ಮಾನವ ಸಾಗಾಣಿಕೆ ಜಾಡಿಗೆ ಒತ್ತು ನೀಡದ ಮಹಿಳಾ ಆಯೋಗ

7

ಮಾನವ ಸಾಗಾಣಿಕೆ ಜಾಡಿಗೆ ಒತ್ತು ನೀಡದ ಮಹಿಳಾ ಆಯೋಗ

Published:
Updated:

ರಾಜ್ಯದಲ್ಲಿ ಹದಿಹರೆಯದ ಯುವತಿಯರ ನಾಪತ್ತೆ ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಅದಕ್ಕೆ ಕಾರಣ ಹುಡುಕಲು ಹೊರಟ ರಾಜ್ಯ ಮಹಿಳಾ ಆಯೋಗ ತನ್ನ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಿದೆ. ಮಾಧ್ಯಮ ವರದಿಗಳ ಮೂಲಕ ನಾವು ಗಮನಿಸಬಹುದಾದ ಸೂಕ್ಷ್ಮ ಅಂಶವೆಂದರೆ, ಆಯೋಗವು ಸಂಪೂರ್ಣ ನೈತಿಕ ಜವಾಬ್ದಾರಿಯನ್ನು ಕಾಣೆಯಾದ ಮಕ್ಕಳ ಮೇಲೆಯೇ ಹೊರಿಸಿ, ರಾಜ್ಯದ ಉದ್ದಗಲಕ್ಕೂ ಹಬ್ಬಿರುವ ರಾಜ್ಯ, ಅಂತರರಾಜ್ಯ ಹಾಗೂ ಅಂತರರಾಷ್ಟ್ರೀಯ ಮಾನವ ಸಾಗಾಣಿಕಾ ಜಾಲಗಳ ತಂತ್ರಗಾರಿಕೆ, ವ್ಯಾಪಾರ ಹಾಗೂ ವಂಚನೆಗೆ ಒತ್ತು ನೀಡದೆ, ಸಮಸ್ಯೆಯನ್ನು ಅರ್ಥೈಸಿಕೊಳ್ಳುವ ಒಳದೃಷ್ಟಿ ಇಟ್ಟುಕೊಳ್ಳದೇ, ಕೇವಲ ಸಾಂಪ್ರದಾಯಿಕ, ನಾಮ್‌ಕಾವಸ್ತೆ ವರದಿಯನ್ನು ಜನರ ಮುಂದೆ ಹಿಡಿದಿದೆ.`ಕಳೆದುಹೋದ' ಮಕ್ಕಳನ್ನು ಪತ್ತೆ ಹಚ್ಚದ ವ್ಯವಸ್ಥೆ ಸುಲಭವಾಗಿ ಅವರನ್ನು `ಓಡಿಹೋದ', `ಪರಾರಿಯಾದ' ಮಕ್ಕಳೆಂದು ಬಿಂಬಿಸಿ ತನ್ನ ಕೈ ತೊಳೆದುಕೊಳ್ಳುತ್ತಿದೆ. ಈ `ಓಡಿಹೋಗುವ' `ಪರಾರಿಯಾಗುವ' ನಾಟಕೀಯ ಪ್ರಕ್ರಿಯೆಯ ಹಿಂದೆ ಕಾರ್ಯನಿರ್ವಹಿಸುವ ಕರಾಳ ಕೈಗಳನ್ನು ಪತ್ತೆ ಹಚ್ಚಿ, ಕಾನೂನಿನ ಸಮಕ್ಷಮಕ್ಕೆ ಒಪ್ಪಿಸಿ, ಶಿಕ್ಷಿಸಿ, ಕಳೆದು ಹೋದ ಮಕ್ಕಳನ್ನು ಘನತೆಯೊಡನೆ ಮರಳಿಸುವ ಕಾರ್ಯ ಮಹಿಳಾ ಆಯೋಗಕ್ಕೆ ಮುಖ್ಯವೆನಿಸಬೇಕು. ಹೆಣ್ಣು ಮಕ್ಕಳು, ಮಹಿಳೆಯರಿಗಾಗಿ ಆಸ್ಥೆ ವಹಿಸಬೇಕಾದ ಮಹಿಳಾ ಆಯೋಗ, ತನ್ನ ವರದಿಯಲ್ಲೇ `ಓಡಿಹೋದವರೆಂದು' `ಪರಾರಿಯಾದವರೆಂದು' ಉಲ್ಲೇಖಿಸಿರುವುದು ಖಂಡನೀಯ. ಈ ರೀತಿಯ ವರದಿಗಳು ಹೆಣ್ಣು ಮಕ್ಕಳಿಗೆ ಮತ್ತಷ್ಟು ಕಳಂಕಪ್ರಾಯವಾಗಬಹುದು ಎಂಬ ಆತಂಕ ನಮ್ಮದು.ಪ್ರಾಪ್ತ ವಯಸ್ಕರಾಗಿದ್ದು, ತಮ್ಮ ಇಚ್ಛೆಯಂತೆ ಪ್ರೀತಿಸಿದವರನ್ನು ಮದುವೆಯಾಗಲು ಸಮಾಜ ಅಡ್ಡ ಬಂದಾಗ, ಅನುಶಾಸನಬದ್ಧ ಹಕ್ಕುಗಳೊಡನೆ ಹೊಸ ಜೀವನ ನಡೆಸಲು ಹೊರಡುವವರನ್ನು `ಓಡಿಹೋದವರೆಂದು' `ಪರಾರಿಯಾದವರೆಂದು' ಹಣೆಪಟ್ಟಿ ಕಟ್ಟುವ ಕಾರ್ಯ ಸಾಂಪ್ರದಾಯಿಕ ವ್ಯವಸ್ಥೆಯಿಂದ ನಡೆಯುತ್ತಲೇ ಬಂದಿದೆ. ಈ ಮಹಿಳೆಯರನ್ನು `ಕಾಣೆಯಾದವರ' ಹಾಗೂ `ಪತ್ತೆಯಾದವರ' ಪಟ್ಟಿಗೆ ತರುವುದು ಸಾಧುವಲ್ಲ. ಒಬ್ಬ ಯುವತಿ ಶಾಶ್ವತವಾಗಿ ಕಾಣೆಯಾಗುವುದರಲ್ಲಿ ಪ್ರೀತಿಯ ಪಾತ್ರವಿರುವುದಿಲ್ಲ. ಬದಲಿಗೆ ವಂಚನೆಯ ಜಾಲದ ಕಬಂಧಬಾಹು ಚಾಚಿರುತ್ತದೆ ಎಂಬ ಸರಳ ಸತ್ಯ ಆಯೋಗಕ್ಕೆ ತಿಳಿದಿರಬೇಕಾಗುತ್ತದೆ.ಈ `ಓಡಿಹೋದ' `ಪರಾರಿಯಾದ' ಮಕ್ಕಳ ಪೋಷಕರೆಂದೆನಿಸಿಕೊಳ್ಳುವ ಅವಮಾನವನ್ನು ತಪ್ಪಿಸಿಕೊಳ್ಳಲು ಅನೇಕರು ದೂರು ದಾಖಲಿಸುವ ದುಸ್ಸಾಹಸಕ್ಕೆ ಕೈ ಹಾಕದ ಪರಿಸ್ಥಿತಿ ಇದ್ದು, ಇವರುಗಳ ಸಂಖ್ಯೆ ಕಡಿಮೆಯೇನಿಲ್ಲ. ಠಾಣೆಗಳಲ್ಲಿ ಇವರುಗಳ ಬಗೆಗಿರುವ ಅಸಡ್ಡೆತನ ಹಾಗೂ ಸಾಂತ್ವನ ರಹಿತ ವರ್ತನೆಗಳ ಬಗ್ಗೆ ಆಯೋಗ ಗಮನ ಹರಿಸಬೇಕಾಗಿದೆ. ಕಳೆದುಹೋದ ಮಕ್ಕಳು ಪತ್ತೆಯಾದ ನಂತರವಷ್ಟೇ, ಸರಿಯಾದ ಸಮಾಲೋಚನೆಯ ಮೂಲಕ ಮೂಲ ಕಾರಣವನ್ನು ಕಂಡುಕೊಳ್ಳಬಹುದಾಗಿದೆ. ಜವಾಬ್ದಾರಿ ಸ್ಥಾನದಲ್ಲಿರುವ ಆಯೋಗ ಕಾಣೆ ಪ್ರಕರಣಗಳಿಗೆ ಪ್ರೀತಿ ಕಾರಣ ಎಂದು ಉಲ್ಲೇಖಿಸುವುದು ತರವಲ್ಲ.ಕಾಣೆಯಾದ ಮಕ್ಕಳ ಹಾಗೂ ಯುವತಿಯರ ಬಗ್ಗೆ ಆಯೋಗಕ್ಕೆ ಇರುವ ಕಾಳಜಿಯು ಸ್ವಾಗತಾರ್ಹ. ಆದರೆ ವರದಿಯಲ್ಲಿ ಉಲ್ಲೇಖಿಸಲಾಗಿರುವ ಕಾರಣಗಳು ಹಾಗೂ ಪದಬಳಕೆಗಳು ಬದಲಾಗಬೇಕಿವೆ. ಹಾಗೆಯೇ ಮಾನವ ಸಾಗಾಣಿಕೆಯ ಜಾಲಗಳು ನಡೆಸುವ `ಪ್ರೀತಿಯ ಹುನ್ನಾರಗಳು' ಬಯಲಾಗಬೇಕಿವೆ. ಈ ನಿಟ್ಟಿನಲ್ಲಿ ಆಯೋಗವು ತನ್ನ ವರದಿಯನ್ನು ಬದಲಾಯಿಸಬೇಕು.ಮಹಿಳೆಯರ, ಮಕ್ಕಳ ಘನತೆ, ಸಾಮಾಜಿಕ ಬದಲಾವಣೆ ಹಾಗೂ ಅನುಶಾಸನಬದ್ಧ ಹಕ್ಕುಗಳ ರಕ್ಷಣೆಯ ಉದ್ದೇಶದಿಂದ ಹಾಗೂ ಶೋಷಣೆಯಿಂದ ಮುಕ್ತಗೊಳಿಸಿ ಸಾಮಾಜಿಕ ನ್ಯಾಯ ದೊರಕಿಸುವ ನಿಟ್ಟಿನಲ್ಲಿ ಕಾರ್ಯನಿರ್ವಹಿಸಲಿ ಎಂದು ರಚಿಸಲಾದ  ರಾಜ್ಯ ಮಹಿಳಾ ಆಯೋಗ ಇತರೆ ಎಲ್ಲಾ ಆಯೋಗಗಳಿಗಿಂತಲೂ ಹೆಚ್ಚಿನ ಪ್ರಮಾಣದ ಸಂವೇದನಾಶೀಲತೆಯನ್ನು ಹಾಗೂ ಸೂಕ್ಷ್ಮಗ್ರಾಹಿ ಮನಸ್ಸನ್ನು ಹೊಂದಿರಬೇಕಾಗಿದ್ದು, ಮಹಿಳಾ ಪರವಾದ ನಿಲುವನ್ನು ತಳೆದದ್ದೇ ಆದಲ್ಲಿ ಈ ರೀತಿಯ ತಪ್ಪುಗಳು ಘಟಿಸಲಾರವು.

ಈ ಹಿಂದೆ ರಾಜ್ಯದ ಕೆಲವೆಡೆ ಮಹಿಳೆಯರ ಮೇಲೆ ದೈಹಿಕ ಹಾಗೂ ಲೈಂಗಿಕ ದಾಳಿಗಳು ನಡೆದಾಗ ಮಹಿಳಾ ಆಯೋಗದ ಅಧ್ಯಕ್ಷರಾದ  ಮಂಜುಳಾರವರು ಮೈಸೂರು ವಿಶ್ವವಿದ್ಯಾಲಯದ ಕಾರ್ಯಕ್ರಮ ಒಂದರಲ್ಲಿ ಮಾತನಾಡುತ್ತಾ, `ನಮ್ಮ ಹೆಣ್ಣುಮಕ್ಕಳಿಗೆ ಮೈತುಂಬಾ ಬಟ್ಟೆ ಧರಿಸುವುದನ್ನು ಕಲಿಸಿದರೆ ಈ ರೀತಿಯ ಘಟನೆಗಳು ನಡೆಯುವುದಿಲ್ಲ' ಎಂದು ಹೇಳಿದ್ದಲ್ಲದೇ ಹೆಣ್ಣು ಮಕ್ಕಳಿಗೆ ಡ್ರೆಸ್‌ಕೋಡ್‌ನ ಮಹತ್ವದ ಬಗ್ಗೆ ಭಾಷಣ ನೀಡಿದರು. ಮೈತುಂಬಾ ಸೀರೆ ಉಟ್ಟು ತಲೆಯ ಮೇಲೂ ಸೆರಗು ಹೊದ್ದು, ಬದುಕು ನಡೆಸುವ ಸಹಸ್ರಾರು ಹೆಣ್ಣು ಮಕ್ಕಳು ಲೈಂಗಿಕ ಶೋಷಣೆಗೆ ಒಳಗಾಗುತ್ತಿರುವುದು ಇವರಿಗೆ ಗೊತ್ತಿರದ ವಿಷಯವೇನಾಗಿರಲಿಲ್ಲ. `ಒಡನಾಡಿ' ಸೇರಿದಂತೆ ಕೆಲವು ಮಹಿಳಾ ಸಂಘಟನೆಗಳು ಸ್ಥಳದಲ್ಲೇ ಈ ಧೋರಣೆಯನ್ನು ಖಂಡಿಸಿದ್ದವು. ಪ್ರೀತಿಸುವ, ಪರಸ್ಪರ ಜೊತೆಯಾಗಿ  ಓಡಾಡುವ ಜೋಡಿಗಳೆಲ್ಲವೂ ಕಾನೂನಿನ ಮೂಗಿನ ಕೆಳಗೆ ಓಡಾಡಬೇಕೆಂಬುದು ಕೂಡ ಯಥಾಸ್ಥಿತಿವಾದದ ಮತ್ತೊಂದು ಮುಖವಾಗಿದೆ. ಆಯೋಗದಲ್ಲಿರುವವರು ಮಹಿಳೆಯರೇ ಆಗಿದ್ದರೂ ಪುರುಷ ಪ್ರಧಾನ ಸಂಸ್ಕೃತಿಯ ಪ್ರತಿನಿಧಿಗಳು ಎಂಬುದಕ್ಕೆ ಇದಕ್ಕಿಂತ ಹೆಚ್ಚಿನ ಸಾಕ್ಷಿಗಳು ಬೇಕಾಗಿಲ್ಲ.ಮಕ್ಕಳು, ಯುವತಿಯರು ಕಾಣೆಯಾಗುತ್ತಿರುವುದು ಒಂದು ಗಂಭೀರವಾದ ಸಮಸ್ಯೆ. ನ್ಯಾಯಿಕ ಮಾನದಂಡದ ಮೇಲೆ ರಚಿತವಾದ ರಾಜ್ಯ ಮಹಿಳಾ ಆಯೋಗ ಈ ಸಮಸ್ಯೆಯ ಬಗ್ಗೆ ತರಾತುರಿಯಲ್ಲಿ ಅಧ್ಯಯನ ನಡೆಸುವ ಬದಲಾಗಿ ಕೆಳಸ್ತರದಿಂದ ಮೇಲ್‌ಸ್ತರದ ಜನರೊಡನೆ ಚರ್ಚೆಗಳನ್ನು ನಡೆಸಿ, ಸಾಂಸ್ಕೃತಿಕ ವಿಭಿನ್ನತೆ, ಕಾಲಘಟ್ಟದಲ್ಲಿ ಆಗುತ್ತಿರುವ ಬದಲಾವಣೆಗಳೆಲ್ಲವನ್ನು  ಸೂಕ್ಷ್ಮವಾಗಿ ಅವಲೋಕಿಸುವ ಜನರ ನೆರವನ್ನು ಪಡೆದು ಆ ನಂತರದಲ್ಲಿಸಾಮಾಜಿಕ ಸಂಶೋಧನಾ ಪರಿಣತರ ಮೂಲಕ ಅಧ್ಯಯನ ನಡೆಸಿದ್ದರೆ ಆ ವರದಿಯು ಸತ್ಯಕ್ಕೆ ಹತ್ತಿರವಾದುದ್ದಾಗಿರುತ್ತದೆ. ಇದನ್ನು ಬಿಟ್ಟು ಏಕಾಏಕಿ ಕೆಲವು ವರದಿಗಳನ್ನಷ್ಟೇ ದಾಖಲಿಸಿ  ಮತ್ತೊಂದು ವರದಿಯನ್ನು ತಯಾರಿಸಿ ಜನರ ಮುಂದಿಡುವ ಇಂತಹ  ಮಹಿಳಾ ಆಯೋಗಗಳಿಂದ ಮಹಿಳೆಯರಿಗೆ ಘನತೆ ಹಾಗು ನೈತಿಕ ಆತ್ಮಸ್ಥೈರ್ಯ ದಕ್ಕುವುದಿಲ್ಲ. ಸಾಂಪ್ರದಾಯಿಕ ನೆಲೆಗಟ್ಟಿನಲ್ಲೇ ಚಿಂತಿಸುವ ಆಯೋಗವು ನೀಡಿರುವ ವರದಿ ತುಂಬಾ ಬಾಲಿಶವಾಗಿ ಮುಗ್ಧ ಮಕ್ಕಳು ಆಡುವ ತೊದಲು ನುಡಿಗಳಂತೆ ಕಂಡಾಗ್ಯೂ ಅದರೊಳಗಿನ ಮಹಿಳಾ ವಿರೋಧಿ ಸಾಂಪ್ರದಾಯಿಕ ಧೋರಣೆ ಮನಸ್ಸಿಗೆ ರಾಚುತ್ತದೆ. ಮಹಿಳಾ ಸಶಕ್ತತೆಗಾಗಿ ಅವರ ಸಾಂಸ್ಕೃತಿಕ ಅಭಿವೃದ್ಧಿಗಾಗಿ. ಅವೈಜ್ಞಾನಿಕ ಮೂಢತೆಗಳಿಂದ ಬಂಧಿತರ ಪುನಶ್ಚೇತನಕ್ಕಾಗಿ ದುಡಿಯಬೇಕಾದ ಸಂಸ್ಥೆಯೊಂದು ತನ್ನ ಬೌದ್ಧಿಕ ದಾರಿದ್ರ್ಯದಿಂದ ನರಳುತ್ತಿದ್ದರೂ ಯಾವುದೇ ಅಡೆತಡೆಗಳಿಲ್ಲದೇ ನಳನಳಿಸುತ್ತಿರುವುದು ವಿಷಾದನೀಯ. ಮಹಿಳಾ ಆಯೋಗದ ಈ ಪ್ರವೃತ್ತಿ ಹೆಣ್ಣುಮಕ್ಕಳಿಗಾಗಿ ಕಾಳಜಿಯಿಂದ ಕಾರ್ಯನಿರ್ವಹಿಸುವ, ಚಿಂತಿಸುವ ಹಲವಾರು ಜನರಿಗೆ ಭ್ರಮನಿರಸನ ಹಾಗೂ ನಿರಾಶೆಯನ್ನುಂಟು ಮಾಡಿದೆ. ತಾಲಿಬಾನಿ ಸಂಸ್ಕೃತಿಯನ್ನು ಸಹ ಇಂತಹ ವರದಿಗಳು ನೆನಪಿಸುವುದು ಆತಂಕಕಾರಿ ಲಕ್ಷಣವಾಗಿದೆ. ಇತ್ತೀಚಿನ ದಿನಗಳಲ್ಲಿ  ಹೆಚ್ಚು ಹೆಚ್ಚಾಗಿ ಕಾಣೆಯಾಗುತ್ತಿರುವ ಮಂದ ಬುದ್ಧಿಯ ಪೋಷಕರಿಲ್ಲದ ಅಂಗವಿಕಲರ ಭಾವನೆಗಳಿಗೆ ಇಂತಹ ವರದಿಗಳಲ್ಲಿ  ಸ್ಪಂದನೆ ಇಲ್ಲ. ಸಮಾಜದ ಮೋಸದ ಜಾಲಕ್ಕೆ ಬಿದ್ದು ಕಾಣೆಯಾಗಿ ಲೈಂಗಿಕ ಕೂಪದಲ್ಲಿ  ಬೆಂದು ಹೆಚ್‌ಐವಿ ಸೋಂಕಿನೊಡನೆ ಹೊರಬಂದ  ಕಮಲ (ಹೆಸರು ಬದಲಾಯಿಸಲಾಗಿದೆ) ಎಂಬ ಕಿವಿ ಕೇಳದ, ಮಾತು ಬಾರದ  ಅಮಾಯಕ ಯುವತಿಯ ಪ್ರಶ್ನೆಗಳಿಗೆ ಇಲ್ಲಿ ಉತ್ತರವಿಲ್ಲ. ಸರ್ಕಾರಿ ಕಡತಗಳಲ್ಲಿ ಆಕೆಯೂ ಕೂಡ ಓಡಿಹೋದವಳು, ಪರಾರಿಯಾದವಳು ! ಆದರೂ ಆಕೆ ಈ ಆಯೋಗಕ್ಕೆ ಸೂಕ್ತ ಸಂಪನ್ಮೂಲ ವ್ಯಕ್ತಿಯಾಗಬಲ್ಲಳು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry