ಶನಿವಾರ, ಜೂನ್ 19, 2021
28 °C
ಗ್ರಾಮಾಯಣ

ಮಾದರಿ ಊರಲ್ಲಿ ಮೂಲಸೌಕರ್ಯವೆಲ್ಲಿ?

ಪ್ರಜಾವಾಣಿ ವಾರ್ತೆ/ ಮಾಣಿಕ ಆರ್.ಭುರೆ Updated:

ಅಕ್ಷರ ಗಾತ್ರ : | |

ಬಸವಕಲ್ಯಾಣ: ಒಂದೆಡೆ ಗುಲ್ಬರ್ಗ ಜಿಲ್ಲೆಯ ಸರಹದ್ದು, ಇನ್ನೊಂದೆಡೆ ಮಹಾರಾಷ್ಟ್ರದ ಗಡಿ. ಇವುಗಳ ಮಧ್ಯೆ ನಡುಗಡ್ಡೆಯಂತಿರುವ ಬಟಗೇರಾ ಗ್ರಾಮ ಮೂಲ­ಸೌಕರ್ಯಗಳಿಂದ ವಂಚಿತವಾಗಿದೆ.ಗ್ರಾಮ ಪಂಚಾಯಿತಿ ಕೇಂದ್ರವಾದ ಈ ಊರು ಈ ಭಾಗದಲ್ಲಿ ಮಾದರಿ ಎನಿಸಿತ್ತು. ಆದರೆ ಈಚೆಗೆ ನಿರ್ಲಕ್ಷ್ಯಕ್ಕೆ  ಗುರಿಯಾಗಿದೆ. ಗ್ರಾಮದಲ್ಲಿನ ಬಹುತೇಕ ರಸ್ತೆಗಳು ಸಿಮೆಂಟ್ ಕಂಡಿವೆ. ಆದರೆ ಗ್ರಾಮಕ್ಕೆ ಬರುವ ರಸ್ತೆಗಳ ದುಸ್ಥಿತಿ ಮಾತ್ರ ಹೇಳ ತೀರದು.ಹೋಬಳಿ ಕೇಂದ್ರ ಕೊಹಿನೂರನಿಂದ ಬರುವ ಮತ್ತು ಇಲ್ಲಿಂದ ರಾಮ­ತೀರ್ಥಕ್ಕೆ ಹೋಗುವ ರಸ್ತೆಗಳು  ಹದಗೆಟ್ಟಿವೆ. ಎಲ್ಲೆಡೆ ಡಾಂಬರು ಕಿತ್ತಿದ್ದು, ಅಲ್ಲಲ್ಲಿ ಗುಂಡಿಗಳು ಬಿದ್ದಿವೆ. ಹೀಗಾಗಿ ನಡೆದುಕೊಂಡು ಹೋಗು­ವುದು ದುಸ್ತರವಾಗಿದೆ ಎಂಬುದು ಗ್ರಾಮಸ್ಥರ ದೂರು.ಇಲ್ಲಿನ ಸರ್ಕಾರಿ ಪ್ರೌಢಶಾಲೆಗೆ ದೊಡ್ಡ ಆಟದ ಮೈದಾನವಿದೆ. ಆದರೆ ಸುತ್ತ ಆವರಣಗೋಡೆ ಇಲ್ಲ. ಕೆಲ ವರ್ಷಗಳ ಹಿಂದೆ ಗೋಡೆ ಕಟ್ಟಲು ಅಡಿಪಾಯ ಹಾಕಲಾಗಿದ್ದು, ಅನು­ದಾನದ ಕೊರತೆ ಕಾರಣ ಕಾಮಗಾರಿ ನಡೆದಿಲ್ಲ. ಆವರಣ ಗೋಡೆ ಇಲ್ಲದ ಕಾರಣ ಹಂದಿ, ನಾಯಿ, ದನಗಳು ಶಾಲೆಗೆ ನುಗ್ಗುವಂತಾಗಿದೆ.ಇಲ್ಲಿನ ಸಮಾಜ ಕಲ್ಯಾಣ ಇಲಾಖೆಯ ವಿದ್ಯಾರ್ಥಿ ವಸತಿ ನಿಲಯ ಬಾಡಿಗೆ ಕಟ್ಟಡದಲ್ಲಿ ನಡೆಯುತ್ತಿದೆ. ಇದಕ್ಕಾಗಿ ಕಟ್ಟಡ ನಿರ್ಮಿಸಲು ಹಣ ಮಂಜೂರಾಗಿದೆ. ಒಂದೆರಡು ಅಡಿ ಎತ್ತರದವರೆಗೆ ಮಾತ್ರ ಕಾಮಗಾರಿ ನಡೆದಿದೆ. ಕಾಮಗಾರಿ ಏಕೆ ಮುಂದು­ವರಿದಿಲ್ಲ ಎಂಬ ಬಗ್ಗೆ ಯಾರಿಗೂ ಮಾಹಿತಿ ಇಲ್ಲ.‘ಗ್ರಾಮದ ಕೆಲ ಭಾಗದಲ್ಲಿ ಕುಡಿಯುವ ನೀರಿನ ವ್ಯವಸ್ಥೆ ಇಲ್ಲ. ಇದರಿಂದ ಜನರು ನೀರಿಗಾಗಿ ಪರದಾಡು­ವಂತಾಗಿದೆ.ಗ್ರಾಮದಲ್ಲಿ ಶೌಚಾಲಯ ಇಲ್ಲ. ಸುತ್ತಲಿನ ತಿಪ್ಪೆಗುಂಡಿಗಳೇ  ಶೌಚಾಲಯವಾಗಿ ಮಾರ್ಪಾಡಾಗಿವೆ. ರಸ್ತೆಗಳಲ್ಲಿ ಸಂಚರಿಸುವುದು ಅಸಾಧ್ಯ’ ಎಂದು ಗ್ರಾಮದ ಮಹಾದೇವ ಸ್ವಾಮಿ ಹೇಳುತ್ತಾರೆ.‘ಬೇಸಿಗೆಯಲ್ಲಿ ನೀರಿನ ಸಮಸ್ಯೆ ಕಾಡುತ್ತದೆ.  ಗ್ರಾಮದಲ್ಲಿನ ಕೆರೆ ಒಣಗಿದ್ದು ಹಳ್ಳಗಳಲ್ಲಿ ನೀರಿಲ್ಲ. ಕೊಳವೆ ಬಾವಿಗಳಲ್ಲೂ ಸಹ ನೀರು ಸಿಗದಂತಾಗಿದೆ. ಕುಡಿಯುವ ನೀರಿನ ಸಮಸ್ಯೆ ಶಾಶ್ವತವಾಗಿ ಬಗೆಹರಿಸು­ವುದಕ್ಕಾಗಿ ಸಮೀಪದ ಬೆಣ್ಣೆತೊರೆ ನದಿಯಿಂದ ನೀರು ಸರಬರಾಜು ಮಾಡುವ ಯೋಜನೆ ಜಾರಿಗೊಳಿಸ­ಬೇಕು ಎಂಬುದು ಬಹುದಿನದ ಬೇಡಿಕೆ­. ನೀರಿಗಾಗಿ ಪರಿತಪಿಸುವುದನ್ನು ತಪ್ಪಿಸಲು ಸರ್ಕಾರ ದೊಡ್ಡ ಯೋಜನೆ ಕೈಗೊಳ್ಳುವುದು ಅವಶ್ಯ’ ಎಂದು ಗ್ರಾಮ ಪಂಚಾಯಿತಿ ಅಧ್ಯಕ್ಷ ಗೋಲಂದಾಸ ಇಲ್ಲಾಳೆ ಒತ್ತಾಯಿಸುತ್ತಾರೆ. 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.