ಶುಕ್ರವಾರ, ನವೆಂಬರ್ 15, 2019
20 °C
ಕವಿತೆ

ಮಾನವ ಶಾಸ್ತ್ರದ ಒಂದು ಚಿನ್ನ (ಚಿಕ್ಕ) ಪಾಠ

Published:
Updated:

ನಾನು ಅನುಭವಿಸುವ

ಘೋರತಮ ಅವಮಾನ

ಯಾವಾಗ ಅಂದರೆ

ಸವರ್ಣೀಯ ಸರೀಕರು

`ನೋಡಲು

ನೀನು “ಆ” ಜಾತಿಯವನಂತೆ

ಕಾಣುವುದಿಲ್ಲ' ಅಂದಾಗ

ಯಾರಾದರೂ ಹಾಗಂದಾಗ

`ಹೇ ಸೂಳೆ ಮಗನೆ' ಅಂದಂತಾಗಿ

ಕುಗ್ಗಿಹೋಗುತ್ತೇನೆ ನಾನು

ಪೂರ್ವಗ್ರಹದ ಕಳ್ಳಿಹಾಲಿಗೆ

ಅಸೂಯೆಯ ಬೇವಿನರಸ ಬೆರೆಸಿ

ನನ್ನೆದೆಗೆ ಎರೆದಂತಾಗಿ

ಆದರೂ

ಆತ್ಮಹತ್ಯೆಗೆ ಪ್ರಯತ್ನಿಸಿಲ್ಲ

ನನ್ನಂತೆಯೆ

ಅನೇಕಾನೇಕರಿದ್ದಾರೆಂಬುದು

ಖಾತ್ರಿಯಾಗಿ

ಅಚೂತನೊಬ್ಬ ತಮ್ಮ

ನಿರೀಕ್ಷೆಯಂತೆ ಕಾಣದಿದ್ದಾಗ

ಹಾದರಕ್ಕುಟ್ಟಿದವನೆಂದು ಬಗೆಯುವುದು

ಶೋಷಣೆಯ ಪರಮನೀಚ

ಸ್ಥಿತಿ ಎಂದು

ನಾನು ಯಾಕೆ ಹೇಳಬೇಕು?

ಹಾಗಂದವನು ತಾನು

ಯಾಕೆ ಕಪ್ಪಗಿದ್ದೇನೆ ತನ್ನಪ್ಪನ

ಮೂಗು ಚಪ್ಪಟೆಯಾಗಿದೆ ಯಾಕೆ

ಅವ್ವ ತುಸುಬೆಳ್ಳಗಿದ್ದರೂ

ತುಟಿ ದಪ್ಪ ಬಾಯಿ

ದಾರಂಧದ ಗಾತ್ರ ಹೇಗಾಯಿತು

ಎಂದೆಲ್ಲಾ ತಲೆಕೆಡಿಸಿಕೊಳ್ಳುವುದಿಲ್ಲ ಬಿಡಿ

ಇಲ್ಲಿ ಜಾತಿಗಳು ಹುಟ್ಟುವುದಕ್ಕೂ

ಮುಂಚೆ ಒಳ-ಹೊರಗಿನವರಿಂದ

ಸಂಕರವಾಗಿತ್ತು

ಭರತವರ್ಷದಲ್ಲಿ ಹುಟ್ಟುವ ಮಕ್ಕಳು

ಭಿನ್ನ ವಿಭಿನ್ನರು ಎಂದೆಲ್ಲಾ

ಮಾನವ ಶಾಸ್ತ್ರದ ಮೂಲಪಾಠವನ್ನು

ನಾನು ಯಾಕೆ ಹೇಳಬೇಕು?

ರಾಷ್ಟ್ರಪತಿಯಾದರೇನು

ಪದವಿಯ ಎಡಪಕ್ಕ `ಆ'

ಗುಣವಾಚಕ ಇದ್ದೇ

ಇರುತ್ತದೆ ಅದಕ್ಕೆ

ಎಂದಾದರೊಮ್ಮೆ ನಾನು

ಅದಾಗಬೇಕೆಂಬ ಕನಸಿದೆ!

ಪ್ರತಿಕ್ರಿಯಿಸಿ (+)