ಮಾತೇ ಬದುಕಿನ ಆಶಾಕಿರಣ!

7

ಮಾತೇ ಬದುಕಿನ ಆಶಾಕಿರಣ!

Published:
Updated:

“ಮಾತೆಂಬುದು ಇಲ್ಲದೇ ಹೋಗಿದ್ದರೆ ನನ್ನ ಮಟ್ಟಿಗೆ ಈ ಪ್ರಪಂಚ ಶೂನ್ಯದ ಮೂಟೆ. ಮೌನ ಆಗಾಗ ಬಂದು ಹೋಗುವ ನೆಂಟರಂತೆ, ಮಾತು ಭಾವಲಹರಿಯನ್ನು ಹುದುಗಿಸಿಟ್ಟು ಕೊಂಡಿರುವ ತುಂಬು ಕುಟುಂಬದಂತೆ. ಬಾಲ್ಯ, ವಿದ್ಯಾಭ್ಯಾಸ ಎಲ್ಲವನ್ನೂ ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಮುಗಿಸಿದೆ. ಹುಟ್ಟಿದ ಒಂದು ವರ್ಷಕ್ಕೆ ಮಾತನಾಡಲು ಆರಂಭಿಸಿದ್ದೆನಂತೆ.ಈಗ, ಒಂದು ನಿಮಿಷ ಮಾತು ನಿಲ್ಲಿಸಿದರೆ `ಮುಗೀತಾ~ `ಇಷ್ಟೇನಾ~ ಎಂಬ ಉದ್ಗಾರಗಳು ಎದುರಿಗಿರುವ ವ್ಯಕ್ತಿಯಿಂದ ಕೇಳಿ ಬರುತ್ತದೆ. ಹಾಗೆ ಕೇಳಿಸಿಕೊಂಡಿಲ್ಲ ಎಂದರೆ ನನಗೂ ನಿದ್ರೆ ಬಾರದು, ಆ ಮಟ್ಟಿಗೆ ಮಾತು ನನ್ನನ್ನೂ ಆವರಿಸಿ, ಆಡಿಸುತ್ತಿದೆ.  ವಿವಿಧಭಾರತಿಗೆ ನಿರೂಪಕಿಯಾಗಲು ಆಡಿಷನ್‌ನಲ್ಲಿ ಭಾಗಿಯಾದೆ. ಅದಾಗಿ ಒಂದು ವರ್ಷಕ್ಕೆ ಎಫ್‌ಎಂ `ರೇನ್‌ಬೋ~ದಲ್ಲಿ ಕಾರ್ಯಕ್ರಮ ನಿರೂಪಕಿಯಾಗಿ ಕಾರ್ಯನಿರ್ವಹಿಸುವ ಅವಕಾಶ ದೊರೆಯಿತು. ಎಫ್‌ಎಂ ರೇನ್‌ಬೋದ ಮೈಕ್ ಮುಂದೆ ನಿಂತು ಮಾತನಾಡುವಾಗಲೂ ಅಷ್ಟೇನೂ ಸಿದ್ಧತೆ ಮಾಡಿಕೊಳ್ಳುವುದಿಲ್ಲ. ನಾನಿರುವ ಹಾಗೇ ನನ್ನ ಧ್ವನಿ ಮತ್ತು ಭಾವಾಭಿವ್ಯಕ್ತಿಯನ್ನು ಪ್ರಸ್ತುತ ಪಡಿಸುತ್ತಾ ಹೋಗುತ್ತೇನೆ.ಆಂತರ್ಯದಲ್ಲಿ ಮುಗುಮ್ಮಾಗಿ, ಹೊಟ್ಟೆಪಾಡಿಗೆಂಬಂತೆ ಮಾತನ್ನು ಪಣಕ್ಕೆ ಇಡಲಾರೆ. ಕಾಲೇಜು ದಿನಗಳಲ್ಲಿಯೂ ನನ್ನದು ಅಂತ್ಯವಿಲ್ಲದ ಮಾತು. ಹಾಗಾಗಿ ಅಂತರ ಕಾಲೇಜು ಚರ್ಚಾ ಸ್ಪರ್ಧೆಗಳಲ್ಲಿ ಸದಾ ಪ್ರಶಸ್ತಿ ಪಡೆಯುವ ಹೆಸರು. ಹಾಗಾಗಿ ಸ್ನೇಹಿತರು ಆಶಾ ರಾವಣ ಎಂಬ ಹೆಸರಿಟ್ಟು ಕಿಚಾಯಿಸುತ್ತಿದ್ದರು. ಇದಾವುದಕ್ಕೂ ಕ್ಯಾರೇ ಅನ್ನುತ್ತಿರಲಿಲ್ಲ.