ಮಾನವೀಯ ಮೌಲ್ಯಗಳ ಮೇಲೆ ಖಾಸಗೀಕರಣದ ಸವಾರಿ...!

7

ಮಾನವೀಯ ಮೌಲ್ಯಗಳ ಮೇಲೆ ಖಾಸಗೀಕರಣದ ಸವಾರಿ...!

Published:
Updated:

ಕರ್ನಾಟಕದಲ್ಲಿ ನೀರು ಸರಬರಾಜು ಖಾಸಗೀಕರಣ ಗೊಳಿಸುವ ಪ್ರಕ್ರಿಯೆ ಕುರಿತಂತೆ  ಸಾರ್ವಜನಿಕ ಚರ್ಚಾ ವೇದಿಕೆಯೊಂದರ ಮಾಹಿತಿ ಹಾಗೂ ಚರ್ಚೆಯ ವಿವರಗಳನ್ನು ನನ್ನ ಹಳೆಯ ಸ್ನೇಹಿತರೊಬ್ಬರು ಇ-ಮೇಲ್ ಮಾಡಿದ್ದರು.ಆ, ಇ-ಮೇಲ್ ಓದಿದಾಗ, ‘ಈ ಚರ್ಚೆಯಲ್ಲಿ ನಾನು ಭಾಗವಹಿಸಬೇಕಿತ್ತು’ ಎಂದು ಅಂದುಕೊಂಡೆ. ನೀರನ್ನು ಇತರ ಸರಕು / ಉತ್ಪನ್ನಗಳಂತೆ ಪರಿಗಣಿಸಬೇಕೆ ಅಥವಾ ನೀರನ್ನು ಹೇಗೆ ಬಳಸಬೇಕು ಎನ್ನುವ ವಿವೇಚನೆಯನ್ನು ಸಮುದಾಯದ ನಿರ್ಧಾರಕ್ಕೆ  ಬಿಡಬೇಕೆ ಎನ್ನುವ ಪ್ರಶ್ನೆಯು ದಶಕಗಳಿಂದಲೂ ನಗರಾಭಿವೃದ್ಧಿ ಚಿಂತಕರನ್ನು ಕಾಡುತ್ತಲೇ ಇದೆ. ನೀರು ಸರಬರಾಜು ಖಾಸಗೀಕರಣಕ್ಕೆ ಸಂಬಂಧಿಸಿದಂತೆ ಬೆಂಗಳೂರು ವಿಶ್ವವಿದ್ಯಾಲಯದ ಹಳೆಯ ಸೆಂಟ್ರಲ್ ಕಾಲೇಜಿನ ಸೆನೆಟ್ ಹಾಲ್‌ನಲ್ಲಿ ಹಿಂದೊಮ್ಮೆ ಸಾರ್ವಜನಿಕ ಚರ್ಚೆ ಏರ್ಪಡಿಸಲಾಗಿತ್ತು. ನಗರದ ಹೃದಯ ಭಾಗದಲ್ಲಿ ಇಂಥದ್ದೊಂದು ಚರ್ಚೆ ನಡೆದಿದ್ದರಿಂದ ಸುಮಾರು 200ಕ್ಕೂ ಅಧಿಕ ಮಂದಿ ಅದರಲ್ಲಿ ಭಾಗವಹಿಸಿದ್ದರು. ಇವರಲ್ಲಿ ಬಹುತೇಕರು ಮಹಿಳೆಯರಾಗಿದ್ದರು. ಇವರೆಲ್ಲ ರಾಜ್ಯದ ವಿವಿಧ ಸರ್ಕಾರೇತರ ಸಂಸ್ಥೆಗಳ ಕಾರ್ಯಕರ್ತರು.‘ಕನ್ನಡ ಗಂಗಾ’ ಯೋಜನೆಯಿಂದಾಗಿ ಕರ್ನಾಟಕದ ಜನತೆ ಎದುರಿಸುತ್ತಿರುವ ಸಮಸ್ಯೆಗಳು ಈ ಸಭೆಯಲ್ಲಿ ಮುಖ್ಯವಾಗಿ ಚರ್ಚೆಯಾದವು. ‘ಕನ್ನಡ ಗಂಗಾ’ ಯೋಜನೆಯಿಂದ ಉಂಟಾಗಿರುವ ಸಮಸ್ಯೆಗಳನ್ನು ಚರ್ಚಿ ಸುವ ಸಲುವಾಗಿ ಕೆಜಿಎಫ್, ಹುಬ್ಬಳ್ಳಿ, ಗದಗ ಹಾಗೂ ಇತರ ಪಟ್ಟಣಗಳಿಂದ ಕಾರ್ಯಕರ್ತರು ಸಭೆಗೆ ಆಗಮಿಸಿದ್ದರು.ಹೌದು, ನಿಮಗೆ ‘ಕನ್ನಡ ಗಂಗಾ’ ಯೋಜನೆ ಗೊತ್ತಾ? ಬಹುಶಃ ಇದು ಯಾವತ್ತೂ ಪತ್ರಿಕೆಗಳಲ್ಲಿ ಅಷ್ಟಾಗಿ ಸುದ್ದಿಯಾಗಲೇ ಇಲ್ಲ. ರಾಜ್ಯದ 16 ನಗರಗಳಲ್ಲಿ ಕುಡಿಯುವ ನೀರು ಸರಬರಾಜು ವ್ಯವಸ್ಥೆಯನ್ನು ಸುಧಾ ರಿಸುವ ಸಲುವಾಗಿ ಟಾಟಾ ಹಾಗೂ ಫ್ರಾನ್ಸ್ ಮೂಲದ  ‘ವಿಯೊಲಿಯಾ’  ಕಂಪೆನಿಯ ಸಹಯೋಗದಲ್ಲಿ ರಾಜ್ಯ ಸರ್ಕಾರವು ಸದ್ದಿಲ್ಲದೇ ಈ ಯೋಜನೆಯನ್ನು ಹಂತ ಹಂತವಾಗಿ ಕಾರ್ಯಗತಗೊಳಿಸುತ್ತಿದೆ. ರಾಜ್ಯದ ನಗರಗಳು ಹಾಗೂ ಪಟ್ಟಣಗಳಲ್ಲಿ ನಿರಂತರವಾಗಿ ಶುದ್ಧ ನೀರು ಸರಬರಾಜು ಮಾಡುವ ಪ್ರಯತ್ನವು ಈ ಯೋಜನೆಯಲ್ಲಿ ಮೇಲ್ನೋಟಕ್ಕೆ ಕಂಡುಬರುತ್ತದೆ.ಸಾರ್ವಜನಿಕ ಚರ್ಚಾ ವೇದಿಕೆಯ ಸಭೆ ಹಾಗೂ ಅದರ ಉದ್ದೇಶವನ್ನು ಅರಿತುಕೊಳ್ಳುವ ಮುನ್ನ ಇಲ್ಲೊಂದು ಪ್ರಶ್ನೆ. ಅದೇನೆಂದರೆ ‘ತೈಲ ಮಾರುವ ಕಂಪೆನಿಯೊಂದು ನೀರು ಮಾರಾಟ ಮಾಡುವ ಮೂಲಕ ಇನ್ನೂ ಹೆಚ್ಚಿನ ಹಣ ಗಳಿಸಲಿದೆಯೇ?’ ಎನ್ನುವುದು.ಜಾಗತಿಕ ಮಾರುಕಟ್ಟೆ ಸೂಚ್ಯಂಕವಾಗಿರುವ ‘ಬ್ಲೂಂಬರ್ಗ್ ವಾಟರ್ ಇಂಡೆಕ್ಸ್’ ಪ್ರಕಾರ,  ನೀರು ಸರಬರಾಜು ಕಂಪೆನಿಗಳು ತೈಲ, ಅನಿಲ ಹಾಗೂ ಗಣಿ ಕಂಪೆನಿಗಳಿಗಿಂತಲೂ ಅಧಿಕ ಲಾಭ ಮಾಡಿಕೊಳ್ಳುತ್ತವೆ. ಅಂದರೆ, ಚಿನ್ನಕ್ಕಿಂತ ನೀರು ಮಾರಾಟದಲ್ಲೇ ಲಾಭ ಹೆಚ್ಚು.  ನಮ್ಮ ಎಲ್ಲ ನಗರಗಳು  ಖಾಸಗೀಕರಣಗೊಂಡರೆ, ಭಾರತವೊಂದರಲ್ಲೇ, ವಾರ್ಷಿಕ 250 ಶತಕೋಟಿ ಡಾಲರ್  ಅಥವಾ ್ಙ 13 ಲಕ್ಷಗಳಿಗೂ ಅಧಿಕ ವಹಿವಾಟು ನಡೆಯುತ್ತದೆ! ಈ ದಿಸೆಯಲ್ಲಿ ತರ್ಕ ಮಾಡುತ್ತ ಹೋದರೆ ನಿಸ್ಸಂಶಯವಾಗಿ ನಿಮಲ್ಲಿ ಈ ಕೆಳಗಿನ ಪ್ರಶ್ನೆಗಳು ಉದ್ಭವಿಸುತ್ತವೆ.* ನೀರನ್ನೂ ಸರಕಿನಂತೆ ಮಾರಾಟ ಮಾಡಬೇಕೇ ಅಥವಾ ಅದು ಖಾಸಗೀಕರಣಗೊಳ್ಳಬೇಕೇ?

* ಇಂಥ ನೈಸರ್ಗಿಕ ಸಂಪನ್ಮೂಲದ ಒಡೆತನದ ಹಕ್ಕು ಯಾವುದೇ ಸರ್ಕಾರಕ್ಕೆ ಇದೆಯೇ?

* ಅಥವಾ ಇದು ಕೇವಲ ನಾಗರಿಕರಿಗೆ ಮಾತ್ರ ಸೇರಿದ್ದೇ?

* ನಾಗರಿಕರನ್ನು ಗ್ರಾಹಕರನ್ನಾಗಿ ಪರಿಗಣಿಸುವ ಸರ್ಕಾರದ ನೀತಿ ಸರಿಯೇ?ನೀರನ್ನು ಖಾಸಗೀಕರಣಗೊಳಿಸುವ ವಿರುದ್ಧ ಸಾವಿರಾರು ಕಾರ್ಯಕರ್ತರು ಗೊಣಗಾಡುತ್ತಿದ್ದಾರೆ. ಈ ವಿಷಯದಲ್ಲಿ ಅವರಿಗೆ ‘ಬಂಡವಾಳಶಾಹಿ ನಿರ್ದೇಶನಗಳು’ ಬೇಕಾಗಿಲ್ಲ. ಅವರು ತಮ್ಮ ಈ ವಾದಲ್ಲಿ ಲಂಡನ್, ಪ್ಯಾರಿಸ್, ಅಷ್ಟೇ ಏಕೆ ನಾಗಪುರದ ಉದಾಹರಣೆಗಳನ್ನು ಮುಂದಿಡುತ್ತಾರೆ. (ನೀರು ಸರಬರಾಜು ವ್ಯವಸ್ಥೆಯನ್ನು ಖಾಸಗಿ ಕಂಪೆನಿಗಳಿಗೆ ವಹಿಸಿದ್ದೇ ತಡ ಇಲ್ಲೆಲ್ಲ ನೀರಿನ ದರ ಗಗನಕ್ಕೇರಿತು.  ಹಾಗಾಗಿ ತಕ್ಷಣವೇ ಇವು ಖಾಸಗೀಕರಣ ಪ್ರಕ್ರಿಯೆ ಕೈಬಿಟ್ಟವು)ಪೂರ್ವ ಮನಿಲಾ ಕೂಡ ನೀರು ಖಾಸಗೀಕರಣದ ಕಹಿ ಅನುಭವಿಸಿದೆ. ಏನೇ ಆದರೂ, ಈ ಖಾಸಗೀಕರಣ ಪ್ರಕ್ರಿಯೆ ಸಮರ್ಥಿಸಲು ವಿವಿಧ ಮಾದರಿಗಳನ್ನು ಹಾಗೂ ವಾದಗಳನ್ನು ಹುಟ್ಟು ಹಾಕಲಾಗಿದೆ. ಒಂದಂತೂ ನಿಜ, ನೀರು ಸರಬರಾಜು ಖಾಸಗೀಕರಣವು ಮಾನವೀಯ ಮೌಲ್ಯಗಳ ಮೇಲೆ ಸವಾರಿ ಮಾಡುತ್ತದೆ ಎನ್ನುವುದರಲ್ಲಿ ಎರಡು ಮಾತಿಲ್ಲ.ಖಾಸಗೀಕರಣ ಪ್ರಕ್ರಿಯೆಯಲ್ಲಿ ಸರ್ವರಿಗೂ ನ್ಯಾಯಸಮ್ಮತ ದರದಲ್ಲಿ ನೀರು ಸರಬರಾಜು ಮಾಡುವ ಮೂಲ ಉದ್ದೇಶಕ್ಕೇ  ಭಂಗ ಬರುತ್ತದೆ. ಅಲ್ಲದೇ ಜಲ ಮಂಡಳಿಗಳ ಸುಸ್ಥಿರ ನಿರ್ವಹಣೆ ಹಾಗೂ ಉತ್ತಮ ಆಡಳಿತದ ಸಮನ್ವಯ ಸಾಧಿಸುವ ಕೆಲವೊಂದು ಸುಧಾರಣಾ ಕ್ರಮಗಳಿಗೂ ಅರ್ಥವಿಲ್ಲದೇ ಹೋಗುತ್ತದೆ.ಈಗ ಬೆಂಗಳೂರು ನೀರು ಸರಬರಾಜು ಮಂಡಳಿಯನ್ನೇ ಉದಾಹರಣೆಗೆ ತೆಗೆದುಕೊಳ್ಳೋಣ. ಪ್ರತಿ ಸಾವಿರ ಲೀಟರ್ (ಕಿಲೊ ಲೀಟರ್) ನೀರಿಗೆ ರೂ. 44  ಖರ್ಚಾಗುತ್ತದೆ. ಆದರೆ ಅದು ಗ್ರಾಹಕನಿಗೆ, ಬಡವರೇ ಆಗಲಿ, ಶ್ರೀಮಂತರೇ ಆಗಲಿ, ಒಂದು ಕಿಲೋ ಲೀಟರ್ ನೀರಿಗೆ ಕೇವಲ ್ಙ 6 ಶುಲ್ಕ ವಿಧಿಸುತ್ತದೆ.ವಾಸಸ್ಥಳ, ಅದರ ಗಾತ್ರ ಅಥವಾ ಒಂದು ಮನೆಯಲ್ಲಿ ಪ್ರತಿ ತಿಂಗಳು ಬಳಸುವ ನೀರಿನ ಪ್ರಮಾಣದ ಆಧಾರದಲ್ಲಿ ಹೊಸ ದರವನ್ನು ಸುಲಭವಾಗಿ ನಿರ್ಧರಿಸಬಹುದು.ಹುಬ್ಬಳ್ಳಿ ನಗರವನ್ನು ಉದಾಹರಣೆಯನ್ನಾಗಿ ತೆಗೆದುಕೊಂಡರೆ, ಅಲ್ಲಿ ಮನೆ ಬಳಕೆ ನೀರಿಗೆ ಪ್ರತಿ ತಿಂಗಳು ರೂ.180 ಶುಲ್ಕ ನಿಗದಿಯಾಗಿದೆ. ಆದರೆ ಬೆಂಗಳೂರಿನಲ್ಲಿ ಈ ಪ್ರಮಾಣವು ಭಾರಿ ಕಡಿಮೆ ಅಂದರೆ, ಸುಮಾರು ರೂ. 80 ಇದೆ.

ಉತ್ತರಪ್ರದೇಶದಂಥ ರಾಜ್ಯಗಳಲ್ಲಿ ಮಾಸಿಕ ನೀರಿನ ಶುಲ್ಕ ವಸೂಲಿ ವಿಧಾನಗಳು ಇಲ್ಲ. ವಾರ್ಷಿಕ ಆಸ್ತಿ ತೆರಿಗೆ ಕಟ್ಟುವ ಸಂದರ್ಭದಲ್ಲಿ ಶೇಕಡಾವಾರು ಕ್ರಮದಲ್ಲಿ ಈ ಮೊತ್ತ ವಸೂಲಿ ಮಾಡಲಾಗುತ್ತದೆ.ನೀರು ಸರಬರಾಜಿಗೆ ನ್ಯಾಯಸಮ್ಮತ ಶುಲ್ಕ ನೀಡಬೇಕು ಎಂದು ಗ್ರಾಹಕನಿಗೆ ಮನವರಿಕೆ ಮಾಡಿಕೊಡುವ ಸಂದರ್ಭದಲ್ಲಿ ಯಾವುದೇ ನೀರು ಸರಬರಾಜು ಮಂಡಳಿ ಯು ಆರ್ಥಿಕ ಸುಸ್ಥಿರತೆಯನ್ನು ಉಳಿಸಿಕೊಳ್ಳುವುದೇ ಎನ್ನುವುದು ಪ್ರಮುಖ ವಿಷಯ.ನಮ್ಮಲ್ಲಿ ಅನೇಕರು ‘ಕನ್ನಡ ಗಂಗಾ’ ಯೋಜನೆಯ ಹೆಸರನ್ನೇ ಕೇಳಿಲ್ಲ. ಹುಬ್ಬಳ್ಳಿ, ಧಾರವಾಡ, ಬೆಳಗಾವಿ, ಗದಗ, ಮೈಸೂರು, ಗುಲ್ಬರ್ಗಾ, ಮಂಗಳೂರು, ಉಡುಪಿ-ಇವೇ ಮುಂತಾದ ಪಟ್ಟಣಗಳಲ್ಲಿ ಹಂತ ಹಂತವಾಗಿ ಜಾರಿಗೆ ಬರುತ್ತಿರುವ ಈ ಯೋಜನೆಯು ನಿಧಾನವಾಗಿ ಖಾಸಗೀಕರಣಗೊಳ್ಳುತ್ತಿದೆ.  ಈ ನಗರಗಳ ಆಯ್ದ ವಾರ್ಡ್‌ಗಳಲ್ಲಿ ನೀರು ಸರಬರಾಜು ಹೊಣೆಗಾರಿಕೆಯನ್ನು ಖಾಸಗಿ ಕಂಪೆನಿಗಳಿಗೆ ವಹಿಸಿಕೊಡಲಾಗುತ್ತಿದೆ. ಮೈಸೂರಿನಲ್ಲಿ ಟಾಟಾ ಗ್ರೂಫ್ ಈ ಜವಾಬ್ದಾರಿ  ಹೊತ್ತುಕೊಂಡಿದ್ದರೆ, ‘ವಿಯೊಲಿಯಾ’ ಕಂಪೆನಿಯು  ಬೆಳಗಾವಿ ಹಾಗೂ ಹುಬ್ಬಳ್ಳಿಯಲ್ಲಿ ಈ ಪೈಕಿ ನಾಲ್ಕು ವಾರ್ಡ್‌ಗಳ ಜವಾಬ್ದಾರಿ ಹೊತ್ತುಕೊಂಡಿದೆ. ನೀರು ಸರಬರಾಜು ಮಂಡಳಿಗಳಿಗೆ ಆಗದ  ಕೆಲಸವನ್ನು ಈ ಕಂಪೆನಿಗಳು ಮಾಡಿಯಾವೇ?ಯಾವುದೇ ಖಾಸಗಿ ಕಂಪೆನಿಗಳು ಸರ್ಕಾರಿ ಸಂಸ್ಥೆಗಳನ್ನು ನಿರ್ವಹಿಸುವಾಗ ಸಾಮಾನ್ಯವಾಗಿ ಸಮಸ್ಯೆಗಳ ಸರಮಾಲೆಯೇ ಇರುತ್ತದೆ. ಈ ಮಾತು ‘ಕನ್ನಡ ಗಂಗಾ’ ಯೋಜನೆಗೂ ಅನ್ವಯಿಸುತ್ತದೆ. ಇದು ನಿಧಾನಗತಿಯಲ್ಲಿ ನಡೆಯುತ್ತಿದೆ. ಅಂದರೆ ಆಯ್ದ ವಾರ್ಡ್‌ಗಳಲ್ಲಿ ಹಳೆಯ ನೀರು ಕೊಳವೆಗಳನ್ನು ಬದಲಾಯಿಸಿ ಹೊಸದನ್ನು ಅಳವಡಿಸಬೇಕಾಗಿದೆ. ಇದು ಒಂದು ಗಂಭೀರ ಸಮಸ್ಯೆಯೇ ಆಗಿದೆ. ಈ ಕಂಪೆನಿಗಳ ನೂತನ ನೀರು ಸರಬರಾಜು ವ್ಯವಸ್ಥೆಯು ಆಯ್ದ ವಾರ್ಡ್‌ಗಳ ಕೆಲವು ಕೊಳಗೇರಿಗಳನ್ನು ಇನ್ನೂ ತಲುಪಿಲ್ಲ. ಆದ ಕಾರಣ ನೀರಿಗಾಗಿ ಇಲ್ಲಿನ ಬಡಜನರ ಕೂಗು ಮುಗಿಲುಮುಟ್ಟಿದೆ.ಮಾಧ್ಯಮಗಳ ಗಮನಕ್ಕೆ ಬಾರದ ರೀತಿಯಲ್ಲಿ, ಯೋಜನೆ ಮೂಲಕ ಇಲ್ಲಿ ಸಾಮಾಜಿಕ ಹಾಗೂ ಒಂದು ರೀತಿಯ ವಾಣಿಜ್ಯ ಕ್ರಾಂತಿ ನಡೆಯುತ್ತಿದೆ.      (ಲೇಖಕರನ್ನು 56767 ಸಂಖ್ಯೆಗೆ ZED ಎಂದು ಎಸ್‌ಎಂಎಸ್ ಮಾಡುವ ಮೂಲಕ ಇಲ್ಲವೇ 99010 54321 ಕರೆ ಮಾಡಿ ಸಂಪರ್ಕಿಸಬಹುದು) 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry