ಮಂಗಳವಾರ, ನವೆಂಬರ್ 12, 2019
19 °C

ಮಾದಿಗ ಮೀಸಲಾತಿ: ಸಂಸತ್ ಅನುಮೋದನೆಗೆ ಮನವಿ

Published:
Updated:

ರಾಯಚೂರು: ಸಂವಿಧಾನ ಪರಿಚ್ಛೇದ 368 ಸಹಿತ 341(3)ರ ತಿದ್ದುಪಡಿಗೆ ಬಿಲ್‌ನ್ನು ಕೂಡಲೇ ಸಂಸತ್‌ನಲ್ಲಿ ಮಂಡನೆ ಮಾಡಬೇಕು. ಕರ್ನಾಟಕ ರಾಜ್ಯದ ಪರಿಶಿಷ್ಟ ಜಾತಿಯಲ್ಲಿ ಸಂವಿಧಾನ ಬಾಹಿರವಾಗಿ ಸೇರ್ಪಡೆಯಾದ ಸ್ಪೃಶ್ಯ ಸಮುದಾಯಗಳನ್ನು ಕೂಡಲೇ ಪರಿಶಿಷ್ಟ ಜಾತಿ ಪಟ್ಟಿಯಿಂದ ಕೈ ಬಿಡಬೇಕು ಎಂಬುದು ಸೇರಿದಂತೆ ಹಲವು ಬೇಡಿಕೆ ಈಡೇರಿಸಬೇಕು ಎಂದು ಸೋಮವಾರ ಮಾದಿಗ ಮೀಸಲಾತಿ ಹೋರಾಟ ಸಮಿತಿಯು ಜಿಲ್ಲಾಧಿಕಾರಿಗಳ ಮೂಲಕ ಪ್ರಧಾನ ಮಂತ್ರಿಗೆ ಮನವಿ ಸಲ್ಲಿಸಿದರು.ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ನೌಕರರ ಬಡ್ತಿ ಬಿಲ್‌ನ್ನು ಕೂಡಲೇ ಸಂಸತ್‌ನಲ್ಲಿ ಮಂಡಿಸಿ ಅಂಗೀಕರಿಸಬೇಕು. ಸಂವಿಧಾನ ಪರಿಚ್ಛೇದ 368 ಸಹಿತ 341(3)ರ ತಿದ್ದಪಡಿಗೆ ಲೋಕಸಭೆಯ ಅಧಿವೇಶನದಲ್ಲಿ ಮಂಡನೆ ಮಾಡಬೇಕು ಎಂದು ಪ್ರಧಾನ ಮಂತ್ರಿಗಳಿಗೆ ಸಲ್ಲಿಸಿದ ಪತ್ರದಲ್ಲಿ ಮನವಿ ಮಾಡಿದ್ದಾರೆ.ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಹಕ್ಕುಗಳಿಗೆ ವಿಶೇಷ ರಕ್ಷಣೆಯೇ ಮೀಸಲಾತಿಯಾಗಿದೆ.  ಈಗಾಗಲೇ ಸುಮಾರು 12 ರಾಜ್ಯಗಳು ಮೀಸಲಾತಿ ವರ್ಗೀಕರಣ ಬೆಂಬಲಿಸಿ ಶಿಫಾರಸ್ಸು ಸಲ್ಲಿಸಿವೆ.ಕರ್ನಾಟಕ ಸಮಾಜ ಕಲ್ಯಾಣ ಇಲಾಖೆಯು 2012 ಜನವರೆ 21ರಂದು ಈ ಕುರಿತು ಶಿಫಾರಸ್ಸು ಮಾಡಿದೆ. ಬಿಲ್ ತಿದ್ದುಪಡಿಗೆ ಯಾವ ವಿಧಾನದ ಮೂಲಕ ಲೋಕಸಭೆಯಲ್ಲಿ ಮಂಡಿಸಬೇಕು ಎಂಬ ಸಮಸ್ಯೆ ಉದ್ಭವಿಸಿದೆ.ಒಂದು ವೇಳೆ 2-3ರ ಬಹುಮತ ಮತ್ತು ಅರ್ಧಕ್ಕಿಂತ ಹೆಚ್ಚಿನ ರಾಜ್ಯಗಳ ಬೆಂಬಲ ಪಡೆಯುವ ವಿಧಾನದಲ್ಲಿ ಬಿಲ್ ಮಂಡಿಸಿದರೆ ಸಮಸ್ಯೆ ಮತ್ತಷ್ಟು ಜಟಿಲ ಆಗುತ್ತದೆ. ಅದರ ಬದಲು ಸರಳ ಬಹುಮತದೊಂದಿಗೆ ಬಿಲ್‌ನ್ನು ಸಂಸತ್ತಿನಲ್ಲಿ ಮಂಡಿಸಿದರೆ ಯಾವ ಸಮಸ್ಯೆಯೂ ಉದ್ಭವಿಸದೇ ಅಂಗೀಕಾರ ಆಗುತ್ತದೆ. ಈ ಎಲ್ಲ ಅಂಶ ಗಮನಿಸಿ ಸರಳ ಬಹುಮತದ ವಿಧಾನದಲ್ಲಿ ಅಂಗೀಕರಿಸಬೇಕು ಎಂದು ಪ್ರಧಾನಮಂತ್ರಿಗೆ ಬರೆದ ಪತ್ರದಲ್ಲಿ ಮನವಿ ಮಾಡಿದ್ದಾರೆ.ಸಮಿತಿ ಜಿಲ್ಲಾಧ್ಯಕ್ಷ ತಿಮ್ಮಪ್ಪ ಗುಂಜಳ್ಳಿ, ಜಿಲ್ಲಾ ಉಪಾಧ್ಯಕ್ಷ ದೇವಪುತ್ರ, ಜಿಲ್ಲಾ ಮುಖಂಡ ತಾಯಪ್ಪ ಅರಕೇರಾ, ತಾಲ್ಲೂಕು ಅಧ್ಯಕ್ಷ ತಿಮ್ಮಪ್ಪ ಆಲ್ಕೂರು, ಪ್ರಧಾನ ಕಾರ್ಯದರ್ಶಿ ತಿಕ್ಕಯ್ಯ, ನರಸಿಂಹಲು ಮಾಡಗಿರಿ, ನಗರ ಅಧ್ಯಕ್ಷ ರವಿ, ಸಂಘಟನಾ ಕಾರ್ಯದರ್ಶಿ ಜೆ ತಿಮ್ಮಪ್ಪ, ಜಿಲ್ಲಾ ಮುಖಂಡ ಆರ್ ರಾಮಸ್ವಾಮಿ, ಗಣೇಶ ಬಳ್ಳಾರಿ, ಶಿವರಾಯ ಅಕ್ಕರಕಿ, ಶರಣಬಸವ ಗೋಕುಲ್, ಹನುಮಂತ, ಜೊಸೆಫ್ ಆಶಾಪುರ ಹಾಗೂ ಇತರರು ಮನವಿ ಸಲ್ಲಿಸಿದರು.

ಪ್ರತಿಕ್ರಿಯಿಸಿ (+)