`ಮಾದರಿ ಹಾಸ್ಟೆಲ್'ಗಳ ನಿರ್ಮಾಣಕ್ಕೆ ಸಿದ್ಧತೆ
ದಾವಣಗೆರೆ: ಹಿಂದುಳಿದ ವರ್ಗ, ಪರಿಶಿಷ್ಟ ಜಾತಿ ಮತ್ತು ಪಂಗಡ ಹಾಗೂ ಅಲ್ಪಸಂಖ್ಯಾತ ವಿದ್ಯಾರ್ಥಿಗಳಿಗೆ ವಸತಿ ಸೌಲಭ್ಯ ಕಲ್ಪಿಸುವ ಹಾಸ್ಟೆಲ್ಗಳಿಗೆ `ಆಧುನಿಕತೆ ಸ್ಪರ್ಶ' ನೀಡಲು ಸಮಾಜ ಕಲ್ಯಾಣ ಇಲಾಖೆ ಮುಂದಾಗಿದೆ. ಪ್ರತಿ ಜಿಲ್ಲೆಯಲ್ಲಿಯೂ ನಿರ್ಮಿತಿ ಕೇಂದ್ರದ ವತಿಯಿಂದ `ಮಾದರಿ ಹಾಸ್ಟೆಲ್'ಗಳನ್ನು ನಿರ್ಮಿಸಲು ಸಿದ್ಧತೆ ನಡೆಸಲಾಗಿದೆ.
ಸಮಾಜ ಕಲ್ಯಾಣ ಇಲಾಖೆ ವತಿಯಿಂದ ನಡೆಸಲಾಗುತ್ತಿರುವ ವಿದ್ಯಾರ್ಥಿನಿಲಯಗಳಿಗೆ ನಿರ್ಮಿತಿ ಕೇಂದ್ರದ ವತಿಯಿಂದ ಸಿದ್ಧಪಡಿಸಿರುವ ಮಾದರಿ ನಕ್ಷೆ ಹಾಗೂ ಅಂದಾಜು ಪಟ್ಟಿಯಂತೆ ಕಟ್ಟಡಗಳನ್ನು ನಿರ್ಮಿಸಲಾಗುವುದು. ಇದಕ್ಕೆ ಈಗಾಗಲೇ ಸರ್ಕಾರದಿಂದ ಅನುಮೋದನೆ ದೊರೆತಿದೆ. ನಿವೇಶನಗಳ ದಾಖಲಾತಿಗಳೊಂದಿಗೆ ಆಡಳಿತಾತ್ಮಕ ಅನುಮೋದನೆ ಪಡೆಯಲು, ಸ್ಥಳೀಯವಾಗಿ ಇರುವ ದರದ ಆಧಾರದ ಮೇಲೆ ಸ್ವಂತ ಕಟ್ಟಡ ನಿರ್ಮಾಣ ಮಾಡಲು ಅಂದಾಜುಪಟ್ಟಿ ಸಲ್ಲಿಸುವಂತೆ ಸಮಾಜ ಕಲ್ಯಾಣ ಇಲಾಖೆ ಆಯುಕ್ತರು ಜಿಲ್ಲಾ ಸಮಾಜ ಕಲ್ಯಾಣಾಧಿಕಾರಿಗಳಿಗೆ ಈಚೆಗೆ ಹೊರಡಿಸಿರುವ ಸುತ್ತೋಲೆಯಲ್ಲಿ ತಿಳಿಸಿದ್ದಾರೆ.
ಏನೇನು ವ್ಯವಸ್ಥೆ ಇರಲಿದೆ?
ಸರ್ಕಾರಿ ಹಾಸ್ಟೆಲ್ಗಳು ಎಂದ ಕೂಡಲೇ ಮೂಗು ಮುರಿಯುವರೇ ಹೆಚ್ಚು. ಇದನ್ನು ನಿವಾರಿಸಿ, ಅತ್ಯುತ್ತಮ ಸೌಲಭ್ಯ ಕಲ್ಪಿಸುವ ನಿಟ್ಟಿನಲ್ಲಿ ಹಾಸ್ಟೆಲ್ಗಳಿಗೆ ಅತ್ಯಾಧುನಿಕತೆಯ ಸ್ಪರ್ಶ ನೀಡಲಾಗುತ್ತಿದೆ. ಉತ್ತಮ ವಿನ್ಯಾಸದ ಒಳಾಂಗಣ ನಿರ್ಮಾಣ ಮಾಡಲಾಗುವುದು. ಸುಸಜ್ಜಿತ ಅಡುಗೆ ಕೋಣೆ, ಸ್ಟೋರ್ ರೂಂ (ಆಹಾರ ಪದಾರ್ಥ ಇಡುವ ಕೊಠಡಿ), ಊಟದ ಸಭಾಂಗಣ, ಬಟ್ಟೆ ತೊಳೆಯುವ ಜಾಗ, ಮಲಗುವ ಕೋಣೆ, ವಿದ್ಯಾರ್ಥಿಗಳು ತಮ್ಮ ಪುಸ್ತಕ, ಬಟ್ಟೆಬರೆ ಮೊದಲಾದವುಗಳನ್ನು ಇಟ್ಟುಕೊಳ್ಳಲು ಉತ್ತಮವಾದ ಕಪಾಟುಗಳು, ವಾರ್ಡ್ನ ಕೊಠಡಿ, ಕಂಪ್ಯೂಟರ್ ಕೊಠಡಿ, ಅಂಗವಿಕಲರಿಗೆ ರಾಂಪ್, ಸಂದರ್ಶಕರ ಭೇಟಿಗೆ ಜಾಗ...
ಮೊದಲಾದ ವ್ಯವಸ್ಥೆಯನ್ನು `ಮಾದರಿ ಹಾಸ್ಟೆಲ್'ಗಳು ಒಳಗೊಂಡಿರಲಿವೆ. ವಿದ್ಯಾರ್ಥಿಗಳ ಸಂಖ್ಯೆಗೆ ಅನುಗುಣವಾಗಿ ಹಾಸ್ಟೆಲ್ಗಳನ್ನು ನಿರ್ಮಿಸಲು ಅಂದಾಜುಪಟ್ಟಿ ಸಿದ್ಧಪಡಿಸಲಾಗಿದೆ ಎಂದು ಇಲಾಖೆಯ ಹಿರಿಯ ಅಧಿಕಾರಿಯೊಬ್ಬರು `ಪ್ರಜಾವಾಣಿ'ಗೆ ಮಾಹಿತಿ ನೀಡಿದರು.
ಬಹುತೇಕ ಜಿಲ್ಲೆಗಳಲ್ಲಿ ನಿವೇಶನದ ಲಭ್ಯತೆ ಇಲ್ಲ. ಇದರಿಂದಾಗಿ ಬಾಡಿಗೆ ಕಟ್ಟಡಗಳಲ್ಲಿ ಹಾಸ್ಟೆಲ್ಗಳು ಕಾರ್ಯ ನಿರ್ವಹಿಸುತ್ತಿವೆ. ಸ್ವಂತ ಕಟ್ಟಡಗಳನ್ನು ಹೊಂದಬೇಕು ಎಂದರೆ, ಸ್ವಂತ ನಿವೇಶನ ಇರಬೇಕು. ಹೀಗಾಗಿ, ಮೊದಲ ಹಂತದಲ್ಲಿ ನಿವೇಶನಗಳ ಲಭ್ಯತೆ ಇರುವ ಹಾಸ್ಟೆಲ್ಗಳಿಗೆ ಹೊಸ ಕಟ್ಟಡಗಳನ್ನು ಮಾದರಿಯಾಗಿ ನಿರ್ಮಿಸಿಕೊಡಲಾಗುವುದು. ಉಳಿದವುಗಳಿಗೆ ಹಂತ ಹಂತವಾಗಿ ನಿರ್ಮಾಣ ಕಾರ್ಯ ನಡೆಯಲಿದೆ.
ಬಡ ಪ್ರತಿಭಾವಂತ ವಿದ್ಯಾರ್ಥಿಗಳ ಕಲಿಕೆಗೆ ಉತ್ತಮ ವಾತಾವರಣ ಕಲ್ಪಿಸಿಕೊಡುವುದು ಇಲಾಖೆಯ ಗುರಿ ಎನ್ನುತ್ತಾರೆ ಅವರು. ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಚಿತ್ರದುರ್ಗ, ಕೋಲಾರ, ಶಿವಮೊಗ್ಗ, ದಾವಣಗೆರೆ, ಚಿಕ್ಕಬಳ್ಳಾಪುರ, ಮೈಸೂರು, ಹಾಸನ, ಚಿಕ್ಕಮಗಳೂರು, ಕೊಡಗು, ಬೆಳಗಾವಿ, ವಿಜಾಪುರ, ದಕ್ಷಿಣ ಕನ್ನಡ, ಹಾವೇರಿ, ಉತ್ತರ ಕನ್ನಡ, ಧಾರವಾಡ, ಗದಗ, ರಾಯಚೂರು, ಗುಲ್ಬರ್ಗ, ಯಾದಗಿರಿ, ಕೊಪ್ಪಳ, ಬಳ್ಳಾರಿ, ಬೀದರ್ ಜಿಲ್ಲೆಗಳಲ್ಲಿ ಒಟ್ಟು 69 ಪರಿಶಿಷ್ಟ ಜಾತಿಯ ಮೆಟ್ರಿಕ್ಪೂರ್ವ, ಮೆಟ್ರಿಕ್ ನಂತರದ ವಿದ್ಯಾರ್ಥಿನಿಲಯಗಳ ಪೈಕಿ, ಬಹುತೇಕ ವಿದ್ಯಾರ್ಥಿನಿಲಯಗಳಿಗೆ ನಿವೇಶನ ಲಭ್ಯತೆ ಇಲ್ಲ.
ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.