ಒಂದು ಕಡೆ ಮೈಕ್ ಮುಂದೆ ಕೂತು ಸಂದರ್ಶನ, `ಆಡು ಆಟ ಆಡು~, `ಲಂಚ್ ಬಾಕ್ಸ್~, `ಯುವ ಕಾರ್ಯಕ್ರಮ~ಗಳನ್ನು ನಡೆಸಿಕೊಡುತ್ತೇನೆ. ಇದರೊಂದಿಗೆ, ಮನಃಶಾಸ್ತ್ರವನ್ನು ಓದಿದ್ದರಿಂದ ನೋವುಂಡ ಮನಸ್ಸಿಗೆ ಮಾತಿನಿಂದಲೇ ಮದ್ದರೆಯುವ ಸಮಾಲೋಚಕಿ ಯಾಗಿದ್ದೇನೆ. ಹಾಗಾಗಿ ದಿನವಿಡೀ ಮಾತೆಂಬ ತುತ್ತೂರಿ ಊದುವ ಕಾಯಕ. ಒಟ್ಟಿನಲ್ಲಿ ಬದುಕಿಗೆ ಮಾತೇ ಆಶಾಕಿರಣ.ಆರ್‌ಜೆ ವೃತ್ತಿಯಲ್ಲಿ ನೆನಪಿನ ಬುತ್ತಿ ಅಡಗಿದೆ. ಅಂದು ರಾಘವೇಂದ್ರ ರಾಜ್‌ಕುಮಾರ್ ಅವರ ಸಂದರ್ಶನಕ್ಕೆ ಸಮಯ ನಿಗದಿಯಾಗಿತ್ತು. ಅದಕ್ಕೆಂದು  ಅವರಿಗೆ ಕರೆ ಮಾಡಿದಾಗ `ಅಣ್ಣಾವ್ರ~ ತೀರಿಕೊಂಡ ಸುದ್ದಿ ತಿಳಿಯಿತು.ಅದೇ ದಿನ ಮಧ್ಯಾಹ್ನ ನಡೆದ ಹಳೆಯ ಗೀತೆಗಳನ್ನು ಆಧರಿಸಿದ ಶೋ ನಡೆಸಿಕೊಡಲು ಮೈಕ್ ಮುಂದೆ ಇದ್ದರೆ ರಾಜ್ ಇನ್ನಿಲ್ಲ ಎಂಬುದನ್ನು ನೆನೆದು ದುಃಖ ಉಮ್ಮಳಿಸಿ ಬರುತ್ತಿತ್ತು, ಆದರೆ ಎಲ್ಲಿಯೂ ಇದನ್ನು ಪ್ರಕಟಿಸುವ ಹಾಗೇ ಇಲ್ಲ. ಈಗಲೂ ಆ ಕ್ಷಣವನ್ನು ನೆನೆದರೆ ಕಣ್ಣಂಚು ಒದ್ದೆಯಾಗುತ್ತದೆ.ಅದಾಗಿ ಒಂದು ವಾರದ ನಂತರ ರಾಜ್‌ಕುಮಾರ್ ಒಡನಾಡಿಯಾಗಿದ್ದ ಜಯಂತಿ, ದ್ವಾರಕೀಶ್ ಅವರೊಂದಿಗೆ ಸಂವಾದ ಕಾರ್ಯಕ್ರಮವನ್ನು ನಡೆಸಿಕೊಟ್ಟಿದ್ದೆ. ಇದೂ ವೃತ್ತಿ ಬದುಕಿನಲ್ಲಿ ಉಳಿಯುವ ಅವಿಸ್ಮರಣೀಯ ನೆನಪು.