ಶನಿವಾರ, ಫೆಬ್ರವರಿ 27, 2021
23 °C

ಮಾದಕ ವಸ್ತುಗಳ ಜಾಗೃತಿಗೆ ಓಟ, ರ‌್ಯಾಲಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮಾದಕ ವಸ್ತುಗಳ ಜಾಗೃತಿಗೆ ಓಟ, ರ‌್ಯಾಲಿ

ಬೆಳಗಾವಿ: ನಿತ್ಯ ಮುಂಜಾನೆಯ ನಸುಕಿನಲಿ ಬಿಕೋ ಎನ್ನುತ್ತಿದ್ದ ನಗರದ ಚನ್ನಮ್ಮ ವೃತ್ತ, ಕಾಲೇಜು ರಸ್ತೆಯಲ್ಲಿ ಭಾನುವಾರ ಜನಜಾತ್ರೆ. ಜನರ ಓಟ, ನಡಿಗೆಗೆ ಮಳೆ ಲಯಬದ್ಧವಾಗಿ ಹಿನ್ನೆಲೆ ಸಂಗೀತ ನೀಡುತ್ತಿತ್ತು.ವಿಶ್ವ ಮಾದಕ ವಸ್ತು ಸೇವನೆ ಮತ್ತು ಸಾಗಾಟ ವಿರೋಧಿ ದಿನಾಚರಣೆ ಅಂಗವಾಗಿ ಸಿಟಿ ಹೆಲ್ತ್ ಕೇರ್ ಡೈರೆಕ್ಟರಿ ಹಾಗೂ ಬೆಳಗಾವಿ ವೈದ್ಯಕೀಯ ವಿಜ್ಞಾನ ಸಂಸ್ಥೆ (ಬಿಮ್ಸ) ಭಾನುವಾರ ಮುಂಜಾನೆ ನಗರದಲ್ಲಿ ಹಮ್ಮಿಕೊಂಡಿದ್ದ `ಮಾದಕ ವಸ್ತುಗಳ ವಿರುದ್ಧ ಓಟ~ದಲ್ಲಿ ಮಳೆಯನ್ನೂ ಲೆಕ್ಕಿಸದೇ ಕೆಲವರು ಓಡಿದರೆ, ಉಳಿದವರು ನಡೆಯುವ ಮೂಲಕ ಮಾದಕ ದ್ರವ್ಯಗಳ ಸೇವನೆಯಿಂದಾಗುವ ದುಷ್ಪರಿಣಾಮದ ಕುರಿತು ಜಾಗೃತಿ ಮೂಡಿಸಿದರು.ಬಿಮ್ಸ ಆವರಣದಲ್ಲಿ ಮುಂಜಾನೆ 7.15ಕ್ಕೆ `ಮಾದಕ ವಸ್ತುಗಳ ವಿರುದ್ಧ ಓಟ~ಕ್ಕೆ ಹಸಿರು ನಿಶಾನೆ ನೀಡಿದ ಸಂಸದ ಸುರೇಶ ಅಂಗಡಿ, ಸ್ವಲ್ಪ ದೂರದವರೆಗೆ ಓಡುವ ಮೂಲಕ ಉಳಿದವರನ್ನು ಹುರಿದುಂಬಿಸಿದರು. ಓಟಕ್ಕೂ ಮುನ್ನ `ಥಿಂಕ್ ಹೆಲ್ತ್-ನಾಟ್ ಡ್ರಗ್ಸ್~ ಎಂಬ ಪ್ರತಿಜ್ಞಾವಿಧಿಯನ್ನು ಎಲ್ಲರೂ ಸ್ವೀಕರಿಸಿದರು.

ಹೆಸರು ನೋಂದಾಯಿಸಿದ್ದ 950 ಜನರಲ್ಲಿ ಸುಮಾರು 800 ಜನರು ಮುಂಜಾನೆ ಸುರಿಯುತ್ತಿದ್ದ ಮಳೆಯನ್ನೂ ಲೆಕ್ಕಿಸದರೆ ಓಟಕ್ಕೆ ಬಂದಿದ್ದರು.ಬಿಮ್ಸನಿಂದ ಆರಂಭಗೊಂಡ ಓಟವು, ಡಾ.ಬಿ.ಆರ್.ಅಂಬೇಡ್ಕರ್ ರಸ್ತೆ, ಕಿತ್ತೂರ ಚನ್ನಮ್ಮ ವೃತ್ತ, ಕಾಲೇಜು ರಸ್ತೆ ಮೂಲಕ ಬೋಗಾರವೇಸ್ ತಲುಪಿ ಮರಳಿ ಬಿಮ್ಸ ಆವರಣದಲ್ಲಿ ಕೊನೆಗೊಂಡಿತು. ಸುಮಾರು ಆರು ನೂರು ವಿದ್ಯಾರ್ಥಿಗಳು, ಐಎಂಎ ವೈದ್ಯರು, ರೋಟರಿ ಸಂಸ್ಥೆಗಳ ಪದಾಧಿಕಾರಿಗಳು, ಮಕ್ಕಳು ಹಾಗೂ ಹಿರಿಯರು ಓಟದಲ್ಲಿ ಪಾಲ್ಗೊಂಡಿದ್ದರು.ನಗರದ ಹಿರಿಯ ಅಜ್ಜ, ಮ್ಯಾರಾಥಾನ್ ಓಟಗಾರ ಶ್ರೀಕೃಷ್ಣ ದೇಶಪಾಂಡೆ ಅವರು ಹೆಗಲ ಮೇಲೆ ವ್ಯಾಯಾಮದ ಸಾಧನವನ್ನು ಹೊತ್ತುಕೊಂಡು `ರನ್ ಫಾರ್ ಫನ್ ಆ್ಯಂಡ್ ಫಿಟ್‌ನೆಸ್~ ಎಂಬ ಸಂದೇಶ ಇರುವ ಟೀಶರ್ಟ್ ಧರಿಸಿ ಓಡುವ ಮೂಲಕ ಗಮನ ಸೆಳೆದರು.ಓಟಕ್ಕೆ ಚಾಲನೆ ನೀಡುವ ಸಂದರ್ಭದಲ್ಲಿ ಬಿಮ್ಸ ನಿರ್ದೇಶಕ ಡಾ. ಎಂ.ಆರ್. ಚಂದ್ರಶೇಖರ, ಜಿಲ್ಲಾ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಎಸ್.ಎಚ್. ಗಂಗರಡ್ಡಿ, ಸಿಟಿ ಹೆಲ್ತ್ ಕೇರ್ ಡೈರೆಕ್ಟರಿ ಸಿಇಓ ಆರ್. ರಾಜೇಶ ಮತ್ತಿತರರು ಉಪಸ್ಥಿತರಿದ್ದರು.ಬಹುಮಾನ: ಮಾದಕ ವಸ್ತುಗಳ ವಿರುದ್ಧ ಯಶಸ್ವಿಯಾಗಿ ಓಟ ಪೂರೈಸಿದ ಇಬ್ಬರಿಗೆ ಬಹುಮಾನ ರೂಪದಲ್ಲಿ ಬಿಎಸ್‌ಎ ಹರ್ಕ್ಯುಲಸ್ ಸೈಕಲ್‌ಅನ್ನು ಇದೇ ಸಂದರ್ಭದಲ್ಲಿ ವಿತರಿಸ ಲಾಯಿತು. ಪುರುಷರ ವಿಭಾಗದಲ್ಲಿ ಬಿಮ್ಸನ ನರ್ಸಿಂಗ್ ವಿದ್ಯಾರ್ಥಿ ಲಕ್ಷ್ಮಣ ಹಾಗೂ ಮಹಿಳೆಯರ ವಿಭಾಗದಲ್ಲಿ ನರ್ಸಿಂಗ್ ವಿದ್ಯಾರ್ಥಿನಿ ಧನಶ್ರೀ ಲಕ್ಕಿ ಡ್ರಾನಲ್ಲಿ ವಿಜೇತರಾದರು.ಸಮಾರೋಪ ಸಮಾರಂಭದಲ್ಲಿ ವಿಜೇತರಿಬ್ಬರಿಗೂ ಕೆಎಲ್‌ಇ ವಿಶ್ವವಿದ್ಯಾಲಯದ ಕುಲಸಚಿವ ಡಾ. ಪಿ.ಎಫ್. ಕೋಟೂರು ಹಾಗೂ ಬಿಎಸ್‌ಎ ಹರ್ಕ್ಯುಲಸ್ ಕಂಪೆನಿಯ ಕರ್ನಾಟಕ ಏರಿಯಾ ಮ್ಯಾನೇಜರ್ ಡೇನಿಲ್ ಬಹುಮಾನ ವಿತರಿಸಿದರು.ಎನ್‌ಸಿಸಿ ಕೆಡೆಟ್‌ಗಳಿಂದ ಮೆರವಣಿಗೆ

ವಿಶ್ವ ಮಾದಕ ವಸ್ತು ಸೇವನೆ ಮತ್ತು ಸಾಗಾಟ ವಿರೋಧಿ ದಿನದ ಅಂಗವಾಗಿ ಬೆಳಗಾವಿ ಎನ್‌ಸಿಸಿ ಗ್ರೂಪ್ ಹೆಡ್‌ಕ್ವಾಟರ್ ನೇತೃತ್ವದಲ್ಲಿ 26 ಬಟಾಲಿಯನ್ ಎನ್‌ಸಿಸಿ, 8 ಕರ್ನಾಟಕ ಏರ್ ಸ್ಕ್ವಾಡ್ರನ್ ಎನ್‌ಸಿಸಿ ಮತ್ತು 25 ಕರ್ನಾಟಕ ಬಟಾಲಿಯನ್ ಎನ್‌ಸಿಸಿ ಆಶ್ರಯದಲ್ಲಿ ಮಾದಕ ವಸ್ತುಗಳ ಸೇವನೆಯಿಂದಾ ಗುವ ದುಷ್ಪರಿಣಾಮಗಳ ಕುರಿತು ನಗರದಲ್ಲಿ ಭಾನುವಾರ ಜಾಗೃತಿ ಮೂಡಿಸಲಾಯಿತು.ನಗರದ ಚನ್ನಮ್ಮ ವೃತ್ತದ ಮೂಲಕ ಖಡೇಬಜಾರ, ಗಣಪತಗಲ್ಲಿ, ಮಾರುತಿ ಗಲ್ಲಿ, ಬೋಗಾರವೇಸ್ ಮೂಲಕ ಸಂಚರಿಸಿದ ರ‌್ಯಾಲಿಯು ಬೆನನ್ ಹೈಸ್ಕೂಲ್‌ನಲ್ಲಿ ಕೊನೆಗೊಂಡಿತು. ರ‌್ಯಾಲಿಯಲ್ಲಿ ಪಾಲ್ಗೊಂಡಿದ್ದ ಎನ್‌ಸಿಸಿ ಕೆಡೆಟ್‌ಗಳು  ಭಿತ್ತಿ ಪತ್ರಗಳ ಮೂಲಕ ಮಾದಕ ದೃವ್ಯಗಳ ಸೇವನೆಯಿಂದಾಗುವ ದುಷ್ಪರಿಣಾಮಗಳ ಕುರಿತು ಜನರಲ್ಲಿ ಜಾಗೃತಿ ಮೂಡಿಸಿದರು.ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಬೆಳಗಾವಿಯ ಎನ್‌ಸಿಸಿ ಗ್ರೂಪ್ ಕಮಾಂಡರ್ ಕರ್ನಲ್ ರಾಬಿನ್‌ಸನ್ ಜಾರ್ಜ್ ರ‌್ಯಾಲಿಗೆ ಹಸಿರು ನಿಶಾನೆ ತೋರಿಸಿದರು.ಈ ಸಂದರ್ಭದಲ್ಲಿ 26 ಕರ್ನಾಟಕ ಬಟಾಲಿಯನ್ ಎನ್‌ಸಿಸಿಯ ಕಮಾಂಡಿಂಗ್ ಅಧಿಕಾರಿ ಕರ್ನಲ್ ಎಸ್.ಎಸ್. ಸಿಹಾಗ, ಕರ್ನಲ್ ಮಹೇಂದ್ರ, ಕರ್ನಲ್ ಅರುಣಕುಮಾರ, ವಿಂಗ್ ಕಮಾಂಡರ್ ಪರಾಗ ತೋಮರ, ಲೆಫ್ಟಿನೆಂಟ್ ಮಹೇಶ, ಎನ್‌ಸಿಸಿ ಅಧಿಕಾರಿಗಳಾದ ಅಶೋಕ ಕುಮಾರ, ಸಿ.ಬಿ. ಪಾಠಕ, ಸಿ.ಬಿ. ಹಿರೇಮಠ, ಆನಂದ ಡಿಸೋಜಾ, ಕ್ಯಾಪ್ಟನ್ ವಿನೋದ ಕುಮಾರ ಕುದನೂರ, ಸುಬೇದಾರ ರಾಜು ಪಾಡ್ಲೆ, ಆಫೀಸ್ ಅಧೀಕ್ಷಕ ಆರ್.ವಿ. ಮಾಳಗೆ ಉಪಸ್ಥಿತರಿದ್ದರು. ರ‌್ಯಾಲಿಯಲ್ಲಿ ಸಿದ್ಧರಾಮೇಶ್ವರ ಹೈಸ್ಕೂಲ್, ಭರತೇಶ ಹಿರಿಯ ಮಾಧ್ಯಮಿಕ ಶಾಲೆ, ಬೆನಾನ್ ಸ್ಮಿತ್ ಹೈಸ್ಕೂಲ್, ಸೆಂಟ್ರಲ್ ಹೈಸ್ಕೂಲ್, ಪಂಡಿತ್ ನೆಹರೂ ಹೈಸ್ಕೂಲ್ ಹಾಗೂ ಸೇಂಟ್ ಪೌಲ್ ಹೈಸ್ಕೂಲ್ ಹಾಗೂ 25ನೇ ಬಟಾಲಿಯನ್‌ನ ಸುಮಾರು ನೂರು ಎನ್‌ಸಿಸಿ ಕೆಡೆಟ್‌ಗಳು ಪಾಲ್ಗೊಂಡಿದ್ದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.