ಮಾದಾಪಟ್ಟಣದಲ್ಲಿ ಬಾನಾಮತಿ ಶಂಕೆ

7

ಮಾದಾಪಟ್ಟಣದಲ್ಲಿ ಬಾನಾಮತಿ ಶಂಕೆ

Published:
Updated:

ಗುಬ್ಬಿ: 15 ಹುಲ್ಲಿನ ಬಣವೆ ಹಾಗೂ ಮೂರು ವಾಸದ ಮನೆ ಬೆಂಕಿಗೆ ಆಹುತಿಯಾಗಿದ್ದು, ಈಗಲೂ ದಿನಕ್ಕೆ ಒಮ್ಮೆಯಾದರೂ ಒಂದು ಮನೆಯಲ್ಲಿ ಬೆಂಕಿ ಕಾಣಿಸಿಕೊಳ್ಳುತ್ತಿರುವ ತಾಲ್ಲೂಕಿನ ಕಡಬ ಹೋಬಳಿ ಮಾದಾಪಟ್ಟಣ ಗ್ರಾಮಸ್ಥರಲ್ಲಿ ಬಾನಾಮತಿ ಶಂಕೆ ಮೂಡಿದ್ದು, ಗ್ರಾಮದಲ್ಲೆಡೆ ಭಯ, ಆತಂಕದ ವಾತಾವರಣ ಸೃಷ್ಟಿಯಾಗಿದೆ.ಕಳೆದ ಮೂರು ತಿಂಗಳಿನಿಂದ ಮುಂಜಾನೆ 7ರ ನಂತರದಲ್ಲಿ ಕಾಣಿಸಿಕೊಳ್ಳುವ ಬೆಂಕಿ ಸಂಜೆ 5ರ ನಂತರ ಕಾಣಿಸಿಕೊಳ್ಳುವುದಿಲ್ಲ ಎನ್ನುವ ಗ್ರಾಮಸ್ಥರು ಗ್ರಾಮದಲ್ಲಿ ಯಾವುದೇ ವೈಯಕ್ತಿಕ ದ್ವೇಷ ಅಸೂಯೆ ಕಾಣಬರುವುದಿಲ್ಲ. ಯಾರೂ ಕಿಡಿಗೇಡಿಗಳ ಕೃತ್ಯ ಎಂದು ಭಾವಿಸುವ ಆಗಿಲ್ಲ. ಈ ಪ್ರಕರಣಗಳು ಸಾಕಷ್ಟು ಗೊಂದಲ, ಆಶ್ಚರ್ಯ ಮೂಡಿಸಿದಷ್ಟೇ ಭಯ-ಭೀತಿ ಹುಟ್ಟಿಸಿದೆ ಎನ್ನುತ್ತಾರೆ.

ಕಡಬ ಹಾಗೂ ಪೆದ್ದನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ವಿಭಾಗವಾದ 80 ಮನೆಗಳ ಈ ಗ್ರಾಮ ತುರುವೇಕೆರೆ ಮತ್ತು ಗುಬ್ಬಿ ವಿಧಾನಸಭಾ ಕ್ಷೇತ್ರಗಳಿಗೆ ಹಂಚಿ ಹೋಗಿದೆ. 450 ಮಂದಿ ವಾಸಿಸುವ ಇಲ್ಲಿ ನಡೆಯುತ್ತಿರುವ ವಿಚಿತ್ರ ಘಟನೆ ಬಾನಾಮತಿ ಕೃತ್ಯ ಎಂಬ ಭಾವನೆ ಗ್ರಾಮಸ್ಥರ ಮನದಲ್ಲಿ ಅಗಾಧವಾಗಿ ಬೇರೂರಿದೆ.ದೈವ ಭಕ್ತರಾದ ಜನರು ಗ್ರಾಮದೇವತೆ ದಂಡಿನ ಮಾರಮ್ಮ ದೇವಿಯಲ್ಲಿ ಪ್ರಾರ್ಥನೆ ಸಲ್ಲಿಸಿ 48 ದಿನಗಳ ಕಾಲ ಹೋಮಹವನಾದಿ ಧಾರ್ಮಿಕ ಕಾರ್ಯ ನಡೆಸಿದ್ದರು. ಇದಾದ ನಂತರವೂ ಮತ್ತೆ ಮನೆಯಲ್ಲಿರುವ ಬಟ್ಟೆ, ಮರದ ಕಪಾಟುಗಳಿಗೆ ಇದ್ದಕ್ಕಿದ್ದ ಹಾಗೇ ಹತ್ತಿಕೊಂಡ ಬೆಂಕಿ ಗ್ರಾಮಸ್ಥರಲ್ಲಿ ಮತ್ತಷ್ಟು ಜೀವಭಯ ಮೂಡಿಸಿದೆ. ಈ ಕಾರಣ ಗ್ರಾಮವನ್ನೇ ತೊರೆಯುವ ನಿರ್ಧಾರ ಮಾಡಿರುವುದಾಗಿ ಮನೆ ಕಳೆದುಕೊಂಡ ರಾಮಕೃಷ್ಣಯ್ಯ ಎಂಬುವರು ತಮ್ಮ ನೋವು ಹಂಚಿಕೊಂಡರು.ಆಕಸ್ಮಿಕ ಬೆಂಕಿ ಬಗ್ಗೆ ತಾಲ್ಲೂಕು ಆಡಳಿತ ಹಾಗೂ ಪೊಲೀಸ್ ಇಲಾಖೆಗೆ ದೂರು ಸಲ್ಲಿಸಲಾಗಿದೆ. ಆದರೂ ಇದುವರೆವಿಗೂ ಯಾವ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿಲ್ಲ ಎಂದು ದೂರುವ ಗ್ರಾಮಸ್ಥರು ಹುಲ್ಲಿನ ಬಣವೆಗೆ ಬಿದ್ದ ಬೆಂಕಿ ನಂದಿಸುವುದರಲ್ಲಿ ಮತ್ತೊಂದು ಕಡೆ ಬೆಂಕಿ ಕಾಣಿಸಿಕೊಂಡ ವಿಸ್ಮಯವನ್ನು ವಿವರಿಸುತ್ತಾರೆ. ಈ ಘಟನೆ ಸಂದರ್ಭದಲ್ಲಿ ಸ್ಥಳದಲ್ಲಿದ್ದ ಪೊಲೀಸರು ಸಹ ಮೂಕವಿಸ್ಮಿತರಾದರು.ಮಾದಾಪಟ್ಟಣ ಗ್ರಾಮದ ಗೇಟ್ ಬಳಿಯ ಸುಮಾರು 5 ಎಕರೆ ಪ್ರದೇಶದಲ್ಲಿ ಜರುಗುತ್ತಿರುವ ಆತಂಕಕಾರಿ ಘಟನೆ ಹಿನ್ನೆಲೆಯಲ್ಲಿ ವೈಜ್ಞಾನಿಕ ಕಾರಣಗಳು ಇರಬಹುದು ಎನ್ನುವ ಕೆಲವು ಪ್ರಜ್ಞಾವಂತ ಯುವಕರು ಜನರಲ್ಲಿ ಮೂಡಿರುವ ಭೀತಿ ನಿವಾರಿಸಲು ಪರಿಸರ ತಜ್ಞರು, ವಿಜ್ಞಾನಿಗಳನ್ನು ಕರೆ ತಂದು, ವಾತಾವರಣದ ಪರಿಶೀಲನೆ ನಡೆಸಲು ತಾಲ್ಲೂಕು ಆಡಳಿತ ಮುಂದಾಗಬೇಕು ಎಂದು ಒತ್ತಾಯಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry