ಮಾನವೀಯತೆಗೆ ಬರೆ

7

ಮಾನವೀಯತೆಗೆ ಬರೆ

Published:
Updated:

ಪೆಶಾವರದ ಐತಿಹಾಸಿಕ ಆಲ್‌ ಸೇಂಟ್ಸ್‌ ಚರ್ಚ್‌ನಲ್ಲಿ ಇಬ್ಬರು ಭಯೋತ್ಪಾದಕರು ಸ್ವಯಂ ಸ್ಫೋಟಿಸಿಕೊಂಡು ನಡೆಸಿರುವ ವಿಧ್ವಂಸಕ ಕೃತ್ಯ ಪಾಕಿಸ್ತಾನದಲ್ಲಿನ ಅಲ್ಪಸಂಖ್ಯಾತರ ಭದ್ರತೆಗೆ ಸಂಚಕಾರ ಒದಗಿರುವುದನ್ನು ಸೂಚಿಸುತ್ತದೆ.  ಭಯೋತ್ಪಾದಕ ಚಟುವಟಿಕೆಗಳನ್ನು ನಿಗ್ರಹಿಸುವಲ್ಲಿ ಸರ್ಕಾರಕ್ಕಿರುವ ಇಚ್ಛಾಶಕ್ತಿಯ ಬಗ್ಗೆ ಅನುಮಾನ ಇಮ್ಮಡಿ ಗೊಳಿಸಿದೆ.ಪಾಕಿಸ್ತಾನದಲ್ಲಿನ ಕ್ರಿಶ್ಚಿಯನ್‌ ಸಮುದಾಯದ ಮೇಲೆ ಇತ್ತೀಚಿನ ವರ್ಷ­ಗಳಲ್ಲಿ ನಡೆದಿರುವ ಅತ್ಯಂತ ಹೇಯ ದಾಳಿ ಇದಾಗಿದೆ. ಘಟನೆಯಲ್ಲಿ 80ಕ್ಕೂ ಹೆಚ್ಚು ಮುಗ್ಧರು ಸಾವಿಗೀಡಾಗಿದ್ದಾರೆ. ಇದರಿಂದಾಗಿ ಅಲ್ಲಿನ ಅಲ್ಪಸಂಖ್ಯಾತರಲ್ಲಿ ಸಹ­ಜವಾಗಿಯೇ ಆತಂಕ ಹೆಚ್ಚಿದೆ.ದೇಶದ ಜನಸಂಖ್ಯೆಯಲ್ಲಿ ಶೇ 1.6 ರಷ್ಟಿರುವ ಕ್ರಿಶ್ಚಿಯನ್ನರನ್ನು ಗುರಿಯಾಗಿಸಿಕೊಂಡು ನಡೆಯು ತ್ತಿರುವ ದಾಳಿಗಳು ಈಚೆಗೆ ಹೆಚ್ಚಾಗುತ್ತಿವೆ. ಪೆಶಾವರ ಒಂದರಲ್ಲೇ ಸುಮಾರು 70 ಸಾವಿರ ಕ್ರಿಶ್ಚಿಯನ್ನರು ವಾಸಿಸುತ್ತಿದ್ದಾರೆ. ಇತ್ತೀಚಿನ ದಿನ ಗಳಲ್ಲಿ ಅಲ್ಪಸಂಖ್ಯಾತರನ್ನು, ವಿಶೇಷವಾಗಿ ಕ್ರಿಶ್ಚಿಯನ್‌ ನಾಗರಿಕರನ್ನು ಗುರಿ ಯಾಗಿಸಿಕೊಂಡು ಕರಾಚಿ, ಪೆಶಾವರ, ಲಾಹೋರ್‌ ಸೇರಿದಂತೆ ವಿವಿಧ ನಗರಗಳಲ್ಲಿ ಸುನ್ನಿ ಮುಸ್ಲಿಂ ಭಯೋತ್ಪಾದಕರಿಂದ ದಾಳಿಗಳು ನಡೆಯುತ್ತಿವೆ. ಇಂಥ ದಾಳಿಗಳು ಹೆಚ್ಚಾಗಿ, ಮುಸ್ಲಿಂ ಮತ್ತು ಕ್ರಿಶ್ಚಿಯನ್‌ ಸಮುದಾಯ ದವರು ಸಾಮರಸ್ಯದಿಂದ ಬಾಳುತ್ತಿರುವ ಪ್ರದೇಶಗಳನ್ನೇ ಗುರಿಯಾಗಿಸಿ ಕೊಂಡಿವೆ.ಮಾರ್ಚ್‌ನಲ್ಲಿ ಧರ್ಮದೂಷಣೆ ಆರೋಪದ ಮೇರೆಗೆ ಲಾಹೋರ್‌ನಲ್ಲಿನ ಕೆಲವು ಕ್ರಿಶ್ಚಿಯನ್ನರ ಮನೆಗಳನ್ನು ಸುಟ್ಟುಹಾಕಲಾಗಿತ್ತು. ಈ ದ್ವೇಷ, ಜನರನ್ನೇ ಬಲಿ ತೆಗೆದುಕೊಳ್ಳುವ ಹಂತಕ್ಕೆ ತಲುಪಿರುವುದು ಭಾನುವಾರದ ಘಟನೆಯಿಂದ ಸ್ಪಷ್ಟವಾಗುತ್ತದೆ. ಈ ದಾಳಿಗೆ ಕಾರಣವಾಗಿ ಪಾಕಿಸ್ತಾನದ ಬುಡಕಟ್ಟು ಪ್ರಾಂತ್ಯಗಳ ಮೇಲೆ ಅಮೆರಿಕ ನಡೆಸುತ್ತಿರುವ ಡ್ರೋನ್‌ ಯುದ್ಧ ವಿಮಾನಗಳ ದಾಳಿಯನ್ನು ಭಯೋತ್ಪಾದಕರು ನೀಡಿ ದ್ದರೂ, ಅಮಾಯಕ ಜನರನ್ನು ಕೊಲ್ಲುವುದರ ಹಿಂದೆ ಮೃಗೀಯ ಹಿಂಸಾ ಪ್ರವೃತ್ತಿ ಇರುವುದೇ ಹೊರತು ಮಾನವೀಯ ಸೆಲೆಗಳನ್ನು ಕಾಣಲಿಕ್ಕೆ ಸಾಧ್ಯವಿಲ್ಲ.ಉಗ್ರರ ದಾಳಿಯನ್ನು ಪ್ರಧಾನಿ ನವಾಜ್‌ ಷರೀಫ್‌ ಖಂಡಿಸಿದ್ದಾರೆ. ಅವರ ಹೇಳಿಕೆಯನ್ನು ಅನುಮಾ­ನಿಸುವಂತಿಲ್ಲವಾದರೂ, ಉಗ್ರರನ್ನು ಹತ್ತಿಕ್ಕುವಲ್ಲಿ ಅವರು ತೋರುತ್ತಿರುವ ಬದ್ಧತೆ ಸಾಲದು ಎನ್ನುವುದಕ್ಕೆ ಪೆಶಾವರ ಘಟನೆ ಉದಾಹರಣೆಯಾಗಿದೆ. ದೇಶದ ಆರ್ಥಿಕ ಮುಗ್ಗಟ್ಟಿಗೆ ಪರಿಹಾರ ಕಂಡುಕೊಳ್ಳಲು ಅವರು ತೋರುತ್ತಿರುವಷ್ಟು ಉತ್ಸಾಹ, ಶಾಂತಿಪಾಲನೆಗೆ ತೋರುತ್ತಿಲ್ಲ ಎನ್ನುವ ಟೀಕೆಗಳಿವೆ.ಶೇಕಡಾ 96ರಷ್ಟು ಮುಸ್ಲಿಮರು  ವಾಸವಾಗಿರುವ ದೇಶದಲ್ಲಿ, ಉಳಿದ ಧರ್ಮಗಳ ಶೇ 4ರಷ್ಟು ಜನರಿಗೆ ರಕ್ಷಣೆ ನೀಡುವುದು ಸರ್ಕಾರದ ಪ್ರಾಥಮಿಕ ಕರ್ತವ್ಯವಾಗಿದೆ. ಯಾವುದೇ ನೆಲದಲ್ಲಿ ಅಲ್ಪಸಂಖ್ಯಾತರಿಗೆ ರಕ್ಷಣೆ ಇಲ್ಲ ಎನ್ನುವುದೆಂದರೆ, ಅಲ್ಲಿ ಮಾನವೀಯತೆ ಚಲಾವಣೆಯಲ್ಲಿಲ್ಲ ಎಂದೇ ಅರ್ಥ.ಪಾಕಿಸ್ತಾನದಲ್ಲಿನ ಉಗ್ರರ ಕೃತ್ಯಗಳು ಅಲ್ಪಸಂಖ್ಯಾತರ ವಿರುದ್ಧವಷ್ಟೇ ಅಲ್ಲ, ಪಾಕಿಸ್ತಾನದ ವಿರುದ್ಧ ನಡೆಯುತ್ತಿರುವ ದಾಳಿಗಳೂ ಹೌದು ಎನ್ನುವುದು ಅಲ್ಲಿನ ಸರ್ಕಾರಕ್ಕೆ ಮನದಟ್ಟಾಗಬೇಕಿದೆ. ಪೆಶಾವರ ಘಟನೆಗೆ ಕಾರಣರಾದವರನ್ನು ಗುರ್ತಿಸಿ ಶಿಕ್ಷೆಗೆ ಗುರಿಪಡಿಸುವುದರ ಜೊತೆಗೆ, ಇಂಥ ಘಟನೆಗಳು ಮರುಕಳಿಸದಂತೆ ನೋಡಿಕೊಳ್ಳುವುದು ಅಂತರ­ರಾಷ್ಟ್ರೀಯ  ಮಟ್ಟದಲ್ಲಿ ಪಾಕಿಸ್ತಾನದ  ವಿಶ್ವಾಸಾರ್ಹತೆ ವೃದ್ಧಿಸಿಕೊಳ್ಳುವ ಮಾರ್ಗವೂ ಆಗಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry