ಭಾನುವಾರ, ಮೇ 22, 2022
29 °C

ಮಾನಸಿಕ ಆರೋಗ್ಯವೇ ಭಾಗ್ಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

`ನಿಮ್ಮ ಮಾನಸಿಕ ಆರೋಗ್ಯಕ್ಕೆ ಹೆಚ್ಚು ಒತ್ತು ನೀಡಿ~ ಇದು ವಿಶ್ವ ಆರೋಗ್ಯ ಸಂಸ್ಥೆಯ ಈ ವರ್ಷದ  ಘೋಷಣೆ. ವಿಶ್ವ ಮಾನಸಿಕ ಆರೋಗ್ಯ ದಿನಾಚರಣೆ ಅಂಗವಾಗಿ ಈ ಘೋಷಣೆ ಹೊರಬಿದ್ದಿದೆ. ಮಾನಸಿಕ ಆರೋಗ್ಯಕ್ಕೆ ಸಂಬಂಧಿಸಿದ ಚಿಂತನೆಗಳು, ಗೋಷ್ಠಿಗಳು, ಮ್ಯಾರಥಾನ್ ನಡಿಗೆಗಳು, ಭಿತ್ತಿಪತ್ರ ಪ್ರದರ್ಶನಗಳು ವಿಶ್ವದಾದ್ಯಂತ ಇದೇ 10 ರಂದು ನಡೆಯಲಿವೆ. ಪಾಶ್ಚಾತ್ಯ ದೇಶಗಳಲ್ಲಿ ಈ ಕುರಿತು ಹೆಚ್ಚಿನ ಅರಿವು, ಜಾಗೃತಿ ಇದ್ದರೂ ನಮ್ಮಂತಹ ಬಡ ರಾಷ್ಟ್ರಗಳಲ್ಲಿ ಇಂತಹ ಚಟುವಟಿಕೆಗಳು ಇನ್ನೂ ಅವಶ್ಯವಾಗಿವೆ.ವಿಶ್ವ ಮಾನಸಿಕ ಆರೋಗ್ಯ ಸಂಸ್ಥೆಯ ಸೆಕ್ರೆಟರಿ ಜನರಲ್ ಆಗಿ ರಿಬಾರ್ಡ್ ಸಿ. ಹಂಟರ್ ಅವರು 1983ರಿಂದ 2002ರವರೆಗೆ ಕಾರ್ಯ ನಿರ್ವಹಿಸಿದ್ದರು. ಅವರ ಗುರಿಯಲ್ಲಿ `ಮಾನಸಿಕ ಆರೋಗ್ಯದ ಬಗ್ಗೆ ಸಾರ್ವಜನಿಕರಲ್ಲಿ ಅರಿವು ಮೂಡಿಸುವುದು. ಮನೋರೋಗಗಳನ್ನು ಅರ್ಥ ಮಾಡಿಕೊಳ್ಳುವುದು~ ಸೇರಿತ್ತು. ಅವರ ದೂರದೃಷ್ಟಿಯಿಂದಲೇ ಇಂದು 100ಕ್ಕೂ ಹೆಚ್ಚು ದೇಶಗಳಲ್ಲಿ ಅಕ್ಟೋಬರ್ 10ರಂದು ವಿಶ್ವ ಮಾನಸಿಕ ಆರೋಗ್ಯ ದಿನಾಚರಣೆ ಆಚರಿಸಲಾಗುತ್ತಿದೆ. ಮಾನಸಿಕ ಆರೋಗ್ಯಕೋಸ್ಕರ ನಮ್ಮ ಬುದ್ಧಿ, ಜಾಣ್ಮೆಯನ್ನು ತೊಡಗಿಸಿಕೊಳ್ಳಬೇಕಾದ ಅಗತ್ಯ ತೀವ್ರವಾಗಿದೆ. ಇಂದು ದೇಶದಲ್ಲಿ ಸರಾಸರಿ 10 ಲಕ್ಷ ಜನರಿಗೆ ಒಬ್ಬ ವೈದ್ಯ ಮಾತ್ರ ಲಭ್ಯವಿದ್ದಾನೆ. ಹೀಗಿರುವಾಗ ನಮ್ಮ ಮಾನಸಿಕ ಆರೋಗ್ಯವನ್ನು ಹೇಗೆ ತಾನೇ ರಕ್ಷಿಸಲು ಸಾಧ್ಯ?

