ಭಾನುವಾರ, ಜೂನ್ 13, 2021
21 °C

ಮಾಧ್ಯಮದವರ ಮೇಲೆ ಹಲ್ಲೆ: ವಿವಿಧೆಡೆ ಖಂಡನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಗದಗ: ಬೆಂಗಳೂರಿನಲ್ಲಿ ಮಾಧ್ಯಮ ಪ್ರತಿನಿಧಿಗಳ ಮೇಲೆ ವಕೀಲರು ಹಲ್ಲೆ ನಡೆಸಿರುವ ಘಟನೆಯನ್ನು ಖಂಡಿಸಿ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಪದಾಧಿಕಾರಿಗಳು ಹಾಗೂ ಪತ್ರಕರ್ತರು ಶುಕ್ರವಾರ ಜಿಲ್ಲಾಧಿಕಾರಿ ಪಾಂಡುರಂಗ ನಾಯಕ ಅವರಿಗೆ ಮನವಿ ಸಲ್ಲಿಸಿದರು.ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಧಕ್ಕೆ ತಂದಿರುವ ಹಾಗೂ ಕಾನೂನು ತಿಳಿವಳಿಕೆ ಹೊಂದಿರುವ ವಕೀಲರ ಗೂಂಡಾ ವರ್ತನೆ ಪ್ರಜಾಪ್ರಭುತ್ವವನ್ನು ಕಗ್ಗೊಲೆ ಮಾಡಿದಂತಾಗಿದೆ. ಇಂತಹ ನೀಚ ಕೃತ್ಯ ಎಸಗಿರುವ ತಪ್ಪಿತಸ್ಥ ವಕೀಲರನ್ನು ಕೂಡಲೇ ಬಂಧಿಸಿ ಅವರ ಮೇಲೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಸಂಘದ ಸದಸ್ಯರು ಆಗ್ರಹಿಸಿದರು.ರಾಜ್ಯದಲ್ಲಿ ವಕೀಲರ ಗೂಂಡಾ ವರ್ತನೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಇದು ಸಮಾಜಕ್ಕೆ ಕಂಟಕಪ್ರಾಯವಾಗಿದೆ. ಕೂಡಲೇ ಸಮಾಜಘಾತುಕ ವ್ಯವಸ್ಥೆಯಲ್ಲಿ ತೊಡಗಿರುವ ವಕೀಲರನ್ನು ಬಂಧಿಸಿ ರಾಜ್ಯದಿಂದ ಗಡಿಪಾರು ಮಾಡುವಂತೆ  ಒತ್ತಾಯಿಸಿದರು.ಮಾಧ್ಯಮ ಪ್ರತಿನಿಧಿಗಳ ಮೇಲೆ ವಕೀಲರು ನಡೆಸಿರುವ ಹಲ್ಲೆ ಖಂಡಿಸಿ ಜಯ ಕರ್ನಾಟಕ ವೇದಿಕೆ ನಗರದ ಮಹಾತ್ಮಗಾಂಧೀಜಿ ವೃತ್ತದಲ್ಲಿ ಪ್ರತಿಭಟನೆ ನಡೆಸಿದರು. ಟೈರ್‌ಗೆ ಬೆಂಕಿ ಹಂಚಿದರು. ತಪ್ಪಿತಸ್ಥ ವಕೀಲರನ್ನು ಬಂಧಿಸಿ ಶಿಕ್ಷೆ ನೀಡಬೇಕು ಎಂದು ಆಗ್ರಹಿಸಿದರು.ಎಬಿವಿಪಿ ಕಾರ್ಯಕರ್ತರು ವಕೀಲರ ವರ್ತನೆ ಖಂಡಿಸಿ ನಗರದಲ್ಲಿ ಪ್ರತಿಭಟನೆ ನಡೆಸಿದರು. ಜೆಡಿಎಸ್ ಯುವ  ಘಟಕದ ಪದಾಧಿಕಾರಿಗಳು ಹಾಗೂ ಸದಸ್ಯರು ಘಟನೆಯನ್ನು ತೀವ್ರವಾಗಿ ಖಂಡಿಸಿದ್ದಾರೆ. ಮುಂಡರಗಿ ವರದಿ

