ಮಾಧವಿಯ ಮಗಳು

7

ಮಾಧವಿಯ ಮಗಳು

Published:
Updated:

ಮಿನಿ ಕಥೆ

ಮಾಧವಿ ಎಂಬ ಮನೆಕೆಲಸದಾಕೆ ಒಂದು ದಿನದ ರಜೆ ಪಡೆದು ತನ್ನ ಮನೆಗೆ ಬಂದಾಗ ಆಕೆಯ ವಯಸ್ಸಾದ ತಾಯಿ ಅಂಗಳದಲ್ಲಿ ಬೆಳೆದು ನಿಂತಿದ್ದ ಕಾಡುಗಿಡಗಳನ್ನು ಕೀಳುತ್ತಿದ್ದಳು.`ಅಮ್ಮ ಮಗು ಎಲ್ಲಿ? ಈಗ ಹೇಗಿದ್ದಾಳೆ? ಸ್ವಲ್ಪ ವಾಸೀನಾ?~ ಮಾಧವಿ ಕೇಳಿದಳು. ಮುದುಕಿ ಸುಖಾಸುಮ್ಮನೆ ತಲೆಯಾಡಿಸಿತು. ಮಾಧವಿ ಮನೆಯೊಳಕ್ಕೆ ಓಡಿದಳು. ಕತ್ತಲ ಕೋಣೆಯ ಮೂಲೆಯಲ್ಲಿ ಒಂದು ಚಾಪೆಯ ಮೇಲೆ ಪಂಚೆಯನ್ನು ಹಾಸಿ ಮಗುವನ್ನು ಮಲಗಿಸಲಾಗಿತ್ತು.`ಮಗಳೇ~ ಮಾಧವಿ ಕರೆದಳು. `ಕಂದಾ, ನೋಡಮ್ಮ ನಾನು ಅಮ್ಮ ಬಂದಿದ್ದೀನಿ, ಕಣ್ಣು ತೆಗಿ~. ಮಗು ಕಣ್ಣು ತೆರೆದು ಅವಳನ್ನೊಮ್ಮೆ ನೋಡಿ ಕಣ್ಣುಮುಚ್ಚಿಕೊಂಡಿತು. `ಡಾಕ್ಟರು ಕೊಟ್ಟ ಕಷಾಯವನ್ನು ಕುಡಿಸ್ತಾ ಇದ್ದೀಯೇನಮ್ಮೋ~ ಮಾಧವಿ ತಾಯಿಯನ್ನು ವಿಚಾರಿಸಿದಳು.`ಕುಡಿಸ್ತಾ ಇದ್ದೀನಿ~. ಮುದುಕಿ ಉತ್ತರಿಸಿದಳು. `ಆದರೆ ಏನೂ ಪ್ರಯೋಜನವಾಗ್ತಿಲ್ಲಮ್ಮ. ಹತ್ತು ಹದಿನೈದು ಸಲ ಹೊಟ್ಟೆಯಿಂದ ಹೊರಕ್ಕೆ ಹೋಗ್ತಿರುತ್ತೆ. ಮಗೂಗೆ ಅದೂ ಇದೂ ತಿನ್ನಬೇಕೆಂಬ ಆಸೆ ಬೇರೆ. ಡಾಕ್ಟರು ಏನೂ ಕೊಡಬಾರದೂಂತ ಹೇಳಿದ್ದಾರೆ~.`ಮಗಳೇ~ ಮಾಧವಿ ಮತ್ತೆ ಮಗಳನ್ನು ಕರೆದಳು. `ಕಂದಾ ನಿನಗೇನು ಬೇಕಮ್ಮ? ನಾನು ನಿನಗೆ ಕರಿಬಳೆ ತಂದಿದ್ದೀನಿ ನೋಡು~. ಮಗು ಮತ್ತೆ ಕಣ್ಣು ತೆರೆಯಿತು. ಅಮ್ಮನತ್ತ ನೋಡಿತು. ಮಾಧವಿ ಬಳೆಗಳನ್ನು ಆಡಿಸುತ್ತಾ ಸದ್ದು ಮಾಡಿ ನಕ್ಕಳು.

`ಕೈಗೆ ಹಾಕಲೇನಮ್ಮ?~ ಅವಳು ಮಗುವನ್ನು ಕೇಳಿದಳು. ಮಗು ತಲೆಯಾಡಿಸಿತು.ಬಳೆಗಳನ್ನು ತೊಟ್ಟು ಕೈಗಳನ್ನು ನೋಡುತ್ತಾ ಮಗು ಉಲಿಯಿತು,  `ತುಂಬಾ ಚೆನ್ನಾಗಿದೆಯಮ್ಮ~. ಮಾಧವಿ ಅವಳನ್ನು ಎರಡೂ ಕೈಗಳಿಂದ ಬಾಚಿ ಎತ್ತಿಕೊಂಡಳು.

`ಹೆಗಲ ಮೇಲೆ ಮಲಗಿಸಿ ನಿದ್ರೆ ಮಾಡಿಸಲಾ?~ ಮಾಧವಿ ಕೇಳಿದಾಗ ಮಗು ತಲೆಯಾಡಿಸಿತು. ಮಗುವನ್ನು ಹೆಗಲ ಮೇಲೆ ಹೊತ್ತು ಮಾಧವಿ ಕೋಣೆಯಲ್ಲಿ ಅತ್ತಿಂದಿತ್ತ ನಡೆದಾಡಿದಳು. ಮಗುವಿಗೆ ಚೆನ್ನಾಗಿ ನಿದ್ರೆ ಬಂದಾಗ ಅವಳನ್ನು ಚಾಪೆಯ ಮೇಲೆ ಮಲಗಿಸಿದಳು. ನಿದ್ರೆಯಲ್ಲಿ ಮಗು ಆಗಾಗ ನರಳುತ್ತಲೇ ಇತ್ತು.`ನನ್ನ ಮಗಳ ಕೈಗೆ ಈ ಕರಿಬಳೆಗಳು ಎಷ್ಟು ಚೆನ್ನಾಗಿ ಹೊಂದುತ್ತವೆ~ ಮಾಧವಿ ತನ್ನಲ್ಲೇ ಹೇಳಿಕೊಂಡಳು.`ನೀನು ನಾಳೆ ಕೆಲಸಕ್ಕೆ ಹೋಗಲೇಬೇಕಾ?~ ಮುದುಕಿ ಕೇಳಿತು. ಮಾಧವಿ ಮಗುವಿನ ಸಮೀಪವೇ ಮುದುಡಿ ಮಲಗುತ್ತಾ ಹೇಳಿದಳು `ನಾಳೆ ಬೆಳಿಗ್ಗೆ ಎದ್ದು ಬಸ್ಸು ಹಿಡಿದು ಕೆಲಸಕ್ಕೆ ಹೋಗಲೇಬೇಕು. ಅಲ್ಲಿರುವ ಮಾಲೀಕರ ಮಗು ನಾನು ಹೋಗದೇ ಹಾಲು ಕುಡಿಯೋದಿಲ್ಲಮ್ಮ~.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry