ಸೋಮವಾರ, ಮೇ 17, 2021
29 °C

ಮಾದರಿ ಗ್ರಂಥಪಾಲಕ ಜೆ.ಆರ್. ರಾಮಮೂರ್ತಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಸಾಧಿಸುವ ಛಲವಿದ್ದರೆ ಏನನ್ನಾದರೂ ಸಾಧಿಸಬಹುದು   ಅಂಗವೈಕಲ್ಯವನ್ನು ಮೆಟ್ಟಿನಿಂತು ಜೀವನ ರಥವನ್ನು ಸಮರ್ಥವಾಗಿ ಎಲ್ಲರಿಗೂ ಮಾದರಿಯಾದವರು ಜೆ.ಆರ್. ರಾಮಮೂರ್ತಿ. ಹಂಪಿ ಕನ್ನಡ ವಿಶ್ವವಿದ್ಯಾಲಯದ ಮುಖ್ಯ ಗ್ರಂಥಪಾಲಕರಾಗಿದ್ದ ಅವರು ಸದ್ಯ ಹೊಸಪೇಟೆಯಲ್ಲಿ ನಿವೃತ್ತಿ ಜೀವನ ನಡೆಸುತ್ತಿದ್ದಾರೆ.`ನನ್ನ ಜೀವನ ರೂಪಿಸಿಕೊಳ್ಳಲು ಅಂಗವೈಕಲ್ಯ ಕಿಂಚಿತ್ತು ಸಮಸ್ಯೆಯಾಗಲಿಲ್ಲ. ಅದು ವಿಶೇಷ ಆಯಾಮವಾಗಿ ಪರಿವರ್ತಿತವಾಯಿತು~ ಎನ್ನುವ ರಾಮಮೂರ್ತಿ ಅವರು ಮೂಲತಃ ಮೊಳಕಾಲ್ಮುರಿನವರು. ತಾಯಿ ಕೃಷ್ಣಮ್ಮ, ತಂದೆ ಜಿಂಕಾ ರುದ್ರಪ್ಪ. ಇವರ ತಂದೆ ಹಾನಗಲ್ಲಿನ ಶೇಕದಾರರಾಗಿ ಕೆಲಸ ಮಾಡುತ್ತಿದ್ದ ಕಾಲದಲ್ಲಿ ಗ್ರಾಮದಲ್ಲಿ ಶಾಲೆ ಇರಲಿಲ್ಲ. ಪಕ್ಕದ ಬೊಮ್ಮಲಿಂಗನಹಳ್ಳಿಗೆ ವಿದ್ಯೆ ಕಲಿಯಲು ನಡೆದುಕೊಂಡು ಹೋಗಬೇಕಾಗಿತ್ತು.ಬಾಲ್ಯದಲ್ಲಿಯೇ ಎರಡೂ ಕಾಲಿಗೂ ಪೋಲಿಯೊ ಪೀಡಿತವಾಗಿ ರಾಮಮೂರ್ತಿಗೆ ನಡೆಯಲಾಗುತ್ತಿರಲಿಲ್ಲ. ಹಾನಗಲ್ಲಿನಲ್ಲಿ ಸಹಪಾಠಿಗಳು ಸರತಿಯಲ್ಲಿ ಹೆಗಲು ಮೇಲೆ ಹೊತ್ತೊಯ್ಯುತ್ತಿದ್ದರು. ಇದನ್ನು ಗಮನಿಸಿದ ಶಿಕ್ಷಣಾಧಿಕಾರಿ ಚಂದ್ರಾ ರೆಡ್ಡಿ ಅವರು ಹಾನಗಲ್ಲಿನಲ್ಲಿಯೇ ಪಾಠಶಾಲೆಯ ವ್ಯವಸ್ಥೆ ಮಾಡಿ ಕೊಟ್ಟರು. ಇದರಿಂದಾಗಿ ಮೂರ್ತಿಗೆ ಮಾತ್ರವಲ್ಲ, ಉಳಿದವರಿಗೆಲ್ಲ ಅನುಕೂಲವಾಯಿತು.ಬೆಂಗಳೂರಿನ ಸೆಂಟ್ರಲ್ ಕಾಲೇಜಿನಲ್ಲಿ ಶಿಕ್ಷಣ ಮುಂದುವರಿಸಿದ ರಾಮಮೂರ್ತಿ ಅವರಿಗೆ ಅಂದಿನ ಧೀಮಂತ ಸಾಹಿತಿಗಳಾದ ಜಿ.ಪಿ. ರಾಜರತ್ನಂ, ಓ.ಕೆ. ನಂಬಿಯಾರ್, ಭರತರಾಜ ಸಿಂಗ್, ಬಿ. ಚಂದ್ರಶೇಖರ, ಎಸ್.ರಾಮಸ್ವಾಮಿ, ಪಿ. ಲಂಕೇಶ ಮುಂತಾದವರು ವಿದ್ಯಾಗುರುಗಳಾಗಿದ್ದರು.ಗ್ರಂಥಾಲಯ ವಿಜ್ಞಾನ ಅಭ್ಯಾಸದ ನಂತರ ಕುಲಪತಿ ವಿ.ಕೆ. ಗೋಕಾಕರ ನೆರವಿನಿಂದ ಬೆಂಗಳೂರು ವಿ.ವಿ.ಯ ಸಹಾಯಕ  ಗ್ರಂಥಪಾಲಕರಾಗಿ ವೃತ್ತಿ ಪ್ರಾರಂಭಿಸಿದರು. ನಂತರ 10 ವರ್ಷ ಪ್ರಜಾವಾಣಿ- ಡೆಕ್ಕನ್ ಹೆರಾಲ್ಡ್ ಪತ್ರಿಕಾಲಯದಲ್ಲಿ ಕರ್ತವ್ಯ ನಿರ್ವಹಿಸಿದರು. ಕನ್ನಡ ವಿ.ವಿ. ಸ್ಥಾಪನೆಯಾದಾಗ ಸ್ವತಃ ಡಾ. ಚಂದ್ರಶೇಖರ ಕಂಬಾರ ಅವರೇ ಇವರನ್ನು ಒತ್ತಾಯದಿಂದ ತಮ್ಮಲ್ಲಿಗೆ ಕರೆತಂದರು. ಕೇವಲ ಒಂದೂವರೆ ವರ್ಷದಲ್ಲಿ ಸುಮಾರು ಹನ್ನೊಂದು ಸಾವಿರ ಗ್ರಂಥಗಳ ವರ್ಗೀಕರಣ ಹಾಗೂ ಸೂಚೀಕರಣ ಕೆಲಸವನ್ನು ಮಾಡಿದರು. ಗ್ರಂಥಾಲಯದ ಆತ್ಮ ಓದುಗರು. ಅವರಿಗೆ ಸುವ್ಯವಸ್ಥೆ ಕಲ್ಪಿಸುವುದೇ ಗ್ರಂಥಪಾಲಕರ ಕರ್ತವ್ಯ. ವಿಶ್ವವಿದ್ಯಾಲಯಗಳ ಮೆದುಳು ಗ್ರಂಥಾಲಯ ಎಂದು ನಂಬಿದವರು ರಾಮಮೂರ್ತಿ.ಹೊಸಪೇಟೆ ತಾಲ್ಲೂಕು ದರ್ಶನ ಕೈಪಿಡಿ ತಯಾರಿಸುವ ಯೋಜನೆಯಲ್ಲಿಯೂ ರಾಮಮೂರ್ತಿ ಪಾಲ್ಗೊಂಡಿದ್ದರು. ತುಂಗಭದ್ರಾ ನದಿಯಲ್ಲಿ ಪ್ರವಾಹ ಉಕ್ಕಿ ಕನ್ನಡ ವಿ.ವಿ. ಮಂಟಪಗಳಲ್ಲಿದ್ದ ಗ್ರಂಥಾಲಯಕ್ಕೆ ನೀರು ನುಗ್ಗಿ, ಗ್ರಂಥರಾಶಿ ನೀರು ಪಾಲಾಗಿತ್ತು. ಅವುಗಳನ್ನು ವೈಜ್ಞಾನಿಕವಾಗಿ ರಕ್ಷಿಸುವ ಕೆಲಸವನ್ನೂ ಸಮರ್ಥವಾಗಿ ನಿರ್ವಹಿಸಿದವರು ರಾಮಮೂರ್ತಿ.ಇಂಗ್ಲಿಷ್ ಮತ್ತು ಕನ್ನಡ ಭಾಷೆಯಲ್ಲಿ ಪರಿಣಿತರಾದ ಅವರು ಅನೇಕ ಪುಸ್ತಕಗಳನ್ನು ಆಂಗ್ಲಭಾಷೆಗೆ ಅನುವಾದ ಮಾಡಿದ್ದಾರೆ. `ಬುದ್ಧನೊಡನೆ 20 ದಿನಗಳು~ ಎಂಬ ಮೊಳಕಾಲ್ಮುರು ಶ್ರೀನಿವಾಸಮೂರ್ತಿ ಅವರ ಕನ್ನಡ ಪುಸ್ತಕವನ್ನು ಆಂಗ್ಲಭಾಷೆಗೆ ಅನುವಾದ ಮಾಡಿದ್ದು ಪ್ರಿಸಂ ಬುಕ್ ಸಂಸ್ಥೆ ಅದನ್ನು ಪ್ರಕಟಿಸಿದ್ದಾರೆ. ರಾಮಮೂರ್ತಿ ಅವರಿಗೆ ಅಧ್ಯಾತ್ಮ ವಿಚಾರಗಳ ಬಗ್ಗೆ ತಿರುವಣ್ಣಾಮಲೈಯ ರಮಣ ಮಹರ್ಷಿ ಅವರಲ್ಲಿ ಅಪಾರ ಗೌರವವಿದೆ.

ಬೆಂಗಳೂರಿನಿಂದ ಹೊಸಪೇಟೆಗೆ ಬಂದ ನಂತರ ಸ್ಥಳೀಯ ಸಂಸ್ಕೃತಿ, ಪರಂಪರೆ, ವಿಜಯನಗರದ ವೈಭವಕ್ಕೆ ಮನಸೋತರು. ಸ್ಥಳೀಯ ಪ್ರಜ್ಞೆ ಬೆಳೆಸುವಲ್ಲಿ ಮುಂದಾಗಿದ್ದಾರೆ. ಎಚ್.ಸರ್ವೇಶ್ವರ, ಎಚ್. ತುಕಾರಾಂರಾವ್, ಡಾ. ಅಂಬಣ್ಣ, ಚಿಕ್ಕೇನಕೊಪ್ಪ ಚನ್ನವೀರ ಶರಣರ ಸುಹಾಸಿನಿ ಬಳಗ, ಕನ್ನಡ ಕಲಾ ಸಂಘ, ಶಂಕರ ಭಾರತಿ ಸಂಗೀತ ಸಂಘಟನೆ ಜೊತೆ ನಿಕಟ ಸಂಬಂಧ ಬೆಳೆಸಿದ್ದಾರೆ.ಹೊಸಪೇಟೆಯ ಜನರು ಬಿಸಿಲಿಗೆ ಬಸವಳಿಯುವುದಿಲ್ಲ. ಇಲ್ಲಿನ ನೀರು ಮತ್ತು ಮಣ್ಣು ಪರಿಶುದ್ಧವಾಗಿವೆ. ಹೀಗಾಗಿ ಇಲ್ಲಿ ರೋಗ- ರುಜಿನ ಸುಳಿಯುವುದು ಅಪರೂಪ ಎನ್ನುತ್ತಾರೆ ರಾಮಮೂರ್ತಿ.ರಾಮಮೂರ್ತಿ ಅವರು ಅನೇಕ ಪುಸ್ತಕಗಳನ್ನು ರಚಿಸಿದ್ದಾರೆ. ಹಲವನ್ನು ಅನುವಾದ ಮಾಡಿದ್ದಾರೆ. ತಡವಾಗಿ ಬಂದರೂ ನಿವೃತ್ತಿ ವೇತನವನ್ನು ಪಡೆಯುತ್ತಿದ್ದಾರೆ. ತಮ್ಮ ಬಾಳಸಂಗಾತಿ ಸಾವಿತ್ರಮ್ಮ, ಮಕ್ಕಳಾದ ಮಾಳವಿಕಾ, ರಜನಿಕ, ಹಾಗೂ ಚಾರುಲತಾ ಅವರ ಸಹಕಾರವನ್ನು ಮನದುಂಬಿ ನೆನೆಯುತ್ತಾರೆ.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.