ಮಾಧ್ಯಮಗಳು `ಬೊಗಳುವ ನಾಯಿ'

7

ಮಾಧ್ಯಮಗಳು `ಬೊಗಳುವ ನಾಯಿ'

Published:
Updated:
ಮಾಧ್ಯಮಗಳು `ಬೊಗಳುವ ನಾಯಿ'

ನವದೆಹಲಿ (ಪಿಟಿಐ): ದೆಹಲಿಯಲ್ಲಿ ಸಾಮೂಹಿಕ ಅತ್ಯಾಚಾರಕ್ಕೆ ಒಳಗಾದ ಯುವತಿ ವಿರುದ್ಧ ಹೇಳಿಕೆಗಳನ್ನು ನೀಡಿ ವಿವಾದ ಹುಟ್ಟು ಹಾಕಿದ್ದ ಆಧ್ಯಾತ್ಮಿಕ ಗುರು ಅಸಾರಾಮ್ ಬಾಪು ಈಗ ಮತ್ತೊಂದು ವಿವಾದ ಸೃಷ್ಟಿಸಿದ್ದಾರೆ. ಈ ಹಿಂದೆ ತಾವು ನೀಡಿದ್ದ ಹೇಳಿಕೆಗಳನ್ನು ಸಮರ್ಥಿಸಿರುವ ಅಸಾರಾಮ್ ಬಾಪು, ಮಾಧ್ಯಮಗಳನ್ನು ಮತ್ತು ತಮ್ಮ ಟೀಕಾಕಾರರನ್ನು `ಬೊಗಳುವ ನಾಯಿಗಳು' ಎಂದು ಕರೆದಿದ್ದಾರೆ.ಬಾಪು ಅವರು ಸ್ವತಃ ತಮ್ಮನ್ನು `ಆನೆ' ಎಂದು ಬಣ್ಣಿಸಿಕೊಂಡಿದ್ದು, `ಆನೆ' ಯಾವತ್ತೂ `ಬೊಗಳುವ ನಾಯಿಗಳಿಗೆ' ಪ್ರತಿಕ್ರಿಯಿಸುವುದಿಲ್ಲ ಎಂದು ಹೇಳಿದ್ದಾರೆ.

ಡಿ. 16ರಂದು ದೆಹಲಿಯಲ್ಲಿ ನಡೆದ ಸಾಮೂಹಿಕ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ತಮ್ಮ ಹೇಳಿಕೆಯನ್ನು ಮಾಧ್ಯಮಗಳು ಮತ್ತು ಟೀಕಾಕಾರರು ತಪ್ಪಾಗಿ ಬಿಂಬಿಸಿದ್ದಾರೆ ಎಂದೂ ಅವರು ಹೇಳಿದ್ದಾರೆ.`ಮೊದಲು ಒಂದು ನಾಯಿ ಬೊಗಳಿತು. ನಂತರ ಮತ್ತೊಂದು ಬೊಗಳಿತು. ಸ್ವಲ್ವ ಹೊತ್ತಿನಲ್ಲಿ ನಮ್ಮ ನೆರೆಹೊರೆಯ ನಾಯಿಗಳೆಲ್ಲಾ ಬೊಗಳಲು ಆರಂಭಿಸಿದವು' ಎಂದು ಬೆಂಬಲಿಗರನ್ನು ಉದ್ದೇಶಿಸಿ ಮಾತನಾಡುವ ಸಂದರ್ಭದಲ್ಲಿ ಅಸಾರಾಮ್ ಬಾಪು ಹೇಳಿದ್ದಾರೆ.`ಈಗ ಆನೆ ನಾಯಿಗಳ ಹಿಂದೆ ಓಡಿದರೆ, ಅವುಗಳ ಬೆಲೆ  ಹೆಚ್ಚುತ್ತದೆ. ಆನೆಯ ಯೋಗ್ಯತೆಗೆ ಕುಂದು ಬರುತ್ತದೆ. ಅವರಿಗೆ ಇಷ್ಟ ಬಂದ ರೀತಿಯಲ್ಲಿ ಅವರು ಹೇಳಬಹುದು. ನಾನು ಯಾವುದಕ್ಕೂ ಹೆದರುವುದಿಲ್ಲ. ನಾನು ಯಾಕೆ ನಾಯಿಗಳ ಹಿಂದೆ ಓಡಬೇಕು' ಎಂದು ಅಸಾರಾಮ್ ತಿಳಿಸಿದ್ದಾರೆ.ಸಾಮೂಹಿಕ ಅತ್ಯಾಚಾರ ಪ್ರಕರಣದಲ್ಲಿ ಆರೋಪಿಗಳಂತೆ ಯುವತಿ ಕೂಡ ತಪ್ಪಿತಸ್ಥಳು. ದುಷ್ಕರ್ಮಿಗಳನ್ನು ಆಕೆ ಸಹೋದರರೆಂದು ಕರೆದು, ತನ್ನನ್ನು ರಕ್ಷಿಸಿ ಎಂದು ಬೇಡಿಕೊಳ್ಳಬೇಕಿತ್ತು ಎಂದು ಹೇಳುವ ಮೂಲಕ ಅಸಾರಾಮ್ ವಿವಾದ ಸೃಷ್ಟಿಸಿದ್ದರು.`ಪ್ರತಿಕ್ರಿಯೆ ನೀಡುವ ಮೂಲಕ ಆನೆಯೊಂದು ನಾಯಿಗಳಿಗೆ ಮಹತ್ವ ನೀಡುತ್ತದೆಯೇ? ತಮಗೆ ಏನು ಬೇಕು ಎಂಬುದನ್ನು ಜನರೇ ನಿರ್ಧರಿಸಲಿ' ಎಂದೂ ಅವರು ಹೇಳಿದ್ದಾರೆ.

ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅಸಾರಾಮ್ ಬಾಪು, ತಮ್ಮ ಹೇಳಿಕೆಯನ್ನು ಟೀಕಾಕಾರರು ಮತ್ತು ಮಾಧ್ಯಮಗಳು ತಪ್ಪಾಗಿ ಬಿಂಬಿಸಿವೆ ಎಂದು ಹೇಳಿದ್ದಾರೆ.

ತಾವು ಮಾಡಿರುವ ಭಾಷಣವನ್ನು ಸರಿಯಾಗಿ ಅರ್ಥಮಾಡಿಕೊಂಡಿದ್ದರೆ, ದೆಹಲಿ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ತಾವು ನೀಡಿರುವ ಹೇಳಿಕೆಗಳಿಗೆ ಜನರು ತಮ್ಮನ್ನು ಮತ್ತಷ್ಟು ಗೌರವಿಸುತ್ತಿದ್ದರು ಎಂದು ಅಸಾರಾಮ್ ಬಾಪು ಹೇಳಿದ್ದಾರೆ.ಅಸಾರಾಮ್ ಹೇಳಿಕೆ ತರ್ಕರಹಿತ 

ಬಲಿಯಾ (ಉತ್ತರ ಪ್ರದೇಶ) (ಪಿಟಿಐ):
ಅಸಾರಾಮ್ ಬಾಪು ಅವರ ವಿವಾದಿತ ಹೇಳಿಕೆ ಕುರಿತು ಪ್ರತಿಕ್ರಿಯಿಸಿರುವ ಮೃತ ಯುವತಿಯ ಕುಟುಂಬ, `ಅಸಾರಾಮ್ ಹೇಳಿಕೆ ಅತ್ಯಂತ ತರ್ಕರಹಿತ' ಎಂದು ಖಂಡಿಸಿದೆ.`ಬಾಪು ಅವರಿಂದ ಇಂತಹ ಹೇಳಿಕೆಯನ್ನು ನಾವೆಂದೂ ಊಹಿಸಿರಲಿಲ್ಲ. ಅತ್ಯಂತ ಕೆಳದರ್ಜೆಯ ಈ ಹೇಳಿಕೆ ಬಾಪು ಅವರ ಮನಸ್ಥಿತಿಯನ್ನು ಬಿಂಬಿಸುತ್ತದೆ' ಎಂದು ಯುವತಿಯ ಕುಟುಂಬ ಸುದ್ದಿಗಾರರಿಗೆ ತಿಳಿಸಿದೆ.`ಬಾಪು ಬಗ್ಗೆ ನಾವು ಗೌರವ ಹೊಂದಿದ್ದೆವು. ಅವರಿಗೆ ಸಂಬಂಧಿಸಿದ ಅನೇಕ ಪುಸ್ತಕಗಳು ನಮ್ಮ ಮನೆಯಲ್ಲಿದ್ದು, ಈ ಕೂಡಲೇ ಅವುಗಳನ್ನು ದೆಹಲಿಗೆ ತೆಗೆದುಕೊಂಡು ಹೋಗಿ ಬೆಂಕಿಯಲ್ಲಿ ಹಾಕುತ್ತೇವೆ' ಎಂದು ಯುವತಿಯ ಸಹೋದರ ಹೇಳಿಕೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾನೆ.ಮರಣ ದಂಡನೆ ಸಲ್ಲ

ನವದೆಹಲಿ (ಐಎಎನ್‌ಎಸ್):
`ಯಾವುದೇ ಪ್ರಕರಣಗಳಿಗೆ ಸಂಬಂಧಿಸಿದಂತೆ ಮರಣ ದಂಡನೆ ವಿಧಿಸುವುದು, ಅಂತರರಾಷ್ಟ್ರೀಯ ಮಾನವ ಹಕ್ಕುಗಳ ಘೋಷಣೆಗೆ ವಿರುದ್ಧವಾದುದಾಗಿದೆ' ಎಂದು ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗದ (ಎನ್‌ಎಚ್‌ಆರ್‌ಸಿ) ಮುಖ್ಯಸ್ಥ ಹಾಗೂ ಸುಪ್ರೀಂಕೋರ್ಟ್ ನಿವೃತ್ತ ಮುಖ್ಯನ್ಯಾಯಮೂರ್ತಿ ಕೆ.ಜಿ. ಬಾಲಕೃಷ್ಣನ್ ಮಂಗಳವಾರ ಹೇಳಿದ್ದಾರೆ.`ಹುಡುಗರ ಜತೆ ಓಡಾಡಬಾರದು'

ಮುಂಬೈ:
ಹೆಚ್ಚುತ್ತಿರುವ ಅತ್ಯಾಚಾರ ಪ್ರಕರಣಗಳಿಗೆ ಸಂಬಂಧಿಸಿದಂತೆ ಮಂಗಳವಾರ ಮಾಧ್ಯಮಗಳಿಗೆ ಹೇಳಿಕೆ ಬಿಡುಗಡೆಮಾಡಿರುವ ಮುಂಬೈ ಮೂಲದ ಸಮಾಜವಾದಿ ಪಕ್ಷದ ನಾಯಕ ಅಬು ಅಜ್ಮಿ, `ಮಹಿಳೆಯರು ರಾತ್ರಿ ಹೊತ್ತು ಹುಡುಗರ ಜತೆ ಓಡಾಡಬಾರದು. ಇದು ಭಾರತೀಯ ಸಂಸ್ಕೃತಿಗೆ ವಿರುದ್ಧವಾದದ್ದು' ಎಂದಿದ್ದಾರೆ.

`ಅಮೆರಿಕದಂತಹ ದೇಶದಲ್ಲಿ ಲೈಂಗಿಕ ದೌರ್ಜನ್ಯ ಪ್ರಕರಣಗಳು ಸಾಮಾನ್ಯ, ಇದಕ್ಕೆ ಅಲ್ಲಿಯ ವ್ಯವಸ್ಥೆಯ ಬೆಂಬಲವೂ ಇದೆ. ಆದರೆ ಇದೆಲ್ಲ ನಮ್ಮ ಭಾರತೀಯ ಸಂಸ್ಕೃತಿಗೆ ಹೊಂದುವುದಿಲ್ಲ, ಗುಜರಾತ್, ರಾಜಸ್ತಾನಗಳಲ್ಲಿ ಇಂತಹ ಪ್ರಕರಣಗಳು ನಡೆಯುವುದು ಅಪರೂಪ' ಎಂದಿದ್ದಾರೆ. ರಾತ್ರಿ ಹೊತ್ತು ಹುಡುಗ ಹುಡುಗಿಯರು ಬೀದಿಗಳಲ್ಲಿ ತಿರುಗಾಡದಂತೆ ಕಾನೂನು ರೂಪಿಸಬೇಕು ಎಂದೂ ಅಜ್ಮಿ ಸಲಹೆ ನೀಡಿದ್ದಾರೆ.

ಅಸಾರಾಮ್ ವಿರುದ್ಧ ಅರ್ಜಿ

ಲಖನೌ
: ವಿವಾದಾದ್ಮಕ ಹೇಳಿಕೆ ನೀಡಿರುವ ಆಧ್ಯಾತ್ಮಿಕ ಗುರು ಅಸಾರಾಮ್ ಬಾಪು ವಿರುದ್ಧ ಇಲ್ಲಿನ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಲಾಗಿದೆ. ಹೆಚ್ಚುವರಿ ಪ್ರಧಾನ ಮ್ಯಾಜಿಸ್ಟ್ರೇಟ್ ಅವರ ಮುಂದೆ ಈ ಅರ್ಜಿ ಸಲ್ಲಿಸಲಾಗಿದ್ದು, ವಿವಾದಾದ್ಮಕ ಹೇಳಿಕೆ ನೀಡಿದ್ದಕ್ಕಾಗಿ ಅಸಾರಾಮ್ ವಿರುದ್ಧ ಮೊಕದ್ದಮೆ ಹೂಡುವಂತೆ ಮತ್ತು ಅವರನ್ನು ವಿಚಾರಣೆಗೆ ಗುರಿಪಡಿಸುವಂತೆ ಕೋರಲಾಗಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry