ಗುರುವಾರ , ಫೆಬ್ರವರಿ 25, 2021
20 °C
ಫ್ಯಾಸಿಸಂನ ಎಳೆ ಬಿಡಿಸಿದ ದೇವನೂರು ಮಹಾದೇವ

ಮಾನವತೆ ತಿಂದು ಹಾಕುವ ಮತಾಂಧತೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮಾನವತೆ ತಿಂದು ಹಾಕುವ ಮತಾಂಧತೆ

ಕೋಲಾರ: ಮತಾಂಧತೆ ಯಾವುದೇ ಜಾತಿ ಮತ್ತು ಧರ್ಮದ್ದಿರಲಿ. ಅವುಗಳೆಲ್ಲ ಒಂದೇ ತಾಯಿಯ ಸಂತಾನ. ಬಹಿ­ರಂಗವಾಗಿ ಬೇರೆಯಾಗಿ ಕಾಣಬಹುದು. ಆದರೆ ಎಲ್ಲವುಗಳ ಅಂತರಂಗ ಒಂದೇ ಎಂದು ಲೇಖಕ ದೇವನೂರು ಮಹಾದೇವ ಅಭಿಪ್ರಾಯಪಟ್ಟರು.ದಲಿತ ಸಂಘರ್ಷ ಸಮಿತಿಯು ನಗರದಲ್ಲಿ ಗುರುವಾರ ಏರ್ಪಡಿಸಿದ್ದ ‘ಭಾರತದ ಬಹುಸಂಸ್ಕೃತಿಯ ಮೇಲೆ ಫ್ಯಾಸಿಸಂನ ದುಷ್ಪರಿಣಾಮ’ ಕುರಿತು ವಿಚಾರ ಸಂಕಿರಣವನ್ನು ಉದ್ಘಾಟಿಸಿ ಮಾತನಾಡಿದ ಅವರು, ಯಾರದೇ ಮತಾಂಧತೆಯು ಮೊದಲು ತಿಂದು­ಹಾಕುವುದು ಮಾನವತೆಯನ್ನು ಮಾತ್ರ, ಹಿಡಿಯಷ್ಟು ಇರುವ ಮತಾಂಧತೆಗೆ ವೀಕ್ಷಕರಾಗಿರುವ ಸಮುದಾಯವು ಬೇಗನೇ ಅಸಹಕಾರ ತೋರದೇ ಇದ್ದರೆ ದೊಡ್ಡ ಅನಾಹುತವಾಗುತ್ತದೆ ಎಂದು ಆತಂಕ ವ್ಯಕ್ತಪಡಿಸಿದರು.ಮತಾಂಧತೆಯು ಮೊದಲು ತನಗೆ ಸೇರಿದವರ ಕಣ್ಣುಗಳನ್ನು ಕೀಳುತ್ತದೆ. ಮಿದುಳನ್ನು ಕಿತ್ತು ವಿವೇಕ­ಶೂನ್ಯರನ್ನಾಗಿ­ಸುತ್ತದೆ. ಹೃದಯವನ್ನು ಕಿತ್ತು ಕ್ರೂರಿ­ಗಳನ್ನಾಗಿಸುತ್ತದೆ. ಆಮೇಲೆ ನರಬಲಿ ಕೇಳುತ್ತದೆ. ನಮ್ಮ ಮಕ್ಕಳ ಕಣ್ಣು, ಹೃದಯ ಮತ್ತು ಮಿದುಳು­ಗಳನ್ನು ಮತಾಂಧತೆಯ ದವಡೆಯಿಂದ ರಕ್ಷಿಸ­ಬೇಕಾಗಿದೆ. ಇದು ನಮ್ಮದಷ್ಟೇ ಜವಾ­ಬ್ದಾರಿ­ಯಲ್ಲ. ಇಡೀ ಸಮಾಜದ ಜವಾಬ್ದಾರಿ ಎಂದರು.