ಮಾಧ್ಯಮವು ನ್ಯಾಯಾಂಗ ವಿಮರ್ಶೆ ಮಾಡಲಿ

7
ಹೈಕೋರ್ಟ್ ನ್ಯಾಯಮೂರ್ತಿ ಎಚ್.ಎನ್.ನಾಗಮೋಹನ್ ದಾಸ್ ಕರೆ

ಮಾಧ್ಯಮವು ನ್ಯಾಯಾಂಗ ವಿಮರ್ಶೆ ಮಾಡಲಿ

Published:
Updated:
ಮಾಧ್ಯಮವು ನ್ಯಾಯಾಂಗ ವಿಮರ್ಶೆ ಮಾಡಲಿ

ಮೈಸೂರು: `ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ನ್ಯಾಯಾಂಗವನ್ನು ಸಾರ್ವಜನಿಕರು ಬಲವಾಗಿ ನಂಬಿದ್ದಾರೆ. ನ್ಯಾಯಾಂಗದ ಬಗ್ಗೆ ಮಾಧ್ಯಮ ವಿಮರ್ಶೆ ಮಾಡಬೇಕು' ಎಂದು ಹೈಕೋರ್ಟ್ ನ್ಯಾಯಮೂರ್ತಿ ಎಚ್.ಎನ್.ನಾಗಮೋಹನ್ ದಾಸ್ ಕರೆ ನೀಡಿದರು.ಕರ್ನಾಟಕ ಮಾಧ್ಯಮ ಅಕಾಡೆಮಿ, ಮೈಸೂರು ಜಿಲ್ಲಾ ಪತ್ರಕರ್ತರ ಸಂಘ ಮತ್ತು ವಾರ್ತಾ ಇಲಾಖೆ ಸಹಯೋಗ ದಲ್ಲಿ ನಗರದ ರಾಣಿ ಬಹದ್ದೂರ್ ಸಭಾಂಗಣದಲ್ಲಿ ಶನಿವಾರ ನಡೆದ `ಮಾಹಿತಿ ಹಕ್ಕು ಮತ್ತು ಮಾಧ್ಯಮ' ರಾಜ್ಯ ಮಟ್ಟದ ಎರಡು ದಿನಗಳ ವಿಚಾರ ಸಂಕಿರಣವನ್ನು ಉದ್ಘಾಟಿಸಿ ಅವರು ಮಾತನಾಡಿದರು. 

`ಯಾವುದೇ ಕ್ಷೇತ್ರಗಳ ಬಗ್ಗೆ ಮಾಧ್ಯಮ ಮಾಡುವ ವಿಮರ್ಶೆ ಆರೋಗ್ಯಕರ, ರಚನಾತ್ಮಕವಾಗಿರಬೇಕು. ಸಂಸ್ಕೃತಿಯ ಧ್ವಂಸ ಮಾಡಬಾರದು. ಶಾಸಕಾಂಗ, ಕಾರ್ಯಾಂಗ ಮತ್ತು ನ್ಯಾಯಾಂಗ ವ್ಯವಸ್ಥೆ ಮೇಲೆ ಜನರು ಇಟ್ಟಿರುವ ನಂಬಿಕೆ ಮತ್ತಷ್ಟು ಗಟ್ಟಿಗೊಳ್ಳಬೇಕು. ಸಮಾಜದಲ್ಲಿ ಎದುರಾಗುವ ದೊಡ್ಡ ಸವಾಲುಗಳನ್ನು ಹಿಮ್ಮೆಟ್ಟಿಸುವ ಕುರಿತು ಮಾಧ್ಯಮಗಳು ಗಂಭೀರ ಚಿಂತನೆ ನಡೆಸಬೇಕು. ಆದರೆ ಜನಾಭಿಪ್ರಾಯವನ್ನು ತಿರುಚುವ ಕೆಲಸ ಎಂದಿಗೂ ಮಾಡಬಾರದು' ಎಂದರು.`ಲೈಂಗಿಕ, ಅಪರಾಧ, ಮಾಧ್ಯಮದಲ್ಲಿ ವಿಜೃಂಭಿಸುತ್ತಿದೆ. ರೈತರು, ಕೈಗಾರಿಕೆಗಳು, ಸಾಂಸ್ಕೃತಿಕ ದಿವಾಳಿತನದ ಬಗ್ಗೆ ಒತ್ತು ಕೊಡಬೇಕಾದ ಮಾಧ್ಯಮ ಕ್ರಿಕೆಟ್, ಫ್ಯಾಶನ್, ಸಿನಿಮಾಗೆ ಪ್ರಾಧಾನ್ಯತೆ ನೀಡುತ್ತಿರುವುದು ಒಳ್ಳೆಯ ಬೆಳವಣಿಗೆಯಲ್ಲ. ಕೆಲ ವರದಿಗಳಲ್ಲಿ ಸತ್ಯಾಂಶವೇ ಇರುವುದಿಲ್ಲ. ಸುಳ್ಳು ಸುದ್ದಿ ನೀಡುವುದರಿಂದ ಸಮಾಜದ ಮೇಲೆ ಪರಿಣಾಮ ಬೀರುತ್ತದೆ ಎಂಬುದನ್ನು ವರದಿಗಾರ ಅರಿಯಬೇಕು. ಬುದ್ಧಿವಂತಿಕೆ ಜೊತೆಗೆ ವೃತ್ತಿಪರತೆ, ಮಾನವೀಯತೆಯನ್ನು ಮೈಗೂಡಿಸಿಕೊಳ್ಳಬೇಕು. ಪತ್ರಿಕಾ ಸ್ವಾತಂತ್ರ್ಯ ಜವಾಬ್ದಾರಿ ಹೊರತು ಪರವಾನಗಿ ಅಲ್ಲ' ಎಂದು ಹೇಳಿದರು.`ಬೇಡದ ವಿಷಯಗಳ ಕುರಿತು ಮಾಧ್ಯಮದಲ್ಲಿ ಬೆಳಿಗ್ಗೆಯಿಂದ ಸಂಜೆವರೆಗೆ ಚರ್ಚೆ ಮಾಡಲಾಗುತ್ತಿದೆ. ಸುದ್ದಿ ವಾಹಿನಿಗಳನ್ನು ನೋಡಲು ಮುಜುಗರವಾಗುತ್ತಿದೆ. ಮಾಧ್ಯಮ ನಿಷ್ಪಕ್ಷಪಾತವಾಗಿ ಕೆಲಸ ಮಾಡುತ್ತಿಲ್ಲ. ಕೆಲ ಚಾನೆಲ್‌ಗಳು ರಾಜಕೀಯ ವ್ಯಕ್ತಿಗಳ ಹಿಡಿತದಲ್ಲಿವೆ. ಪೀತ ಪತ್ರಿಕೋದ್ಯಮ, ಪೇಡ್ ನ್ಯೂಸ್ ಹೆಚ್ಚಾಗುತ್ತಿದೆ' ಎಂದು ಅಸಮಾಧಾನ ವ್ಯಕ್ತಪಡಿಸಿದರು.`ಸಂವಿಧಾನದ ಹಕ್ಕನ್ನು ಪ್ರತಿಯೊಬ್ಬರು ಪಾಲಿಸಬೇಕು. ನ್ಯಾಯಾಂಗ ತೀರ್ಪು, ಅಪರಾಧ ವರದಿಗಾರಿಕೆಯಲ್ಲಿ ತಪ್ಪು ಮಾಹಿತಿಯನ್ನು ಸಮಾಜಕ್ಕೆ ನೀಡಲಾಗುತ್ತಿದೆ. ಆರೋಪಿಗೆ ಶಿಕ್ಷೆ ಆಗುವ ಮುನ್ನವೇ ಅಪರಾಧಿಯೆಂದು ಮಾಧ್ಯಮದಲ್ಲಿ ಬಿಂಬಿಸಲಾಗುತ್ತಿದೆ. ಕೃಷಿ, ಕೈಗಾರಿಕೆ, ಭಾಷೆ, ಸಂಸ್ಕೃತಿ, ನ್ಯಾಯಾಂಗ ವ್ಯವಸ್ಥೆಯ ಮೇಲೆ ಜಾಗತೀಕರಣ ಪ್ರಭಾವ ಬೀರಿದೆ.

ಇದರಿಂದ ಮಾಧ್ಯಮ ಸಹ ಹೊರತಾಗಿಲ್ಲ. ಜಾಗತೀಕರಣ ಜಾರುಬಂಡೆಯಲ್ಲಿ ಮಾಧ್ಯಮ ಸಹ ಜಾರಿದೆ. ಹಾಗಾಗಿ ಪ್ರತಿಯೊಬ್ಬರು ಬದುಕಿನಲ್ಲಿ ನೈತಿಕ ಮೌಲ್ಯಗಳನ್ನು ಬೆಳೆಸಿಕೊಳ್ಳಬೇಕು. ಮಾಧ್ಯಮ ಜನರ ಜೊತೆ ಬೆರೆತು, ಜನಜಾಗೃತಿ ಮೂಡಿಸುವ ಕೆಲಸ ಮಾಡಬೇಕು' ಎಂದು ಕಿವಿಮಾತು ಹೇಳಿದರು.ರಾಜ್ಯ ಮಾಹಿತಿ ಹಕ್ಕು ಆಯುಕ್ತ ಜೆ.ಎಸ್.ವಿರೂಪಾಕ್ಷಯ್ಯ ಮಾತನಾಡಿ, `ವಿಶ್ವದಲ್ಲಿ ಮಾಹಿತಿ ಹಕ್ಕು ಕಾಯ್ದೆಯನ್ನು ಜಾರಿಗೊಳಿಸಿದ ದೇಶಗಳಲ್ಲಿ ಭಾರತ 52 ನೇ ರಾಷ್ಟ್ರವಾಗಿದೆ. ಗ್ರಾಮ ಪಂಚಾಯಿತಿ ಕಾರ್ಯದರ್ಶಿಯಿಂದ ಹಿಡಿದು ರಾಷ್ಟ್ರಪತಿ ಅವರೂ ಇದರ ವ್ಯಾಪ್ತಿಗೆ ಒಳಪಡುತ್ತಾರೆ. ಸಾರ್ವಜನಿಕರು ರಾಜ್ಯದ ಯಾವುದೇ ಮೂಲೆಗೆ ರೂ.10 ರ ಪೋಸ್ಟ್ ಕಾರ್ಡ್‌ನಿಂದ ಮಾಹಿತಿಯನ್ನು ಕೇಳಿ ಪಡೆಯಬಹುದು.

ಅಗತ್ಯ ಮಾಹಿತಿಯನ್ನು ಸಾರ್ವಜನಿಕರಿಗೆ ಒದಗಿಸುವುದು ಪ್ರತಿಯೊಂದು ಇಲಾಖೆ ಅಧಿಕಾರಿ, ನೌಕರನ ಆದ್ಯ ಕರ್ತವ್ಯ. ಮಾಹಿತಿ ಕೊಡದ ಅಧಿಕಾರಿಗೆ 5 ವರ್ಷ ಸಾಧಾರಣ ಶಿಕ್ಷೆ ವಿಧಿಸುವಂತೆ ಕಾಯ್ದೆಯಲ್ಲಿ ತರಲಾಗಿತ್ತು. ಆದರೆ ಅದನ್ನು ಬದಲಿಸಿ ರೂ.25 ಸಾವಿರ ದಂಡ ವಿಧಿಸುವುದನ್ನು ಜಾರಿ ಮಾಡಲಾಗಿದೆ. ಅರ್ಜಿದಾರರು ಒಂದು ವಿಷಯ ಕುರಿತು ಅರ್ಜಿಯಲ್ಲಿ ಮಾಹಿತಿ ಕೇಳಬಹುದು. ಪ್ರತ್ಯೇಕ ವಿಷಯಕ್ಕೆ ಮತ್ತೊಂದು ಅರ್ಜಿ ಸಲ್ಲಿಸಬೇಕು. ಅರ್ಜಿ 150 ಪದಗಳು ಮೀರಿದ್ದರೆ ಅದನ್ನು ಪರಿಗಣಿಸಲಾಗುವುದಿಲ್ಲ. ಪ್ರಶ್ನೆ ಸ್ಪಷ್ಟವಾಗಿದ್ದಲ್ಲಿ ಅಧಿಕಾರಿಗಳಿಗೆ ಮಾಹಿತಿ ನೀಡುವುದು ಸುಲಭ' ಎಂದು ಮಾಹಿತಿ ಹಕ್ಕು ಕಾಯ್ದೆ ಕುರಿತು ವಿವರ ನೀಡಿದರು.`ಸರ್ಕಾರಿ ಅಧಿಕಾರಿಗಳು ನಿಗದಿತ ಅವಧಿಯೊಳಗೆ ಅರ್ಜಿದಾರರಿಗೆ ಮಾಹಿತಿ ಒದಗಿಸಬೇಕು. ಒಂದು ವೇಳೆ ವಿಳಂಬ ಮಾಡುವುದು, ಸುಳ್ಳು ಮಾಹಿತಿ ನೀಡುವುದು ಮಾಡಿದಲ್ಲಿ ಅದು ಶಿಕ್ಷಾರ್ಹ. ಅರ್ಜಿದಾರರಿಗೆ ಆದ ನಷ್ಟವನ್ನು ಅಧಿಕಾರಿ ಇಲ್ಲವೆ ಕಚೇರಿ ಹಣದಲ್ಲಿ ಭರಿಸಬೇಕಾಗುತ್ತದೆ. ಸಾರ್ವಜನಿಕ ಸಂಸ್ಥೆಗಳನ್ನು ಹೊರತುಪಡಿಸಿ, ಸಹಕಾರ ಸಂಘಗಳು, ಸಾರ್ವಜನಿಕ ಪ್ರಾಧಿಕಾರ ಮತ್ತು ಸಮಾಜದ ಷೇರುಗಳನ್ನು ಹೊಂದಿರುವಂತಹ ಸಂಸ್ಥೆಗಳ ಬಗ್ಗೆ ಮಾಹಿತಿ ಹಕ್ಕು ಕಾಯ್ದೆಯಡಿ ಮಾಹಿತಿ ಪಡೆದುಕೊಳ್ಳಬಹುದು' ಎಂದು ಹೇಳಿದರು.ವಾರ್ತಾ ಇಲಾಖೆ ನಿರ್ದೇಶಕ ಎನ್.ಆರ್.ವಿಶುಕುಮಾರ್ ಮಾತನಾಡಿ, `ಸರ್ಕಾರಿ ಕಾರ್ಯಕ್ರಮಗಳನ್ನು `ಜನ ಶಿಕ್ಷಣ' ಧಾರವಾಹಿ ಮೂಲಕ ಪ್ರಸಾರ ಮಾಡಲು ಸಿದ್ಧತೆಗಳು ನಡೆಯುತ್ತಿವೆ' ಎಂದು ಹೇಳಿದರು. ಕರ್ನಾಟಕ ಮಾಧ್ಯಮ ಅಕಾಡೆಮಿ ಅಧ್ಯಕ್ಷ ಎಂ.ಎ. ಪೊನ್ನಪ್ಪ, ಸದಸ್ಯ ಅಂಶಿ ಪ್ರಸನ್ನಕುಮಾರ್, ಪತ್ರಿಕೋದ್ಯಮಿ ಕೆ.ಬಿ.ಗಣಪತಿ ಉಪಸ್ಥಿತರಿದ್ದರು.

ಮೈಸೂರು ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷ ಸಿ.ಕೆ.ಮಹೇಂದ್ರ ಅಧ್ಯಕ್ಷತೆ ವಹಿಸಿದ್ದರು. ಪ್ರಧಾನ ಕಾರ್ಯದರ್ಶಿ ಕೆ.ದೀಪಕ್ ಸ್ವಾಗತಿಸಿದರು. ನಂತರ ನಡೆದ ಗೋಷ್ಠಿಯಲ್ಲಿ ಅಂಕಣಕಾರ ವೈ.ಜಿ.ಮುರಳೀಧರ, ಪತ್ರಕರ್ತರಾದ ಕೃಷ್ಣವಟ್ಟಂ, ಬಿ.ಎಸ್. ಸತ್ಯನಾರಾಯಣ, ಎನ್.ಎ.ಎಂ.ಇಸ್ಮಾಯಿಲ್. ರಿಷಿಕೇಶ್ ಬಹದ್ದೂರ್, ವಿಷಯ ಮಂಡಿಸಿದರು.

ಮಠಗಳ ಬಗ್ಗೆ ಮಾಹಿತಿ ಪಡೆಯಬಹುದು

ಸರ್ಕಾರದಿಂದ ಅನುದಾನ ಪಡೆದ ಮಠಗಳು ಮತ್ತು ಇತರೆ ಸಂಘ ಸಂಘ ಸಂಸ್ಥೆಗಳ ಬಗ್ಗೆಯೂ ಅರ್ಜಿದಾರರು ಮಾಹಿತಿ ಹಕ್ಕು ಕಾಯ್ದೆಯಡಿ ಮಾಹಿತಿ ಪಡೆಯಬಹುದು.

ಕಡತ ನಾಪತ್ತೆಯಾದರೆ ಜೈಲು ಶಿಕ್ಷೆ

`ಸರ್ಕಾರಿ ಅಧಿಕಾರಿಗಳು ಮತ್ತು ನೌಕರರು ತಮ್ಮ ಸೇವಾ ಅವಧಿಯಲ್ಲಿ ಕಡತಗಳನ್ನು ಸರಿಯಾಗಿ ನಿರ್ವಹಿಸಬೇಕು. ಒಂದು ವೇಳೆ ಕಡತ ಸರಿಯಾಗಿ ನಿರ್ವಹಣೆ ಮಾಡದಿರುವುದು, ಕಡತ ನಾಪತ್ತೆಯಾದರೆ ಅಂತಹವರು ನಿವೃತ್ತಿ ನಂತರವೂ ಐದು ವರ್ಷ ಜೈಲು ಶಿಕ್ಷೆ ಅನುಭವಿಸಬೇಕಾಗುತ್ತದೆ. ಸರ್ಕಾರ ಕಡತ ಸಂರಕ್ಷಣಾ ಕಾಯ್ದೆ-2010 ನ್ನು ಮಾಹಿತಿ ಹಕ್ಕು ಕಾಯ್ದೆಯಡಿ ಜಾರಿಗೊಳಿಸುತ್ತಿದೆ' ಎಂದು ವಿರೂಪಾಕ್ಷಯ್ಯ ತಿಳಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry