ಗುರುವಾರ , ಜೂನ್ 24, 2021
29 °C

ಮಾದರಿ ನೀತಿ ಸಂಹಿತೆ ಉಲ್ಲಂಘನೆ- 10 ಪ್ರಕರಣ ದಾಖಲು ಲೋಕಸಭಾ ಕ್ಷೇತ್ರ: 1,896 ಮತಗಟ್ಟೆ ಸ್ಥಾಪನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೀದರ್: ಬರಲಿರುವ ಲೋಕಸಭಾ ಚುನಾವಣೆಯಲ್ಲಿ ಬೀದರ್ ಲೋಕ­ಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಒಟ್ಟು 1,896 ಮತಗಟ್ಟೆಗಳು ಇರಲಿದ್ದು, ಈ ಪೈಕಿ ಜಿಲ್ಲೆಯಲ್ಲಿ 1,431 ಮತಗಟ್ಟೆಗಳು ಸ್ಥಾಪನೆ ಆಗಲಿವೆ ಎಂದು ಜಿಲ್ಲಾಧಿಕಾರಿ ಡಾ. ಪಿ.ಸಿ. ಜಾಫರ್ ತಿಳಿಸಿದರು.

ಜಿಲ್ಲೆಯ ಬಸವಕಲ್ಯಾಣ ವಿಧಾನ­ಸಭಾ ಕ್ಷೇತ್ರದಲ್ಲಿ 254, ಹುಮನಾ­ಬಾದ್‌ನಲ್ಲಿ 246, ಬೀದರ್ ದಕ್ಷಿಣ­ದಲ್ಲಿ 222, ಬೀದರ್‌ನಲ್ಲಿ 214, ಭಾಲ್ಕಿಯಲ್ಲಿ 252, ಔರಾದ್‌­ನಲ್ಲಿ 243 ಮತ್ತು ಲೋಕಸಭಾ ಕ್ಷೇತ್ರ ವ್ಯಾಪ್ತಿಗೆ ಒಳಪಡುವ ಚಿಂಚೋಳಿಯಲ್ಲಿ 233 ಹಾಗೂ ಆಳಂದ ವಿಧಾನಸಭಾ ಕ್ಷೇತ್ರದಲ್ಲಿ 232 ಮತಗಟ್ಟೆಗಳು ಸ್ಥಾಪನೆ ಆಗಲಿವೆ. ಒಟ್ಟಾರೆ 983 ಸ್ಥಳಗಳಲ್ಲಿ ಈ ಮತಗಟ್ಟೆಗಳು ಇರಲಿವೆ ಎಂದು ಭಾನುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

15,46,­208 ಮತ­ದಾರರು: ಈ ಬಾರಿಯ ಚುನಾ­ವಣೆ­ಯ­ಲ್ಲಿ ಕ್ಷೇತ್ರದಲ್ಲಿ ಒಟ್ಟು 15,­46,­208 ಅರ್ಹ ಮತ­ದಾರರು ಇ­ದ್ದಾರೆ. ಈ ಪೈಕಿ 8,10,401 ಪುರುಷರು ಮತ್ತು 7,35,745 ಮಹಿಳಾ ಮತದಾರರು ಇದ್ದಾರೆ. ಹುಮನಾ­ಬಾ­ದ್ ವಿಧಾ­ನ­ಸಭಾ ಕ್ಷೇತ್ರ­ದಲ್ಲಿ ಅತಿ­ಹೆಚ್ಚು ಅಂದರೆ 2,09,523,  ಚಿ­ಂಚೋ­ಳಿ­ಯ­ಲ್ಲಿ ಅತಿಕಡಿಮೆ ಅಂದರೆ 1,­7­6,­001 ಮತ­ದಾರರಿ­ದ್ದಾರೆ ಎಂದು ಹೇಳಿ­ದರು.

ಇನ್ನುಳಿ­ದಂ­ತೆ, ಬಸವ­ಕಲ್ಯಾಣದಲ್ಲಿ  1,99,303, ಬೀದರ್ ದಕ್ಷಿಣದಲ್ಲಿ 1,80,963, ಬೀದರ್‌ನಲ್ಲಿ 1,87,­845, ಭಾಲ್ಕಿಯಲ್ಲಿ 2,02,943, ಔರಾದ್‌ನಲ್ಲಿ 1,90,513, ಆಳಂದ ವಿಧಾನಸಭಾ ಕ್ಷೇತ್ರದಲ್ಲಿ 1,99,117 ಮತ­­ದಾರರು ಇದ್ದಾರೆ ಎಂದು ವಿವರಿಸಿದರು. 35,520 ಅರ್ಜಿ: ಮತದಾರರ ಪಟ್ಟಿಗೆ ಹೆಸರು ಸೇರ್ಪಡೆಗಾಗಿ 35,520 ಅರ್ಜಿಗಳು ಸಲ್ಲಿಕೆ­ಯಾ­ಗಿವೆ. ಭಾನು­ವಾರ ಕೊನೆಯ ದಿನವಾಗಿದ್ದರಿಂದ ಇನ್ನಷ್ಟು ಅರ್ಜಿಗಳು ಬರುವ ನಿರೀಕ್ಷೆ ಇದೆ ಎಂದು ತಿಳಿಸಿದರು.

19ಕ್ಕೆ ಅಧಿಸೂಚನೆ: ಮಾರ್ಚ್ 19ಕ್ಕೆ ನಾಮಪತ್ರ ಸಲ್ಲಿಕೆ ಆರಂಭ ಆಗು­ವುದರೊಂದಿಗೆ ಚುನಾವಣೆ ಅಧಿಸೂಚನೆ ಜಾರಿಗೆ ಬರಲಿದೆ. ನಾಮಪತ್ರ ಸಲ್ಲಿಸಲು ಮಾ. 26 ಕೊನೆಯ ದಿನವಾಗಿದೆ. ಮಾ.27 ರಂದು ನಾಮಪತ್ರಗಳ ಪರಿಶೀಲನೆ ನಡೆ­ಯಲಿದ್ದು, ನಾಮಪತ್ರ ವಾಪಸು ಪಡೆಯಲು ಮಾ.29 ಅಂತಿಮ ದಿನವಾಗಿದೆ. ಏ. 17 ರ ಬೆಳಿಗ್ಗೆ 7 ರಿಂದ ಸಂಜೆ 6 ರವರೆಗೆ ಮತದಾನ ನಡೆಯಲಿದೆ. ಮೇ 16 ರಂದು ಮತ ಎಣಿಕೆ ನಡೆಯಲಿದೆ ಎಂದು ಹೇಳಿದರು.

ಲೋಕಸಭಾ ಚುನಾವಣೆಗೆ ಬಸವಕಲ್ಯಾಣ ವಿಧಾನಸಭಾ ಕ್ಷೇತ್ರದಲ್ಲಿ ಸಹಾಯಕ ಆಯುಕ್ತರ ಕಚೇರಿ, ಹುಮನಾಬಾದ್ ಕ್ಷೇತ್ರದಲ್ಲಿ ತಹಸೀಲ್ ಕಚೇರಿ, ಬೀದರ್ ದಕ್ಷಿಣ ವಿಧಾನಸಭಾ ಕ್ಷೇತ್ರದಲ್ಲಿ ತಹಶೀಲ್ದಾರ್‌ ಕಚೇರಿ ಸಭಾಂಗಣ, ಬೀದರ್ ವಿಧಾನಸಭಾ ಕ್ಷೇತ್ರದಲ್ಲಿ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿರುವ ಸಹಾಯಕ ಆಯುಕ್ತರ ಕಚೇರಿ, ಭಾಲ್ಕಿ ವಿಧಾನ­ಸಭಾ ಕ್ಷೇತ್ರದಲ್ಲಿ ತಹಶೀಲ್ದಾರ್‌  ಕಚೇರಿ ಮತ್ತು ಔರಾದ್ ವಿಧಾನಸಭಾ ಕ್ಷೇತ್ರದ ತಹಶೀಲ್ದಾರ್‌ ಕಚೇರಿಯಲ್ಲಿ ನಾಮಪತ್ರ ಸಲ್ಲಿಸಬಹುದು ಎಂದು ತಿಳಿಸಿದರು.

ವೀಕ್ಷಕರ ನೇಮಕ: ಚುನಾವಣೆಗಾಗಿ ಚುನಾವಣಾ ಆಯೋಗ ಕೇಂದ್ರ ಜಾಗೃತಿ ವೀಕ್ಷಕರನ್ನು ನೇಮಕ ಮಾಡಿದೆ. ಅಭ್ಯರ್ಥಿ­­ಗಳು ಚುನಾವಣೆಯಲ್ಲಿ ಮಾಡುವ ಖರ್ಚು ವೆಚ್ಚದ ಮೇಲೆ ನಿಗಾ ಇಡಲು ಖರ್ಚು ವೀಕ್ಷಕರನ್ನು ನೇಮಕ ಮಾಡಲಿದ್ದು, ತಾಲ್ಲೂಕಿಗೆ ಒಬ್ಬರಂತೆ ನೋಡಲ್ ಅಧಿಕಾರಿಯನ್ನು ನೇಮಕ ಮಾಡ­ಲಾಗುವುದು.

ಕ್ಷೇತ್ರ­ದಲ್ಲಿ ನಡೆಯಲಿರುವ ಸಭೆ- ಸಮಾರಂಭಗಳ ವಿಡಿಯೊ ಚಿತ್ರೀಕರಣಕ್ಕಾಗಿ ಪ್ರತಿ ವಿಧಾನಸಭಾ ಕ್ಷೇತ್ರಕ್ಕೆ ಒಂದರಂತೆ ವಿಡಿಯೊ ಸರ್ವಿಲೆನ್ ಮತ್ತು ವಿಡಿಯೊ ವೀವಿಂಗ್ ತಂಡಗಳು, ಲೋಕಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ 30 ಫ್ಲೈಯಿಂಗ್ ಸ್ಕ್ವಾಡ್ ತಂಡಗಳು ಇರಲಿವೆ ಎಂದರು.

ಚುನಾವಣೆಗೆ ಸಂಬಂಧಿಸಿದಂತೆ ಸಾರ್ವಜನಿಕರಿಂದ ದೂರುಗಳನ್ನು ಸ್ವೀಕರಿಸಲು ಪ್ರತಿ ವಿಧಾನಸಭಾ ಕ್ಷೇತ್ರದಲ್ಲಿ ಕಂಟ್ರೋಲ್ ರೂಂಗಳನ್ನು ಸ್ಥಾಪಿಸಲಾಗಿದೆ ಎಂದು ತಿಳಿಸಿದರು. 10 ಪ್ರಕರಣ ದಾಖಲು: ಚುನಾವಣೆ­ಯಲ್ಲಿ ಮಾದರಿ ನೀತಿ ಸಂಹಿತೆ ಉಲ್ಲಂಘನೆಗೆ ಸಂಬಂಧಿಸಿದಂತೆ ಈವರೆಗೆ 10 ಪ್ರಕರಣಗಳನ್ನು ದಾಖಲಿಸಲಾಗಿದೆ. ಅಬಕಾರಿ ಅಧಿಕಾರಿಗಳು 21 ದಾಳಿಗಳನ್ನು ನಡೆಸಿದ್ದು, ಇಬ್ಬರನ್ನು ಬಂಧಿಸಲಾಗಿದೆ ಎಂದು ಹೇಳಿದರು.201 ಅತಿ ಸೂಕ್ಷ್ಮ ಮತಗಟ್ಟೆ: ಜಿಲ್ಲೆಯಲ್ಲಿ ಇರುವ 1,431 ಮತಗಟ್ಟೆಗಳ ಪೈಕಿ 201 ಅತಿಸೂಕ್ಷ್ಮ, 343 ಸೂಕ್ಷ್ಮ ಮತ್ತು 887 ಮತ­ಗಟ್ಟೆಗಳನ್ನು ಸಾಮಾನ್ಯ ಮತ­ಗಟ್ಟೆಗಳು ಎಂದು ಗುರುತಿಸಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಸುಧೀರಕುಮಾರ್ ರೆಡ್ಡಿ ತಿಳಿಸಿದರು. ಶಾಂತಿಯುತ ಚುನಾವಣೆಗಾಗಿ ವ್ಯಾಪಕ ಪೊಲೀಸ್ ಬಂದೋಬಸ್ತ್ ಮಾಡ­ಲಾಗುತ್ತಿದೆ. ಸೆಂಟ್ರಲ್ ಪ್ಯಾರಾ ಮಿಲಿ­ಟರಿ ಫೋರ್ಸ್ ಕೂಡ ಬರಲಿದೆ ಎಂದರು.

862 ಪಿಸ್ತೂಲ್‌ಗಳ ಠೇವಣಿ: ಜಿಲ್ಲೆ­ಯಲ್ಲಿ ಲೈಸೆನ್ಸ್ ಪಡೆದು ಬಳಸ­ಲಾಗುತ್ತಿರುವ ಪಿಸ್ತೂಲ್‌ಗಳ ಸಂಖ್ಯೆ 938 ಆಗಿದ್ದು, ಈ ಪೈಕಿ ಈಗಾಗಲೇ 862 ಪಿಸ್ತೂಲ್‌ಗಳನ್ನು ಠಾಣೆಗಳಲ್ಲಿ ಠೇವಣಿ ಇರಿಸಲಾಗಿದೆ ಎಂದರು.

ಮತದಾನ ಹೆಚ್ಚಳಕ್ಕೆ ಕ್ರಮ: ಜಿಲ್ಲೆಯಲ್ಲಿ ಮತದಾನ ಪ್ರಮಾಣ ಹೆಚ್ಚಿಸಲು 24 ಇಲಾಖೆಗಳ ಮೂಲಕ ಜಾಗೃತಿ ಕಾರ್ಯಕ್ರಮ ನಡೆಸಲಾಗುತ್ತಿದೆ ಎಂದು ಜಿಲ್ಲಾ ಪಂಚಾಯಿತಿ ಸಿಇಒ ಉಜ್ವಲ್‌­­ಕುಮಾರ್ ಘೋಷ್ ತಿಳಿಸಿದರು.  ಉಪ ಅರಣ್ಯ ಸಂರಕ್ಷಣಾಧಿಕಾರಿ ಸುನಿಲ್ ಪನ್ವಾರ್ ಇದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.