ಮಾತೇ ನನ್ನ ಆಯುಧ

7

ಮಾತೇ ನನ್ನ ಆಯುಧ

Published:
Updated:

ತಂದೆ ತೆಲುಗು ಚಿತ್ರರಂಗದ ಪ್ರಸಿದ್ಧ ಕಂಠದಾನ ಕಲಾವಿದರಾಗಿದ್ದರು. ನಾನು ಚಿತ್ರರಂಗಕ್ಕೆ ಪರಿಚಯವಾಗಿದ್ದು ಅವರಿಂದಲೇ. ಎಂಟನೇ ವಯಸ್ಸಿನಲ್ಲೇ ಬಾಲನಟರಿಗೆ ದನಿ ನೀಡುತ್ತಿದ್ದೆ. ಬಳಿಕ ಅದೇ ವೃತ್ತಿಯಾಗಿ ಬದಲಾಯಿತು.

ತೆಲುಗು ಚಿತ್ರರಂಗದಲ್ಲಿ ರಜನಿಕಾಂತ್, ಮಮ್ಮುಟ್ಟಿ, ವಿಷ್ಣುವರ್ಧನ್, ಅಮಿತಾಬ್ ಬಚ್ಚನ್ ಸೇರಿದಂತೆ ಸಾವಿರಕ್ಕೂ ಅಧಿಕ ಕಲಾವಿದರಿಗೆ ದನಿ ನೀಡಿದ್ದೇನೆ. ಇಂದಿಗೂ ತೆಲುಗು ಚಿತ್ರರಂಗದಲ್ಲಿ ಕಂಠದಾನ ಕಲಾವಿದನಾಗಿಯೇ ಗುರುತಿಸಿಕೊಂಡಿದ್ದೇನೆ.ಕನ್ನಡದಲ್ಲಿ ನನಗೆ ತಿರುವು ನೀಡಿದ್ದು `ಪೊಲೀಸ್ ಸ್ಟೋರಿ~. ಆ ಚಿತ್ರದ ಡೈಲಾಗ್‌ಗಳನ್ನು ಅಭಿಮಾನಿಗಳು ಇಂದಿಗೂ ನೆನಪಿಟ್ಟುಕೊಂಡಿದ್ದಾರೆ. ಆ ಗಡಸು ದನಿ, ಅದರ ತೀಕ್ಷ್ಣತೆ, ಭಾವನೆಗಳನ್ನು ತುಂಬಿ ಹೇಳುವ ಆ ಡೈಲಾಗ್‌ಗಳು ಪ್ರೇಕ್ಷಕರಿಗೆ ಇಷ್ಟವಾಗುತ್ತಿದ್ದವು. ಈವರೆಗೆ ಸಂಭಾಷಣೆಯನ್ನು ನನಗೆ ಬೇಕಾದಂತೆ ಬರೆಸಿಕೊಂಡಿದ್ದಿಲ್ಲ, ಬದಲಾಯಿಸಿಕೊಂಡಿದ್ದಿಲ್ಲ.

ಸಾಯಿ ಎಂದರೆ ಇಂತಹುದೇ ಡೈಲಾಗ್‌ಗಳಿರಬೇಕು ಎಂದು ನಿರ್ಮಾಪಕರು ಮೊದಲೇ ನಿರ್ಧರಿಸಿರುತ್ತಿದ್ದರು. ಅದನ್ನೇ ನಾನು ಸೆಟ್‌ನಲ್ಲಿ ಪುನರುಚ್ಚರಿಸುತ್ತಿದ್ದೆ. ಒಮ್ಮೆ ನಾನು ಚಿತ್ರೀಕರಣದ ಸೆಟ್ ಪ್ರವೇಶಿಸಿದರೆ ಸಂಪೂರ್ಣ ಪಾತ್ರವೇ ಆಗುತ್ತಿದ್ದೆ. ನಾನು ನಿರ್ದೇಶಕರ ನಟ.ಏಕತಾನತೆಯಿಂದ ಹೊರಬರಲು ಐವತ್ತನೇ ಚಿತ್ರ ಮುಗಿದ ಬಳಿಕ ದೀರ್ಘ ವಿರಾಮ ತೆಗೆದುಕೊಂಡೆ. ಕಿರುತೆರೆಯ `ವ್ಹಾವ್~, `ಡೀಲ್ ಆರ್ ನೋ ಡೀಲ್~ ಕಾರ್ಯಕ್ರಮ ನನ್ನ ಪುನರಾಗಮನಕ್ಕೆ ಸೂಕ್ತ ವೇದಿಕೆ ಒದಗಿಸಿತು. ಟೀವಿ ಕಾರ್ಯಕ್ರಮ ಎಂದು ಇದನ್ನು ನಿರ್ಲಕ್ಷಿಸಲಿಲ್ಲ.

ಪ್ರತಿ ಕಾರ್ಯಕ್ರಮಕ್ಕೂ ಮುನ್ನ ಅಧ್ಯಯನ ನಡೆಸುತ್ತಿದ್ದೆವು. ಎಲ್ಲಾ ಪ್ರಶ್ನೆ-ಉತ್ತರಗಳ ಹಿನ್ನೆಲೆ ತಿಳಿದುಕೊಂಡಿರುತ್ತಿದ್ದೆವು. ಎರಡೂ ಕಾರ್ಯಕ್ರಮಗಳಿಗೆ ನಿರ್ದೇಶಕರ ಉತ್ತಮ ತಂಡವಿತ್ತು. ತಪ್ಪು ಪ್ರಶ್ನೆ-ಉತ್ತರಗಳು ಕಾರ್ಯಕ್ರಮದಲ್ಲಿ ಇರಬಾರದು ಎಂದು ಸಾಕಷ್ಟು ಪ್ರಯತ್ನ ಮಾಡುತ್ತಿದ್ದೆವು.

ಚಿತ್ರರಂಗಕ್ಕೆ ಬರುವ ಮುನ್ನ ದೂರದರ್ಶನದ ಕನ್ನಡ ಧಾರವಾಹಿಗಳಲ್ಲಿ ನಟಿಸಿದ್ದೆ, ತೆಲುಗಿನ ಮೂರು ಧಾರವಾಹಿಗಳಲ್ಲೂ ಪಾತ್ರ ಮಾಡಿದ್ದೆ. ಕಿರುತೆರೆಯ ಲಕ್ಷಣಗಳು ಮೊದಲೇ ತಿಳಿದಿದ್ದರಿಂದ ಕಾರ್ಯಕ್ರಮ ನಿರ್ವಹಿಸುವುದು ಕಷ್ಟ ಎನಿಸಲಿಲ್ಲ.`ಡೀಲ್ ಆರ್ ನೋ ಡೀಲ್~ ಕಾರ್ಯಕ್ರಮದ ಅನುಭವ ವಿಭಿನ್ನ. ಒಂದು ಗಂಟೆಯಲ್ಲಿ 50 ಲಕ್ಷ ರೂಪಾಯಿ ಗೆಲ್ಲುವುದೆಂದರೆ ಸುಲಭದ ಮಾತಲ್ಲ. ನನ್ನ ಕಾರ್ಯಕ್ರಮಕ್ಕೆ ಬಂದ ಬಹುತೇಕರು ಬಡವರು. ಶಾಲೆ ನಡೆಸುತ್ತಿದ್ದ ಮಹಿಳೆಯೊಬ್ಬರು ಪಾಲ್ಗೊಂಡು 25 ಲಕ್ಷ ಗೆದ್ದಿದ್ದು ನನಗೂ ಖುಷಿ ಕೊಟ್ಟಿತ್ತು. ಸಂಪೂರ್ಣವಾಗಿ ಅದು ಅದೃಷ್ಟದಾಟ. ತೆಲುಗಿನಲ್ಲೂ ಈ ಕಾರ್ಯಕ್ರಮ ಕ್ಲಿಕ್ ಆಯ್ತು. ಮುಂದೆಯೂ ಒಳ್ಳೆಯ ಕಾರ್ಯಕ್ರಮ ಸಿಕ್ಕರೆ ನಿರೂಪಣೆ ಮಾಡುತ್ತೇನೆ.ತೆಲುಗು ಚಿತ್ರಗಳಲ್ಲಿ ನಟಿಸಿದ್ದರೂ ಕನ್ನಡ ನನ್ನ ತಾಯಿಬೇರು. ನಾನು ಹುಟ್ಟಿದ್ದು ಗಡಿನಾಡಾದ ಬಾಗೇಪಲ್ಲಿಯಲ್ಲಿ. ತಾಯಿ ಕರ್ನಾಟಕದವರು, ಕನ್ನಡ ಚಿತ್ರಗಳಲ್ಲಿ ನಟಿಸಿದ್ದರು. ನನಗೆ ಹೆಸರು ತಂದುಕೊಟ್ಟಿದ್ದು ಕನ್ನಡ ಚಿತ್ರರಂಗವೇ. ಪ್ರತಿಯೊಬ್ಬರಿಗೂ ಒಂದೊಂದು ಪ್ರತಿಭೆ ಇರುತ್ತದೆ.

ಮಾತು ನನ್ನ ಆಯುಧ. ಅದು ಪವಿತ್ರವಾಗಿರಬೇಕು, ಸತ್ಯವಾಗಿರಬೇಕು, ಅರ್ಥವತ್ತಾಗಿರಬೇಕು, ಮತ್ತೊಬ್ಬರನ್ನು ಆಕರ್ಷಿಸುವಂತಿರಬೇಕು. ಇಂದಿಗೂ ಅಭಿಮಾನಿಗಳು ಸಿಕ್ಕಾಗ ಮುಂದಿನ `ಡೈಲಾಗ್ ಸಿನಿಮಾ ಯಾವುದು ಸಾರ್~ ಎಂದೇ ಪ್ರಶ್ನಿಸುತ್ತಾರೆ. ಅದನ್ನು ಬಿಟ್ಟರೆ ನನಗೆ ಬೇರೆ ಬದುಕಿಲ್ಲ.

ಅದರಲ್ಲೇ ಗುರುತಿಸಿಕೊಂಡಿರುವುದರಿಂದ ಬೇರೆ ಪಾತ್ರ ಮಾಡಿದರೆ ಜನ ಗುರುತಿಸುತ್ತಾರೋ ಇಲ್ಲವೋ ಎಂಬ ಭೀತಿಯೂ ಇದೆ.  `ಕಲ್ಪನಾ~ ಚಿತ್ರದಲ್ಲಿ ನನ್ನದು `ಮಂಗಳಮುಖಿ~ಯ ಪಾತ್ರ. ಬಿಡುಗಡೆಯಾದ ಮೊದಲೆರಡು ದಿನಗಳಲ್ಲೇ ನನ್ನ ಪಾತ್ರಕ್ಕೆ ಉತ್ತಮ ಪ್ರತಿಕ್ರಿಯೆ ಸಿಕ್ಕಿದೆ. ನನ್ನ ವೃತ್ತಿಜೀವನದ್ಲ್ಲಲಿ ಇದೇ ಮೊದಲ ಬಾರಿಗೆ `ಮಂಗಳಮುಖಿ~ಯಾಗಿ ನಟಿಸಿದ್ದು.

ತೆಲುಗು ನಾಟಕವೊಂದರಲ್ಲಿ ನನ್ನ ಮಗನಾಗಿ ಪಾತ್ರ ಮಾಡಿದ್ದ ವ್ಯಕ್ತಿಯೊಬ್ಬ ನಿಜ ಜೀವನದಲ್ಲೂ `ಆಕೆ~ಯಾಗಿದ್ದ. ಆತನ ಬದುಕನ್ನು ಹತ್ತಿರದಿಂದ ಗಮನಿಸಿದ್ದ ನನಗೆ ಆ ಪಾತ್ರ ಮಾಡುವುದು ಕಷ್ಟವಾಗಲಿಲ್ಲ.

ತಮಿಳು ಚಿತ್ರ ನೋಡಿದ್ದರಿಂದ ನಟಿಸುವುದು ಮತ್ತಷ್ಟು ಸುಲಭವಾಯಿತು. ಶರತ್ ನಿರ್ದೇಶನದ `ನೀನೇನಾ ಭಗವಂತ~ ಸಿನಿಮಾ ಚಿತ್ರೀಕರಣ ಮುಗಿದು ಬಿಡುಗಡೆಗೆ ಸಿದ್ಧವಾಗಿದೆ. ಸಾಕ್ಷಿ ಶಿವಾನಂದ್ ಈ ಚಿತ್ರದ ನಾಯಕಿ. ಸಾಯಿ ಪ್ರಕಾಶ್ ಅವರ `ಸಂಸಾರದಲ್ಲಿ ಗೋಲ್‌ಮಾಲ್~, ಬರಗೂರು ರಾಮಚಂದ್ರಪ್ಪ ಅವರ `ಅಂಗುಲಿಮಾಲ~ ನನ್ನ ಮುಂದಿನ ಚಿತ್ರಗಳು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry