ಮಂಗಳವಾರ, ನವೆಂಬರ್ 12, 2019
19 °C

ಮಾಧ್ಯಮದ ಮೇಲೆ ಕೆಂಗಣ್ಣು

Published:
Updated:

ಹಾಸನ: ಈ ಬಾರಿಯ ಸಾಹಿತ್ಯ ಸಮ್ಮೇಳನದಲ್ಲಿ ಮಾಧ್ಯಮದ ಬಗ್ಗೆ ಗೋಷ್ಠಿ ಇರಲಿಲ್ಲ. ಆದರೆ ಉದ್ಘಾಟನಾ ಸಮಾರಂಭದಿಂದ ಆರಂಭಿಸಿ ಸಮಾರೋಪದವರೆಗೆ ಎಲ್ಲ ಗೋಷ್ಠಿಗಳಲ್ಲೂ ಸಾಹಿತಿಗಳು, ಪ್ರಬಂಧಕಾರರು ಮಾಧ್ಯಮದ ಮೇಲೆ  ಕೆಂಗಣ್ಣು ಬೀರಿದರು. ಕೆಲವರು ಪ್ರೀತಿಯಿಂದ ಬೈದರೆ ಇನ್ನೂ ಕೆಲವರು ನಿಷ್ಠುರವಾಗಿ ಮಾಧ್ಯಮದ ಮೇಲೆ ಹರಿಹಾಯ್ದರು.ಶನಿವಾರ ನಡೆದ  `ಮಹಿಳಾ ದೌರ್ಜನ್ಯ ಮತ್ತು ಸಾಮಾಜಿಕ ಹೊಣೆಗಾರಿಕೆ' ಕುರಿತ ಗೋಷ್ಠಿಯಲ್ಲಿ ಮಾತನಾಡಿದ ಬಹುತೇಕ ಎಲ್ಲರೂ ಮಾಧ್ಯಮಗಳನ್ನು, ವಿಶೇಷವಾಗಿ ದೃಶ್ಯ ಮಾಧ್ಯಮದ ಮೇಲೆ ಒಂದು ದೃಷ್ಟಿ ಇಟ್ಟುಕೊಂಡೇ ಮಾತನಾಡಿದ್ದರು. ಕೆಲವರು ಸುದ್ದಿಯ ವೈಭವೀಕರಣದ ಬಗ್ಗೆ ಮಾತನಾಡಿದರೆ ಇನ್ನೂ ಕೆಲವರು ಅತ್ತೆ ಸೊಸೆ ಧಾರಾವಾಹಿಗಳು ಕೌಟುಂಬಿಕ ನೆಮ್ಮದಿ ಹಾಳುಮಾಡುತ್ತಿವೆ ಎಂದರು.ಭಾನುವಾರದ ಗೋಷ್ಠಿಗಳೂ ಇದಕ್ಕೆ ಹೊರತಾಗಲಿಲ್ಲ. ಯುವಜನರ ಮುಂದಿನ ಸವಾಲುಗಳು ವಿಷಯವನ್ನು ಕುರಿತ ಗೋಷ್ಠಿಯಲ್ಲಿ ಇಂಟರ್‌ನೆಟ್, ಫೇಸ್ ಬುಕ್. ಮೊಬೈಲ್... ಮುಂತಾದ ವಿಚಾರಗಳ ಜತೆಜತೆಯಲ್ಲೇ  ಆಗಾಗ `ಮಾಧ್ಯಮ' ಪದವೂ ಬಳಕೆಯಾಯಿತು.ಸಾಹಿತ್ಯದ ಹೊಸ ಸಧ್ಯತೆಗಳನ್ನು ಕುರಿತ ಗೋಷ್ಠಿಯಲ್ಲಿ ಲೇಖಕಿ ಜ.ನಾ. ತೇಜಶ್ರೀ ಮಾಧ್ಯಮಗಳನ್ನು ಸ್ವಲ್ಪ ನಿಷ್ಠುರವಾಗಿಯೇ ಟೀಕಿಸಿದರು.

`ಮಾಧ್ಯಮಗಳು ಸಂವೇದನೆ ಕಳೆದುಕೊಳ್ಳುತ್ತಿವೆ. ಸುದ್ದಿ ಕೊಡುವ ಧಾವಂತದಲ್ಲಿ ಸಂವೇದನೆಗಿಂತ ಸುದ್ದಿಯ ವೈಭವೀಕ ರಣ ಮುಖ್ಯವಾಗುತ್ತಿದೆ. ವಿಚಾರವನ್ನು ಪೂರ್ತಿಯಾಗಿ ಅರಿತು ಜನರಿಗೆ ತಿಳಿಸುವಷ್ಟು ವ್ಯವಧಾನ ಇಲ್ಲದಾಗಿದೆ' ಎಂದರು.ಹಾಸ್ಯ, ಚುಟುಕು ಸಾಹಿತಿಗಳಿಗೆ ಹೆಚ್ಚು ಹೆಚ್ಚು ಜಾಗ ಅಥವಾ ಸಮಯ ಕೊಡುತ್ತಿರುವ ಬಗ್ಗೆಯೂ ಆಕ್ಷೇಪ ವ್ಯಕ್ತಪಡಿಸುತ್ತ, `ಮಾಧ್ಯಮಗಳ ಈ ಪ್ರವೃತ್ತಿಯಿಂದ ಸಾಹಿತಿಗಳ ಜಾಗವನ್ನು ಹಾಸ್ಯ ಸಾಹಿತಿಗಳು ಆಕ್ರಮಿಸಿಕೊಳ್ಳುವಂತಾಗಿದೆ. ಇವರನ್ನೇ ಮಾಧ್ಯಮಗಳು  `ಫೋಕಸ್' ಮಾಡುತ್ತಿರುವುದು ಆತಂಕದ ವಿಚಾರ ಎಂದರು.ಮಾಧ್ಯಮಗಳ ಏಕತಾನತೆಯ ಭಾಷೆ ಹಾಗೂ ಧಾಟಿಗಳೂ ಭಾಷೆಗೆ ಮಾರಕವಾಗುತ್ತಿದೆ ಎಂದರು.

ಆಶಯ ನುಡಿಗಳನ್ನಾಡಿದ ಗೊರೂರು ಶಿವೇಶ್ ಸಹ ತಮ್ಮ ಮಾತುಗಳಲ್ಲಿ ಮಾಧ್ಯಮಗಳನ್ನು ಕುಟುಕಿದ್ದಾರೆ. ಹಿಂದೆ ಮೂರುಮೂರು ಕಾದಂಬರಿಗಳನ್ನು (ಧಾರಾವಾಹಿ ರೂಪದಲ್ಲಿ) ಪ್ರಕಟಿಸುತ್ತಿದ್ದ ವಾರಪತ್ರಿಕೆಗಳು ಈಗ ಒಂದು ಧಾರಾವಾಹಿ, ಒಂದು ಸಣ್ಣ ಕತೆಗೆ ಸೀಮಿತವಾಗಿವೆ. ಸಾಹಿತ್ಯದ ಜಾಗವನ್ನು ಗ್ಲ್ಯಾಮರ್, ಫ್ಯಾಷನ್, ಚಲನಚಿತ್ರಗಳು ಆಕ್ರಮಿಸಿಕೊಂಡಿವೆ. ಸಾಹಿತ್ಯ ಲೇಖನಗಳಿಗೆ, ಕತೆಗಳಿಗೆ ತಮ್ಮ ಪುರವಣಿಗಳಲ್ಲಿ ಸ್ಥಾನವನ್ನೇ ಕೊಡದ ಪತ್ರಿಕೆಗಳೂ ನಮ್ಮಲ್ಲಿವೆ' ಎಂದರು.ಮಾಧ್ಯಮಕ್ಕೆ ಪ್ರತ್ಯೇಕ ಗೋಷ್ಠಿ ಇಲ್ಲದಿದ್ದರೂ ಮಾಧ್ಯಮದ ಬಗ್ಗೆ ಇಷ್ಟೆಲ್ಲ ವಿಚಾರಗಳು ಚರ್ಚೆಯಾಗಿದ್ದು ಸಮ್ಮೇಳನದ ವಿಶೇಷವಾಗಿತ್ತು. ಆದರೆ ಸಮಾರೋಪ ಸಮಾರಂಭದಲ್ಲಿ ಒಬ್ಬ ಪತ್ರಕರ್ತ ಹಾಗೂ ಮೂವರು ಸುದ್ದಿ ವಾಹಿನಿಗಳ ಆ್ಯಂಕರ್‌ಗಳನ್ನು ಸನ್ಮಾನಿಸಲಾಯಿತು.

ಪ್ರತಿಕ್ರಿಯಿಸಿ (+)