ಸೋಮವಾರ, ಏಪ್ರಿಲ್ 19, 2021
23 °C

ಮಾನವೀ ಶಕ್ತಿಯ ಕವಿ ಪು.ತಿ.ನ: ಮಾಲಗತ್ತಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮೈಸೂರು: ಪುತಿನ ಅವರಲ್ಲಿರುವ ವೈಚಾರಿಕ ಪ್ರಜ್ಞೆ ಮತ್ತು ಸಾಮಾಜಿಕ ಕಳಕಳಿಯಿಂದಾಗಿ ಅವರು ನನಗೆ ಮಾನವೀಶಕ್ತಿಯ ಕವಿಯಾಗಿ ಕಾಣುತ್ತಾರೆ ಎಂದು ಸಾಹಿತಿ ಡಾ.ಅರವಿಂದ ಮಾಲಗತ್ತಿ ಅಭಿಪ್ರಾಯಪಟ್ಟರು.ನಗರದ ಕುವೆಂಪು ವಿದ್ಯಾಪರಿಷತ್ತು ಮತ್ತು ಕುವೆಂಪು ವಿದ್ಯಾವರ್ಧಕ ಟ್ರಸ್ಟ್ ವತಿಯಿಂದ ಡಾ.ಪು.ತಿ.ನ ಅವರ 107ನೇ ಜನ್ಮ ದಿನಾಚರಣೆಯ ಪ್ರಯುಕ್ತ ಜಯಲಕ್ಷ್ಮೀಪುರಂನ ವಿವೇಕಾನಂದ ಪಿಯು ಕಾಲೇಜು ಸಭಾಂಗಣ ವೆಂಕಣ್ಣ ವೇದಿಕೆಯಲ್ಲಿ ಮಂಗಳವಾರ ಆಯೋಜಿಸಿದ್ದ ‘ಪುತಿನ ಅವರ ಆಯ್ದ ಕವಿತೆಗಳು’ ಕುರಿತಾದ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದರು.ಪುತಿನ ಅವರು ಕನ್ನಡ ಸಾಹಿತ್ಯದ ನವೋದಯ ಸಂದರ್ಭದಲ್ಲಿ ವಿಶಿಷ್ಟವಾದ ಕವಿ. ಕನ್ನಡದ ವಿಮರ್ಶಾ ಕ್ಷೇತ್ರವು ಅವರ ಕುರಿತು ಹೆಚ್ಚು ವಿಮರ್ಶೆ ಮಾಡಿಲ್ಲ. ಆದರೆ ಈವರೆಗೆ ಬಂದಿರುವ ವಿಮರ್ಶೆಗಳು ಗಟ್ಟಿಯಾಗಿವೆ. ಪುತಿನ ಅವರ ಕಾವ್ಯ ಒಂದು ಓದಿಗೆ ದಕ್ಕದ್ದು. ಮತ್ತೆ ಮತ್ತೆ ಓದಿಸಿಕೊಳ್ಳುವ ಗಂಭೀರ ಕಾವ್ಯವಾಗಿದೆ ಎಂದರು.ಪುತಿನ ಅವರ ಕಾವ್ಯದ ಭಾಷೆ ಗಂಟು ಗಂಟಾಗಿದ್ದು ಕಾವ್ಯವು ಅಮೂರ್ತ ಸ್ವರೂಪದಲ್ಲಿ ಮುನ್ನಡೆಯುತ್ತದೆ. ಈ ಅಮೂರ್ತತೆಯೇ ಪುತಿನ ಅವರ ಕಾವ್ಯದ ಶಕ್ತಿಯಾಗಿದೆ. ಆದ್ದರಿಂದ ಅವರ ಅಮೂರ್ತ ಸ್ವರೂಪದ ನಿರೂಪಣಾ ವಿಧಾನ ನಮಗೆ ಹೆಚ್ಚು ಆತ್ಮೀಯವಾಗಿಬಿಡುತ್ತದೆ. ಇವರ ಕಾವ್ಯದಲ್ಲಿ ವೈಚಾರಿಕತೆಗೆ ಸಿಕ್ಕ ಪ್ರಾಧಾನ್ಯತೆಯು ಅನುಭವಕ್ಕೆ ಸಿಕ್ಕುವುದಿಲ್ಲ. ಇವರಲ್ಲಿ ಮಾನವೀಯತೆ, ಸಾಮಾಜಿಕ ಕಳಕಳಿ ಮುಖ್ಯವಾಗಿ ಅನುಭವ ಹಿಂದಕ್ಕೆ ಸರಿದುಬಿಡುತ್ತದೆ. ಆದರೆ ಅವರಿಗಿರುವ  ಪ್ರಾಮಾಣೀಕತೆ ಮೆಚ್ಚುವಂಥಾದ್ದು ಎಂದು ಅಭಿಪ್ರಾಯಪಟ್ಟರು.ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಸಾಹಿತಿ ಡಾ.ಸಿಪಿಕೆ ಅವರು ಮಾತನಾಡಿ, ಪುತಿನ ಅವರು ಪರಂಪರೆ ಮತ್ತು ಪ್ರಗತಿಯ ಸಮನ್ವಯಕಾರ ಎಂದರು. ಕಾರ್ಯಕ್ರಮದಲ್ಲಿ ನಾಡೋಜ ದೇಜಗೌ, ಮೈಸೂರು ವಿವಿ ಸಸ್ಯಶಾಸ್ತ್ರ ಪ್ರಾಧ್ಯಾಪಕ ಪ್ರೊ.ಸಿ.ಎಸ್.ರಾಮಸ್ವಾಮಿ ಇತರರು  ಉಪಸ್ಥಿತರಿದ್ದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.