`ಮಾಧ್ಯಮಗಳು ಕಾರ್ಪೊರೇಟ್ ಸಂಸ್ಥೆಗಳ ಅಡಿಯಾಳು'

7

`ಮಾಧ್ಯಮಗಳು ಕಾರ್ಪೊರೇಟ್ ಸಂಸ್ಥೆಗಳ ಅಡಿಯಾಳು'

Published:
Updated:

ಮಂಗಳೂರು: `ಇಂದಿನ ಬಹುತೇಕ ಮಾಧ್ಯಮಗಳು ಕಾರ್ಪೊರೇಟ್ ಸಂಸ್ಥೆಗಳ ಅಡಿಯಾಳುಗಳಾಗಿವೆ. ಹಾಗಾಗಿ ಓದುಗರ ಹಿತಕ್ಕಿಂತ ಜಾಹೀರಾತು ನೀಡುವ ಸಂಸ್ಥೆಗಳ ಹಿತ ಕಾಯುವುದಕ್ಕೆ ಮಾಧ್ಯಮಗಳು ಹೆಚ್ಚಿನ ಆಸಕ್ತಿ ವಹಿಸುತ್ತಿವೆ' ಎಂದು ಚೆನ್ನೈನ ಸಾಹಿತಿ ಹಾಗೂ ಪತ್ರಿಕೋದ್ಯಮ ಮತ್ತು ಇಂಗ್ಲಿಷ್ ಪ್ರಾಧ್ಯಾಪಕ ಶ್ರೀಕುಮಾರ್ ವರ್ಮ ಅಭಿಪ್ರಾಯಪಟ್ಟರು.ಬೆಸೆಂಟ್ ಮಹಿಳಾ ಕಾಲೇಜಿನ ಪತ್ರಿಕೋದ್ಯಮ ವಿಭಾಗ ಹಾಗೂ ಮಂಗಳೂರು ವಿಶ್ವವಿದ್ಯಾಲಯದ ಪತ್ರಿಕೋದ್ಯಮ ವಿಭಾಗದ ಆಶ್ರಯದಲ್ಲಿ ಬೆಸೆಂಟ್ ಕಾಲೇಜಿನ ಸಭಾಂಗಣದಲ್ಲಿ ಹಮ್ಮಿಕೊಂಡ `ಮಾಧ್ಯಮ ನೈತಿಕತೆ ಮತ್ತು ಅನುಸರಣೆ' ಕುರಿತ ರಾಷ್ಟ್ರೀಯ ವಿಚಾರ ಸಂಕಿರಣದ ಉದ್ಘಾಟನಾ ಸಮಾರಂಭದಲ್ಲಿ ಗುರುವಾರ ಅವರು ದಿಕ್ಸೂಚಿ ಭಾಷಣ ಮಾಡಿದರು.`ಸ್ವಾತಂತ್ರ್ಯ ಬಂದ ಆರಂಭದಲ್ಲಿ ಪತ್ರಿಕೆಗಳು ಸಾರ್ವಜನಿಕ ಅಭಿಪ್ರಾಯ ರೂಪಿಸುವ ಜತೆಗೆ ಸರ್ಕಾರದ ನೀತಿ ನಿರೂಪಣೆಯಲ್ಲೂ ಪ್ರಮುಖ ಪಾತ್ರ ವಹಿಸುತ್ತಿದ್ದವು. ತುರ್ತು ಪರಿಸ್ಥಿತಿಯ ಸಂದರ್ಭದಲ್ಲಿ ಪತ್ರಿಕೆಗಳ ಸ್ವಾಂತಂತ್ರ್ಯವನ್ನು ಹತ್ತಿಕ್ಕಲಾಯಿತು. ಆ ಬಳಿಕ ಪತ್ರಿಕೆಗಳು ಗತ ವೈಭವವನ್ನು ಕಳೆದುಕೊಂಡವು. ಉದಾರೀಕರಣ ನೀತಿಯ ಪರಿಣಾಮವಾಗಿ ಪತ್ರಿಕಾರಂಗದಲ್ಲೂ ಮಹತ್ತರ ಬದಲಾವಣೆಗಳಾದವು. ಈಗ ಬಹುತೇಕ ಪತ್ರಿಕೆಗಳು ಉದ್ದಿಮೆಗಳ ಕಪಿಮುಷ್ಠಿಯಲ್ಲಿ ಸಿಲುಕಿವೆ. ಕಾರ್ಪೊರೇಟ್ ಸಂಸ್ಥೆಗಳು ಹಾಗೂ ರಾಜಕಾರಣಿಗಳೇ ಇಂದಿನ ಮಾಧ್ಯಮಗಳ ನೀತಿಯನ್ನು ರೂಪಿಸುವ ಸ್ಥಿತಿ ಇದೆ'  ಎಂದು ಬೇಸರ ವ್ಯಕ್ತಪಡಿಸಿದರು.`ಈ ಎಲ್ಲ ಬದಲಾವಣೆಗೆ ಓದುಗರೂ ಕಾರಣ. ಭಾರತದಲ್ಲಿ ಸಿಗುವಷ್ಟು ಅಗ್ಗದ ದರದಲ್ಲಿ ಪತ್ರಿಕೆ ಪ್ರಪಂಚದ ಬೇರಾವ ದೇಶದಲ್ಲೂ ಸಿಗದು. ಲಂಡನ್‌ನಲ್ಲಿ ಒಂದು ಪತ್ರಿಕೆಗೆ 40 ರೂಪಾಯಿ, ಶ್ರೀಲಂಕಾದಲ್ಲಿ 14 ರೂಪಾಯಿ ಹಾಗೂ ಪಾಕಿಸ್ತಾನದಲ್ಲಿ 20 ರೂಪಾಯಿ ಬೆಲೆ ಇದೆ. ಭಾರತದಲ್ಲಿ ಪತ್ರಿಕೆಗೆ 2 ರೂಪಾಯಿ ನೀಡುವುದಕ್ಕೂ ಹಿಂದೆ ಮುಂದೆ ನೋಡುತ್ತೇವೆ' ಎಂದರು.ಮಂಗಳೂರು ವಿ.ವಿ. ಪತ್ರಿಕೋದ್ಯಮ ವಿಭಾಗದ ಪ್ರಾಧ್ಯಾಪಕ ಡಾ.ಜಿ.ಪಿ.ಶಿವರಾಂ ಮಾತನಾಡಿ, `ಮಾಧ್ಯಮ ಸಂಸ್ಕೃತಿಯಿಂದ ಸೈಬರ್ ಸಂಸ್ಕೃತಿಗೆ ಬದಲಾಗುವ ಕಾಲಘಟ್ಟದಲ್ಲಿ ನಾವಿದ್ದೇವೆ. ಬ್ಲಾಗರ್, ಟ್ವಿಟ್ಟರ್, ವೆಬ್ ಜರ್ನಲಿಸಂನಂತಹ ನವ ಮಾಧ್ಯಮಗಳು ನಮ್ಮ ಬದುಕಿನೊಳಗೆ ಸದ್ದಿಲ್ಲದೆ ನುಸುಳಿವೆ. ನಾಗರಿಕ ಪತ್ರಿಕೋದ್ಯಮದ ಹೊಸ ಯುಗ ಆರಂಭವಾಗಿದೆ' ಎಂದರು.`ಪತ್ರಕರ್ತರು ಆಮಿಷಗಳಿಗೆ ಬಲಿ ಬೀಳುತ್ತಿರುವುದು ಹಾಗೂ ಕಾಸಿಗಾಗಿ ಸುದ್ದಿ ಪ್ರಕಟಿಸುವುದು ಅಪಾಯಕಾರಿ ಬೆಳವಣಿಗೆ' ಎಂದರು.ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಪಿ.ಪಿ.ಗೋಮತಿ ಪತ್ರಿಕಾ ರಂಗದ ಮೌಲ್ಯ ಕುಸಿಯುತ್ತಿರುವ ಬಗ್ಗೆ ಆತಂಕ ವ್ಯಕ್ತಪಡಿಸಿದರು.ವುಮನ್ಸ್ ನ್ಯಾಷನಲ್ ಎಜುಕೇಷನಲ್ ಸೊಸೈಟಿ ಅಧ್ಯಕ್ಷ ಕುಡ್ಪಿ ಜಗದೀಶ ಶೆಣೈ ವಿಚಾರ ಸಂಕಿರಣ ಉದ್ಘಾಟಿಸಿದರು. ಮೋಹನ ನಾಯಕ್‌ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥರಾದ ಅನಿಶಾ ಉಪಸ್ಥಿತರಿದ್ದರು. ಕಾಲೇಜಿನ ಪ್ರಾಂಶುಪಾಲರಾದ ಕೆ.ಟಿ.ಮಂಜುಳಾ ಸ್ವಾಗತಿಸಿದರು. ಐಮಾ ಶೆರಿನ್ ನಿರೂಪಿಸಿದರು. ಉಪನ್ಯಾಸಕಿ ಸುಷ್ಮಾ ವಂದಿಸಿದರು.

ಆಸ್ಕರ್ ವಿಜೇತ ಹೇಳಿದ ಮಾಧ್ಯಮದ ಕತೆ-ವ್ಯಥೆ

ವಿಚಾರ ಸಂಕಿರಣದ ಉದ್ಘಾಟನೆಗೆ ಬರಲು ಸಾಧ್ಯವಾಗದ ಹಿನ್ನೆಲೆಯಲ್ಲಿ ಆಸ್ಕರ್ ಪ್ರಶಸ್ತಿ ವಿಜೇತ ಧ್ವನಿ ತಂತ್ರಜ್ಞ ಡಾ.ರಸೂಲ್ ಪೂಕುಟ್ಟಿ ವಿಡಿಯೊ ಮುದ್ರಿತ ಸಂದೇಶ ಕಳುಹಿಸಿದ್ದರು.ಅತಿರಂಜಿತ ವರದಿ ಹಾಗೂ ವ್ಯಕ್ತಿಗಳ ಖಾಸಗಿ ಬದುಕನ್ನು ಕಸಿಯುವ ಮಾಧ್ಯಮಗಳ ಕಾರ್ಯವೈಖರಿ ಬಗ್ಗೆ ಕಿಡಿ ಕಾಡಿದ ಅವರು, ತಾವು ಆಸ್ಕರ್ ಪ್ರಶಸ್ತಿ ಪಡೆದ ಸಂದರ್ಭದಲ್ಲಿ ಪತ್ರಕರ್ತೆಯೊಬ್ಬಳು ಮನೆಯೊಳಗೆ ಅವಿತು ಕುಳಿತು ತಮ್ಮ ಸಂದರ್ಶನ ನಡೆಸಿದ ಘಟನೆಯನ್ನು ಪೂಕುಟ್ಟಿ ವಿಡಿಯೊ ಸಂದರ್ಶನದಲ್ಲಿ ಮೆಲುಕು ಹಾಕಿದರು.ಅನೇಕ ಬಾರಿ ಮನಸ್ಸೊಪ್ಪದ ಕೆಲಸವನ್ನು ಮಾಧ್ಯಮದ ಮಂದಿ ಮಾಡಬೇಕಾಗುತ್ತದೆ. ಇಂಥ ಪರಿಸ್ಥಿತಿ ಒಳ್ಳೆಯದಲ್ಲ' ಎಂದರು.`ಆಧುನಿಕ ಪ್ರಜಾಪ್ರಭುತ್ವದಲ್ಲಿ ಎಲ್ಲವೂ ಮುಕ್ತ; ಇದರಿಂದಾಗಿಯೇ ಕೆಲವೊಮ್ಮೆ  ಎಲ್ಲ ಸ್ವಾತಂತ್ರ್ಯವನ್ನೂ ಕಸಿದುಕೊಳ್ಳುವ ಅಪಾಯವೂ ಇದೆ' ಎಂದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry