ಮಾನವೀಯ ಗುಣ ಉಳಿಸಿಕೊಳ್ಳಲು ಮನವಿ

7

ಮಾನವೀಯ ಗುಣ ಉಳಿಸಿಕೊಳ್ಳಲು ಮನವಿ

Published:
Updated:

ಚಿಕ್ಕಬಳ್ಳಾಪುರ: ಇತ್ತೀಚಿನ ದಿನಗಳಲ್ಲಿ ಮಾನವೀಯ ಗುಣಗಳು ನಶಿಸುತ್ತಿವೆ. ಎಲ್ಲೆಡೆ ಸ್ವಾರ್ಥ ಮತ್ತು ದುರಾಸೆ ಆವರಿಸಿರುವುದರಿಂದ ಸಾಮಾಜಿಕ ಸ್ತರಗಳಲ್ಲಿ ಏರುಪೇರುಗಳಾಗುತ್ತಿವೆ ಎಂದು ರಾಜ್ಯ ಮಾನವ ಹಕ್ಕುಗಳ ಆಯೋಗದ ಅಧ್ಯಕ್ಷ ಎಸ್.ಆರ್.ನಾಯಕ್ ವಿಷಾದಿಸಿದರು.ಸಂಕ್ರಾಂತಿ ಹಬ್ಬದ ಪ್ರಯುಕ್ತ ಸಾಯಿಕೃಷ್ಣ ಚಾರಿಟಬಲ್ ಟ್ರಸ್ಟ್ ಭಾನುವಾರ ನಗರದ ನಂದಿ ರಂಗಮಂದಿರದಲ್ಲಿ ಆಯೋಜಿಸಿದ್ದ ‘ಸಾಂಸ್ಕೃತಿಕ ಸುಗ್ಗಿ-2011’ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ‘ಆಧುನಿಕತೆ ವ್ಯಾಪಿಸಿದಂತೆ ಆರ್ಥಿಕ ಮತ್ತು ಸಾಮಾಜಿಕ ಕ್ಷೇತ್ರಗಳಲ್ಲಿ ಭಾರಿ ಬದಲಾವಣೆಗಳಾಗಿವೆ. ಇದರ ಪರಿಣಾಮವಾಗಿಯೇ ಸಮಾಜದಲ್ಲಿ ತಾರತಮ್ಯ ಮತ್ತು ಅಸಮತೋಲನ ಮೂಡತೊಡಗಿದೆ’ ಎಂದರು.ವರ್ಷಗಳಿಂದ ಪಾಲಿಸಿಕೊಂಡು ಬರಲಾಗುತ್ತಿರುವ ಸಂಸ್ಕೃತಿ-ಸಂಪ್ರದಾಯ ಇತ್ತೀಚಿನ ದಿನಗಳಲ್ಲಿ ಕ್ಷೀಣಿಸುತ್ತಿದ್ದು, ಅವುಗಳ ಆಚರಣೆಯತ್ತ ನಿರಾಸಕ್ತಿ ತೋರಲಾಗಿದೆ. ದೇಶದ ಪ್ರತೀಕವಾಗಿರುವ ಸಂಸ್ಕೃತಿ-ಸಂಪ್ರದಾಯಗಳತ್ತ ಯಾವುದೇ ಕಾರಣಕ್ಕೂ ನಿರ್ಲಕ್ಷ್ಯ ತೋರಬಾರದು. ವರ್ಷಗಳಿಂದ ಇರುವ ಸಂಸ್ಕೃತಿಯನ್ನು ಪಾಲಿಸಿಕೊಂಡು ಬರುವುದರ ಜತೆಗೆ ಹೊಸ ಸಂಗತಿ-ವಿಚಾರಗಳನ್ನು ಆಚರಣೆಯಲ್ಲಿ ಸೇರ್ಪಡೆಗೊಳಿಸಬೇಕು ಎಂದು ಅವರು ತಿಳಿಸಿದರು.ಆದಿಚುಂಚನಗಿರಿ ಮಠದ ಕಾರ್ಯದರ್ಶಿ ನಿರ್ಮಲಾನಂದನಾಥ ಸ್ವಾಮೀಜಿ ಮಾತನಾಡಿದರು.ರಂಗೋಲಿ ಮತ್ತು ನೃತ್ಯ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನಗಳನ್ನು ವಿತರಿಸಲಾಯಿತು. ಶ್ರೀನಿವಾಸ ಕಲ್ಯಾಣ ನೃತ್ಯ ರೂಪಕ ಮತ್ತು ‘ಆಲ್ ದಿ ಬೆಸ್ಟ್’ ನಾಟಕ ಪ್ರದರ್ಶನ ನಡೆಯಿತು. ವಿವಿಧ ಕ್ಷೇತ್ರಗಳಲ್ಲಿ ವಿಶಿಷ್ಟ ಸಾಧನೆ ಮಾಡಿದ ಎಲ್‌ಐಸಿ ಕೃಷ್ಣಪ್ಪ, ಕೆ.ಆರ್.ಕೃಷ್ಣಪ್ಪ, ಮಾರಪ್ಪ, ಬಿ.ಮುನಿಯಪ್ಪ, ಡಿ.ಎಸ್.ನಂಜುಂಡರಾಮಯ್ಯ, ಜಿ.ಶಿವಶಂಕರ, ಸಂದೀಪ ಚಕ್ರವರ್ತಿ, ಕೆ.ಎಸ್.ಗೋಪಾಲಕೃಷ್ಣ ಮತ್ತು ಜಿ.ಎನ್.ವೆಂಕಟರಾಯಲು ಅವರ ಪತ್ನಿಯನ್ನು ಸನ್ಮಾನಿಸಲಾಯಿತು.ಮಾಜಿ ಶಾಸಕರಾದ ಎಸ್.ವಿ.ಅಶ್ವತ್ಥ್‌ನಾರಾಯಣ ರೆಡ್ಡಿ, ಎಸ್.ಎಂ.ಮುನಿಯಪ್ಪ, ಎಂ.ಶಿವಾನಂದ, ತಾಲ್ಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ಎಸ್.ವೈ.ಮರಿಯಪ್ಪ, ಟಿಎಪಿಸಿಎಂಎಸ್ ಮಾಜಿ ಅಧ್ಯಕ್ಷ ಬಿ.ಎಂ.ರಾಮಸ್ವಾಮಿ, ಕರ್ನಾಟಕ ಹಾಲು ಮಹಾಮಂಡಳಿ ನಿರ್ದೇಶಕ ಕೆ.ವಿ.ನಾಗರಾಜ್, ಕಾಂಗ್ರೆಸ್ ಮುಖಂಡ ಯಲುವಹಳ್ಳಿ ಎನ್.ರಮೇಶ್, ಜಿ.ಪಂ. ನೂತನ ಸದಸ್ಯೆ ವೈ.ಎಂ.ಅನಿತಾ, ಉದ್ಯಮಿ ಜಿ.ಎಂ.ಬಾಬು, ಸಾಯಿಕೃಷ್ಣ ಚಾರಿಟಬಲ್ ಟ್ರಸ್ಟ್ ಅಧ್ಯಕ್ಷಡಾ. ಕೆ.ಸುಧಾಕರ, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಪಿ.ಎನ್.ಕೇಶ್ವರೆಡ್ಡಿ ಮತ್ತಿತರರು ಪಾಲ್ಗೊಂಡಿದ್ದರು.‘ಸೀರೆ ಅಲ್ಲ, ಉದ್ಯೋಗ ಕೊಡಿ’

ಸರ್ಕಾರದವರು ಮಹಿಳೆಯರಿಗೆ ವರ್ಷಕ್ಕೊಮ್ಮೆ ಸೀರೆ ಹಂಚಿದರೆ ಸಾಲದು, ಅವರಿಗೆ ಸ್ವಾವಲಂಬಿ ಜೀವನ ಸಾಗಿಸಲು ಉದ್ಯೋಗಾವಕಾಶ ಕಲ್ಪಿಸಬೇಕು. ಭದ್ರತೆಯ ಸೂರು ಒದಗಿಸಬೇಕು ಎಂದು ರಾಜ್ಯ ಮಾನವ ಹಕ್ಕುಗಳ ಆಯೋಗದ ಅಧ್ಯಕ್ಷ ಎಸ್.ಆರ್.ನಾಯಕ್ ತಿಳಿಸಿದರು.ಮಹಿಳೆಯರು ಈಗಲೂ ಶೋಷಣೆ, ದೌರ್ಜನ್ಯಕ್ಕೆ ತುತ್ತಾಗುತ್ತಿದ್ದಾರೆ. ಅವರಿಗೆ ಇನ್ನೂ ನೆಮ್ಮದಿಯ ನೆಲೆ ಸಿಕ್ಕಿಲ್ಲ. ಈ ಎಲ್ಲ ಸಂಗತಿಗಳನ್ನು ಅವಲೋಕಿಸಬೇಕಾದ ಸರ್ಕಾರ ಮಹಿಳೆಯರಿಗೆ ಉತ್ತಮ ಜೀವನಕ್ಕಾಗಿ ಅವಕಾಶ ಕಲ್ಪಿಸಬೇಕೆ ಹೊರತು ಕೇವಲ ಸೀರೆ ಹಂಚುವಿಕೆಗೆ ಮಾತ್ರವೇ ಸೀಮಿತವಾಗಬಾರದು ಎಂದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry