ಬುಧವಾರ, ಮೇ 18, 2022
23 °C

ಮಾದರಿಯ ಮಾಣಿಕ್ಯಗಳು

- ಪೃಥ್ವಿರಾಜ್ ಎಂ.ಎಚ್. Updated:

ಅಕ್ಷರ ಗಾತ್ರ : | |

ಸುಚೇತಾ ಕಡೆಠಂಕರ್

ಷ್ಯಾ ಖಂಡದ ಅತಿ ದೊಡ್ಡ ರಣ ಬಿಸಿಲಿನ `ಗೋಬಿ' ಮರುಭೂಮಿಯಲ್ಲಿ 51 ದಿನಗಳು  ಸುತ್ತಾಡಿ ದಾಖಲೆ ಮಾಡಿದವರು ಸುಚೇತಾ ಕಡೆಠಂಕರ್. ನಿಜಕ್ಕೂ ಅದು ಸಾಹಸದ ಕೆಲಸ. ಸುಮಾರು 2000 ಕಿ.ಮೀಗಳನ್ನು ಕೇವಲ 51 ದಿನಗಳಲ್ಲಿ ನಡೆದು ಮುಗಿಸಿದರು.  ಆ ಮೂಲಕ ಗೋಬಿ ಮರುಭೂಮಿಯನ್ನು ದಾಟಿದ ಮೊದಲ ಭಾರತೀಯ ಮಹಿಳೆ ಎಂಬ ಹೆಗ್ಗಳಿಕೆ ಸುಚೇತಾ ಅವರದ್ದಾಯಿತು.

ಪುರಾತತ್ವ ಶಾಸ್ತ್ರದಲ್ಲಿ ಪದವಿ ಪಡೆದಿರುವ ಸುಚೇತಾ ಮರಾಠಿ ಪತ್ರಿಕೆಯಲ್ಲಿ ವರದಿಗಾರ್ತಿಯಾಗಿ ಕೆಲಸ ಮಾಡುತ್ತಿದ್ದಾರೆ. ಟ್ರೆಕ್ಕಿಂಗ್ ಸುಚೇತಾ ಅವರ ಅಚ್ಚುಮೆಚ್ಚಿನ  ಹವ್ಯಾಸ. 35ರ ಹರೆಯದ ಸುಚೇತಾ ಹಿಮಾಲಯ ಪರ್ವತ ಶ್ರೇಣಿಯ ವಿವಿಧ ಶಿಖರಗಳು ಸೇರಿದಂತೆ ಬೆಟ್ಟಗಳನ್ನು  ಹತ್ತಿ ಹಲವು ವಿಶಿಷ್ಟ ದಾಖಲೆಗಳನ್ನು ಬರೆದಿದ್ದಾರೆ.

ಗೋಬಿ ಮರುಭೂಮಿಯನ್ನು ದಾಟಲು 60 ದಿನಗಳನ್ನು ನಿಗದಿಪಡಿಸಲಾಗಿತ್ತು. ಸುಚೇತಾ ಜೊತೆ ವಿವಿಧ ದೇಶಗಳ 12 ಸ್ಪರ್ಧಿಗಳು ಭಾಗವಹಿಸಿದ್ದರು. ಇವರಲ್ಲಿ 6 ಸ್ಪರ್ಧಿಗಳು ಬಿಸಿಲಿನ ತಾಪ ತಾಳಲಾರದೇ ಅರ್ಧದಲ್ಲೇ ವಾಪಸ್ಸಾದರು.  ಆದರೆ ಛಲ ಬಿಡದ ಸುಚೇತಾ ಕೇವಲ 51 ದಿನಗಳಲ್ಲೇ ಗುರಿ ತಲುಪಿದ ಮೊದಲ ಭಾರತೀಯ ಮಹಿಳೆ ಎಂಬ ದಾಖಲೆ ಬರೆದರು. ಪ್ರತಿ ದಿನ 25-28ಕಿ. ಮೀ ನಡೆಯುತ್ತಿದ್ದರು.

ಈ ವೇಗದ ನಡಿಗೆಯಿಂದ ಬೇಗ ಗುರಿ ತಲುಪಲು ಸಾಧ್ಯವಾಯಿತು ಎನ್ನುತ್ತಾರೆ ಸುಚೇತಾ. `ಸ್ಪರ್ಧೆ ನಮ್ಮಳಗಿರುವ ಸಾಮರ್ಥ್ಯವನ್ನು ಪ್ರತಿಬಿಂಬಿಸುತ್ತದೆ.  ಇಂತಹ ಹಲವಾರು ಸ್ಪರ್ಧೆಗಳು  ನಮಗೆ ಸುಂದರ ಬದುಕನ್ನು ರೂಪಿಸುತ್ತವೆ' ಎನ್ನುತ್ತಾರೆ ಸುಚೇತಾ.

ಮಾಣಿಕ್ ಥಾಪರ್

ಅಂದು ಕಾಲೇಜ್ ಆವರಣದಲ್ಲಿ ಬಿದ್ದಿರುತ್ತಿದ್ದ ಪ್ಲಾಸ್ಟಿಕ್ ಹಾಳೆ, ಸಿಂಥೆಟಿಕ್ ಪೇಪರ್, ಕವರ್‌ಗಳನ್ನು  ಕಸದ ಬುಟ್ಟಿಗೆ ಹಾಕುವುದು ಮಾಣಿಕ್ ಥಾಪರ್ ಅವರ ನಿತ್ಯದ ಹವ್ಯಾಸವಾಗಿತ್ತು. `ನೀನು ಎಂಜಿನಿಯರಿಂಗ್ ಓದಲು ಬಂದಿದ್ದೀಯೋ ಅಥವಾ ಕಸ ಎತ್ತಿಹಾಕಲು ಬಂದಿದ್ದೀಯೋ' ಎಂದು ಗೆಳೆಯರು ಗೇಲಿ ಮಾಡುತ್ತಿದ್ದರು ಸಹ ಮುಜುಗರ ಪಡದೆ ಮಾಣಿಕ್ ಆ ಕೆಲಸವನ್ನು ಮುಂದುವರೆಸುತ್ತಿದ್ದರಂತೆ.

ಹೀಗೆಂದು `ಯಂಗ್ ಲೀಡರ್' (ಇಂಡಿಯಾ ಟುಡೆ  ಮಾಧ್ಯಮ ಸಂಸ್ಥೆ ನೀಡುವ ಪುರಸ್ಕಾರ) ಪುರಸ್ಕಾರ ಪಡೆಯುವಾಗ ಮಾಣಿಕ್ ಅಭಿಮಾನದಿಂದ ಹೇಳಿಕೊಂಡರು. ನೊಯ್ಡಾದವರಾದ ಮಾಣಿಕ್ ಎಂಜಿನಿಯರಿಂಗ್ ಪದವೀಧರ.  ಪ್ಲಾಸ್ಟಿಕ್ ಮತ್ತು ಘನ ತ್ಯಾಜ್ಯ ವಸ್ತುಗಳನ್ನು ಸಂಗ್ರಹಿಸಿ  ಅವುಗಳನ್ನು ಮರುಬಳಕೆ ಮಾಡುವ `ಎಕೋ ವೈಸ್' ಎಂಬ ಕಂಪೆನಿಯನ್ನು ನಡೆಸುತ್ತಿದ್ದಾರೆ.

ಪ್ರಸ್ತುತ ನೊಯ್ಡಾ ನಗರದಲ್ಲಿನ ತ್ಯಾಜ್ಯವನ್ನು ಸಂಗ್ರಹ ಮಾಡಲಾಗುತ್ತಿದ್ದು, ವಾರ್ಷಿಕ 2000 ಟನ್ ತ್ಯಾಜ್ಯವನ್ನು ಸಂಸ್ಕರಣೆ ಮಾಡಿ ಅದನ್ನು ಮರುಬಳಕೆ ಮಾಡಲಾಗುತ್ತಿದೆ. ಇದರಿಂದ ವಾರ್ಷಿಕ ನೂರಾರು ಕೋಟಿ ರೂಪಾಯಿ ವಹಿವಾಟು ನಡೆಯುತ್ತಿದೆ ಎಂದು ಮಾಣಿಕ್ ತಿಳಿಸುತ್ತಾರೆ.

ಮಾಣಿಕ್ ದೇಶದ ಎಲ್ಲಾ ಜಿಲ್ಲಾ ಕೇಂದ್ರಗಳಲ್ಲೂ ಇಂತಹ ಸಂಸ್ಕರಣ ಘಟಕಗಳನ್ನು ತೆರೆಯುವ ಯೋಜನೆಯನ್ನು  ಹೊಂದಿದ್ದಾರೆ.

ಈ ರೀತಿ ಮಾಡುವುದರಿಂದ ನಮ್ಮ ನಗರಗಳು ಸ್ವಚ್ಛವಾಗಿರುವುದು ಮಾತ್ರವಲ್ಲದೆ ನಮ್ಮ ಸುತ್ತಲಿನ ಪರಿಸರವು ಚೆನ್ನಾಗಿರುತ್ತದೆ ಎನ್ನುತಾರೆ ಮಾಣಿಕ್. 30 ಹರೆಯದ ಮಾಣಿಕ್ ಕಸದಿಂದ ರಸ ತೆಗೆಯುವ ಕಾಯಕದಲ್ಲಿ ತೊಡಗುವುದರ ಮೂಲಕ   ಇಂದಿನ ಯುವ ಜನಾಂಗಕ್ಕೆ ಮಾದರಿಯಾಗಿದ್ದಾರೆ. ಭಾರತದಲ್ಲಿ ಪ್ರತಿನಿತ್ಯ ಶೇ. 15ರಷ್ಟು ಪ್ಲಾಸ್ಟಿಕ್  ತ್ಯಾಜ್ಯ ಭೂಮಿಯನ್ನು ಸೇರುತ್ತಿದೆ.ಇದರಿಂದ ಭೂಮಿಯ ತಾಪಮಾನ ಹೆಚ್ಚುತ್ತಿದೆ. ಪ್ರವಾಹ, ಬರದಂತಹ ನೈಸರ್ಗಿಕ ಅವಘಡಗಳು ಸಂಭವಿಸುತ್ತವೆ. ಹಾಗಾಗಿ ಯುವಕರು ಸ್ಥಳೀಯವಾಗಿ ತ್ಯಾಜ್ಯ ಸಂಸ್ಕರಣ ಘಟಕಗಳನ್ನು ಸ್ಥಾಪಿಸಿ ತಮ್ಮ ಆದಾಯವನ್ನೂ ಹೆಚ್ಚಿಸಿಕೊಳ್ಳಬಹುದು ಮತ್ತು ಪರಿಸರದ ಮೇಲಿನ ಹಾನಿಯನ್ನು ತಪ್ಪಿಸಬಹುದು ಎಂದು ಮಾಣಿಕ್ ಕಿವಿಮಾತು ಹೇಳುತ್ತಾರೆ.

ಫಣೀಂದ್ರ ಶಮಾ

ಅಂದು ಫಣೀಂದ್ರ ಶಮಾಗೆ ಬೆಂಗಳೂರಿನಿಂದ ಹೈದರಾಬಾದ್‌ಗೆ ಬಸ್ ಟಿಕೆಟ್ ಸಿಕ್ಕಿದ್ದರೆ ಬಹುಶಃ ಇಂದು ಅವರು `ರೆಡ್ ಬಸ್' ಸಂಸ್ಥೆಯ ಮಾಲೀಕರಾಗುತ್ತಿರಲಿಲ್ಲವೇನೋ?ಹೌದು, 2005ರಲ್ಲಿ ಫಣೀಂದ್ರ ಶಮಾ ಹಬ್ಬದ ನಿಮಿತ್ತವಾಗಿ ಹೈದರಾಬಾದ್‌ಗೆ ತೆರಳಲು ಮೆಜೆಸ್ಟಿಕ್‌ಗೆ ಬರುತ್ತಾರೆ. ಹೈದರಾಬಾದ್‌ಗೆ ತೆರಳುವ ಬಹುತೇಕ ಬಸ್‌ಗಳಲ್ಲಿ ಶೇ. 80ರಷ್ಟು ಸೀಟ್‌ಗಳು ಭರ್ತಿಯಾಗಿದ್ದವು. ಖಾಲಿ ಇರುವ ಸೀಟ್‌ಗಳಿಗಾಗಿ ಬಸ್ ಏಜೆಂಟರ್‌ಗಳನ್ನು  ಬೇಡಿದರೂ ಟಿಕೆಟ್ ಸಿಗಲಿಲ್ಲ. ಕೊನೆಗೆ ಕೆಲ ಏಜೆಂಟರುಗಳು ಸೀಟ್‌ಗಳಿಲ್ಲ, ನಿಂತು ಪ್ರಯಾಣ ಮಾಡಿ ಎಂದರು.

ಆದರೆ ಫಣೀಂದ್ರ ಶಮಾ ಅಂದು ಹೈದರಾಬಾದ್‌ಗೆ ತೆರಳಲಿಲ್ಲ. ಬಸ್ ಏಜೆಂಟರ್‌ಗಳ ಲಾಭಕೋರತನವೇ ಈ ಅವ್ಯವಸ್ಥೆಗೆ ಕಾರಣ ಎಂಬುದನ್ನು ಅರಿತರು. ಈ ಘಟನೆ ನಡೆದ ಎರಡು ವರ್ಷಗಳಲ್ಲೇ `ರೆಡ್ ಬಸ್' ಎಂಬ ಟಿಕೆಟ್ ಬುಕಿಂಗ್ ಸಂಸ್ಥೆಯನ್ನು ಕಟ್ಟಿದರು. ಇಂದು ಈ ಸಂಸ್ಥೆ ವಾರ್ಷಿಕ ಸಾವಿರಾರು ಕೋಟಿ ರೂಪಾಯಿ ವಹಿವಾಟು ನಡೆಸುತ್ತಿದೆ.ಪ್ರಯಾಣಿಕರಿಗೆ ತ್ವರಿತಗತಿಯಲ್ಲಿ ಮತ್ತು ಪಾರದರ್ಶಕವಾಗಿ ಟಿಕೆಟ್‌ಗಳು ಸಿಗಬೇಕು ಎಂಬುದು ರೆಡ್ ಬಸ್ ಸಂಸ್ಥೆಯ ಮೊದಲ ಆದ್ಯತೆಯಾಗಿತ್ತು ಇದಕ್ಕಾಗಿ ಕೆಲ ಸಾಫ್ಟ್‌ವೇರ್ ಗೆಳೆಯರ ನೆರವಿನಿಂದ ಒಂದು ತಂತ್ರಾಂಶವನ್ನು ತಯಾರಿಸಿ ಆ ಮೂಲಕ ಪ್ರಯಾಣಿಕರಿಗೆ ತ್ವರಿತವಾಗಿ ಸೇವೆ ಒದಗಿಸಲು ಮುಂದಾದರು. ಬಹು ಬೇಗನೆ ಪ್ರಯಾಣಿಕರನ್ನು ಆಕರ್ಷಿಸಿದ ಈ ಸಂಸ್ಥೆ 2011ರಲ್ಲಿ ಸಾವಿರ ಕೋಟಿ ವಹಿವಾಟು ನಡೆಸುವ ಮೂಲಕ ದಾಖಲೆ ನಿರ್ಮಿಸಿತು.ದೇಶದ 22 ರಾಜ್ಯಗಳಲ್ಲಿ ಈ ಸಂಸ್ಥೆ ಕಾರ್ಯನಿರ್ವಹಿಸುತ್ತಿದ್ದು, 40,000 ಸಾವಿರ ಏಜೆಂಟರುಗಳು ಕೆಲಸ ಮಾಡುತ್ತಿದ್ದಾರೆ. 32ರ ಹರೆಯದ ಫಣೀಂದ ಶಮಾ ಅವರ ಈ ಸಾಧನೆಯನ್ನು ಗುರುತಿಸಿ ಹಲವಾರು ಸಂಘ ಸಂಸ್ಥೆಗಳು ಸನ್ಮಾನಿಸಿವೆ.

ಸಂದೀಪ್ ಮಹೇಶ್ವರಿ

ಅದು 2000ನೇ ವರ್ಷ. ಒಂದು ಪುಟ್ಟ ಕ್ಯಾಮೆರಾವನ್ನು ಕೊಂಡು ಮದುವೆ ಫೋಟೊಗಳು ಮತ್ತು ಪಾಸ್‌ಪೋರ್ಟ್ ಸೈಜ್ ಫೋಟೊಗಳನ್ನು ತೆಗೆದುಕೊಡುವ ವ್ಯಾಪಾರ ಶುರು ಮಾಡಿದರು ಸಂದೀಪ್. ಆದರೆ ಈ ವ್ಯವಹಾರ ಸರಿಯಾಗಿ ಕೈ ಹತ್ತಲಿಲ್ಲ.ಹಾಗೆಂದು ಸಂದೀಪ್ ಸುಮ್ಮನೇ ಕೂರಲ್ಲ್ಲಿಲ. 2006ರಲ್ಲಿ `ಇಮೇಜ್ ಬಜಾರ್' ಎಂಬ ಚಿತ್ರ ಮತ್ತು ವಿಡಿಯೊ ಸಂಗ್ರಹ ಸಂಸ್ಥೆಯನ್ನು ಕಟ್ಟಿದ್ದರು. ಇಂದು ಬೃಹತ್ತಾಗಿ ಬೆಳೆದಿರುವ ಈ ಸಂಸ್ಥೆಯಲ್ಲಿ  ನೂರಾರು ಜನರು ಕೆಲಸಮಾಡುತ್ತಿದ್ದಾರೆ. ಸಂದೀಪ್ ನಿರೀಕ್ಷಿಸಿದ್ದಕಿಂತಲೂ  ಹೆಚ್ಚು ಲಾಭ ಬರುತ್ತಿದೆ.ಇಮೇಜ್ ಬಜಾರ್ ಭಾರತದ ಅತಿ ದೊಡ್ಡ ಚಿತ್ರ ಮತ್ತು ವಿಡಿಯೊ ಸಂಗ್ರಹಗಳಿರುವ ಸಂಸ್ಥೆಯಾಗಿದೆ. ರಾಜಕೀಯ, ಸಾಹಿತ್ಯ , ಸಿನಿಮಾ,  ಕ್ರೀಡೆ, ನೈಸರ್ಗಿಕ ವಿಕೋಪಗಳು, ಫ್ಯಾಷನ್, ಧಾರ್ಮಿಕ ಹೀಗೆ ನೂರಾರು ಕ್ಷೇತ್ರಗಳಿಗೆ ಸಂಬಂಧಿಸಿದ ಚಿತ್ರಗಳೂ ಇಮೇಜ್ ಬಜಾರ್‌ನಲ್ಲಿ ಲಭ್ಯ. ಗೂಗಲ್ ಮತ್ತು ಯೂಟ್ಯೂಬ್‌ನವರು  ಕೂಡ ಇಮೇಜ್ ಬಜಾರ್‌ನಿಂದ ಚಿತ್ರ ಮತ್ತು ವಿಡಿಯೊಗಳನ್ನು ಖರೀದಿಸಿದ್ದಾರೆ.ಇಮೇಜ್ ಬಜಾರ್‌ನಲ್ಲಿ 10 ಲಕ್ಷಕ್ಕೂ ಹೆಚ್ಚು ಚಿತ್ರಗಳು ಮತ್ತು ವಿಡಿಯೊ ತುಣುಕುಗಳು ಲಭ್ಯವಿವೆ. ಸುಮಾರು 10.400 3ಈ ಚಿತ್ರಗಳನ್ನು ಇಲ್ಲಿ ಸಂಗ್ರಹಿಸಲಾಗಿದೆ. ದೇಶ ಮತ್ತು ವಿದೇಶಗಳ ಜಾಹೀರಾತು ಕಂಪೆನಿಗಳು ಮತ್ತು ಪ್ರಕಾಶನ ಸಂಸ್ಥೆಗಳಿಂದ ಚಿತ್ರ ಮತ್ತು ದೃಶ್ಯಗಳಿಗೆ ಭಾರೀ ಬೇಡಿಕೆ  ಇದೆ  ಎನ್ನುತ್ತಾರೆ ಇಮೇಜ್ ಬಜಾರ್‌ನ ಸಿಇಓ ಸಂದೀಪ್.30ರ ಹರೆಯದ ಸಂದೀಪ್ ಮೂಲತಃ ದೆಹಲಿಯವರು. ಬಿಕಾಂ ಪದವಿಯನ್ನು ಅರ್ಧಕ್ಕೆ ಬಿಟ್ಟು ಇಮೇಜ್ ಬಜಾರ್‌ನಲ್ಲಿ ತಮ್ಮನ್ನು ಸಂಪೂರ್ಣವಾಗಿ ತೊಡಗಿಸಿಕೊಂಡವರು. ಉದ್ಯೋಗಕ್ಕೆ ಸಾಕಷ್ಟು ಅವಕಾಶಗಳಿವೆ. ಹಾಗೆಂದು ಪೈಪೋಟಿ ಇರುವ ಕ್ಷೇತ್ರಗಳನ್ನು ಆಯ್ಕೆಮಾಡಿಕೊಳ್ಳಬಾರದು. ಭಿನ್ನವಾಗಿ ಆಲೋಚಿಸಿ ಭವಿಷ್ಯದಲ್ಲಿ ಲಾಭ ತಂದುಕೊಡುವ ವ್ಯಾಪಾರ ಅಥವಾ ಉದ್ಯಮಕ್ಕೆ ಕೈಹಾಕುವುದು ಒಳಿತು ಎಂದು ಸಂದೀಪ್ ಯುವಕರಿಗೆ ಸಂದೇಶ ಕೊಡುತ್ತಾರೆ.

- ಪೃಥ್ವಿರಾಜ್ ಎಂ.ಎಚ್.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.