ಅಪ್ಪ ಲೇಖಕ ರಾಮಣ್ಣ ಅವರು ಸಹ ಉತ್ತಮ ವಾಗ್ಮಿ. ಅವರ ಪ್ರೋತ್ಸಾಹದಿಂದಲೇ ಸಾಹಿತ್ಯ ಮತ್ತು ಸಂಗೀತ ಕ್ಷೇತ್ರದತ್ತ ಒಲವು ಮೂಡಿತು. ಕರ್ಣಾಟಕ ಶಾಸ್ತ್ರೀಯ ಸಂಗೀತವನ್ನು ಅಭ್ಯಾಸ ಮಾಡಿ, ಸಮಯವಿದ್ದಾಗ ಮಕ್ಕಳಿಗೂ ಪಾಠ ಮಾಡುತ್ತೇನೆ. ಸಂಗೀತಕ್ಕೆ ಭಾಷೆ ಗಡಿಯ ಎಲ್ಲೆಯಿಲ್ಲದೇ ಇರುವುದರಿಂದ ಅರ್ಥವಾಗದ ಭಾಷೆಯ ಗಾಯನವನ್ನು ಕೇಳುವ ಹುಚ್ಚಿದೆ.ಕೋಟ ಶಿವರಾಮ ಕಾರಂತರು, ಶೋಭಾ ಡೇ, ದೀಪಕ್ ಚೋಪ್ರಾ, ರಾಬಿನ್ ಶರ್ಮ ಕೃತಿಗಳೂ ಸೇರಿದಂತೆ ಅಧ್ಯಾತ್ಮ ಪುಸ್ತಕಗಳನ್ನೂ ಓದುತ್ತೇನೆ. ಸರಳವಾಗಿ ಕೇಳುಗರ ಹೃದಯ ತಟ್ಟುವಂತೆ ಮಾತನಾಡುವುದೇ ಸರಿ ಎನಿಸುತ್ತದೆ.ಕಾಲೇಜು ದಿನಗಳಲ್ಲಿ ಟಿವಿಎಸ್‌ನಲ್ಲಿ ನಂಜನಗೂಡಿಗೆ ಹೋಗುವ ಸಾಹಸ ಮಾಡಿದ್ದೆ. ತವರು ಮನೆಯಲ್ಲಿ ಅಪ್ಪಟ ತುಂಟಾಟದ ಹುಡುಗಿಯಾಗಿ ಬೆಳೆದಿದ್ದ ನನಗೆ ಗಂಡ ವಿಶ್ವನಾಥ ಅವರ ಅದ್ಭುತ ಪ್ರೋತ್ಸಾಹದಿಂದಲೇ ಜೀವನವೆಂಬುದರ ನಿಜ ಅರ್ಥವನ್ನು ಕಂಡುಕೊಂಡಿದ್ದೇನೆ.ಕಾಲಿಗೆ ಚಕ್ರ ಕಟ್ಟಿಕೊಂಡವಳಂತೆ ಊರುಕೇರಿ ಸುತ್ತುತ್ತಾ ಜನರ ಮನಸ್ಸಿಗೆ ಹತ್ತಿರವಾಗುವುದೇ ಒಂದು ತೆರನಾದ ಖುಷಿ. ಯುರೋಪ್, ಸಿಂಗಾಪುರ, ಮಲೇಷ್ಯಾ ಎಂದು ಹೊರಟು ಬಿಡುವುದರಲ್ಲೂ ಒಂದಷ್ಟು ಮಜಾವಿದೆ.ಜೀವನದಲ್ಲಿ ಅಂದುಕೊಂಡ ಗುರಿಯನ್ನೆಲ್ಲಾ ಸಾಧಿಸಿದ್ದೇನೆ ಎಂಬ ತೃಪ್ತಿಯಿದೆ. ಈಗಾಗಲೇ ಅಸ್ತಿತ್ವದಲ್ಲಿರುವ `ಆಶಾ ಪ್ರಕಾಶನ~ವನ್ನು ಅಂತರರಾಷ್ಟ್ರೀಯ ಮಟ್ಟದಲ್ಲಿ ಕಟ್ಟಿಬೆಳೆಸಬೇಕೆಂಬ ಮಹದಾಸೆಯಿದೆ. ಜತೆಗೆ ಉತ್ತಮ ಲೇಖಕಿಯಾಗಿ ಹೊರ ಹೊಮ್ಮಬೇಕೆಂಬ ಕನಸೂ ಕಾಡುತ್ತದೆ”.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry