ಶನಿವಾರ, ಮೇ 28, 2022
26 °C
ಕಾರ್ಯಾಗಾರ ಘಟಕಕ್ಕೆ ಶಂಕುಸ್ಥಾಪನೆ ನೆರವೇರಿಸಿದ ಸಚಿವ ಎಚ್.ಆಂಜನೇಯ ಹೇಳಿಕೆ

`ಮಾದರಿ ಮಂಡಕ್ಕಿ ಭಟ್ಟಿ ಬಡಾವಣೆಯಾಗಲಿ'

ಪ್ರಜಾವಾಣಿ Updated:

ಅಕ್ಷರ ಗಾತ್ರ : | |

ಚಿತ್ರದುರ್ಗ: `ನಗರದಲ್ಲಿ ನಿರ್ಮಾಣ ವಾಗಲಿರುವ ಮಂಡಕ್ಕಿ ಭಟ್ಟಿ ಕಾರ್ಯಾಗಾರ ಘಟಕ ಹಾಗೂ ಬಡಾವಣೆ ರಾಜ್ಯದ ಉಳಿದ ಜಿಲ್ಲೆಗಳಿಗೆ ಮಾದರಿಯಾಗಬೇಕು' ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಚ್.ಆಂಜನೇಯ ತಿಳಿಸಿದರು.ನಗರದ ಹಳೇ ಬೆಂಗಳೂರು ರಸ್ತೆಯಲ್ಲಿನ ಮಾರಮ್ಮ ದೇವಾಲಯದ ಸಮೀಪ ನೂತನವಾಗಿ ನಿರ್ಮಾಣವಾಗಲಿರುವ `ಮಂಡಕ್ಕಿ ಭಟ್ಟಿ ಕಾರ್ಯಾಗಾರ ಘಟಕ'ಕ್ಕೆ ಬುಧವಾರ ಶಂಕುಸ್ಥಾಪನೆ ನೆರವೇರಿಸಿ ಅವರು ಮಾತನಾಡಿದರು.ಮಂಡಕ್ಕಿ ಭಟ್ಟಿಗಳು ನಗರದ ಹೊಳಲ್ಕೆರೆ ರಸ್ತೆಯಲ್ಲಿದ್ದಾಗ ಉರುವಲಿಗಾಗಿ ಟೈರ್‌ಗಳನ್ನು ಬಳಸಿ, ಸುತ್ತಲಿನ ಪರಿಸರ ಮಲಿನಗೊಳ್ಳುತ್ತಿತ್ತು. ಸ್ವತಃ ಜಿಲ್ಲಾಧಿಕಾರಿ ಅವರೇ ಅದನ್ನು ಖುದ್ದಾಗಿ ಪರಿಶೀಲಿಸಿ, ನಗರದ ಹೊರ ವಲಯದಲ್ಲಿ ಅತ್ಯಾಧುನಿಕ ಸೌಲಭ್ಯಗಳೊಂದಿಗೆ ಮಂಡಕ್ಕಿ ಕಾರ್ಯಾಗಾರ ಘಟಕ ನಿರ್ಮಾಣಕ್ಕೆ ಕ್ರಮ ಕೈಗೊಂಡಿದ್ದಾರೆ' ಎಂದು ಹೇಳಿದರು.`ಖಾರ ಮಂಡಕ್ಕಿ ಇಲ್ಲಿನ ಸಾಂಪ್ರದಾಯಿಕ ಖಾದ್ಯ. ರುಚಿಕಟ್ಟಾದ ಮಂಡಕ್ಕಿ ಕೊಡುವವರ ಬದುಕು ಉತ್ತಮವಾಗಿರಬೇಕು ಎಂಬ ಉದ್ದೇಶದೊಂದಿಗೆ ಸುಸಜ್ಜಿತ ಕಾರ್ಯಾಗಾರ ಘಟಕ ನಿರ್ಮಿಸಲಾಗುತ್ತಿದೆ. ಇದರಲ್ಲಿ ಕುಡಿಯುವ ನೀರು, ಭತ್ತ ಒಣಗಿಸಲು ಕಣದ ವ್ಯವಸ್ಥೆ ಮಾಡಲಾಗುತ್ತದೆ' ಎಂದರು.72 ಜನರು ಮಂಡಕ್ಕಿ ಭಟ್ಟಿಯನ್ನು ಅವಲಂಬಿಸಿದ್ದಾರೆ. ಇದೇ ಉದ್ಯಮವನ್ನೆ ನಂಬಿಕೊಂಡು ನೂರಾರು ಕಾರ್ಮಿಕರು ಬದುಕುತ್ತಿದ್ದಾರೆ. ಇವರಿಗೆ ಅಗತ್ಯವಾದ ಆರ್ಥಿಕ ಸಹಾಯವನ್ನು ಅಲ್ಪಸಂಖ್ಯಾತರ ನಿಗಮದಿಂದ ಕಲ್ಪಿಸಲಾಗುತ್ತದೆ ಎಂದು ಭರವಸೆ ನೀಡಿದರು.ಶಾಸಕ ಜಿ.ಎಚ್.ತಿಪ್ಪಾರೆಡ್ಡಿ ಮಾತನಾಡಿ, `ಹತ್ತು ವರ್ಷಗಳಿಂದ ಮಂಡಕ್ಕಿ ಭಟ್ಟಿ ಸ್ಥಳಾಂತರ ಕುರಿತು ಚರ್ಚೆಯಾಗುತ್ತಿದೆ. ಜಿಲ್ಲಾಡಳಿತ ಇಲ್ಲಿನ ಸಮಸ್ಯೆಯನ್ನು ಅರಿತು ಸ್ಥಳಾಂತರಕ್ಕೆ ಕ್ರಮ ಕೈಗೊಂಡಿದೆ. ಸುಮಾರು ರೂ1 ಕೋಟಿ ವೆಚ್ಚದಲ್ಲಿ ನೂತನ ಕಾರ್ಯಾಗಾರ ಘಟಕ ನಿರ್ಮಾಣವಾಗಲಿದೆ ಎಂದರು.`ಈ ಹಿಂದೆ ಹಳೇ ಬೆಂಗಳೂರು ರಸ್ತೆ ಅಭಿವೃದ್ಧಿಗಾಗಿ ಸರ್ಕಾರಕ್ಕೆ ರೂ 5 ಕೋಟಿ ಪ್ರಸ್ತಾವ  ಸಲ್ಲಿಸಿದ್ದೆ. ಈ ರಸ್ತೆ ಅಭಿವೃದ್ಧಿಯಾದರೆ ಮಂಡಕ್ಕಿ ಭಟ್ಟಿಯವರಿಗಲ್ಲದೇ, ಸುತ್ತಮುತ್ತಲಿನ ಕುಂಚಿಗನಾಳ್, ಇಂಗಳದಾಳ್, ದೊಡ್ಡಸಿದ್ದವ್ವನಹಳ್ಳಿ ಸೇರಿದಂತೆ ಅನೇಕ ಹಳ್ಳಿಗರಿಗೆ ಉಪಯೋಗವಾಗುತ್ತದೆ. ಆಶ್ರಯ, ಅಂಬೇಡ್ಕರ್‌ನಂತಹ ಯೋಜನೆಗಳಲ್ಲಿ ನಿವೇಶನವನ್ನೂ ನೀಡಬಹುದು. ಇದರಿಂದ ನಗರವೂ ವಿಸ್ತಾರಗೊಳ್ಳುತ್ತದೆ. ಎಲ್ಲದಕ್ಕಿಂತ ಮುಖ್ಯವಾಗಿ ರಾಷ್ಟ್ರೀಯ ಹೆದ್ದಾರಿಯ ಸಂಚಾರ ದಟ್ಟಣೆ ತಡೆಗಟ್ಟಬಹುದು' ಎಂದು ಸಲಹೆ ನೀಡಿದರು. ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕ ಕೆ.ಪಿ.ಪರಮೇಶ್ವರಪ್ಪ ಸ್ವಾಗತಿಸಿದರು.ಜಿಲ್ಲಾ ಪಂಚಾಯ್ತಿ ಅಧ್ಯಕ್ಷೆ ಇಂದಿರಾ ಕಿರಣ್, ಜಿ.ಪಂ ಸದಸ್ಯ ರಮೇಶ್, ಜಿಲ್ಲಾಧಿಕಾರಿ ವಿ.ಪಿ.ಇಕ್ಕೇರಿ, ಜಿ.ಪಂ ಸಿಇಒ ಕೆ.ಎಂ.ನಾರಾಯಣ ಸ್ವಾಮಿ, ಜೈ ಭಾರತ್ ಮಂಡಕ್ಕಿ ಭಟ್ಟಿ ಸಂಘದ ಗೌರವಾಧ್ಯಕ್ಷ ತಾಜ್‌ಪೀರ್, ಪದಾಧಿಕಾರಿಗಳಾದ ಸೈಯದ್ ಹುಸೇನ್, ಖಾಸಿಂ ಆಲಿ, ಮಹಮದ್ ನೂರುಲ್ಲಾ, ಅನ್ವರ್ ಸಾಬ್, ವಕ್ಫ್ ಮಂಡಳಿ ಸದಸ್ಯರಾದ ಇಸ್ಮಾತ್ ಉಲ್ಲಾ ಖಾನ್ ಹಾಗೂ ಮತ್ತಿತರರು ಉಪಸ್ಥಿತರಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.