ಮುಂಡರಗಿ: ಮಾಜಿ ಸಚಿವ ಜನಾರ್ದನ ರೆಡ್ಡಿಯನ್ನು ಬೆಂಗಳೂರಿನ ನ್ಯಾಯಾಲಯಕ್ಕೆ ಕರೆತಂದಾಗ ವಕೀಲರು ಅನವಶ್ಯಕವಾಗಿ ಮಾಧ್ಯಮ ಪ್ರತಿನಿಧಿಗಳ ಮೇಲೆ ಹಲ್ಲೆ ಮಾಡಿರುವ ಕ್ರಮವನ್ನು ತಾಲ್ಲೂಕಿನ ಹಲವು ಮುಖಂಡರು ತೀವ್ರವಾಗಿ ಖಂಡಿಸಿದ್ದಾರೆ.`ಕಳೆದ ತಿಂಗಳು ಕ್ಷುಲ್ಲಕ ಕಾರಣಕ್ಕೆ ಬೆಂಗಳೂರಿನಲ್ಲಿ ರಸ್ತೆ ತಡೆ ನಡೆಸಿ ಸಾರ್ವಜನಿಕರಿಗೆ ತೀವ್ರ ತೊಂದರೆ ಉಂಟು ಮಾಡಿದ್ದ ನ್ಯಾಯವಾದಿಗಳು ಶುಕ್ರವಾರ ವಿನಾಕಾರಣ ಮಾಧ್ಯಮ ಪ್ರತಿನಿಧಿಗಳ ಮೇಲೆ ಹಲ್ಲೆ ನಡೆಸಿರುವುದು ಅಸಮಂಜಸ.

 

ಸರಕಾರ ತಕ್ಷಣ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಂಡು ರಾಜ್ಯದಲ್ಲಿ ಶಾಂತಿ ಸುವ್ಯವಸ್ಥೆಯನ್ನು ಕಾಪಾಡಬೇಕು~ ಎಂದು ಜಿಲ್ಲಾ ಪಂಚಾಯ್ತಿ ಸದಸ್ಯ ಹೇಮಗಿರೀಶ ಹಾವಿನಾಳ ತಿಳಿಸಿದರು.`ಜಗತ್ತಿನ ಆಗು ಹೋಗುಗಳನ್ನು ಯಥಾ ರೀತಿ ಬಿತ್ತರಿಸಿ ಜನಸಾಮಾನ್ಯರನ್ನು ಎಚ್ಚರಿಸುತ್ತಿರುವ ಮಾಧ್ಯಮ ಪ್ರತಿನಿಧಿಗಳ ಮೇಲೆ ವಕೀಲರು ಅನವಶ್ಯಕವಾಗಿ ಹಲ್ಲೆ ಮಾಡಿದ್ದು, ಅವರ ವಿರುದ್ಧ ಸರಕಾರ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು.ವಕೀಲರ ವರ್ತನೆಯಿಂದ ಜನಸಾಮಾನ್ಯರಿಗೆ ವಿಪರೀತ ತೊಂದರೆಯಾಗಿದ್ದು, ಮುಂದೆ ಇಂಥ ಘಟನೆಗಳು ಸಂಭವಿಸದಂತೆ ಸರಕಾರ ಮುಂಜಾಗ್ರತಾ ಕ್ರಮ ಕೈಗೊಳ್ಳಬೇಕು~ ಎಂದು ಶಿರಹಟ್ಟಿ ಮತ ಕ್ಷೇತ್ರದ ಬಿಜೆಪಿ ಅಧ್ಯಕ್ಷ ಕರಬಸಪ್ಪ ಹಂಚಿನಾಳ ಒತ್ತಾಯಿಸಿದರು. `ಸರಕಾರಕ್ಕೆ, ಅಧಿಕಾರಿಗಳಿಗೆ ಹಾಗೂ ಜನಸಾಮಾನ್ಯರಿಗೆ ಬುದ್ಧಿ ಹೇಳಬೇಕಾದ ಮತ್ತು ಆದರ್ಶವಾಗಿರಬೇಕಾದ ಪತ್ರಕರ್ತರು ಮತ್ತು ವಕೀಲರು ಬೀದಿಗೆ ಇಳಿದು ಕಚ್ಚಾಡುವುದು ಶೋಭೆ ತರುವುದಿಲ್ಲ. ಪ್ರಜಾಪ್ರಭುತ್ವದ ಎರಡು ಕಣ್ಣುಗಳಂತಿರುವ ಮಾಧ್ಯಮ ಪ್ರತಿನಿಧಿಗಳ ಮತ್ತು ವಕೀಲರ ಮಧ್ಯೆ ಅನವಶ್ಯಕವಾಗಿ ಉಂಟಾಗಿರುವ ಗೊಂದಲವನ್ನು ಸೌಹಾರ್ದಯುತವಾಗಿ ಬಗೆಹರಿಸಿಕೊಳ್ಳಬೇಕು~ ಎಂದು ತಾಲ್ಲೂಕು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಹೇಮಂತಗೌಡ ಪಾಟೀಲ ತಿಳಿಸಿದರು.  `ಕಾನೂನನ್ನು ರಕ್ಷಸಬೇಕಾದವರೇ ಬೀದಿಗಿಳಿದು ಹೋರಾಟ ಮಾಡಿದರೆ ಜನಸಾಮಾನ್ಯರು ಯಾರ ಬಳಿ ನ್ಯಾಯ ಬೇಡಬೇಕು. ಮಾಧ್ಯಮ ಪ್ರತಿನಿಧಿಗಳು ಮತ್ತು ವಕೀಲರು ತಮ್ಮ ಮಧ್ಯದಲ್ಲಿ ವಿನಾಕಾರಣ ಉಂಟಾಗಿರುವ ಗೊಂದಲಗಳನ್ನು ನಿವಾರಿಸಿಕೊಂಡು ಜನರ ಸೇವೆಗೆ ಮುಂದಾಗಬೇಕು~ ಎಂದು ವೈ.ಎನ್. ಗೌಡರ ಮನವಿ ಮಾಡಿಕೊಂಡರು. ವಕೀಲರು ತಮ್ಮ ಇತಿಮಿತಿಯನ್ನು ಮೀರಿ ವರ್ತಿಸುತ್ತಿದ್ದು, ಸರಕಾರ ಅವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು. ಅನವಶ್ಯಕವಾಗಿ ಮಾಧ್ಯಮ ಪ್ರತಿನಿಧಿಗಳಿಗೆ ಮತ್ತು ಸಾರ್ವಜನಿಕರಿಗೆ ತೊಂದರೆ ನೀಡಿದ ವಕೀಲರು ಬೇಷರತ್ತಾಗಿ ಮಾಧ್ಯಮ ಪ್ರತಿನಿಧಿಗಳ ಕ್ಷಮೆ ಕೋರಬೇಕು ಎಂದು ತಾಲ್ಲೂಕು ಜೆಡಿಎಸ್ ಪ್ರಧಾನ ಕಾರ್ಯದರ್ಶಿ ದೇವಪ್ಪ ಇಟಗಿ ಆಗ್ರಹಿಸಿದರು.

ಜೆಡಿಎಸ್ ತಾಲ್ಲೂಕು ಘಟಕದ ಅಧ್ಯಕ್ಷ ಎಂ.ಜಿ. ವಡ್ಡಟ್ಟಿ, ಪುರಸಭೆ ಉಪಾಧ್ಯಕ್ಷ ಶಿವನಗೌಡ್ರ ಗೌಡ್ರ, ಯುವ ಮುಖಂಡ ಕೊಟ್ರೇಶ ಅಂಗಡಿ, ಕೊಟ್ರಗೌಡ ಪಾಟೀಲ, ನಬೀಸಾಬ ಕೆಲೂರ, ಮಂಜುನಾಥ ಇಟಗಿ, ರಜನೀಕಾಂತ ದೇಸಾಯಿ, ಶಿವು ನವಲಗುಂದ ಮೊದಲಾದವರು ವಕೀಲರ ವರ್ತನೆಯನ್ನು ಖಂಡಿಸಿದ್ದಾರೆ.ಲಕ್ಷ್ಮೇಶ್ವರ ವರದಿ

ಲಕ್ಷ್ಮೇಶ್ವರ: ಬೇರೆಯವರಿಗೆ ನ್ಯಾಯ ಕೊಡಿಸುವ ವಕೀಲರೆ ಕಾನೂನನ್ನು ಕೈಗೆ ತೆಗೆದುಕೊಂಡು ಗೂಂಡಾಗಳಂತೆ ಮಾಧ್ಯಮ ಪ್ರತಿನಿಧಿಗಳ ಮೇಲೆ ಅವಮಾನವೀಯವಾಗಿ ಹಲ್ಲೆ ಮಾಡಿದ ವಕೀಲರ ವರ್ತನೆಯನ್ನು ಅನೇಕರು ಉಗ್ರವಾಗಿ ಖಂಡಿಸಿದ್ದಾರೆ.ಮಕ್ಕಳ ಸಾಹಿತಿ ಪೂರ್ಣಾಜಿ ಖರಾಟೆ `ಕೇವಲ ಕೈಬೆರಳೆಣಿಕೆಯಷ್ಟು ವಕೀಲರ ಅಸಭ್ಯ ವರ್ತನೆಯಿಂದಾಗಿ ಇಡೀ ವಕೀಲರ ಸಮುದಾಯಕ್ಕೆ ಕೆಟ್ಟ ಹೆಸರು ತರುವಂತಾಗಿದ್ದು ತಪ್ಪು ಮಾಡಿದವರ ವಿರುದ್ಧ ಕಠಿಣ ಕ್ರಮಕೈಗೊಳ್ಳಬೇಕು. ನ್ಯಾಯ ಕೊಡಿಸುವ ವಕೀಲರೇ ಗೂಂಡಾ ವರ್ತನೆ ಪ್ರದರ್ಶನ ಮಾಡಿರುವುದು ಕಾನೂನಿಗೆ ವಿರುದ್ಧವಾಗಿದೆ.ಶಾಸಕಾಂಗ, ಕಾರ್ಯಾಂಗ, ನ್ಯಾಯಾಂಗದಂತೆ ಪತ್ರಿಕಾ ರಂಗವೂ ಈ ದೇಶದ ಸಂವಿಧಾನದ ರಕ್ಷಣೆಗೆ ದುಡಿಯುತ್ತಿದ್ದು ಜನತೆಗೆ ಸತ್ಯವನ್ನು ತಿಳಿಸುತ್ತಿರುವ ಮಾಧ್ಯಮದವರ ಮೇಲೆ ಹಲ್ಲೆ ಮಾಡಿರುವುದು ಖಂಡನೀಯ~ ಎಂದು ಹೇಳಿದರು.ಸ್ನೇಹಲೋಕ ಸಂಘದ ಅಧ್ಯಕ್ಷ ಪ್ರೇಮ ಶೇಠ್ ಅವರು `ಸುದ್ದಿಗಾರರ ಮೇಲೆ ವಿನಾ ಕಾರಣ ಹಲ್ಲೆ ಮಾಡಿದ ವಕೀಲರ ವರ್ತನೆ ತೀವ್ರ ನಾಚಿಕೆಗೇಡಿನದಾಗಿದೆ. ನಿತ್ಯ ಸುದ್ದಿಗಳನ್ನು ಜನರಿಗೆ ಮುಟ್ಟಿಸುವಲ್ಲಿ ಹಗಲಿರುಳೂ ಹೋರಾಡುತ್ತಿರುವ ಮಧ್ಯಮದವರಿಗೆ ಸೂಕ್ತ ರಕ್ಷಣೆಯ ಅವಶ್ಯಕತೆ ಇದೆ~ ಎಂದು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.ಅದರಂತೆ ಮಾಧ್ಯಮದವರ ಮೇಲೆ ನಡೆದ ಹಲ್ಲೆಯನ್ನು ಸಮೀಪದ ಶಿಗ್ಲಿಯ ಈರಣ್ಣ ಪವಾಡದ, ಚಂದ್ರಪ್ಪ ತೆವರಿ, ಕೇಶವ ಗುಲಗಂಜಿ ಮತ್ತಿತರರು ತೀವ್ರವಾಗಿ ಖಂಡಿಸಿದ್ದು `ಜನತೆಗೆ ಸತ್ಯ ಸಂಗತಿಯನ್ನು ತಿಳಿಸುವುದಕ್ಕಾಗಿ ಕೆಲಸ ಮಾಡುತ್ತಿರುವ ಮಾಧ್ಯಮದವರ ಮೇಲೆಯೇ ವಕೀಲರು ಹಲ್ಲೆ ಮಾಡಿರುವುದು ನಿಜಕ್ಕೂ ಖಂಡನೀಯ.

 

ಈ ವಿಷಯದಲ್ಲಿ ನ್ಯಾಯಾಂಗ ಇಲಾಖೆ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮಕೈಗೊಳ್ಳಬೇಕು~ ಎಂದು ಒತ್ತಾಯಿಸಿದ್ದಾರೆ. ಪಟ್ಟಣದ ಅನೇಕ ಸಂಘಟನೆಗಳ ಅಧ್ಯಕ್ಷರು ಸದಸ್ಯರು ವಕೀಲರ ವರ್ತನೆಗೆ ತಮ್ಮ ಬೇಸರ ವ್ಯಕ್ತಪಡಿಸಿದ್ದಾರೆ.ಶಿರಹಟ್ಟಿ ವರದಿ

ಶುಕ್ರವಾರ ಬೆಂಗಳೂರ ನ್ಯಾಯಾಂಗದ ಆವರಣದಲ್ಲಿ ಪತ್ರಕರ್ತರನ್ನು ಥಳಿಸಿದ ಗೂಂಡಾ ವಕೀರನ್ನು ತಕ್ಷಣ ಬಂಧಿಸಿ ಕಠಿಣ ಶಿಕ್ಷೆಗೆ ಒಳಪಡಿಸಿಬೇಕು. ಇಲ್ಲದಿದ್ದಲ್ಲಿ ಉಗ್ರ ಹೋರಾಟ ಮಾಡುವದಾಗಿ ಯುವ ಮುಖಂಡ ಮಂಜುನಾಥ ಘಂಟಿ ಎಚ್ಚರಿಕೆ ನೀಡಿದರು.ಶುಕ್ರವಾರ ಸ್ಥಳಿಯ ತಹಶೀಲ್ದಾರ ಕಾರ್ಯಾಲಯದಲ್ಲಿ ಮನವಿ ಸಲ್ಲಿಸಿ ನಂತರ ಪ್ರತಿಭಟನಾಕಾರರನ್ನುದ್ದೇಶಿಸಿ ಮಾತನಾಡಿದರು. ನ್ಯಾಯವನ್ನು ಹೇಳಬೇಕಾದ ವಕೀಲರೇ ಇಂತಹ ಗೂಂಡಾ ಪ್ರವೃತ್ತಿ ತೋರುತ್ತಿರುವುದು ಖಂಡನೀಯ. ನ್ಯಾಯಾಂಗ ವ್ಯವಸ್ಥೆಗೆ ಧಕ್ಕೆ ತರುವ ರೀತಿಯಲ್ಲಿ ನಡೆದುಕೊಂಡ ವಕೀಲರ ವಿರುದ್ಧ ಉಗ್ರ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.ನ್ಯಾಯಾಂಗದ ಆವರಣದಲ್ಲಿ ಹಲ್ಲೆ ಮಾಡಿದ ವಕೀಲರನ್ನು ಕಪ್ಪು ಪಟ್ಟಿಗೆ ಸೇರಿಸಬೇಕು. ದಾಂದಲೆ ಮಾಡುವುದಕ್ಕಾಗಿಯೇ ಬಂದಿರುವ ಕೆಲ ವಕೀಲರ ಹಿಂದೆ ವ್ಯವಸ್ಥಿತ ಸಂಚು ಅಡಗಿದೆ. ಪ್ರಕರಣವನ್ನು ಸಿಬಿಐ ತನಿಖೆಗೆ ಒಳಪಡಿಸಬೇಕು ಎಂದು ಆಗ್ರಹಿಸಿದರು. ರಂಗಪ್ಪ ಗುಡಿಮನಿ, ಅಕ್ಬರ್‌ಸಾಬ ಯಾದಗಿರಿ, ಮಜರೆಪ್ಪ ಕಂಟೆಮ್ಮನವರ, ಮುತ್ತಣ್ಣ ಮಜ್ಜಗಿ, ಸುರೇಶ ಅಕ್ಕಿ, ನೌಕರರ ಒಕ್ಕೂಟದ ಸಂಘ ತಾಲ್ಲೂಕು ಘಟಕದ ಅಧ್ಯಕ್ಷ ಎಚ್.ಆರ್. ಬೆನಹಾಳ, ಸೋಮನಗೌಡ್ರ ಮರಿಗೌಡ್ರ, ದೇವಪ್ಪ ಆಡೂರ, ಬಸವರಾಜ ಹರಿಜನ, ಮಲ್ಲಪ್ಪ ಡಂಬಳ, ಹನುಮಂತ ಕುಳಗೇರಿ, ಹಾಲಪ್ಪ ಸೂರಣಗಿ, ಸಂದೇಶ ಕಪ್ಪತ್ತನವರ, ಶಿವ್ಯ ಪ್ಯಾಟಿ, ಶಿವು ಲಮಾಣಿ, ಚಂದ್ರು ಸ್ವಾಮಿ, ಮಾರಿತು ಉಮ್ಮಣ್ಣವರ, ಸುನಿಲ ಪವಾರ ಮತ್ತಿತರರು ಉಪಸ್ಥಿತರಿದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.