ಮಾಧ್ಯಮ ವಿಶ್ವಾಸಾರ್ಹತೆಗೆ ಕುತ್ತು

7

ಮಾಧ್ಯಮ ವಿಶ್ವಾಸಾರ್ಹತೆಗೆ ಕುತ್ತು

Published:
Updated:
ಮಾಧ್ಯಮ ವಿಶ್ವಾಸಾರ್ಹತೆಗೆ ಕುತ್ತು

ತುಮಕೂರು:  ಭಾರತೀಯ ಪತ್ರಿಕೋದ್ಯಮದ ವಿಶ್ವಾಸಾರ್ಹತೆ ಕನಿಷ್ಠ ಮಟ್ಟಕ್ಕೆ ಕುಗ್ಗಿದೆ ಎಂದು ಇಂಗ್ಲಿಷ್ ನಿಯತಕಾಲಿಕೆ `ಔಟ್‌ಲುಕ್~ನ ಸಂಪಾದಕ ಕೃಷ್ಣಪ್ರಸಾದ್ ಅಭಿಪ್ರಾಯಪಟ್ಟರು.ನಗರದಲ್ಲಿ ಕಾರ್ಯನಿರತ ಪತ್ರಕರ್ತರ ಸಂಘ ಶನಿವಾರ ಏರ್ಪಡಿಸಿದ್ದ 65ನೇ ರಾಷ್ಟ್ರೀಯ ಪತ್ರಕರ್ತರ ಸಮಾವೇಶದ ವಿಚಾರ ಸಂಕಿರಣ ಉದ್ಘಾಟಿಸಿ ಮಾತನಾಡಿದ ಅವರು, ವ್ಯಕ್ತಿಗತವಾಗಿ ಪತ್ರಕರ್ತರು ಮತ್ತು ಇಡಿಯಾಗಿ ಮಾಧ್ಯಮ ಸಂಸ್ಥೆಗಳು ವಿಶ್ವಾಸಾರ್ಹತೆ ದೃಷ್ಟಿಯಿಂದ ಹಲವು ಸಮಸ್ಯೆಗಳನ್ನು ಎದುರಿಸುತ್ತಿವೆ. ಮಾಧ್ಯಮ ಸಂಸ್ಥೆಗಳೇ ನೇರವಾಗಿ ಭ್ರಷ್ಟಾಚಾರದಲ್ಲಿ ಪಾಲ್ಗೊಳ್ಳುತ್ತಿವೆ. ಈ ಮೂಲಕ ಭ್ರಷ್ಟಾಚಾರ ಎನ್ನುವುದು ಸಂಸ್ಥೆಗಳ ಮಟ್ಟಕ್ಕೂ ವ್ಯಾಪಿಸಿದೆ ಎಂದು ವಿಶ್ಲೇಷಿಸಿದರು.ರಿಯಲ್ ಎಸ್ಟೇಟ್ ಏಜೆಂಟ್‌ಗಳು ಮತ್ತು ರಾಜಕಾರಣಿಗಳು ಮಾಧ್ಯಮ ಸಂಸ್ಥೆಗಳನ್ನು ಪ್ರಾರಂಭಿಸಲು ಉತ್ಸಾಹ ತೋರುತ್ತಿದ್ದಾರೆ. ಹಲವು ಮಾಧ್ಯಮಗಳ ಮಾಲೀಕತ್ವ ಸಂಪಾದಿಸಿಕೊಳ್ಳುವ ಮೂಲಕ ಮಾಧ್ಯಮ ಕ್ಷೇತ್ರದಲ್ಲಿ ಏಕಸ್ವಾಮ್ಯ ಸಾಧಿಸುವ ಯತ್ನಗಳು ನಡೆಯುತ್ತಿವೆ. ಇದರಿಂದ ನಿರ್ದಿಷ್ಟ ಅಭಿಪ್ರಾಯ ಹೇರಲು ಇಡಿ ಸಮೂಹವನ್ನೇ ಬಳಸುವ ಅಪಾಯವಿದೆ ಎಂದು ವಿಷಾದಿಸಿದರು.ಮಾಧ್ಯಮ ಸಂಸ್ಥೆಗಳು ಪತ್ರಕರ್ತರ ತರಬೇತಿಗಾಗಿ ವರ್ಷದಲ್ಲಿ ಎಷ್ಟು ಹಣ ಮತ್ತು ಎಷ್ಟು ಸಂಪನ್ಮೂಲ ವ್ಯಯಿಸುತ್ತಿವೆ ಎಂಬುದರ ಆತ್ಮಾವಲೋಕನ ಮಾಡಿಕೊಳ್ಳಬೇಕು. ವಿಶ್ವವಿದ್ಯಾಲಯಗಳೂ ಸೇರಿದಂತೆ ಮಾಧ್ಯಮ ಅಧ್ಯಯನ ಕೇಂದ್ರಗಳೊಂದಿಗೆ ನಿರಂತರ ಸಂಪರ್ಕದಲ್ಲಿರಬೇಕು ಎಂದರು.ಪತ್ರಿಕೋದ್ಯಮದ ವಿಶ್ವಾಸಾರ್ಹತೆ ಮತ್ತು ಭವಿಷ್ಯ~ ಕುರಿತು ಮಾತನಾಡಿದ ಸಮಯ ಟಿವಿ ಉಪಾಧ್ಯಕ್ಷ ಮಂಜುನಾಥ್, ದೃಶ್ಯ ಮಾಧ್ಯಮದಲ್ಲಿ ಸುಂದರ ಮುಖ ಮತ್ತು ಶರೀರಕ್ಕೆ ಬುದ್ಧಿಗಿಂತಲೂ ಹೆಚ್ಚಿನ ಆದ್ಯತೆ ಸಿಗುತ್ತಿದೆ. ಹೀಗಾಗಿ ಸುಂದರ ಮುಖದ ಮೀಡಿಯೋಕರ್‌ಗಳು ಹೆಚ್ಚಿನ ಸಂಖ್ಯೆಯಲ್ಲಿ ಕೆಲಸ ಗಿಟ್ಟಿಸಿಕೊಳ್ಳುತ್ತಿದ್ದಾರೆ ಎಂದರು.ಕಾರ್ಯನಿರತ ಪತ್ರಕರ್ತರ ಸಂಘಗಳು ಪತ್ರಕರ್ತರ ಅಟಾಟೋಪಕ್ಕೆ ನಿಯಂತ್ರಣ ಹೇರುವ ನಿಟ್ಟಿನಲ್ಲಿ ಬಿಗಿಯಾದ ನೀತಿ ಸಂಹಿತೆ ರೂಪಿಸಬೇಕು. ತಪ್ಪು ಮಾಡಿದ್ದಾರೆ ಎಂದು ಸಾಬೀತಾದವರಿಗೆ ಯಾವುದೇ ಮಾಧ್ಯಮ ಸಂಸ್ಥೆಗಳಲ್ಲೂ ಕೆಲಸ ಸಿಗದ ವಾತಾವರಣ ನಿರ್ಮಾಣವಾಗಬೇಕು ಎಂದರು.`ಪತ್ರಿಕೋದ್ಯಮದಲ್ಲಿ ಸಾಮಾಜಿಕ ಹೊಣೆಗಾರಿಕೆ~ ಕುರಿತು ಪತ್ರಕರ್ತರಾದ ಯು.ಎಸ್.ಆರಾಧ್ಯ, ನಾರಾಯಣ ಜಮಖಂಡಿ ಮಾತನಾಡಿದರು. ತೆಲಂಗಾಣ ರಾಜ್ಯ ಸ್ಥಾಪನೆ ಹೋರಾಟ ಬೆಂಬಲಿಸಬೇಕೆಂದು ಆಂಧ್ರದಿಂದ ಬಂದಿದ್ದ ಪತ್ರಕರ್ತರು ಮುಖಂಡ ಜನಾರೆಡ್ಡಿ ನೇತೃತ್ವದಲ್ಲಿ ಪ್ರದರ್ಶನ ನಡೆಸಿ ಐಎಫ್‌ಡಬ್ಲುಜೆ ಅಧ್ಯಕ್ಷ ಎನ್. ವಿಕ್ರಂರಾವ್ ಅವರಿಗೆ ಮನವಿ ಸಲ್ಲಿಸಿದರು. ಹಿರಿಯ ಸ್ವಾತಂತ್ರ್ಯ ಹೋರಾಟಗಾರ ಎಚ್.ಎಸ್.ದೊರೆಸ್ವಾಮಿ, ಕೆಯುಡಬ್ಲುಜೆ ಅಧ್ಯಕ್ಷ ಗಂಗಾಧರ ಮೊದಲಿಯಾರ್ ಇತರರಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry