ಶನಿವಾರ, ಏಪ್ರಿಲ್ 17, 2021
32 °C

ಮಾದಕ ವಸ್ತುಗಳ ಮಾರಾಟ: ಬೋಟ್ಸ್ವಾನ ದೇಶದ ಪ್ರಜೆ ಬಂಧನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ರಾಮಮೂರ್ತಿನಗರದ ಮುನೇಶ್ವರನಗರ ಮೈದಾನದ ಬಳಿ ಮಾದಕ ವಸ್ತುಗಳ ಮಾರಾಟದಲ್ಲಿ ತೊಡಗಿದ್ದ ಬೋಟ್ಸ್ವಾನ ದೇಶದ ಪ್ರಜೆಯನ್ನು ಕೇಂದ್ರ ಅಪರಾಧ ವಿಭಾಗದ ಪೊಲೀಸರು ಬಂಧಿಸಿದ್ದಾರೆ.

ರೇಮಂಡ್ ಡೆವಿಡ್ ಮಾಸಾಸ್ (26) ಎಂಬಾತನನ್ನು ಬಂಧಿಸಿರುವ ಪೊಲೀಸರು ಆರೋಪಿಯಿಂದ 150 ಗ್ರಾಂ ಕೊಕೈನ್, ಪಾಸ್‌ಪೋರ್ಟ್, ಎರಡು ಮೊಬೈಲ್‌ಗಳು, ನೈರಾ ಮತ್ತು ನೇಪಾಳದ ಕರೆನ್ಸಿ ಸೇರಿದಂತೆ ಹತ್ತು ಲಕ್ಷ ರೂಪಾಯಿ ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ.

`ಬಟ್ಟೆ ವ್ಯಾಪಾರದ ಸಲುವಾಗಿ 2011ರಲ್ಲಿ ಭಾರತಕ್ಕೆ ಬಂದಿದ್ದ ಆರೋಪಿ, ದೆಹಲಿಯಲ್ಲಿ ವಾಸವಾಗಿದ್ದ. ವ್ಯಾಪಾರದಲ್ಲಿ ನಷ್ಟ ಹೊಂದಿದ್ದರಿಂದ ಕೊಕೈನ್ ಮಾರಾಟ ಮಾಡಲು ನಿರ್ಧರಿಸಿದ್ದಾಗಿ ವಿಚಾರಣೆ ವೇಳೆ ಆರೋಪಿ ತಿಳಿಸಿದ್ದಾನೆ~ ಎಂದು ಪೊಲೀಸರು ಹೇಳಿದ್ದಾರೆ.

`ಮೊಬೈಲ್ ಮತ್ತು ಸಾಮಾಜಿಕ ಜಾಲತಾಣಗಳ ಮೂಲಕ ಆಫ್ರಿಕಾದ ಪ್ರಜೆಗಳನ್ನು ಸಂಪರ್ಕಿಸಿ ಆರೋಪಿ ಕೊಕೈನ್ ಪಡೆಯುತ್ತಿದ್ದ. ದೆಹಲಿಯಲ್ಲಿರುವ ಸ್ನೇಹಿತ ಸ್ಯಾಂಡಿ ಎಂಬಾತನನಿಂದ ಕೊಕೈನ್ ಪಡೆದು ನಗರದ ಎಂ.ಜಿ.ರಸ್ತೆ, ಬ್ರಿಗೇಡ್ ರಸ್ತೆಯಲ್ಲಿರುವ ಪಬ್, ಬಾರ್‌ಗಳ ಬಳಿ ಮಾರಾಟ ಮಾಡುತ್ತಿದ್ದಾಗಿ ಆತ ಒಪ್ಪಿಕೊಂಡಿದ್ದಾನೆ. ಮುನೇಶ್ವರನಗರದಲ್ಲಿ ಮಾದಕ ವಸ್ತುಗಳ ಮಾರಾಟ ಮಾಡಲು ಗಿರಾಕಿಗಳನ್ನು ಹುಡುಕುತ್ತಿದ್ದ ವೇಳೆ ಆತನನ್ನು ಬಂಧಿಸಲಾಯಿತು~ ಎಂದು ರಾಮಮೂರ್ತಿನಗರ ಪೊಲೀಸರು ತಿಳಿಸಿದರು. ಪ್ರಕರಣ ದಾಖಲಾಗಿದೆ.

ಬಂಧನ

ವಿವಿಧ ಕಂಪೆನಿಗಳ ಬ್ಯಾಟರಿ ಮತ್ತು ಚಾರ್ಜರ್‌ಗಳನ್ನು ನಕಲಿಯಾಗಿ ತಯಾರಿಸಿ ಮಾರಾಟ ಮಾಡುತ್ತಿದ್ದ ಅಂಗಡಿಗಳ ಮೇಲೆ ದಾಳಿ ನಡೆಸಿರುವ ಸಿಸಿಬಿಯ ವಂಚನೆ ಮತ್ತು ದುರುಪಯೋಗ ದಳದ ಅಧಿಕಾರಿಗಳು ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ.

ರಾಜಸ್ಥಾನ ಮೂಲದ ಮಹೇಂದ್ರಕುಮಾರ್ (22) ಮತ್ತು ಲೀಲಾರಾಮ್ (21) ಬಂಧಿತರು. ಆರೋಪಿಗಳಿಂದ 29 ನಕಲಿ ಬ್ಯಾಟರಿಗಳು, 17 ಚಾರ್ಜರ್‌ಗಳು ಮತ್ತು ಕಂಪೆನಿಯೊಂದರ 209 ನಕಲಿ ಸ್ಟಿಕ್ಕರ್‌ಗಳು ಸೇರಿದಂತೆ ಎರಡೂವರೆ ಲಕ್ಷ ರೂಪಾಯಿ ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಆರೋಪಿಗಳು ನಗರದ ಎಸ್‌ಪಿ ರಸ್ತೆಯಲ್ಲಿ ಸನ್ ಟೆಕ್ನಾಲಜಿ ಎಂಬ ಹೆಸರಿನ ಅಂಗಡಿಯಲ್ಲಿ ಲ್ಯಾಪ್‌ಟಾಪ್‌ಗೆ ಬಳಸುವ ಬ್ಯಾಟರಿ ಮತ್ತು ನಕಲಿ ಚಾರ್ಜರ್‌ಗಳನ್ನು ಮಾರಾಟ ಮಾಡುತ್ತಿದ್ದರು ಎಂದು ಪೊಲೀಸರು ಹೇಳಿದ್ದಾರೆ. ಹಲಸೂರು ಗೇಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕಳವು: ಚಾಮರಾಜಪೇಟೆಯ ಶಂಕರಪುರದ ಮೊಬೈಲ್ ಮಳಿಗೆಯೊಂದರ ಬಾಗಿಲು ಮುರಿದು, ದುಷ್ಕರ್ಮಿಗಳು ನಗದು ಸೇರಿದಂತೆ ಒಂಬತ್ತು ಲಕ್ಷ ರೂಪಾಯಿ ಮೌಲ್ಯದ ಮೊಬೈಲ್‌ಗಳನ್ನು ಕಳವು ಮಾಡಿರುವ ಘಟನೆ ಶುಕ್ರವಾರ ರಾತ್ರಿ ನಡೆದಿದೆ.

ಈ ಸಂಬಂಧ ಮಳಿಗೆಯ ಮಾಲೀಕ ಬಾಲಾಜಿ ಎಂಬುವರು ದೂರು ನೀಡಿದ್ದಾರೆ. `ದುಬಾರಿ ಮೌಲ್ಯದ 65 ಮೊಬೈಲ್‌ಗಳು ಮತ್ತು  44 ಸಾವಿರ ರೂಪಾಯಿ ನಗದು ಕಳವಾಗಿದೆ ಎಂದು ಅವರು ದೂರಿನಲ್ಲಿ ತಿಳಿಸಿದ್ದಾರೆ. ಶಂಕರಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.