ಗುರುವಾರ , ಜನವರಿ 23, 2020
19 °C

ಮಾನವ ಹಕ್ಕುಗಳ ದಿನಾಚರಣೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ವಿಶ್ವ ಮಾನವ ಹಕ್ಕುಗಳ  ದಿನಾಚರಣೆಯ ಪ್ರಯುಕ್ತ ನಗರದ ವಿವಿಧೆಡೆ ಕಾರ್ಯಕ್ರಮಗಳು ಜರುಗಿದವು.ಪೀಪಲ್ಸ್‌ ಮೂವ್‌ಮೆಂಟ್‌ ಫಾರ್‌ ಹ್ಯೂಮನ್ ರೈಟ್ಸ್‌ ಸಂಸ್ಥೆಯು ಪ್ರೆಸ್‌ಕ್ಲಬ್‌ ಸಭಾಂಗಣದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ   ಹೈಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ಅರಳಿ ನಾಗರಾಜ, ಹಿರಿಯ ವಕೀಲೆ ಪ್ರಮೀಳಾ ನೇಸರ್ಗಿ ಭಾಗವಹಿಸಿ, ಮಾನವ ಹಕ್ಕುಗಳು ಮತ್ತು ಅವನ್ನು ರಕ್ಷಿಸುವ ಬಗ್ಗೆ ಕುರಿತು ಮಾತನಾಡಿದರು.ಕೊಳೆಗೇರಿ ನಿವಾಸಿಗಳು ಪುರಭವನದ ಎದುರು ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಪ್ರತಿಭಟನೆ ನಡೆಸಿದರು.

ಇದೇ ಸಂದರ್ಭದಲ್ಲಿ ರಾಜ್ಯ ಮಾನವ ಹಕ್ಕುಗಳ ಆಯೋಗಕ್ಕೆ ಅಧ್ಯಕ್ಷರನ್ನು ನೇಮಿಸಿ ಎಂಬ ಕೂಗು ಕೂಡ ಕೇಳಿಬಂತು.ಸಂತೋಷ್ ಹೆಗ್ಡೆ ಒತ್ತಾಯ: ಕಾರ್ಯಕ್ರಮ ವೊಂದರಲ್ಲಿ ಮಾತನಾಡಿದ ನಿವೃತ್ತ ಲೋಕಾಯುಕ್ತ ನ್ಯಾಯಮೂರ್ತಿ ಎನ್‌.ಸಂತೋಷ್‌ ಹೆಗ್ಡೆ ‘ರಾಜ್ಯ ಮಾನವ ಹಕ್ಕುಗಳ ಆಯೋಗಕ್ಕೆ ಕೂಡಲೇ ಅಧ್ಯಕ್ಷರನ್ನು ನೇಮಿಸಬೇಕು ಎಂದು ಹೈಕೋರ್ಟ್‌ ಮಂಗಳವಾರ ಸರ್ಕಾರಕ್ಕೆ ನಿರ್ದೇಶನ ನೀಡಿದೆ. ಇಲ್ಲದಿದ್ದರೆ ನ್ಯಾಯಾಂಗ ನಿಂದನೆಯನ್ನು ಎದುರಿಸಬೇಕಾಗುತ್ತದೆ. ಸರ್ಕಾರ ಶೀಘ್ರ ಸೂಕ್ತ ವ್ಯಕ್ತಿಯನ್ನು ಆಯೋಗಕ್ಕೆ ನೇಮಕ ಮಾಡಬೇಕು’ ಎಂದು ಒತ್ತಾಯಿಸಿದರು.ಭ್ರಷ್ಟಾಚಾರ ನಿರ್ಮೂಲನ ಸಂಸ್ಥೆ  ಹಮ್ಮಿಕೊಂಡಿದ್ದ ಜಾಗೃತಿ ರ್‌್ಯಾಲಿಯು ಸ್ವಾತಂತ್ರ್ಯ ಉದ್ಯಾನದಿಂದ ಹೊರಟು  ಆನಂದರಾವ್ ವೃತ್ತ, ರಾಜಾಜಿನಗರ 6ನೇ ಬ್ಲಾಕ್, ಮಾರುತಿ ಬಂಡೆ, ಬಸವೇಶ್ವರ ನಗರ, ಜಾಲಹಳ್ಳಿಯಲ್ಲಿ ಸಮಾವೇಶಗೊಂಡಿತು. ವಿಧಾನ ಪರಿಷತ್ ಸದಸ್ಯ ವೀರಣ್ಣ ಮತ್ತಿಕಟ್ಟಿ, ಹಿರಿಯ ನಟಿ ಜಯಂತಿ, ನಿರ್ದೇಶಕ ಟಿ.ಎಸ್.ನಾಗಾಭರಣ ಸಭೆಯಲ್ಲಿ ಭಾಗವಹಿಸಿದ್ದರು.‘ಆಯೋಗ ರಚನೆಯಿಂದ ಹಕ್ಕುಗಳ ರಕ್ಷಣೆ ಸಾಧ್ಯವಿಲ್ಲ’

ಬೆಂಗಳೂರು:
ಕೇವಲ ಮಾನವ ಹಕ್ಕುಗಳ ಆಯೋಗದ ರಚನೆಯಿಂದ ಸಮಸ್ಯೆಗಳ ಪರಿಹಾರ ಸಾಧ್ಯವಿಲ್ಲ ಎಂದು ರಾಜ್ಯ ಮಾನವ ಹಕ್ಕುಗಳ ಮಾಜಿ ಅಧ್ಯಕ್ಷ  ನಿವೃತ್ತ ನ್ಯಾಯಮೂರ್ತಿ ಎಸ್.ಆರ್. ನಾಯಕ್ ಅಭಿಪ್ರಾಯಪಟ್ಟರು.

ವಿಶ್ವ ಮಾನವ ಹಕ್ಕುಗಳ ಸೇವಾ ಪ್ರತಿಷ್ಠಾನವು  ಪುರಭವನದಲ್ಲಿ ಮಂಗಳವಾರ ಏರ್ಪಡಿಸಿದ್ದ ವಿಶ್ವ ಮಾನವ ಹಕ್ಕುಗಳ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿ, ಕಳೆದ ಒಂದೂವರೆ ವರ್ಷ ದಿಂದ ಆಯೋಗಕ್ಕೆ ಅಧ್ಯಕ್ಷರನ್ನು ನೇಮಕ ಮಾಡದ ಸರ್ಕಾರವು ಆಯೋಗವನ್ನು ನಿಷ್ಕ್ರಿಯಗೊಳಿಸಿವೆ ಎಂದು  ಆರೋಪಿಸಿದರು. ಕಾನೂನು ಸಚಿವ ಟಿ.ಬಿ.ಜಯಚಂದ್ರ ಮಾತನಾಡಿ ‘ಕೇವಲ ಕಾನೂನುಗಳ ಮೂಲಕ ಮಾನವ ಹಕ್ಕುಗಳನ್ನು ಒದಗಿಸಲು ಸಾಧ್ಯವಿಲ್ಲ. ಅವುಗಳ ಬಗ್ಗೆ ಅರಿವು ಮೂಡಿಸುವ ಕಾರ್ಯ ನಡೆಯಬೇಕಿದೆ. ಹಕ್ಕುಗಳ ಪ್ರತಿಪಾದನೆಯಲ್ಲಿ ನಾವು ಸಾಗಬೇಕಾದ ಹಾದಿ ಸಾಕಷ್ಟಿದೆ’ ಎಂದು ಅಭಿಪ್ರಾಯಪಟ್ಟರು.ಪ್ರತಿಷ್ಠಾನದ ಅಧ್ಯಕ್ಷ ಸಿ.ಡಿ.ಕಿರಣ್, ಶೋಷಣೆ ಮಾಡುವವರ ವಿರುದ್ಧ ಹೋರಾಡುವುದರ ಬದಲು ಶೋಷಣೆಯ ಮೂಲವಾದ ವ್ಯವಸ್ಥೆಯ ವಿರುದ್ಧ ಹೋರಾಡಬೆಕು ಎಂದರು.ಗಾಯತ್ರಿ ದೇವಾಲಯ ಸಂಸ್ಥಾಪಕ ಚಿದಂಬರ ದೀಕ್ಷಿತ್ ಸ್ವಾಮೀಜಿ ಮತ್ತು ಇತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

 

ಪ್ರತಿಕ್ರಿಯಿಸಿ (+)