ಶುಕ್ರವಾರ, ಮಾರ್ಚ್ 5, 2021
21 °C
ಅಂತರಿಕ್ಷ್‌– ದೇವಾಸ್‌ ಅಕ್ರಮ ವ್ಯವಹಾರ ಪ್ರಕರಣ

ಮಾಧವನ್‌ ವಿರುದ್ಧ ಆರೋಪಪಟ್ಟಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮಾಧವನ್‌ ವಿರುದ್ಧ ಆರೋಪಪಟ್ಟಿ

ನವದೆಹಲಿ: ಭಾರತೀಯ ಬಾಹ್ಯಾಕಾಶ ಸಂಸ್ಥೆಯ (ಇಸ್ರೊ) ವಾಣಿಜ್ಯ ಘಟಕ ಅಂತರಿಕ್ಷ್‌ ಮತ್ತು ಖಾಸಗಿ ಮಲ್ಟಿಮೀಡಿಯಾ ಸಂಸ್ಥೆ ದೇವಾಸ್‌ ನಡುವಣ ಒಪ್ಪಂದದಲ್ಲಿ ನಡೆದ ಅಕ್ರಮದ ಬಗ್ಗೆ ಸಿಬಿಐ ಆರೋಪಪಟ್ಟಿ ದಾಖಲಿಸಿದೆ. ಇಸ್ರೊ ಮಾಜಿ ಅಧ್ಯಕ್ಷ ಮಾಧವನ್‌ ನಾಯರ್‌ ಮತ್ತು ಇತರ ಏಳು ಜನರ ಹೆಸರು ಆರೋಪಪಟ್ಟಿಯಲ್ಲಿದೆ.ಅಂತರಿಕ್ಷ್‌ ಮೂಲಕ ದೇವಾಸ್‌ಗೆ ₹578 ಕೋಟಿ ‘ಅಕ್ರಮ  ಲಾಭ’ ಮಾಡಿಕೊಡುವಲ್ಲಿ ಇವರೆಲ್ಲರೂ ಶಾಮೀಲಾಗಿದ್ದಾರೆ ಎಂದು ಆರೋಪಪಟ್ಟಿಯಲ್ಲಿ  ಹೇಳಲಾಗಿದೆ.ಆರೋಪಪಟ್ಟಿಯನ್ನು ದೆಹಲಿಯ ಪಟಿಯಾಲ ಹೌಸ್‌ ಕೋರ್ಟ್‌ನ ಸಿಬಿಐ ವಿಶೇಷ ನ್ಯಾಯಾಧೀಶರ ಕೋರ್ಟ್‌ನಲ್ಲಿ ಸಲ್ಲಿಸಲಾಗಿದೆ. ಕ್ರಿಮಿನಲ್‌ ಸಂಚು, ಮೋಸ ಮತ್ತು ಭ್ರಷ್ಟಾಚಾರ ತಡೆ ಕಾಯ್ದೆಯಡಿ ಆರೋಪಪಟ್ಟಿ ಸಲ್ಲಿಸಲಾಗಿದೆ.ಅಂತರಿಕ್ಷ್‌ನ ಮಾಜಿ ಕಾರ್ಯನಿರ್ವಾಹಕ ನಿರ್ದೇಶಕ ಕೆ.ಆರ್.ಶ್ರೀಧರ್ ಮೂರ್ತಿ,  ದೇವಾಸ್‌ನ ಸಿಇಒ ರಾಮಚಂದ್ರ ವಿಶ್ವನಾಥನ್‌, ದೇವಾಸ್‌ನ ಮಾಜಿ ನಿರ್ದೇಶಕ ಎಂ.ಜಿ.ಚಂದ್ರಶೇಖರ್‌ ಹೆಸರು ಆರೋಪಪಟ್ಟಿಯಲ್ಲಿದೆ.ಬಾಹ್ಯಾಕಾಶ ಇಲಾಖೆ ಹೆಚ್ಚುವರಿ ಮಾಜಿ ಕಾರ್ಯದರ್ಶಿ ವೀಣಾ ಎಸ್‌.ರಾವ್‌, ಇಸ್ರೊ ಮಾಜಿ ನಿರ್ದೇಶಕ ಎ. ಭಾಸ್ಕರ್‌ ನಾರಾಯಣನ್‌ ರಾವ್ ಮತ್ತು ದೇವಾಸ್‌ ಮಲ್ಟಿ ಮೀಡಿಯಾದ ಇಬ್ಬರು ನಿರ್ದೇಶಕರಾದ ಡಿ.ವೇಣುಗೋಪಾಲ್‌ ಮತ್ತು ಯು.ಉಮೇಶ್‌್ ಅವರ ವಿರುದ್ಧವೂ ಆರೋಪಪಟ್ಟಿ ದಾಖಲಾಗಿದೆ.ಎಫ್‌ಐಆರ್‌ನಲ್ಲಿರುವ ಮಾಹಿತಿಗಳ ಪ್ರಕಾರ, ಈ ಅಧಿಕಾರಿಗಳು ತಮ್ಮ ಅಧಿಕಾರ ದುರ್ಬಳಕೆ ಮಾಡಿಕೊಂಡು 2004 ರಿಂದ 2011ರ ನಡುವೆ  ದೇವಾಸ್‌ಗೆ ಲಾಭ ಮಾಡಿಕೊಟ್ಟಿದ್ದಾರೆ.   ಮೊಬೈಲ್ ಫೋನ್‌ಗಳಿಗೆ ವಿಡಿಯೊ, ಮಲ್ಟಿ ಮೀಡಿಯಾ ಮತ್ತು ಮಾಹಿತಿ ಸೇವೆ ಒದಗಿಸಲು ದೇವಾಸ್‌ಗೆ ‘ಜಿ–ಸ್ಯಾಟ್‌’ ಮತ್ತು ‘ಜಿ–ಸ್ಯಾಟ್‌ 6ಎ’ ಉಪಗ್ರಹಗಳನ್ನು ಬಳಸಿಕೊಳ್ಳಲು ನೆರವಾಗಿದ್ದಾರೆ ಎಂದು ಆರೋಪಿಸಲಾಗಿದೆ.ನನಗೇನೂ ಗೊತ್ತಿಲ್ಲ: ನಾಯರ್

ತಿರುವನಂತಪುರ(ಪಿಟಿಐ): ತಮ್ಮ ವಿರುದ್ಧ ಆರೋಪಪಟ್ಟಿ ದಾಖಲಾಗಿರುವುದಕ್ಕೆ ಪ್ರತಿಕ್ರಿಯಿಸಿರುವ  ಮಾಧವನ್‌ ನಾಯರ್‌, ಯಾವ ಆಧಾರದ ಮೇಲೆ ಆರೋಪಪಟ್ಟಿ ದಾಖಲಾಗಿದೆ ಎಂದು ತಿಳಿಯುತ್ತಿಲ್ಲ ಎಂದು ಹೇಳಿದ್ದಾರೆ.

ಈ ಮೊದಲು ಬಿ.ಕೆ. ಚತುರ್ವೇದಿ ಮತ್ತು ಪ್ರತ್ಯೂಷ್‌ ಸಿನ್ಹಾ  ನೇತೃತ್ವದ ಸಮಿತಿ  ವಿಚಾರಣೆ ನಡೆಸಿತ್ತು. ಸರ್ಕಾರಕ್ಕೆ ಯಾವುದೇ ನಷ್ಟವಾಗಿಲ್ಲ ಮತ್ತು ಯಾವುದೇ ತರಂಗಾಂತರ ಹಂಚಿಕೆ ನಡೆದಿಲ್ಲ ಎಂಬ ತೀರ್ಮಾನಕ್ಕೆ ಬರಲಾಗಿತ್ತು. ಆದರೂ ನಾಲ್ವರು ವಿಜ್ಞಾನಿಗಳಿಗೆ ಶಿಕ್ಷೆ ನೀಡಲಾಗಿತ್ತು ಎಂದು ಹೇಳಿದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.