ಮಾನವ ಸರಪಳಿ ರಚಿಸಿ ಪ್ರತಿಭಟನೆ

7
ಮಹಾನಗರ ಪಾಲಿಕೆ ಅಧಿಕಾರಿ ಮೇಲೆ ಹಲ್ಲೆ

ಮಾನವ ಸರಪಳಿ ರಚಿಸಿ ಪ್ರತಿಭಟನೆ

Published:
Updated:

ಬೆಳಗಾವಿ: ಅತಿಕ್ರಮಣ ತೆರವುಗೊಳಿಸಲು ಹೋಗಿದ್ದ ಮಹಾನಗರ ಪಾಲಿಕೆಯ ಸಹಾಯಕ ಆಯುಕ್ತರು ಹಾಗೂ ಅಧಿಕಾರಿಯೊಬ್ಬರ ಮೇಲೆ ಶನಿವಾರ ನಡೆದ ಹಲ್ಲೆ ಘಟನೆ ಖಂಡಿಸಿ ಹಾಗೂ ತಪ್ಪಿತಸ್ಥರಿಗೆ ಕಠಿಣ ಶಿಕ್ಷೆ ನೀಡಲು ಒತ್ತಾಯಿಸಿ ಪಾಲಿಕೆ ಅಧಿಕಾರಿಗಳು ಹಾಗೂ ಸಿಬ್ಬಂದಿ ಇಲ್ಲಿನ ರಾಣಿ ಚನ್ನಮ್ಮ ವೃತ್ತದಲ್ಲಿ ಮಂಗಳವಾರ ಮಾನವ ಸರಪಳಿ ರಚಿಸಿ ಪ್ರತಿಭಟನೆ ನಡೆಸಿದರು.ಪಾಲಿಕೆ ಸಿಬ್ಬಂದಿ ಹಾಗೂ ಅಧಿಕಾರಿಗಳು ಮಾಣವ ಸರಪಳಿ ರಚಿಸಿ ಪ್ರತಿಭಟನೆ ನಡೆಸಿದ್ದರಿಂದ ಸುಮಾರು 15 ನಿಮಿಷಗಳವರೆಗೆ ರಸ್ತೆ ಸಂಚಾರ ಬಂದ್ ಆಗಿತ್ತು.ಇದಕ್ಕೂ ಮುನ್ನ ಪಾಲಿಕೆಯ ಎದುರು ಅಧಿಕಾರಿಗಳು ಹಾಗೂ ಸಿಬ್ಬಂದಿ ಮುಷ್ಕರ ಮುಂದುವರಿಸಿದ್ದರು. ಸ್ಥಳಕ್ಕೆ ಪಾಳಿಕೆ ಆಯುಕ್ತರು ಆಗಮಿಸಿ ಮುಷ್ಕರ ಕೈಬಿಡುವಂತೆ ಮನವಿ ಮಾಡಿದ್ದರಿಂದ ಪ್ರತಿಭಟನೆ ಹಿಂದಕ್ಕೆ ಪಡೆಯಲಾಯಿತು.ಪಾಲಿಕೆಯ ಆಯುಕ್ತೆ ಪ್ರಿಯಾಂಕಾ ಫ್ರಾನ್ಸಿಸ್ ಅವರು, ಅಧಿಕಾರಿಗಳ ಮೇಲೆ ಹಲ್ಲೆ ನಡೆದ ಘಟನೆ ಖಂಡನೀಯ. ಈಗಾಗಲೇ ತಪ್ಪಿತಸ್ಥರ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದ್ದು, ಅವರನ್ನು ಪೊಲೀಸ್ ವಶಕ್ಕೆ ನೀಡಲಾಗಿದೆ. ಪಾಲಿಕೆ ಸದಸ್ಯೆ ಮೈನಾಬಾಯಿ ಚೌಗುಲೆ ಅವರ ಸದಸ್ಯತ್ವ ರದ್ದುಗೊಳಿಸಲು ಸರ್ಕಾರಕ್ಕೆ ಪ್ರಸ್ತಾವ ಕಳುಹಿಸಲಾಗುವುದು. ಪಾಲಿಕೆ ಸದಸ್ಯರ ಸಂಬಂಧಿಕರು ನೌಕರರ ಮೇಲೆ ಯಾವುದೇ ರೀತಿಯ ದಬ್ಬಾಳಿಕೆ ಹಾಗೂ ಹಸ್ತಕ್ಷೇಪ ಮಾಡಿದರೆ ಅಂತಹವರ ವಿರುದ್ಧ ಕಾನುನು ಕ್ರಮ ಜರುಗಿಸಲಾಗುವುದು.ಪಾಲಿಕೆಯಲ್ಲಿ ಪುನಃ ಇಂತಹ ಘಟನೆ ಮರುಕಳಿಸದಂತೆ ಕ್ರಮ ಕೈಗೊಳ್ಳಲಾಗುವುದು. ಈ ಹಿನ್ನೆಲೆಯಲ್ಲಿ ಮುಷ್ಕರವನ್ನು ಹಿಂದಕ್ಕೆ ಪಡೆಯಬೇಕು ಎಂದು ಮನವಿ ಮಾಡಿದರು. ಇದಕ್ಕೆ ಸ್ಪಂದಿಸಿದ ಪಾಲಿಕೆ ಸಿಬ್ಬಂದಿ ಹಾಗೂ ಅಧಿಕಾರಿಗಳು ಮುಷ್ಕರವನ್ನು ಹಿಂದಕ್ಕೆ ಪಡೆದರು.ನಂತರ ಮಹಾನಗರ ಪಾಲಿಕೆ ನೌಕರರ ಸಂಘದ ನೇತೃತ್ವದಲ್ಲಿ ಪಾಲಿಕೆಯ ಅಧಿಕಾರಿಗಳು ಹಾಗೂ ಸಿಬ್ಬಂದಿ ಎಸ್‌ಪಿ ಕಚೇರಿ ರಸ್ತೆ, ಕೊಲ್ಲಾಪುರ ವೃತ್ತ, ಜಿಲ್ಲಾ ಆಸ್ಪತ್ರೆ, ಕಿತ್ತೂರು ರಾಣಿ ಚನ್ನಮ್ಮ ವೃತ್ತ ಮಾರ್ಗವಾಗಿ ಮೆರವಣಿಗೆ ಮುಖಾಂತರ ಆಗಮಿಸಿ ಹೆಚ್ಚುವರಿ ಪ್ರಾದೇಶಿಕ ಆಯುಕ್ತ ಡಾ. ವಿ.ಎಸ್.ಚೌಗಲಾ ಅವರಿಗೆ ಮನವಿ ಸಲ್ಲಿಸಿದರು.`ಪಾಲಿಕೆಯ ಸಹಾಯಕ ಆಯುಕ್ತರು ಹಾಗೂ ಅಧಿಕಾರಿಯೊಬ್ಬರ ಮೇಲೆ ಹಲ್ಲೆ ನಡೆಸಿದ ಶಿವಾ ಚೌಗುಲೆ ಹಾಗೂ ಮಹಮ್ಮದ್ ರಫೀಕ್ ದೇಸಾಯಿ ಅವರನ್ನು ಗುಂಡಾ ಕಾಯ್ದೆಯಡಿ ಬಂಧಿಸಿ ಕಠಿಣ ಶಿಕ್ಷೆ ನೀಡಬೇಕು. ಪಾಲಿಕೆ ಸದಸ್ಯೆ ಮೈನಾಬಾಯಿ ಚೌಗುಲೆ ಅವರ ಸದಸ್ಯತ್ವ ರದ್ದುಗೊಳಿಸಬೇಕು ಎಂದು ಆಗ್ರಹಿಸಿದರು.ಪಾಲಿಕೆ ಸಿಬ್ಬಂದಿ ಹಾಗೂ ಅಧಿಕಾರಿಗಳಿಗೆ ಸಾಮಾಜಿಕ ಭದ್ರತೆ ಒದಗಿಸಬೇಕು. ಮೈನಾಬಾಯಿ ಚೌಗುಲೆ ಅವರ ಸದಸ್ಯತ್ವವನ್ನು ಕೂಡಲೇ ರದ್ದುಗೊಳಿಸದಿದ್ದರೆ ರಾಜ್ಯದಾದ್ಯಂತ ಉಗ್ರ ಹೋರಾಟ ಮಾಡಲಾಗುವುದು' ಎಂದು ಬೆಳಗಾವಿ ಮಹಾನಗರ ಪಾಲಿಕೆ ನೌಕರರ ಸಂಘದ ಪ್ರಧಾನ ಕಾರ್ಯದರ್ಶಿ ನಾಗನಗೌಡ ಬೆಳವಣಕಿ ತಿಳಿಸಿದರು.ಸಂಘದ ಅಧ್ಯಕ್ಷ ವಿಜಯ ಕೊಟ್ಟೂರ, ಉಪಾಧ್ಯಕ್ಷ ಅರ್ಜುನ ದೇಮಟ್ಟಿ, ಪಾಲಿಕೆ ಸಿಬ್ಬಂದಿ ಹಾಗೂ ಅಧಿಕಾರಿಗಳು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry