೊರೆಯಿತು. ಹೀಗೆ ಸಾಮಾನ್ಯ ನಟಿಯಾಗಿದ್ದ ನಾನು ಕಂಠದಾನ ಕಲಾವಿದೆಯಾಗಿಯೂ ಗುರುತಿಸಿಕೊಂಡೆ.ಇನ್ನು ಸುದೀಪ್ ಅಭಿನಯದ `ಮೈ ಅಟೋಗ್ರಾಫ್~ ಸದಾ ನೆನಪಿನಲ್ಲಿ ಉಳಿಯುವಂತಹ ಪಾತ್ರ. ಹಿರಿಯ ನಟಿ ಮೀನಾ ಅವರಿಗೆ ದನಿ ನೀಡಲು ಸ್ಟುಡಿಯೋಗೆ ತೆರಳಿದ್ದಾಗ ಹದಿಹರೆಯದ ವಯಸ್ಸಿನ ಪಾತ್ರಕ್ಕಾಗಿ ಹುಡುಕಾಟ ನಡೆಯುತ್ತಿತ್ತು. ಸ್ಕ್ರೀನ್ ಟೆಸ್ಟ್ ಬಳಿಕ ಕಮಲಿ ಪಾತ್ರಕ್ಕೆ ನಾನು ಆಯ್ಕೆಯಾದೆ. ಅದು ಸವಾಲಿನ ಪಾತ್ರವೂ ಆಗಿತ್ತು. ಹದಿನಾಲ್ಕರ ಹುಡುಗಿ ಹಾಗೂ ಎರಡು ಮಕ್ಕಳ ತಾಯಿಯಾಗಿ ಅಭಿನಯಿಸಬೇಕಿತ್ತು. ಆಯ್ಕೆಯಾದ ಒಂದೇ ವಾರಕ್ಕೆ ಚಿತ್ರೀಕರಣಕ್ಕೆ ತೀರ್ಥಹಳ್ಳಿಗೆ ತೆರಳಬೇಕಾಯಿತು. ನಂ.73 ಶಾಂತಿನಿವಾಸದಲ್ಲಿ ಸಿಕ್ಕ ಮನೆಕೆಲಸದಾಕೆಯ ಪಾತ್ರವೂ ಅಷ್ಟೇ ಜವಾಬ್ದಾರಿಯದ್ದಾಗಿತ್ತು.ಜನರು ಇಂದಿಗೂ ನೆನಪಿಟ್ಟುಕೊಂಡಿರುವುದು ವಿನು ಬಳಂಜ ನಿರ್ದೇಶನದ `ಪ್ರೀತಿ ಇಲ್ಲದ ಮೇಲೆ~ ಧಾರವಾಹಿಯ `ನಿಮ್ಮಿ~ ಪಾತ್ರದ ಮೂಲಕ. ಆ ಬಳಿಕ ಸೇತೂರಾಂ ಅವರ ದಿಬ್ಬಣ, ಅನಾವರಣ ಧಾರಾವಾಹಿಗಳಲ್ಲೂ ನಟಿಸಿದೆ. ಸೇತೂರಾಂ ಶ್ರೇಷ್ಠ ನಿರ್ದೇಶಕ. ಮಾತಿನಲ್ಲೇ ಚೂರಿಯಿಂದ ಇರಿದು ಕೊಲ್ಲುವ ಶಕ್ತಿ ಅವರ ಸಂಭಾಷಣೆಗಿದೆ.ನನ್ನ ಪ್ರಕಾರ ಮಾತು ಅಂದರೆ ಭಾವನೆ. ಸಂವಹನ ಎಂಬುದು ನೆಪ ಮಾತ್ರ.ಎಚ್ಚರಿಕೆಯಿಂದ ಆಡಿದಾಗಲಷ್ಟೇ ಮಾತಿಗೆ ಬೆಲೆ. ಹಲವು ಭಾಷೆಗಳ ತವರೂರಾದ ಭಾರತದಲ್ಲಿ ಜನಿಸಿದ್ದಕ್ಕೆ ನಾವು ಹೆಮ್ಮೆಪಡಬೇಕು. ನಾನು ಹುಟ್ಟಿ ಬೆಳೆದಿದ್ದು ಉದ್ಯಾನನಗರಿಯಲ್ಲೇ. ಬಿಕಾಂ ಮುಗಿಸಿ ಇದೀಗ ಸಂಪೂರ್ಣವಾಗಿ ಚಿತ್ರರಂಗದಲ್ಲೇ ತೊಡಗಿಸಿಕೊಂಡಿದ್ದೇನೆ.`ರಂಗ ಎಸ್‌ಎಸ್‌ಎಲ್‌ಸಿ~ ಹಾಗೂ `ಜಸ್ಟ್‌ಮಾತ್ ಮಾತಲ್ಲಿ~ ಚಿತ್ರದಲ್ಲಿ ರಮ್ಯಾ ಹಾಗೂ ಅರಸು ಚಿತ್ರದಲ್ಲಿ ಮೀರಾ ಜಾಸ್ಮಿನ್ ಅವರಿಗೆ ದನಿ ನೀಡಿದ್ದಕ್ಕಾಗಿ ಉತ್ತಮ ಕಂಠದಾನ ಪ್ರಶಸ್ತಿ ಲಭಿಸಿದೆ.   

 

 

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry