ಮಾದಿಗರಿಗೆ ಪ್ರತ್ಯೇಕ ಮೀಸಲಾತಿ
ಬಸವಕಲ್ಯಾಣ: ಮಾದಿಗ ಸಮಾಜದ ಅಭಿವೃದ್ಧಿಗೆ ಪ್ರತ್ಯೇಕ ಮೀಸಲಾತಿ ಅತ್ಯವಶ್ಯಕವಾಗಿದೆ. ಆದ್ದರಿಂದ ನ್ಯಾಯಮೂರ್ತಿ ಸದಾಶಿವ ಆಯೋಗದ ವರದಿಯನ್ನು ಸರ್ಕಾರ ಶೀಘ್ರ ಜಾರಿಗೊಳಿಸಬೇಕು ಎಂದು ಮಾದಿಗ ಮೀಸಲಾತಿ ಹೋರಾಟ ಸಮಿತಿ ಜಿಲ್ಲಾ ಕಾರ್ಯಾಧ್ಯಕ್ಷ ಅರ್ಜುನ ಕನಕ ಒತ್ತಾಯಿಸಿದರು.
ಆದಿ ಜಾಂಬವ ಮಾದಿಗ ಸಮಾಜ ಸಂಘ ಮತ್ತು ಮಾದಿಗ ಮೀಸಲಾತಿ ಹೋರಾಟ ಸಮಿತಿಯಿಂದ ಸದಾಶಿವ ಆಯೋಗದ ವರದಿ ಜಾರಿಗೊಳಿಸಲು ಆಗ್ರಹಿಸಿ ಗುರುವಾರ ಇಲ್ಲಿ ಹಮ್ಮಿಕೊಂಡ ಜಿಲ್ಲಾ ಮಟ್ಟದ ತಮಟೆ ಚಳವಳಿಯಲ್ಲಿ ಮಾತನಾಡಿದರು.
ಸಂವಿಧಾನದ ಪ್ರಕಾರ ಪರಿಶಿಷ್ಟ ಜಾತಿಯವರಿಗೆ ಶೇ 18ರಷ್ಟು ಸೌಲಭ್ಯಗಳನ್ನು ಒದಗಿಸಿದ್ದರೂ ಕೆಲವರು ಮಾತ್ರ ಅದರ ಲಾಭ ಪಡೆದುಕೊಳ್ಳುತ್ತಿದ್ದಾರೆ. ಆದ್ದರಿಂದ ಎಲ್ಲ ರೀತಿಯಿಂದಲೂ ಹಿಂದುಳಿದಿರುವ ಮಾದಿಗ ಸಮಾಜಕ್ಕೆ ಅನ್ಯಾಯ ಆಗುತ್ತಿದೆ ಎಂದರು.ಸದಾಶಿವ ಆಯೋಗದ ವರದಿ ಜಾರಿಗೆ ತೊಂದರೆ ಏನಿದೆ ಎಂದು ಪ್ರಶ್ನಿಸಿದರು.
ಹೋರಾಟ ಸಮಿತಿ ಜಿಲ್ಲಾಧ್ಯಕ್ಷ ರಾಜೀವ ಕಡ್ಯಾಳ, ಮುಂದೆ ಬರಲು ಪ್ರತ್ಯೇಕ ಮೀಸಲಾತಿ ಬೇಕಾಗಿದೆ. ಆದ್ದರಿಂದ ರಾಜ್ಯ ಸರ್ಕಾರ ಸದಾಶಿವ ಆಯೋಗದ ವರದಿಯನ್ನು ವಿಧಾನಸೌಧದಲ್ಲಿ ಮಂಡಿಸಿ ಕೇಂದ್ರ ಸರ್ಕಾರಕ್ಕೆ ಶಿಫಾರಸು ಕಳುಹಿಸಬೇಕು ಎಂದು ಆಗ್ರಹಿಸಿದರು.
ಸಮಿತಿ ರಾಜ್ಯಾಧ್ಯಕ್ಷ ಎಚ್.ಹಣಮಂತಪ್ಪ ಮಾತನಾಡಿ ಪ್ರತ್ಯೇಕ ಮೀಸಲಾತಿ ಕೊಡದಿದ್ದರೆ ರಾಜ್ಯಾದ್ಯಂತ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಸಿದರು. ಶರಣೆ ಚಿತ್ರಮ್ಮತಾಯಿ, ಪ್ರಭು ತಾಳಮಡಗಿ, ಎಂ.ಟಿ.ಕಟ್ಟಿಮನಿ, ಮಾಣಿಕಪ್ಪ ಮೇಟಿಕಾರ್ ಮಾತನಾಡಿದರು. ಡಿಂಗ್ರಿ ನಾಗಣ್ಣ, ರಾಜೀವ ಮರ್ತಣ್ಣ ಸಮಾಜ ಜಾಗೃತಿ ಗೀತೆ ಹಾಡಿದರು.
ಆದಿ ಜಾಂಬವ ಮಾದಿಗ ಸಮಾಜ ಸಂಘದ ಅಧ್ಯಕ್ಷ ಯುವರಾಜ ಭೆಂಡೆ, ಮೀಸಲಾತಿ ಹೋರಾಟ ಸಮಿತಿ ತಾಲ್ಲೂಕು ಅಧ್ಯಕ್ಷ ಅಶೋಕ ಸಂಗನೂರೆ, ದತ್ತು ಗೋರಾ, ತಾಪಂ ಅಧ್ಯಕ್ಷ ಗುಂಡುರೆಡ್ಡಿ, ಪ್ರಮುಖರಾದ ಶಾಮ ನಾಟಿಕಾರ್ ಗುಲ್ಬರ್ಗ, ಚಂದ್ರಕಾಂತ ಕಟ್ಟಿಮನಿ, ಸೂರ್ಯಕಾಂತ ಮದಕಟ್ಟಿ, ಶಿವಶರಣಪ್ಪ ಹಿರೋಳೆ, ನೀಲಕಂಠ ಭೆಂಡೆ, ಮಾಧವರಾವ ಡಾಂಗೆ, ದತ್ತು ಭೆಂಡೆ, ಘಾಳೆಪ್ಪ ಮುಜನಾಯಕ, ವಿಜಯಕುಮಾರ ಭೆಂಡೆ, ತುಕಾರಾಮ ರಾಸೂರೆ, ಹರಿ ಗೋಖಲೆ, ಚಂದ್ರಕಾಂತ ತೊಗಲೂರ ಪಾಲ್ಗೊಂಡಿದ್ದರು.
ಡಾ.ಮಾರುತಿ ಪೂಜಾರಿ ಮನವಿ ಪತ್ರ ಓದಿ ತಹಸೀಲ್ದಾರ ಶಿವರಾಜ ಹಲಬರ್ಗೆ ಅವರಿಗೆ ಸಲ್ಲಿಸಿದರು. ಡಾ.ಪ್ರಹ್ಲಾದ ಚೆಂಗಟೆ ನಿರೂಪಿಸಿದರು. ಇದಕ್ಕೂ ಮೊದಲು ಗಾಂಧಿ ವೃತ್ತದಿಂದ ಹಳೆಯ ತಹಸೀಲ ಕಚೇರಿವರೆಗೆ ತಮಟೆ ಬಾರಿಸುತ್ತ ಪ್ರತಿಭಟನಾ ಮೆರವಣಿಗೆ ನಡೆಸಲಾಯಿತು.
ವಿವಿಧೆಡೆಯಿಂದ ಆಗಮಿಸಿದ್ದ ಹಲಿಗೆಯವರು ಪ್ರತಿಭಟನಾ ಮೆರವಣಿಗೆಯುದ್ದಕ್ಕೂ ಕಿವಿಗಡಚ್ಚಿಕ್ಕುವಂತೆ ಅವುಗಳನ್ನು ಬಾರಿಸಿದರು. ಕೆಂಪು ಧ್ವಜಗಳನ್ನು ಹಿಡಿದ ಯುವಕರು ಮತ್ತು ನೂರಾರು ಮಹಿಳೆಯರು ಒಳಗೊಂಡು ಅನೇಕ ಜನರು ಭಾಗವಹಿಸಿದ್ದರು.
ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.