ಪ್ರಗತಿಪರರು ಮತಾಂಧತೆಯ ವಿಷದ ಫಸಲನ್ನು ಮಾತ್ರ ವಿರೋಧಿಸುತ್ತಿ­ದ್ದಾರೆ. ವಿಷದ ಬದಲು ಏಕತೆ, ಪ್ರೀತಿ, ಸಮಾನತೆಯ ಬೀಜಗಳನ್ನು ಬಿತ್ತುತ್ತಿಲ್ಲ. ಕಲ್ಲು ಹೊಡೆಯುವುದರಲ್ಲಿ ಸಕ್ರಿಯ­ರಾಗಿರುವ ಪ್ರಗತಿಪರರು ಬಿತ್ತನೆಯಲ್ಲಿ ಸೋಲುತ್ತಿದ್ದಾರೆ. ಇನ್ನಾದರೂ ಪ್ರಯತ್ನಿ­ಸಬೇಕು ಎಂದು ಹೇಳಿದರು.ಪ್ರಗತಿಪರರು ಪ್ರಗತಿಪರಿಗಾಗಿ ಪ್ರಗತಿ­ಪರರಿಗೋಸ್ಕರವಾಗಿ ಮಾತನಾಡು­ವು­ದನ್ನು ನಿಲ್ಲಿಸಬೇಕಾಗಿದೆ. ಯಾರು ಮತಾಂಧತೆಯಲ್ಲಿ ಸಿಲುಕಿ ಒದ್ದಾ­ಡುತ್ತಿದ್ದಾರೋ ಅವರಿಗೆ ಪ್ರಗತಿಪರರ ಮಾತುಗಳು ತಲುಪಬೇಕಾಗಿವೆ. ನಮ್ಮ ಮಕ್ಕಳು ಮತ್ತು ಯುವಜನ ಸುಳ್ಳು ಹೇಳುವವರಾಗಿ, ವಂಚಕರಾಗಿ, ದ್ವೇಷಿ­ಗಳಾ­ಗಿರಬೇಕೆ? ಎಂಬುದನ್ನು ಇಡೀ ಸಮುದಾಯ ಆಲೋಚಿಸಬೇಕು ಎಂದರು.ಯಾಂತ್ರಿಕ: ದಲಿತ ಸಂಘಟನೆಯನ್ನು ಒಟ್ಟಾಗಿ ನೋಡಿದಾಗ ಯಾಂತ್ರಿಕವಾಗಿ ಕಾಣಿಸುತ್ತದೆ. ಆಂತರಿಕ ಚೈತನ್ಯ ಕಡಿಮೆಯಾಗಿದೆ. ಹಲವು ಗುಂಪು­ಗಳಾಗಿವೆ. ಆದರೂ ಯಾವುದೇ ಗುಂಪು ಕೂಡ ಮತೀಯ ಮತ್ತು ಜಾತೀಯ ಸಂಘಟನೆಗಳ ಜೊತೆ ಸಂಬಂಧ ಹೊಂದಿಲ್ಲ. ಇಂಥ ಸ್ಥೂಲ ಮತ್ತು ವಿಶಾಲವಾದ ತಾತ್ವಿಕತೆ ಬೇರಾವುದೇ ರಾಜ್ಯದಲ್ಲಿ ಇಲ್ಲ. ಇದು ಮುಂದೆ ಗುಣಾ­ತ್ಮಕ ಮತ್ತು ರಚನಾತಕ್ಮವಾಗಬೇಕು ಎಂದರು.ಸಂಘಟನೆಗಳನ್ನು ಒಟ್ಟುಗೂಡಿಸಲು ಸಾಧ್ಯವಿಲ್ಲ. ಆದರೆ ಇನ್ನು ಮುಂದೆ ಯುವಜನರನ್ನು ಕುರಿತು ಮಾತಾಡ­ಬೇಕು. ಅವರಿಗಾಗಿಯೇ ಹೊಸ ಸಂಘ­ಟನೆ­ಯನ್ನು ಕಟ್ಟಬೇಕು. ಅವರ ನಾಯ­ಕತ್ವದಲ್ಲಿ ದೊಡ್ಡವರು ಹಿಂಬಾಲಿಸ­ಬೇಕು. ಸಂಘಟನೆಯ ರಾಜ್ಯ ಘಟಕ ಮತ್ತು ಜಿಲ್ಲಾ ಘಟಕಗಳ ಸಂಚಾಲಕ­ರಾದವರು ಅವಧಿ ಮುಗಿದ ಕೂಡಲೇ ಹೊರಬಂದು ಹಳ್ಳಿಗಳ ಕಡೆಗೆ ನಡೆಯ­ಬೇಕು. ಸಂಚಾಲಕತ್ವ ರದ್ದಾಗುವ ರೀತಿ ಬೈಲಾದಲ್ಲಿ ತಿದ್ದುಪಡಿಯಾಗಬೇಕು ಎಂದರು.ರಾಮಯ್ಯ ತರಾಟೆ: ಲೇಖಕ ಕೋಟಿ­ಗಾನಹಳ್ಳಿ ರಾಮಯ್ಯ ಮಾತನಾಡಿ, ದಲಿತರು ಜನಾಂಗ, ಸಮುದಾಯ, ಸಂಘರ್ಷ ಸಮಿತಿ ಎಂದು ಹೇಳಿಕೊಳ್ಳ­ಬಾರದು. ಏಕೆಂದರೆ ಇಂದ ದಲಿತರು ಒಂದೇ ಸಮುದಾಯವಾಗಿ ಉಳಿದಿಲ್ಲ. ದಲಿತ ಸಂಘರ್ಷ ಸಮಿತಿಯಲ್ಲಿ ಸಂಘರ್ಷವೇ ಇಲ್ಲವಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.ದಲಿತ ಮುಖಂಡರು ಓತಿಕ್ಯಾತನ ರೀತಿ ಆಗಿದ್ದಾರೆ. ಆದರೆ ಎರೆಹುಳು­ಗಳಾಗಬೇಕು ಎನ್ನುವ ಚಿಂತಕ ಗ್ರಾಂಶಿಯ ಮಾತುಗಳು ಅಂಬೇಡ್ಕರ್‌ ಚಿಂತನೆಯ ಮುಂದುವರಿಕೆಗಳಾಗಿವೆ. ಊರ ಹೊರಗೆ ಬದುಕುವುದನ್ನು ವಿರೋ­ಧಿಸಿ ಸಂಘರ್ಷ ನಡೆಸಲು ಇದುವರೆಗೆ ಏಕೆ ದಲಿತರಿಗೆ ಸಾಧ್ಯ­ವಾಗಿಲ್ಲ? ಭಾರತ ಮಾತೆಯನ್ನು ಅಂಬೇಡ್ಕರ್ ಕನ್ನಡಕದಿಂದ ನೋಡಿದರೆ ಮಾತ್ರ ಭಾರತ ಅರ್ಥವಾಗುತ್ತದೆ. ನೂತನ ಮಾರುಕಟ್ಟೆ ನೀತಿಯು ದೇಶ­ವನ್ನು ಶೌಚಾಲಯವನ್ನಾಗಿಸಿದೆ. ಅದನ್ನು ಸ್ವಚ್ಛಗೊಳಿಸಲು ಲೆಟರ್‌ಹೆಡ್‌­ಗಳಿಂದ, ಗುಜರಿ ಸೆಮಿನಾರುಗಳಿಂದ ಸಾಧ್ಯವಿಲ್ಲ, ಬದಲಿಗೆ ಸ್ವಚ್ಛತೆಯ ಗುದ್ದಲಿ, ಪಿಕಾಸಿಗಳನ್ನು ಹಿಡಿದು ಮುಖಂಡರು ಮುಂದೆ ಬರಬೇಕು ಎಂದು ತೀಕ್ಷ್ಣವಾಗಿ ನುಡಿದರು.ಎ.ಕೆ.ಸುಬ್ಬಯ್ಯ ಅಧ್ಯಕ್ಷತೆ ವಹಿಸಿ ಮಾತನಾಡಿದರು, ದಲಿತ ಸಂಘರ್ಷ ಸಮಿತಿಯ ರಾಜ್ಯ ಘಟಕದ ಸಂಚಾಲಕ ಗುರುಪ್ರಸಾದ್‌ ಕೆರಗೋಡು, ಮುಖಂಡ ಎನ್.ವೆಂಕಟೇಶ್, ಚಿಕ್ಕಮಗ­ಳೂರಿನ ಕೋಮುಸೌಹಾರ್ದ ವೇದಿ­ಕೆಯ ಕೆ.ಎಲ್.ಅಶೋಕ್ ಮಾತ­ನಾಡಿ­ದರು. ಜಲತಜ್ಞ ಪ್ರೊ.ಕೆ.ನಾರಾ­­ಯಣ­ಸ್ವಾಮಿ, ದಲಿತ ಮಹಿಳಾ ಒಕ್ಕೂಟದ ಮಂಜುಳಾ, ಲಕ್ಷ್ಮಮ್ಮ ಉಪಸ್ಥಿತರಿದ್ದರು. ಸಮಿತಿಯ ಜಿಲ್ಲಾ ಸಂಚಾಲಕ ರವಿ, ಮುನಿವೆಂಕಟಪ್ಪ, ರಾಜಪ್ಪ, ಸಿ.ವಿ.ನಾಗರಾಜ್‌ ನಿರ್ವಹಿಸಿದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.