ಮಾನವ ವಿರುದ್ಧ `ಯಂತ್ರ'ಮಾನವ!

7

ಮಾನವ ವಿರುದ್ಧ `ಯಂತ್ರ'ಮಾನವ!

Published:
Updated:
ಮಾನವ ವಿರುದ್ಧ `ಯಂತ್ರ'ಮಾನವ!

ರೋಬಾಟ್ ತಯಾರಿಕಾ ಕ್ಷೇತ್ರ ವೇಗ ಪಡೆದುಕೊಳ್ಳುತ್ತಿರುವ ಸಂದರ್ಭವಿದು. ಹೋಟೆಲ್ ಸ್ವಾಗತಕಾರಿಣಿಯ ಪಾತ್ರದಿಂದ ಹಿಡಿದು ಸೂಕ್ಷ್ಮಾತಿಸೂಕ್ಷ್ಮ ಬಿಡಿಭಾಗಗಳ ಜೋಡಣೆ, ಶಸ್ತ್ರಚಿಕಿತ್ಸೆ, ವೈಜ್ಞಾನಿಕ ಸಂಶೋಧನೆಗಳಿಗೆಲ್ಲಾ `ಯಂತ್ರ ಮಾನವ'ರನ್ನು ನಿರ್ಮಿಸಲಾಗುತ್ತಿದೆ. ಇದೇ ವೇಳೆ, `ಯಂತ್ರ ಮಾನವ'ರ ಅಭಿವೃದ್ಧಿ ಹೀಗೆಯೇ ಮುಂದುವರಿದರೆ ಮನುಷ್ಯನ ಗತಿ ಏನಾಗಬಹುದೆಂಬ ಆತಂಕವೂ ಎದ್ದಿದೆ.ರೋಬಾಟ್‌ಗಳು ಮಾನವರ ಉದ್ಯೋಗಕ್ಕೆ ಕುತ್ತು ತರುವುದಷ್ಟೇ ಅಲ್ಲದೆ, ಮನುಕುಲದ ಅಸ್ತಿತ್ವವನ್ನೇ ಗಂಡಾಂತರಕ್ಕೆ ಸಿಲುಕಿಸಲಿದೆಯೇ ಎಂಬ ಪ್ರಶ್ನೆಯೂ ಮೂಡಿದೆ. ಕೆಲವು ನಿಯತಕಾಲಿಕೆಗಳು, ರೋಬಾಟ್‌ಗಳ ಅಭಿವೃದ್ಧಿಯಿಂದ ವ್ಯಾಪಕ ಪ್ರಮಾಣದಲ್ಲಿ ಉದ್ಯೋಗಕ್ಕೆ ಕುತ್ತು ಬೀಳುವ ಸಾಧ್ಯತೆಯ ಕುರಿತು ಈಗಾಗಲೇ ಲೇಖನಗಳನ್ನು ಪ್ರಕಟಿಸಿವೆ. ನ್ಯೂಯಾರ್ಕ್ ನಗರವೊಂದರಲ್ಲೇ ಯಂತ್ರಜ್ಞಾನದ ಅತಿರೇಖವನ್ನು ಆಧರಿಸಿದ ನಾಲ್ಕು ನಾಟಕಗಳು ಫೆಬ್ರುವರಿಯಲ್ಲಿ ಪ್ರದರ್ಶಿತವಾಗಲಿವೆ.ಆದರೆ ತಂತ್ರಜ್ಞಾನದ ಅಭಿವೃದ್ಧಿಯ ಹಿನ್ನೆಲೆಯಲ್ಲಿನ ಇಂತಹ ಆತಂಕ ಹೊಸದೇನಲ್ಲ. ಅದಕ್ಕೆ ದೀರ್ಘ ಇತಿಹಾಸವೇ ಇದೆ. ತೀವ್ರ ಹಣಕಾಸು ಹಿಂಜರಿತದ 1930ರ ದಶಕದಲ್ಲೇ ಜಾನ್ ಮೇನರ್ಡ್     ಕೀಯ್ನ್ಸ ಎಂಬ ಲೇಖಕ `ತಾಂತ್ರಿಕ ನಿರುದ್ಯೋಗ' ಕುರಿತು ಬರೆದಿದ್ದ. ನಂತರ, ಕೈಗಾರಿಕಾ ಕ್ರಾಂತಿಯ ಪರ್ವದಲ್ಲಿ, ಅತೃಪ್ತ ಕಾರ್ಮಿಕರು ತಮ್ಮ ಉದ್ಯೋಗಕ್ಕೆ ಭಂಗ ತಂದ ಸ್ವಯಂಚಾಲಿತ ಮಗ್ಗಗಳು ಮತ್ತು ಧಾನ್ಯ ಒಕ್ಕಣಿಕೆ ಯಂತ್ರಗಳನ್ನು ಧ್ವಂಸಗೊಳಿಸಿದ್ದರು. 15ನೇ ಶತಮಾನದಲ್ಲಿ ಪತ್ರಕರ್ತರು ಕೂಡ ಮುದ್ರಣಾಲಯಗಳ ಆಗಮನದ ವಿರುದ್ಧ ಪ್ರತಿಭಟನೆ ನಡೆಸಿದ್ದರು.`ಯಂತ್ರ ನಾಗರಿಕತೆಯು ಶ್ರಮದ ಅಗತ್ಯವನ್ನು ನಿರ್ನಾಮಗೊಳಿಸುತ್ತದೆ' ಎಂದು ಅರಿಸ್ಟಾಟಲ್ ಕೂಡ ಭವಿಷ್ಯ ನುಡಿದಿದ್ದ. `ಮಾನವನ ಸ್ಪರ್ಶವೇ ಬೇಕಿಲ್ಲದೆ ನೇಯ್ಗೆ ಮಾಡುವುದು, ತಂತಿ ವಾದ್ಯದಿಂದ ನಾದ ಹೊಮ್ಮಿಸುವುದು ಸಾಧ್ಯವಾಗಿದ್ದೇ ಆದರೆ ಒಡೆಯರಿಗೆ ಸೇವಕರ, ಹಾಗೆಯೇ, ಮುಖ್ಯಾಧಿಕಾರಿಗಳಿಗೆ ಸಹಾಯಕರ ಅಗತ್ಯವೇ ಇರುವು    ದಿಲ್ಲ' ಎಂದು ಆತ ಗಮನ ಸೆಳೆದಿದ್ದ.ಅದೇ ರೀತಿ 20ನೇ ಶತಮಾನದುದ್ದಕ್ಕೂ ಅನೇಕ ವಿಜ್ಞಾನ ಸಾಹಿತಿಗಳು ತಂತ್ರಜ್ಞಾನದ ನಿರಂಕುಶತ್ವ ಕುರಿತು ಸಾಕಷ್ಟು ಕೃತಿಗಳನ್ನು ಸೃಷ್ಟಿಸಿದ್ದಾರೆ. 1952ರಲ್ಲಿ ಕರ್ಟ್ ವಾನ್‌ಗಟ್ಸ್ ಬರೆದ `ಪ್ಲೇಯರ್ ಪಿಯಾನೊ' ಇವುಗಳಲ್ಲಿ ಅತ್ಯಂತ ಗಮನಾರ್ಹವಾದುದು. ಯಾಂತ್ರಿಕತೆಯು ತಳವರ್ಗದ ಜನರ ಉಳಿವಿಗೆ ಧಕ್ಕೆ ತಂದು, ಜಗತ್ತಿನ ಸಂಪತ್ತು ಎಂಜಿನಿಯರುಗಳು ಮತ್ತು ಮ್ಯಾನೇಜರ್‌ಗಳ ಪಾಲಾಗುವುದನ್ನು ಕಥಾ ವಸ್ತುವಾಗಿ ಹೊಂದಿದ ಕೃತಿ ಇದಾಗಿದೆ.ಅದಕ್ಕೂ ಹಿಂದೆ ಹೋದರೆ, ಜೂಯಿಷ್ ಲೇಖಕ ಪ್ರೇಗ್‌ನ ಗೊಲೆಮ್ 16ನೇ ಶತಮಾನದಲ್ಲೇ ತಂತ್ರಜ್ಞಾನದಿಂದಾಗುವ ವಿನಾಶತ್ವವನ್ನು ಆಧರಿಸಿ ಕೃತಿ ಬರೆದಿದ್ದ. ಜೇಡಿ ಮಣ್ಣಿನ ಕರಕುಶಲ ಕಲೆಯನ್ನು ಸಂರಕ್ಷಿಸುವುದಾಗಿ ನೆಲೆ ಕಂಡ ಯಾಂತ್ರಿಕತೆಯು ಅಂತಿಮವಾಗಿ ಹೇಗೆ ಆ ಕಲೆಯನ್ನೇ ಆಪೋಷನ ತೆಗೆದುಕೊಳ್ಳುತ್ತದೆ ಎಂಬುದು ಅದರ ವಸ್ತುವಾಗಿತ್ತು.ಶುಕ್ರದೆಸೆಯ ಆರ್ಥಿಕ ಬೆಳವಣಿಗೆ ಹಾಗೂ ದುರ್ದೆಸೆಯ ಆರ್ಥಿಕ ಹಿಂಜರಿತ- ಹೀಗೆ ಎರಡೂ ಸನ್ನಿವೇಶಗಳಲ್ಲಿ- ಉದ್ಯೋಗ ಭಂಗದ ಇಂತಹ ಆತಂಕ ಕಂಡುಬರುವುದಕ್ಕೆ ಮೂಲ ಕಾರಣ ಏನು ಎಂಬುದು ಮಾತ್ರ ಸ್ಪಷ್ಟವಿಲ್ಲ. ತಂತ್ರಜ್ಞಾನದ ಸ್ಥಿತ್ಯಂತರದ ವೇಳೆ ಇಂತಹ ಆತಂಕ ಸಹಜವೂ ಇರಬಹುದು.ಆದರೆ ಇಂಟರ್‌ನ್ಯಾಷನಲ್ ಫೆಡರೇಷನ್ ಆಫ್ ರೋಬಾಟಿಕ್ಸ್ ಹಾಗೂ ಜರ್ಮನ್ ರೋಬಾಟಿಕ್ಸ್ ಕಂಪೆನಿಯ ಉನ್ನತ ಅಧಿಕಾರಿಯಾದ ಆಂಡ್ರಿಯಾಸ್ ಬಾಯೆರ್ ಅವರ ವಾದವೇ ಬೇರೆ. ಅವರು ಇಂತಹ ಆತಂಕವನ್ನು ಒಪ್ಪಲಾರರು. `ರೋಬಾಟ್‌ಗಳ ತಯಾರಿಕೆಯಿಂದ ಸಮಕಾಲೀನ ಜಪಾನ್ ಮತ್ತು ಯೂರೋಪ್‌ಗಳಲ್ಲಿ ಇಂತಹ ಆತಂಕದ ಎಳೆ ಕೂಡ ಕಂಡುಬಂದಿಲ್ಲ. ಈ ಮಾನವರೂಪಿ ರೋಬಾಟ್‌ಗಳ ಆವಿಷ್ಕಾರ ಅಮೆರಿಕನ್ನರಿಗೆ ದಿಗಿಲು ಮೂಡಿಸಿದರೆ ಜಪಾನೀಯರಿಗೆ ತುಂಬಾ ಖುಷಿ ನೀಡುವ ವಿಚಾರ. ಅದೇ ರೀತಿ ಜರ್ಮನಿಯಲ್ಲಿ ಕೂಡ, ರೋಬಾಟ್‌ಗಳ ಅಭಿವೃದ್ಧಿಯನ್ನು ದೊಡ್ಡ ಸಾಧನೆಯಂತೆ ಬಿಂಬಿಸಿಕೊಳ್ಳಲಾಗುತ್ತದೆ' ಎನ್ನುತ್ತಾರೆ ಅವರು.ಅಷ್ಟಕ್ಕೂ ಅಭಿವೃದ್ಧಿ ಹೊಂದಿದ ರಾಷ್ಟ್ರಗಳಲ್ಲಿ ಕಾರ್ಮಿಕರಿಗೆ ಹಲವು ಭದ್ರತೆಗಳಿವೆ. ಹೆಚ್ಚು ದಕ್ಷವಾದ ಹೊಸ ಉತ್ಪಾದನಾ ವಿಧಾನ ಅಳವಡಿಕೆಯಾದಾಗ ಯಾವುದೇ ಉದ್ದಿಮೆಯಾಗಲೀ ತನಗೆ ಅಗತ್ಯವಿಲ್ಲವೆಂದು ಕಾರ್ಮಿಕರನ್ನು ತೆಗೆದುಹಾಕುವುದು ಅಷ್ಟು ಸುಲಭವಲ್ಲ ಎಂದೂ ಅವರು ಹೇಳುತ್ತಾರೆ.ನಾರ್ಥ್ ವೆಸ್ಟರ್ನ್ ವಿ.ವಿ.ಯ ಆರ್ಥಿಕ ತಜ್ಞ ಜೋಯಲ್ ಮೊಕಿರ್ ಕೂಡ ಆಂಡ್ರಿಯಾಸ್ ತರ್ಕವನ್ನು ಮತ್ತೊಂದು ರೀತಿಯಲ್ಲಿ ಸಮರ್ಥಿಸಿಕೊಳ್ಳುತ್ತಾರೆ. `ಅನುಭವದ ಹಿನ್ನೆಲೆಯಲ್ಲಿ ಹೇಳುವುದಾದರೆ, ತಾಂತ್ರಿಕ ಸ್ಥಿತ್ಯಂತರದ ಕುರಿತ ಭಯಗಳೆಗೆ ಯಾವ ಹುರುಳೂ ಇಲ್ಲ ಎನ್ನಲೇಬೇಕಾಗುತ್ತದೆ.ವಾಸ್ತವವಾಗಿ, ಯಾಂತ್ರಿಕತೆಯ ಬೆಳವಣಿಗೆಯು ಜನರ ಜೀವನ ಮಟ್ಟವನ್ನು ಸುಧಾರಿಸಿ, ಸಿಬ್ಬಂದಿಯ ಶ್ರಮ ತಗ್ಗಿಸುವ ಜತೆಗೆ ಅವರ ಸುರಕ್ಷತೆ ಹೆಚ್ಚಿಸಿದೆ. 1900ರಲ್ಲಿ ಅಮೆರಿಕದ ಅರ್ಧದಷ್ಟು ಜನಸಂಖ್ಯೆ ಶ್ರಮದಾಯಕವಾದ ಕೃಷಿಯನ್ನೇ ಅವಲಂಬಿಸಿದ್ದಾಗ, ಪ್ರತಿ ಪ್ರಜೆಯ ಸರಾಸರಿ ವಾರ್ಷಿಕ ಶ್ರಮ 2300 ಗಂಟೆಗಳಷ್ಟು ಇತ್ತು. ಆದರೆ ಈಗ ಇದು 1800 ಗಂಟೆಗಳಿಗೆ ತಗ್ಗಿದೆ. ಅಷ್ಟೇ ಅಲ್ಲ, ಸಮೀಕ್ಷೆಯೊಂದರ ಭವಿಷ್ಯ ನಿಜವಾಗಿದ್ದೇ ಆದರೆ, 2062ರ ಹೊತ್ತಿಗೆ ಪ್ರತಿ ಪ್ರಜೆಯ ಶ್ರಮಕ್ಕೆ ವಾರಕ್ಕೆ ಕೇವಲ 2 ಗಂಟೆಗಳಿಗೆ ಇಳಿಯುತ್ತದೆ' ಎಂಬುದು ಅವರ ಪ್ರತಿಪಾದನೆ.`ಯಾವುದೇ ಹೊಸ ತಂತ್ರಜ್ಞಾನ ಅಳವಡಿಕೆಯಾದರೂ ಕೆಲವರ ಉದ್ಯೋಗಕ್ಕಾದರೂ ಕುತ್ತು ಆಗುವುದು ದಿಟ ಎಂಬುದು ಇತಿಹಾಸದಿಂದ ವೇದ್ಯ. ಆದರೆ ಹಾಗೆ ಸಂತ್ರಸ್ತರಾದವರನ್ನು ಒಂದು ಒಳ್ಳೆಯ ವ್ಯವಸ್ಥೆ ಹೇಗೆ ನೋಡಿಕೊಳ್ಳುತ್ತದೆ, ಅದೇ ಕೆಟ್ಟ ವ್ಯವಸ್ಥೆ ಹೇಗೆ ನೋಡಿಕೊಳ್ಳುತ್ತದೆ ಎಂಬುದರ ನಡುವೆ ಅಗಾಧ ವ್ಯತ್ಯಾಸವಿದೆ' ಎಂದು ಹೇಳುವುದನ್ನು ಮೊಕಿರ್ ಮರೆಯುವುದಿಲ್ಲ.ಈವರೆಗೆ ಉತ್ಪಾದನಾ ವಲಯ ಮತ್ತು ಕಚೇರಿ ಆಡಳಿತ ಕ್ಷೇತ್ರಗಳಿಗೆ ಆಘಾತ ನೀಡಿದ್ದ ತಂತ್ರಜ್ಞಾನದ ಬೆಳವಣಿಗೆ ಈಗ ಶಿಕ್ಷಣ ಕ್ಷೇತ್ರಕ್ಕೂ ಆಘಾತ ನೀಡುವಂತಿದೆ. ಹಿಂದೆ ಒಬ್ಬ ಶಿಕ್ಷಕ, 60 ವಿದ್ಯಾರ್ಥಿಗಳಿಗೆ ಪಾಠ ಮಾಡಬಹುದಾಗಿತ್ತು. ಆದರೆ ಈಗ ಅಂತರಜಾಲದಿಂದಾಗಿ ಒಬ್ಬ ಶಿಕ್ಷಕ 60,000 ವಿದ್ಯಾರ್ಥಿಗಳನ್ನು ಕೈ ಹಿಡಿದು ನಡೆಸಬಹುದು. ಇಷ್ಟಾದರೂ ನಿರಾಶವಾದಕ್ಕೆ ಕಾರಣವಿಲ್ಲ ಎನ್ನುವುದು ಮೊಕಿರ್ ಅಚಲ ವಿಶ್ವಾಸ.ವಾದ, ಪ್ರತಿವಾದಗಳೇನೇ ಇರಲಿ; ಈಗ ರೋಬಾಟಿಕ್ ತಂತ್ರಜ್ಞಾನದಿಂದಾಗಿ ಭವಿಷ್ಯದಲ್ಲಿ ಉದ್ಭವಿಸುವ ಔದ್ಯೋಗಿಕ ಸ್ಥಿತ್ಯಂತರ ಈ ಹಿಂದಿನ ಸ್ಥಿತ್ಯಂತರಗಳಿಗಿಂತ ಕಠಿಣವಾಗಿರುತ್ತದೆ ಎಂಬುದು ಬಹುತೇಕ ಅರ್ಥ ಶಾಸ್ತ್ರಜ್ಞರ ಅಭಿಪ್ರಾಯವಾಗಿದೆ.`ಕೃಷಿ ಮತ್ತು ಉತ್ಪಾದನಾ ಕ್ಷೇತ್ರದಲ್ಲಿ ಕ್ರಾಂತಿಯಾಗಲು ಹೆಚ್ಚಿನ ಬಂಡವಾಳ ಹೂಡಬೇಕಾಗಿತ್ತು. ಆದರೆ ಈಗ ಸಾಫ್ಟ್‌ವೇರ್ ನೆರವಿನಿಂದ ಕಾರ್ಯದಕ್ಷತೆ ಹೆಚ್ಚಿಸಲು ಅಧಿಕ ಬಂಡವಾಳದ ಅಗತ್ಯವಿಲ್ಲ. ಎಲ್ಲಾ ಕೆಲಸಗಳನ್ನೂ ಕಂಪ್ಯೂಟರಿನ ತರ್ಕ ಕೋಷ್ಠಕದ ಮಟ್ಟಕ್ಕೆ ಇಳಿಸುತ್ತಾ ಹೋದಂತೆ, ಚಿಲ್ಲರೆ ವಹಿವಾಟು ಕ್ಷೇತ್ರದಿಂದ ಹಿಡಿದು ರೇಡಿಯಾಲಜಿವರೆಗಿನ ಎಲ್ಲಾ ಕ್ಷೇತ್ರಗಳಲ್ಲೂ ಉದ್ಯೋಗಕ್ಕೆ ಕುತ್ತು ಬರುತ್ತದೆ' ಎನ್ನುತ್ತಾರೆ ಮಸ್ಸಾಚುಸೆಟ್ಸ್ ತಾಂತ್ರಿಕ ವಿ.ವಿ. ಪ್ರೊಫೆಸರ್ ಹಾಗೂ `ರೇಸ್ ಅಗೇನ್ಸ್‌ಟ್ ಮಶೀನ್' ಕೃತಿಯ ಲೇಖಕ ಎರಿಕ್ ಬ್ರಿಂಜೋಲ್ಫ್ಸ್‌ಸನ್.ಇದರ ಅರ್ಥ ಹೊಸ ಉದ್ಯೋಗಗಳ ಸೃಷ್ಟಿ ಆಗುವುದೇ ಇಲ್ಲವೆಂದಲ್ಲ. ಆರ್ಥಿಕತೆ ಬೆಳೆಯುತ್ತಾ ಹೋದಂತೆ ಎಂತೆಂತಹ ಹೊಸ ಉದ್ಯಮಗಳು- ಉದ್ಯೋಗಗಳು ಸೃಷ್ಟಿಯಾಗುತ್ತವೆ ಎಂಬುದನ್ನು ಕುಳಿತಲ್ಲೇ ಊಹಿಸುವುದು ಸುಲಭವಲ್ಲ. ಉದಾಹರಣೆಗೆ ಹೇಳುವುದಾದರೆ, ಇವತ್ತು ನ್ಯಾನೊ ಭೌತಶಾಸ್ತ್ರಜ್ಞ ಅಥವಾ ಸೋಷಿಯಲ್ ಮೀಡಿಯಾ ಕನ್ಸಲ್ಟೆಂಟ್ ಎಂಬ ಹುದ್ದೆಗಳು ಸೃಷ್ಟಿಯಾಗುತ್ತವೆ ಎಂಬುದು ಹಿಂದಿನ ಪೀಳಿಗೆಯ ಚಿಂತಕರಿಗೆ ಗೊತ್ತಿರಲಿಲ್ಲ.ಹಾಗೆಯೇ, ರೋಬಾಟಿಕ್ ಯಾಂತ್ರಿಕತೆಯಿಂದ ಭವಿಷ್ಯದಲ್ಲಿ ಎಂತೆಂತಹ ಉದ್ಯೋಗಗಳು ಸೃಷ್ಟಿ ಆಗುತ್ತವೆಂಬುದನ್ನು ಈಗಲೇ ಅಂದಾಜಿಸುವುದು ಕಷ್ಟ. ಆದರೆ ಸಿಬ್ಬಂದಿಯನ್ನು ಹೊಸ ಉದ್ಯೋಗಗಳಿಗೆ, ಹೊಸ ಕೌಶಲಗಳಿಗೆ ಸಜ್ಜುಗೊಳಿಸುವ ನಿಟ್ಟಿನಲ್ಲಿ ತರಬೇತಿ, ಪುನರ್ ತರಬೇತಿ ನೀಡುವುದು ಸವಾಲಾಗಿ ಪರಿಣಮಿಸುವುದು ಮಾತ್ರ ದಿಟ.

                

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry