ಮಾತೇ ಮಾಧ್ಯಮ

7

ಮಾತೇ ಮಾಧ್ಯಮ

Published:
Updated:
ಮಾತೇ ಮಾಧ್ಯಮ

ಮನರಂಜನೆ ಇಂದು ಕೇವಲ ಕಲೆಯಾಗಿ ಉಳಿಯದೆ ಉದ್ಯಮವಾಗಿ ಪರಿವರ್ತನೆಗೊಂಡಿದೆ. ನಾನು ಆಂಕರಿಂಗ್ ಕ್ಷೇತ್ರಕ್ಕೆ ಕಾಲಿಡುವಾಗ ಅದೊಂದು ವೃತ್ತಿ ಆಗಿ ಪರಿಗಣಿತವಾಗಿರಲಿಲ್ಲ. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿರುವವರೇ ಮುಂದಿನ ಕಾರ್ಯಕ್ರಮದ ಕಿರುಪರಿಚಯ ನೀಡುತ್ತಿದ್ದರು. ಆಕಾಶವಾಣಿ, ದೂರದರ್ಶನದಲ್ಲೂ ಬರವಣಿಗೆಯ ಭಾಷೆಯಲ್ಲಿ ಮಾತನಾಡುವ ಸಂಪ್ರದಾಯವೇ ಇತ್ತು.ಟೀವಿ ಮನೆ-ಮನಗಳನ್ನು ಪ್ರವೇಶಿಸಲು ಆರಂಭಿಸಿದ ದಿನಗಳಲ್ಲಿ ಸಭೆ ಸಮಾರಂಭಕ್ಕೂ ನಿರೂಪಕಿ/ನಿರೂಪಕರನ್ನು ನೇಮಿಸುವ ಪ್ರವೃತ್ತಿ ಆರಂಭವಾಯಿತು. ಮೊದಲಿಗೆ ಗಣ್ಯವ್ಯಕ್ತಿಗಳ ಆಗಮನಕ್ಕೆ ಮಾತ್ರ ಸೀಮಿತವಾಗಿದ್ದ ಈ ಪದ್ಧತಿ ಕ್ರಮೇಣ ಎಲ್ಲ ಸಮಾರಂಭಗಳಿಗೂ ಅನಿವಾರ್ಯವಾಯಿತು.

 

ಇಂದು ಕನ್ನಡದಲ್ಲಿ ಮಾತನಾಡುವ ಸಾಕಷ್ಟು ಜನ ಸಿಕ್ಕರೂ ಮುಖ್ಯಮಂತ್ರಿ ಪಾಲ್ಗೊಳ್ಳುವ ಕಾರ್ಯಕ್ರಮವೊಂದರ ನಿರೂಪಣೆಗೆ ಅಪರ್ಣಾ ಅವರೇ ಬೇಕು ಎನ್ನುತ್ತಾರೆ ಅಂದರೆ ಹೇಳಬೇಕಾದುದನ್ನು ಸ್ಪಷ್ಟವಾಗಿ, ಅದೇ ಚೌಕಟ್ಟಿನೊಳಗೆ, ನಿರ್ದಿಷ್ಟ ಉದ್ದೇಶವನ್ನು ಸ್ಪಷ್ಟವಾದ ಧ್ವನಿಯಲ್ಲಿ ಹೇಳುತ್ತಾರೆಂಬ ಭರವಸೆ ಮಾತ್ರ.ಇಂದು  ಈ ಕ್ಷೇತ್ರಕ್ಕೆ ಕಾಲಿಡುವ ಹಲವಾರು ಹೊಸಬರನ್ನು ನೋಡಿದ್ದೇನೆ. `ನಿನ್ನ ಗುರಿ ಏನು?~ ಎಂದು ಪ್ರಶ್ನಿಸಿದರೆ ರೇಡಿಯೋ ಜಾಕಿ ಆಗುವುದು ಎಂದು ಉತ್ತರಿಸುತ್ತಾರೆ. ನಮ್ಮ ಮುಂದೆ ಅಂತಹ ಆಯ್ಕೆಗಳಿರಲಿಲ್ಲ. ತಂದೆ ಸದಾ `ಅಪ್‌ಡೇಟ್~ ಆಗಿರಬೇಕು, ಸುದ್ದಿಗೆ ಸಂಬಂಧಿಸಿದ ಮಾಹಿತಿಗಳ ಅರಿವಿರಬೇಕು ಎನ್ನುತ್ತಿದ್ದರು.

 

ಅದೇ ಮಾತು 1993ರಲ್ಲಿ ಆಕಾಶವಾಣಿ ಹಾಗೂ ದೂರದರ್ಶನಗಳಲ್ಲಿ ನಿರೂಪಕಿಯಾಗಿ ಸೇರ್ಪಡೆಗೊಳ್ಳಲು ಕಾರಣವಾಯಿತು. ದೂರದರ್ಶನದ ಉದ್ಘೋಷಕಿಯಾಗಿ 10 ವರ್ಷ ಹಾಗೂ ಆಕಾಶವಾಣಿಯಲ್ಲಿ ದುಡಿದ 15 ವರ್ಷಗಳು ಅನುಭವದ ಪಾಠವನ್ನೇ ಕಲಿಸಿದವು.ಧಾರವಾಹಿ ಮತ್ತು ನಿರೂಪಣೆಗಳನ್ನು ಹೋಲಿಕೆ ಮಾಡುವುದು ಸಲ್ಲ. ಬಣ್ಣದ ಬದುಕು ಬಹುದೊಡ್ಡ ನಶೆ ಇದ್ದಂತೆ. ಧಾರವಾಹಿಯಲ್ಲಿ ಅಪರ್ಣಾಳಿಗೆ ಅಸ್ತಿತ್ವ ಇಲ್ಲ. ಆಕೆ ಅಲ್ಲಿ ಪಾತ್ರ ಮಾತ್ರ. ನಿರ್ದೇಶಕರು ಬರೆದುಕೊಟ್ಟ ಸಂಭಾಷಣೆಯಲ್ಲಿ `ನಮ್ಮತನ~ ಹುಡುಕುವುದೂ ಅಸಾಧ್ಯ. ನಿರೂಪಣೆಯಲ್ಲಿ ಸ್ವಂತಿಕೆ ಅನಾವರಣಗೊಳ್ಳುತ್ತದೆ.ಅದರ ಹಿಂದಿನ ಪೂರ್ವಸಿದ್ಧತೆ, ಮಾತಿನ ಚಾಕಚಕ್ಯತೆ, ಸಮಯ ಹೊಂದಿಸುವ ಪರಿಣತಿ ಮುಖ್ಯವಾಗುತ್ತದೆ. ಸಾವಿರಾರು ಜನ ನೆರೆದಿರುವ ವಿಶ್ವಕನ್ನಡ ಸಮ್ಮೇಳನದಂತಹ ಬೃಹತ್ ಸಮಾರಂಭಗಳಲ್ಲಿ ಸಾರ್ವಜನಿಕರ ನಾಡಿಮಿಡಿತ ಅರ್ಥೈಸಿಕೊಂಡು ಮಾತು ಜೋಡಿಸಬೇಕಾಗುತ್ತದೆ.ಇತ್ತೀಚೆಗೆ ಕಾರ್ಯಕ್ರಮ ಏರ್ಪಡಿಸುವ ಕಾರ್ಪೊರೇಟ್ ಕ್ಷೇತ್ರದ ಮಂದಿ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ `ವೇದಿಕೆಯ ಹಿಂಭಾಗ ಹಸಿರುಬಣ್ಣ ಇರುತ್ತದೆ, ಅದಕ್ಕೆ ತಕ್ಕುದಾದ ಸೀರೆ ಉಟ್ಟು ಬನ್ನಿ~ ಎಂದು ನಿರ್ದೇಶಿಸುತ್ತಾರೆ.ನನಗೆ ಮಾತೇ ಮಾಧ್ಯಮ. ಅದನ್ನು ಬಿಟ್ಟರೆ ಬೇರೆ ಬದುಕಿಲ್ಲ. ಮೈಕ್ ಮುಂದೆ ಇಲ್ಲವೇ ಕ್ಯಾಮೆರಾ ಮುಂದೆ ನಗುಮುಖದಿಂದ ಮಾತನಾಡಿದರಷ್ಟೇ ಬೆಲೆ. ಶೃಂಗೇರಿ ಶಾರದಾಂಬೆ ಉತ್ಸವದಂತ ಕಾರ್ಯಕ್ರಮಗಳಲ್ಲಿ ಸತತ ಐದು ಗಂಟೆಗಳ ಕಾಲ `ಲೈವ್~ನಲ್ಲಿ ಮಾತನಾಡಿದ್ದು ನಿಜವಾದ ಸವಾಲು. ಮುಗಿದ ಬಳಿಕ ನಾವು ಇಷ್ಟೊಂದು ಮಾತನಾಡಿದೆವೇ ಎಂಬ ಸಂಶಯವೂ ಕಾಡುವುದುಂಟು. ಪರದೆಯಲ್ಲಿ ಮೂಡುವ ಪ್ರತಿಚಿತ್ರಕ್ಕೂ ಮಾತಿನ ಜೋಡಣೆಯಾಗಬೇಕು.

 

ಆದ್ದರಿಂದ ಹಲವಾರು ಬಾರಿ ಬರೆದುಕೊಂಡು ಹೋದ ಸ್ಕ್ರಿಪ್ಟ್‌ನ ಒಂದೂ ಪದ ಬಳಸದೆ ಕಾರ್ಯಕ್ರಮ ಮುಗಿಸಬೇಕಾಗುವ ಅನಿವಾರ್ಯತೆಯೂ ಎದುರಾಗುತ್ತದೆ. ಎಲ್ಲಾ ಸಂದರ್ಭಗಳಲ್ಲೂ ತಕ್ಕ ಮಟ್ಟಿನ ಸಿದ್ಧತೆ ಕಡ್ಡಾಯ.ಕಾರ್ಯಕ್ರಮದ ರೂಪುರೇಷೆ-ವ್ಯಾಪ್ತಿಯ ಬಗ್ಗೆ ಮೊದಲೇ ಅರಿವಿದ್ದರೆ ಸುಲಭವಾಗಿ `ಕ್ಲಿಕ್~ ಆಗಬಹುದು. `ಸಾರ್ಕ್~ ಸಮ್ಮೇಳನವೊಂದರಲ್ಲಿ ಶ್ರೀಲಂಕಾದ ಅತಿಥಿಯೊಬ್ಬರು `ನೀವು ಇಲಾಖೆಯ ಯಾವ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೀರಿ~ ಎಂದು ಪ್ರಶ್ನಿಸಿದ್ದು, ಜರ್ಮನಿಯ ಚಿತ್ರ ನಿರ್ಮಾಪಕರೊಬ್ಬರು ಮಾತಿನ ಶೈಲಿಗೆ ಬೆರಗಾಗಿ ಖುಷಿ ಹಂಚಿಕೊಂಡಿದ್ದು... ಎಲ್ಲವೂ ಸಿಹಿನೆನಪುಗಳೇ.ಕೆಲವರು ನೀವು ಯಾವ ಗ್ರಂಥ ಓದಿ ಸ್ವಚ್ಛ ಕನ್ನಡದ ಮಾತು ಕಲಿತಿರಿ ಎಂದು ಪ್ರಶ್ನಿಸುತ್ತಾರೆ. ಆಗೆಲ್ಲ ನನಗೆ ಕೆಟ್ಟ ಕೋಪ ಬರುವುದುಂಟು. ಕನ್ನಡ ನಾಡಲ್ಲಿ ಹುಟ್ಟಿ ಕನ್ನಡದ ಮಾತಿಗೆ ಬರವೇ. ನಾವು ಚಿಕ್ಕಂದಿನಲ್ಲಿ `ಪ್ರಜಾವಾಣಿ~, `ಸುಧಾ~ ಓದಿ ಬೆಳೆದವರೇ.ಓದುತ್ತಲೇ ಶಬ್ದಭಂಡಾರ ವೃದ್ಧಿಯಾಗುವುದಲ್ಲವೇ? ಸದಾ ಜೋಕ್ ಮಾಡುತ್ತಾ ತನ್ನ ಸುತ್ತಲಿನವರನ್ನು ನಗಿಸುತ್ತಾ ಇರುವವರನ್ನು ಕಂಡಾಗೆಲ್ಲ ನನಗೂ ಆ ಶಕ್ತಿ ಇಲ್ಲವಲ್ಲ ಎಂದು ಹೊಟ್ಟೆಕಿಚ್ಚು ಪಡುವುದುಂಟು.ಅಪ್ಪ ಮಲೆನಾಡು, ಅಮ್ಮ ಮೈಸೂರು ಮೂಲದವರಾದರೂ ನಾನು ಪಕ್ಕಾ ಬೆಂಗಳೂರಿನ ಹುಡುಗಿ. ಜ್ವರ ಬಂದಾಕ್ಷಣ ಆಸ್ಪತ್ರೆ ಹುಡುಕಿ ಹೋಗುವ ಕುಟುಂಬ ನಮ್ಮದಲ್ಲ. ಮಾರುಕಟ್ಟೆಯಲ್ಲಿ ಹತ್ತು ಲಕ್ಷ ಉತ್ಪನ್ನಗಳಿದ್ದರೂ ಇಂದಿಗೂ ಕೊಬ್ಬರಿ ಎಣ್ಣೆ ಬಳಸುವುದೇ ಇಷ್ಟ. ಸರಳ ಮತ್ತು ಸಹಜವಾಗಿರುವುದೇ ನನ್ನ ಸೌಂದರ್ಯದ ಗುಟ್ಟು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry