`ಮಾನವ ಹಕ್ಕು ಪ್ರತಿಪಾದಕರಿಗೆ ನಕ್ಸಲ್ ಪಟ್ಟ'

7

`ಮಾನವ ಹಕ್ಕು ಪ್ರತಿಪಾದಕರಿಗೆ ನಕ್ಸಲ್ ಪಟ್ಟ'

Published:
Updated:

 


ಮಂಗಳೂರು: `ಅಸಮಾನತೆಯ ವಿರುದ್ಧ- ಶೋಷಿತರ ಪರ ಧ್ವನಿಯಾಗುವ ಹೋರಾಟಗಾರ- ಸಂಘಟನೆಗಳನ್ನು ನಕ್ಸಲ್ ಹಣೆ ಪಟ್ಟಿ ನೀಡಿ ಸಮಾಜದಿಂದ ಬೇರ್ಪಡಿಸುವ ಮೂಲಕ ಮಾನವ ಹಕ್ಕುಗಳ ಧ್ವನಿಯನ್ನು ದಮನಿಸುವ ವ್ಯವಸ್ಥಿತ ಕಾರ್ಯ ರಾಜ್ಯದಲ್ಲಿ ನಡೆಯುತ್ತಿದೆ' ಎಂದು ಮಂಗಳೂರು ವಿ.ವಿ.ರಾಜ್ಯಶಾಸ್ತ್ರ ವಿಭಾಗ ಪ್ರಾಧ್ಯಾಪಕ ಡಾ.ಪಿ.ಎಲ್.ಧರ್ಮ ವಿಷಾದಿಸಿದರು.  ಧರ್ಮಸ್ಥಳ ಮಂಜುನಾಥೇಶ್ವರ ಉದ್ಯಮಾಡಳಿತ ಕಾಲೇಜು ಹಾಗೂ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗದ ಸಹಯೋಗದಲ್ಲಿ ಕಾಲೇಜಿನ ಸಭಾಂಗಣದಲ್ಲಿ ಬುಧವಾರ ಅಯೋಜಿಸಲಾಗಿದ್ದ `ಮಾನವ ಹಕ್ಕುಗಳ ಸಮರ್ಥನೆ- ಮಾನವ ಹಕ್ಕು ಉಲ್ಲಂಘನೆ ತಡೆಗೆ ಒಂದು ಹೆಜ್ಜೆ' ರಾಷ್ಟ್ರಮಟ್ಟದ ವಿಚಾರಸಂಕಿರಣವನ್ನು ಉದ್ಘಾಟಿಸಿ ಅವರು ಮಾತನಾಡಿದರು.ಧರ್ಮಗಳ ನಡುವಿನ ವೈರತ್ವದ, ಶ್ರೇಷ್ಠತೆಗಾಗಿನ ಜಾತಿಗಳ ನಡುವಿನ ತಿಕ್ಕಾಟದ ಹಾಗೂ ಶ್ರೀಮಂತ- ಬಡವರ ನಡುವಿನ ಅಸಮಾನತೆಯ ಅಲಿಖಿತ ವ್ಯವಸ್ಥೆಯನ್ನು ದುರದೃಷ್ಟವಶಾತ್ ಶತಮಾನಗಳಿಂದ ಭಾರತೀಯರು ಒಪ್ಪಿಕೊಂಡು ಪಾಲಿಸುತ್ತಲೇ ಬಂದಿದ್ದಾರೆ. ಆದರೆ ಈ ವ್ಯವಸ್ಥೆಗೆ ಬಲಿಯಾದವರ ಕೂಗಿಗೆ ಬೆಲೆಯಿಲ್ಲ. ಭಾರತೀಯ ಎಂದೆನಿಸಿಕೊಳ್ಳುವುದಕ್ಕಿಂತಲೂ ಸ್ವಧರ್ಮ-ಜಾತಿಯ ಬಗ್ಗೆ ಹೇಳಿಕೊಳ್ಳಲು ಹೆಮ್ಮೆಪಡುವ ಸಮಾಜ ಇಂದಿನದು.  ವಾಸ್ತವವಾಗಿ ಭಾರತದಲ್ಲಿ ಸಮಾನತೆ ಎನ್ನುವುದು ಎಂದಿಗೂ ನಿಲುಕದ ದೂರದ ಬೆಟ್ಟದಂತೆ ಎಂದರು.ಇಂದಿನ ದಿನಗಳಲ್ಲಿ ನಡೆಯುತ್ತಿರುವ ಮಾನವ ಹಕ್ಕುಗಳ ಕುರಿತಾದ ಹೋರಾಟಗಳು, ವೇದಿಕೆಗಳು, ಸಂಘಟನೆಗಳು, ಚರ್ಚೆಗಳು ಎಲ್ಲವೂ ಒಂದು ವ್ಯರ್ಥ ಪ್ರಯತ್ನ. ಬಡತನ ನಿರ್ಮೂಲನೆ ಹಾಗೂ ಜಾತಿ ವ್ಯವಸ್ಥೆಯ ಕಪಿಮುಷ್ಟಿಯಿಂದ ಭಾರತವೂ ಮುಕ್ತವಾಗದೆ ಮಾನವ ಹಕ್ಕುಗಳ ಅನುಷ್ಠಾನ ಸಾಧ್ಯವಿಲ್ಲ ಎಂದರು.ಬ್ರಿಟಿಷರ ಒಡೆದು ಆಳುವ ನೀತಿಯನ್ನು ಶೈಲಿ ಬದಲಾಯಿಸಿ ಮುಂದುವರಿಸಿರುವ ನಮ್ಮ ಇಂದಿನ ಆಳುವ ವರ್ಗಗಳು ಸಮಾನತೆಯ ಕಲ್ಪನೆಯನ್ನು  ಕಾರ್ಯರೂಪಕ್ಕೆ ತರಲು ಎಂದಿಗೂ ಪ್ರಯತ್ನಿಸುವುದಿಲ್ಲ. ಮನುಷ್ಯ ಮನಸ್ಸುಗಳ ನಡುವೆ ಕಟ್ಟಿರುವ ವೈರತ್ವದ ಅಡ್ಡಗೋಡೆಗಳ ಧೈರ್ಯದಲ್ಲಿ ಅವರು ನಮ್ಮನ್ನು ಆಳುತ್ತಿದ್ದಾರೆ ಎಂದರು. ಕಾಸರಗೋಡು ಮಾಲಿಕ್ ದೀನಾರ್ ಫಾರ್ಮಸಿ ಕಾಲೇಜಿನ ಪ್ರಾಧ್ಯಾಪಕ ಅಜಯ್ ಕುಮಾರ್ ಕೆ., ಅಧ್ಯಕ್ಷತೆ ವಹಿಸಿದ್ದರು.

 ಮಂಗಳೂರು ವಕೀಲರ ಸಂಘದ ಅಧ್ಯಕ್ಷ ಅಶೋಕ್ ಆರಿಗ, ಪ್ರಾಂಶುಪಾಲ ಡಾ.ಕೆ.ದೇವರಾಜ್, ಸಂಯೋಜಕಿ ಅರುಣಾ ಪಿ. ಕಾಮತ್ ಮೊದಲಾದವರು ಉಪಸ್ಥಿತರಿದ್ದರು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry