ಮಾದಿಗ ದಂಡೋರಾ: ಅನಿರ್ದಿಷ್ಟ ಸತ್ಯಾಗ್ರಹ ನಾಳೆ

7

ಮಾದಿಗ ದಂಡೋರಾ: ಅನಿರ್ದಿಷ್ಟ ಸತ್ಯಾಗ್ರಹ ನಾಳೆ

Published:
Updated:

ರಾಯಚೂರು: ರಾಯಚೂರು ತಾಲ್ಲೂಕು ಗಾಣಧಾಳ ಗ್ರಾಮದಲ್ಲಿ ಅಪ್ರಾಪ್ತ ಬಾಲಕಿಯ ಮೇಲೆ ಅತ್ಯಾಚಾರವೆಸಗಿದ ಪ್ರಕರಣದ ಬಗ್ಗೆ ಸಿಒಡಿ ತನಿಖೆ ನಡೆಸಬೇಕು ಹಾಗೂ ಆರೋಪಿಗಳನ್ನು ಗಡಿಪಾರು ಮಾಡಬೇಕು ಎಂದು ಒತ್ತಾಯಿಸಿ ಇದೇ 7ರಂದು ಬೆಳಿಗ್ಗೆ 11ಗಂಟೆಗೆ ಜಿಲ್ಲಾಧಿಕಾರಿಗಳ ಕಚೇರಿ ಎದುರು ಮಾದಿಗ ದಂಡೋರಾ ಮಾದಿಗ ರಿಜರ್ವೇಷನ್ ಹೋರಾಟ ಸಮಿತಿ ಜಿಲ್ಲಾ ಮಹಿಳಾ ಘಟಕದವತಿಯಿಂದ ಅನಿರ್ದಿಷ್ಟ ಸತ್ಯಾಗ್ರಹ ನಡೆಸಲಾಗುತ್ತಿದೆ ಎಂದು ಮಹಿಳಾ ಘಟಕದ ಜಿಲ್ಲಾಧ್ಯಕ್ಷ ವಿಜಯರಾಣಿ ಸಿರವಾರ ಹೇಳಿದರು.ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ದಲಿತ ಜನಾಂಗದ ಮೇಲೆ ನಿರಂತರ ದೌರ್ಜನ್ಯಗಳು ನಡೆಯುತ್ತಿದ್ದರೂ ಸರ್ಕಾರಗಳು ಮಾತ್ರ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಆರೋಪಿಸಿದರು.ರಾಯಚೂರು ತಾಲ್ಲೂಕಿನ ಗುರ್ಜಾಪುರ ಗ್ರಾಮದಲ್ಲಿ ಶ್ರೀಕಾಂತ ಎಂಬುವ ಮಾದಿಗ ಸಮಾಜದ ವ್ಯಕ್ತಿಯನ್ನು ಮೊಹರಂ ಹಬ್ಬದ ಆಚರಣೆ ಸಂದರ್ಭದಲ್ಲಿ  ಹಲಿಗೆ ಬಾರಿಸಲು ತಿರಸ್ಕರಿಸಿದ ಹಿನ್ನೆಲೆಯಲ್ಲಿ ಕೊಲೆ ಮಾಡಲಾಗಿದೆ. ಮಾನ್ವಿ ತಾಲ್ಲೂಕಿನ ನವಲಕಲ್ ಗ್ರಾಮದಲ್ಲಿಯೂ ಮಾದಿಗ ಸಮಾಜದ ಜನರ ಮೇಲೆ ಹಲ್ಲೆ ಮಾಡಿದ್ದಾರೆ ಎಂದು ಆಪಾದಿಸಿದರು.ಇಂಥ ದುಷ್ಕೃತ್ಯಗಳು ದಿನನಿತ್ಯ ನಡೆಯುತ್ತಿದ್ದರೂ ಸರ್ಕಾರ ಮತ್ತು ಪೊಲೀಸ್ ಆಡಳಿತ ವರ್ಗ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಂಡಿಲ್ಲ ಎಂದು ಆರೋಪಿಸಿದರು.ಅಪ್ರಾಪ್ತ ಬಾಲಕಿಯ ಮೇಲೆ ಅತ್ಯಾಚಾರವೆಸಗಿದ ಆರೋಪಿಗಳಿಗೆ ಉಗ್ರ ಶಿಕ್ಷೆ ನೀಡಿ, ಗ್ರಾಮದಿಂದ ಗಡಿಪಾರು ಮಾಡಬೇಕು, ಈ ಪ್ರಕರಣವನ್ನು ಸಿಒಡಿ ತನಿಖೆಗೆ ಒಪ್ಪಿಸಬೇಕು, ಅತ್ಯಾಚಾರಕ್ಕೊಳಗಾದ ಬಾಲಕಿಯ ಕುಟುಂಬಕ್ಕೆ ಸರ್ಕಾರದಿಂದ  ಪರಿಹಾರ ನೀಡಬೇಕು ಹಾಗೂ ಬಾಲಕಿಗೆ ಸರ್ಕಾರಿ ನೌಕರಿ ನೀಡಬೇಕು, 5 ಎಕರೆ ಜಮೀನು ಕೊಡಿಸಬೇಕು ಎಂದು ಆಗ್ರಹಿಸಿದರು.ಇಂಥ ಕೃತ್ಯಗಳಿಗೆ ಕುಮ್ಮಕ್ಕು ನೀಡುತ್ತಿರುವ ರಾಜಕೀಯ ವ್ಯಕ್ತಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು, ಗುರ್ಜಾಪುರ ಗ್ರಾಮದಲ್ಲಿ ಶ್ರೀಕಾಂತ ಎನ್ನುವ ಮಾದಿಗ ಸಮಾಜದ ವ್ಯಕ್ತಿಯನ್ನು ಕೊಲೆ ಮಾಡಿದ ಆರೋಪಿಗಳಿಗೆ ಕಠಿಣ ಶಿಕ್ಷೆಗೆ ಗುರಿಪಡಿಸಬೇಕು ಹಾಗೂ ಕೊಲೆ ಮಾಡಿದ ವ್ಯಕ್ತಿಗಳ ಆಸ್ತಿಯನ್ನು ಸರ್ಕಾರ ಮುಟ್ಟುಗೋಲ ಹಾಕಬೇಕು ಎಂದು ಒತ್ತಾಯಿಸಿದರು.ಶ್ರಿಕಾಂತ ಕುಟುಂಬಕ್ಕೆ ಸೂಕ್ತ ಪರಿಹಾರ ನೀಡಬೇಕು ಹಾಗೂ ಶ್ರೀಕಾಂತ ಪತ್ನಿಗೆ ಸರ್ಕಾರಿ ನೌಕರಿ ನೀಡಬೇಕು, ನವಲಕಲ್ ಗ್ರಾಮದಲ್ಲಿ ದಲಿತರ ಮೇಲೆ ಹಲ್ಲೆ ಮಾಡಿದ  ಆರೋಪಿಗಳಿಗೆ ಉಗ್ರ ಶಿಕ್ಷೆ ನೀಡಬೇಕು ಎಂದು ಆಗ್ರಹಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry