ಶುಕ್ರವಾರ, ಆಗಸ್ಟ್ 23, 2019
21 °C

ಮಾನಸಿಕ ಅಸ್ವಸ್ಥರ ಹಿಂದಿನ ಕರಾಳ ಕಥೆ...

Published:
Updated:

ಚಿತ್ರದುರ್ಗ: `ಯಾರೋ ನನ್ನ ಮನೆ ಕಿತ್ಕಾತವ್ರೆ... ನಾನು ಬರಾಕಿಲ್ಲ, ಬಿಟ್ಟು ಬಿಡ್ರಿ.. ಅಲ್ಲಿ ನೀರು ಬರ್ತೈತೆ ನೋಡ್ರಿ.. ನೋಡ್ರಿ...'

ಮುರುಘಾಮಠಕ್ಕೆ ಹೊಂದಿ ಕೊಂಡಿರುವ ಮಠದ ಕುರುಬರಹಟ್ಟಿಯ ಆ ಕೊಳಕು ಮನೆಯಿಂದ ಮಾನಸಿಕವಾಗಿ ಅಸ್ವಸ್ಥಗೊಂಡ ಮೂವರು ಮಕ್ಕಳು ಹಾಗೂ ತಾಯಿ ಗಂಗಮ್ಮಳನ್ನು ಅಧಿಕಾರಿಗಳು ರಕ್ಷಿಸಿ ಕರೆತರುವಾಗ, ಮಹಿಳೆ ಹೀಗೆ ಕೊಸರಾಡಿದರು.`ಆಕೆ ಯಾವುದೋ ಅಘಾತದಿಂದ ಹೀಗೆ ಮಾನಸಿಕವಾಗಿ ಅಸ್ವಸ್ಥಗೊಂಡಿದ್ದಾರೆ. ಆಕೆಯ ಈ ಸ್ಥಿತಿಗೆ ಮನೆಯ ವಾತಾವರಣವೂ ಕಾರಣ' ಎಂದು ಜಿಲ್ಲಾ ಶಸ್ತ್ರಚಿಕಿತ್ಸಕ ವಿಜಯಕುಮಾರ್ ಊಹಿಸಿದ್ದರು. ಮಠದ ಕುರುಬರಹಟ್ಟಿಯ ಗಂಗಮ್ಮ ವಾಸವಿದ್ದ ಮನೆಗೆ ಭೇಟಿ ನೀಡಿದಾಗ, ಆ ಮನೆಯ ವಾತಾವರಣ,  ನೆರೆಹೊರೆಯವರು ಹೇಳಿದ ಘಟನೆಗಳು ವೈದ್ಯರ ಮಾತುಗಳಿಗೆ ಸಾಕ್ಷ್ಯ ಒದಗಿಸಿದ್ದವು. ಸಾಕ್ಷ್ಯದ ಚುಂಗು ಹಿಡಿದು ಹೊರಟಾಗ, ಮನಕಲಕುವಂತಹ ಘಟನೆಗಳು ಅನಾವರಣಗೊಂಡವು.ಘಟನೆಯ ಹಿನ್ನಲೆ: ಗಂಗಮ್ಮ ಮತ್ತು ಶಿವಣ್ಣ ದಂಪತಿಗೆ ನಾಗರಾಜ, ಶೇಖರ, ಪುತ್ರಿ ಸುಮಂಗಲಾ ಮೂರು ಮಕ್ಕಳು. ಮಠದ ಕುರುಬರಹಟ್ಟಿಯಲ್ಲಿ ವಾಸಿಸುತ್ತಿದ್ದರು. ಹಟ್ಟಿಯ ಸಮೀಪವಿರುವ ಹತ್ತಿ ಗಿರಿಣಿಯಲ್ಲಿ ಕಾರ್ಮಿಕರಾಗಿದದ ಶಿವಣ್ಣ, 20 ವರ್ಷಗಳ ಹಿಂದೆ ಅಕಾಲಿಕ ಮರಣಕ್ಕೆ ತುತ್ತಾದರು. ಈ ಘಟನೆಯಿಂದ ಅಘಾತಕ್ಕೊಳಗಾದ ಗಂಗಮ್ಮ, ಕ್ರಮೇಣ ಮಾನಸಿಕವಾಗಿ ಕುಗ್ಗಿ ಹೋದರು.ಅಪ್ಪ ತೀರಿದ ಮೇಲೆ, ಮನೆಯ ಜವಾಬ್ದಾರಿ ಹಿರಿಯ ಮಗ ನಾಗರಾಜನ ಹೆಗಲಿಗೆ ಬಿತ್ತು. ಕೂಲಿ ಮಾಡಿ, ತಾಯಿ, ತಮ್ಮ ತಂಗಿಯನ್ನು ಸಾಕುತ್ತಿದ್ದ. ಪತಿಯ ಹೆಸರಿನಲ್ಲಿ ಗಿರಿಣಿಯಿಂದ ಒಂದಷ್ಟು ಹಣಕಾಸು (ಪಿಂಚಣಿ ತರಹ) ಸಿಗುತ್ತಿತ್ತು. ಜೊತೆಗೆ ಮನೆಯ ಸಮೀಪದಲ್ಲಿದ್ದ ಮಲೆಯಾಳಿಯ ಕುಟುಂಬವೊಂದು ಗಂಗಮ್ಮನ ಚಿಕಿತ್ಸೆಗೆ ನೆರವಾಗುತ್ತಿತ್ತು.ಒಡೆದ ಕೆರೆ ಬದುಕು ಕಸಿಯಿತು..: ಎಲ್ಲವೂ ಸರಳವಾಗಿ ನಡೆಯುತ್ತಿರುವಾಗ ಮೂರ‌್ನಾಲ್ಕು ವರ್ಷಗಳ ಹಿಂದೆ ಮಠದ ಸಮೀಪವಿರುವ ಕೆರೆ ಒಡೆದು ಕುರುಬರಹಟ್ಟಿಯಲ್ಲಿದ್ದ ಮನೆಗಳೆಲ್ಲ ನೀರಿನಲ್ಲಿ ಕೊಚ್ಚಿ ಹೋದವು. ಆಗ ಗಂಗಮ್ಮಳ ಮನೆಕೂಡ ನೀರು ಪಾಲಾಯಿತು.ನೀರಿನಲ್ಲಿ ಸಿಲುಕಿದ್ದ ಗಂಗಮ್ಮಳನ್ನು ಅಗ್ನಿಶಾಮಕ ಸಿಬ್ಬಂದಿ ರಕ್ಷಿಸಿದ್ದರು. ನಂತರ ಇಡೀ ಕುಟುಂಬವನ್ನು ಆಶ್ರಮವೊಂದಕ್ಕೆ ಸ್ಥಳಾಂತರಿಸಲಾಗಿತ್ತು. ನಂತರ ನಿರ್ಮಿತಿ ಕೇಂದ್ರದವರು ್ಙ 60 ಸಾವಿರ ಖರ್ಚಿನಲ್ಲಿ ಗಂಗಮ್ಮ ಅವರ ನಿವೇಶನದಲ್ಲೇ ಪುಟ್ಟದೊಂದು ಮನೆ ಕಟ್ಟಿಕೊಟ್ಟರು. ಪುನಃ ಗಂಗಮ್ಮ ಕುಟುಂಬ ಆಶ್ರಮದಿಂದ ಮನೆಗೆ ವಾಪಾಸಾಯಿತು.ಆ ವೇಳೆಗೆ ಮಲೆಯಾಳಿ ಕುಟುಂಬ ಭದ್ರಾವತಿಗೆ ವರ್ಗವಾಗಿತ್ತು. ಅವರಿಗೆ ಆಶ್ರಯವಿಲ್ಲದಂತಾಯಿತು. ಹೀಗಾಗಿ ಸರಿಯಾಗಿ ಊಟವಿಲ್ಲ. ಔಷಧ, ಮಾತ್ರೆ ಖರೀದಿಗೆ ಹಣವಿರಲಿಲ್ಲ. ಮನೆಯ ಸುತ್ತ ಕೊಳಕು ವಾತಾವರಣ. ಹೀಗಾಗಿ ಗಂಗಮ್ಮನ ಜೊತೆಗೆ ಇಬ್ಬರು ಮಕ್ಕಳು ಮಾನಸಿಕವಾಗಿ ಅಸ್ವಸ್ಥಗೊಂಡರು ಎಂದು ವಿವರಿಸುತ್ತಾರೆ ಮಠದ ಕುರುಬರಹಟ್ಟಿಯ ಚೌಡಮ್ಮ.ಆರೋಗ್ಯವಾಗಿದ್ದ ನಾಗರಾಜ, ಹೋಟೆಲ್‌ನಲ್ಲಿ ಕೆಲಸ ಮಾಡುತ್ತಾ ತಾಯಿ ಮತ್ತು ತಮ್ಮ ತಂಗಿಯನ್ನು ಸಾಕುತ್ತಿದ್ದ. ಆರೇಳು ತಿಂಗಳಿನಿಂದ ಆತನೂ ಮಾನಸಿಕವಾಗಿ ಕುಗ್ಗಿಹೋಗಿದ್ದಾನೆ. ಹಣಕಾಸಿನ ಕೊರತೆಯಿಂದ ಆತ ಹೀಗಾಗಿದ್ದಾನೆ ಎನ್ನುತ್ತಾರೆ ಮತ್ತೊಬ್ಬ ನಿವಾಸಿ ಕೈರುನ್ನೀಸ.ದಾಖಲೆಗಳಿಲ್ಲ, ಸೌಲಭ್ಯವೂ ಅಲಭ್ಯ: ಕೆರೆ ಒಡೆದು ಮನೆಗೆ ನೀರು ನುಗ್ಗಿದಾಗ ಪತಿಯ ಪಿಂಚಣಿ ಸೌಲಭ್ಯಕ್ಕೆ ನೆರವಾಗುತ್ತಿದ್ದ ದಾಖಲೆಗಳು, ಮನೆಯ ಪತ್ರ, ಸರ್ಕಾರದ ಸೌಲಭ್ಯ ನೀಡುವ ಪತ್ರಗಳು, ರೇಷನ್ ಕಾರ್ಡ್ ಎಲ್ಲವೂ ನಾಶವಾದವು. ಹಾಗಾಗಿ ಯಾವುದೇ ಮೂಲದಿಂದಲೂ ಹಣಕಾಸು ದೊರೆಯುತ್ತಿರಲಿಲ್ಲ. `ಕನಿಷ್ಠ ಪತಿಯ ಪಿಂಚಿಣಿ ಬರುತ್ತಿದ್ದರೆ ಇವರ ಕುಟುಂಬಕ್ಕೆ ಈ ಪರಿಸ್ಥಿತಿ ಬರುತ್ತಿರಲಿಲ್ಲ' ಎಂದು ವಿಷಾದಿಸುತ್ತಾರೆ ನೆರೆಯ ನಿವಾಸಿ ಗೌರಮ್ಮ.ಇಂಥ ಸಮಸ್ಯೆ ಎದುರಿಸುತ್ತಿರುವ ಕುಟುಂಬವೊಂದು ತಮ್ಮ ಬಡವಾಣೆಯಲ್ಲಿದ್ದರೂ, ಯಾವ ಜನಪ್ರತಿನಿಧಿಗಳೂ ಇವರ ನೆರವಿಗೆ ಬಂದಿಲ್ಲ. ಮಠ-ಮಾನ್ಯಗಳು ಗಂಗಮ್ಮನ ಕುಟುಂಬಕ್ಕೆ ನಿಲ್ಲಲಿಲ್ಲ. ನೆರೆಹೊರೆಯವರು ಊಟ ಬಟ್ಟೆ ಕೊಟ್ಟು ನೆರವಿಗೆ ಯತ್ನಿಸಿದರೂ, ಮಾನಸಿಕ ಸ್ಥಿಮಿತ ಕಳೆದುಕೊಂಡಿರುವ ಕುಟುಂಬದವರು ವ್ಯತಿರಿಕ್ತವಾಗಿ ವರ್ತಿಸುತ್ತಾರೆ.  ಆ ಕುಟುಂಬದ ಸ್ಥಿತಿಯನ್ನು ಕಂಡು ಮಮ್ಮಲ ಮರುಗುವುದನ್ನು ಬಿಟ್ಟು ಬೇರೇನೂ ಮಾಡಲು ಸಾಧ್ಯವಿಲ್ಲ ಎನ್ನುತ್ತಾರೆ ಅಕ್ಕಪಕ್ಕದವರು.ಸೌಲಭ್ಯ ಕೊಡಿಸಿ, ಉಳಿಸಿ: ವಾಸ್ತವದಲ್ಲಿ ಗಂಗಮ್ಮನ ಸಹೋದರರು ಸಮೀಪದಲ್ಲೇ ಇದ್ದರೂ ಅವರ ನೆರವಿಗೆ ಧಾವಿಸಿಲ್ಲ. ಸರ್ಕಾರವೂ ಇವರತ್ತ ತಿರುಗಿ ನೋಡಿಲ್ಲ. ಆದರೆ ಯಾವುದೇ ಸಂಬಂಧವಿಲ್ಲದ ನೆರೆ ಹೊರೆಯವರು ಇವರ ಕುಟುಂಬಕ್ಕೆ ಒಳ್ಳೆಯದಾಗಲಿ ಎಂದು ಬಯಸುತ್ತಾರೆ. `ಈಗಲಾದರೂ ಅವರಿಗೆ ಚಿಕಿತ್ಸೆ ಕೊಡಿಸಲು ಯಾರೋ ಮುಂದಾಗಿದ್ದಾರೆ. ಸರ್ಕಾರ ಈ ಕುಟುಂಬಕ್ಕೆ ದೊರೆಯಬೇಕಾದ ಸೌಲಭ್ಯಗಳನ್ನು ಕೊಡಿಸಿದರೆ, ಅವರು ಭವಿಷ್ಯವನ್ನು ರೂಪಿಸಿಕೊಳ್ಳುತ್ತಾರೆ' ಎಂದು ಮಠದ ಕುರುಬರಹಟ್ಟಿಯ ನಿವಾಸಿಗಳು ಹಾರೈಸುತ್ತಾರೆ.ಅಧಿಕಾರಿಗಳ ನೆರವಿನಿಂದ ಶನಿವಾರವಷ್ಟೇ ಜಿಲ್ಲಾಸ್ಪತ್ರೆ ಸೇರಿರುವ ಒಂದೇ ಕುಟುಂಬದ ನಾಲ್ವರು ಮಾನಸಿಕ ಅಸ್ವಸ್ಥರು, ಹೆಚ್ಚಿನ ಚಿಕಿತ್ಸೆಗಾಗಿ ಸೋಮವಾರ ಬೆಂಗಳೂರಿನ ನಿಮ್ಹಾನ್ಸ್‌ಗೆ ದಾಖಲಾ ಗಲಿದ್ದಾರೆ. ಚಿತ್ರದುರ್ಗದ ಜಿಲ್ಲಾಧಿಕಾರಿ ಇದಕ್ಕಾಗಿ ಶಿಫಾರಸು ಪತ್ರವನ್ನು ನೀಡಿದ್ದಾರೆ.

Post Comments (+)