ಗುರುವಾರ , ಮೇ 19, 2022
20 °C

ಮಾದಕವಸ್ತು ಖರೀದಿ ಪ್ರಕರಣ: ನಟ ಫರ್ದಿನ್ ಖಾನ್ ತಪ್ಪಿತಸ್ಥ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮುಂಬೈ (ಐಎಎನ್‌ಎಸ್): ಬಾಲಿವುಡ್ ನಟ ಫರ್ದೀನ್ ಖಾನ್ ಅವರು 2001ರಲ್ಲಿ ಮಾದಕವಸ್ತು  ಕೊಕೇನ್ ಖರೀದಿಸಲು ಪ್ರಯತ್ನಿಸಿದ ಪ್ರಕರಣದಲ್ಲಿ ತಪ್ಪಿತಸ್ಥರೆಂದು ಮುಂಬೈ ನ್ಯಾಯಾಲಯವೊಂದು ತೀರ್ಪು ನೀಡಿದೆ.  ಇದೇ ವೇಳೆ ಫರ್ದೀನ್ ತಮ್ಮ ಬಳಿ ಎರಡು ಗ್ರಾಂ ಮಾದಕವಸ್ತು ಇಟ್ಟಿಕೊಂಡಿದ್ದರೆಂಬ ಆರೋಪವನ್ನು ನ್ಯಾಯಾಲಯ ಕೈಬಿಟ್ಟಿದೆ.ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಧೀಶರು ಶಿಕ್ಷೆಯನ್ನು ನವೆಂಬರ್ ಎರಡಕ್ಕೆ ಕಾಯ್ದಿರಿಸಿದರು. ಒಂದು ವೇಳೆ ಈ ಪ್ರಕರಣದಲ್ಲಿ ಆರೋಪ ಸಾಬೀತಾದರೆ ಫರ್ದೀನ್ ಖಾನ್ ಅವರು ಆರು ತಿಂಗಳ ಜೈಲು ಶಿಕ್ಷೆ ಅನುಭವಿಸಬೇಕಾಗುತ್ತದೆ.

 

`ಸದ್ಯ ನನ್ನ ಮೇಲೆ ಕೊಕೇನ್ ಖರೀದಿಸಲು ಪ್ರಯತ್ನಿಸಿದ ಆರೋಪವಿದ್ದು, ಕೊಕೇನ್ ಹೊಂದಿದ್ದೆ ಎನ್ನುವ ಆಪಾದನೆಯನ್ನು ಕೈಬಿಡಲಾಗಿದೆ~ ಎಂದು ಖಾನ್ ನ್ಯಾಯಾಲಯದ ಹೊರಗೆ ಮಾಧ್ಯಮದವರಿಗೆ ತಿಳಿಸಿದರು.`ನಾವು ಕಳೆದ 10 ವರ್ಷಗಳಿಂದ ನ್ಯಾಯಾಲಯಕ್ಕೆ ಮನವಿ ಮಾಡಿಕೊಂಡಿದ್ದೇವೆ. ಈ ಆದೇಶ ನನಗೆ ಅತ್ಯಂತ ಸಂತೋಷ ಉಂಟುಮಾಡಿದೆ~ ಎಂದು ಖಾನ್ ಹೇಳಿದರು.

 

ಕೊಕೇನ್ ಹೊಂದಿದ ಆರೋಪದ ಮೇಲೆ ಫರ್ದೀನ್ ಖಾನ್ ಅವರನ್ನು  ವಾಯವ್ಯ ಮುಂಬೈನ ಜುಹು ಎಂಬಲ್ಲಿ ಮಾದಕ ವಸ್ತು  ನಿಯಂತ್ರಣ ತಂಡವು (ಎನ್‌ಸಿಬಿ) 2001ರ ಮೇ 5ರಂದು ಬಂಧಿಸಿತ್ತು. ಅಲ್ಲದೇ ಫರ್ದೀನ್‌ಗೆ ಕೊಕೇನ್ ಮಾರಾಟ ಮಾಡಿದ ಆರೋಪದ ಮೇಲೆ ನಾಸಿರ್ ಶೇಖ್ ಹಾಗೂ ಈತನಿಗೆ ಕೊಕೇನ್ ಪೂರೈಕೆ ಮಾಡಿದ ಆರೋಪದ ಮೇಲೆ ಟೋನಿ ಗೋಮ್ಸ್ ಅವರನ್ನು ಸಹ ಬಂಧಿಸಿ ಇವರ ವಿರುದ್ಧ ಮಾದಕದ್ರವ್ಯ ನಿಯಂತ್ರಣ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿತ್ತು. ಬಂಧನದ ವೇಳೆ ತಮ್ಮ ಬಳಿ ಒಂದು ಗ್ರಾಂ ಕೊಕೇನ್ ಮಾತ್ರವಿತ್ತು ಎಂದು ಖಾನ್ ಹೇಳಿದರೆ, ಎನ್‌ಸಿಬಿ ತಂಡವು ಖಾನ್ ಹಾಗೂ ಶೇಖ್ ಅವರನ್ನು ಬಂಧಿಸಿದ ವೇಳೆ ಅವರ ಬಳಿ ಒಂಬತ್ತು ಗ್ರಾಂ ಕೊಕೇನ್ ದೊರೆತಿದೆ ಎಂದು ಹೇಳಿತ್ತು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.