ಒಬ್ಬ ವ್ಯಕ್ತಿ ಮಾನಸಿಕವಾಗಿ ಆರೋಗ್ಯದಿಂದ ಇದ್ದಾನೆಂದರೆ ಅವನು ತನ್ನ ಸಾಮರ್ಥ್ಯವನ್ನು ಅರಿತುಕೊಳ್ಳಬಲ್ಲ.ಒತ್ತಡಗಳನ್ನು ನಿವಾರಿಸಿಕೊಳ್ಳಬಲ್ಲ. ರಚನಾತ್ಮಕವಾಗಿ ಪರಿಣಾಮ ಬೀರುವಂತೆ ಕೆಲಸ ಮಾಡಬಲ್ಲ ಹಾಗೂ ತನ್ನ ಸಮಾಜಕ್ಕೆ ತನ್ನದೇ ಆದ ಕೊಡುಗೆಗಳನ್ನು ನೀಡಬಲ್ಲ. ಈ ಅಂಶಗಳಲ್ಲಿ ಕಿಂಚಿತ್ತಾದರೂ ಏರುಪೇರಾದಲ್ಲಿ ಅವನು ಮಾನಸಿಕವಾಗಿ ಆರೋಗ್ಯವಂತನಲ್ಲ.ಪ್ರತಿಷ್ಠೆ :

ಮನೋ ಕಾಯಿಲೆಗಳಿಗೆ ಒಬ್ಬ ವ್ಯಕ್ತಿಯ ಇಗೋ ಅಥವಾ ಪ್ರತಿಷ್ಠೆ ಮಾರಕವಾಗಬಹುದು. ನಮ್ಮ ಸ್ವಾರ್ಥ, ಅಹಂಗಳನ್ನು ಬದಿಗಿಟ್ಟು ನಮ್ಮ ಹಾಗೂ ಸಮಾಜದ ಏಳ್ಗೆಗಾಗಿ ದುಡಿಯುವ ವ್ಯಕ್ತಿ ಮಾನಸಿಕವಾಗಿ ಸ್ಥಿರತೆಯನ್ನು ತಲುಪಬಲ್ಲ.ಇತ್ತೀಚಿನ ದಿನಗಳಲ್ಲಿ ಮನೋರೋಗಗಳು ಗಣನೀಯ ಪ್ರಮಾಣದಲ್ಲಿ ಹೆಚ್ಚುತ್ತಿರುವುದು ಅಪಾಯಕಾರಿ. ಮನೋಬೇನೆ ಅಂದರೆ ಬರೀ ಮತಿಭ್ರಾಂತಿ ಅಲ್ಲವೇ ಅಲ್ಲ. ತೀರ ಸಾಮಾನ್ಯ ಕಾಯಿಲೆಗಳಾದ ಆತಂಕ, ಖಿನ್ನತೆ, ಮನೋದೈಹಿಕ ಸಮಸ್ಯೆಗಳು, (ಉದಾ: ಮಧುಮೇಹ, ರಕ್ತದೊತ್ತಡ, ಹೃದಯಾಘಾತ, ಚರ್ಮರೋಗಗಳು) ಜನರನ್ನು ಬಾಧಿಸುತ್ತವೆ. ಪೀಡಿಸುತ್ತವೆ. ಹಲವು ಬಾರಿ ಆತ್ಮಹತ್ಯೆಯಂತಹ ಭೀಕರ ಕೃತ್ಯಕ್ಕೂ ಎಡೆಮಾಡಿಕೊಡುತ್ತವೆ. ಸಾಮಾನ್ಯ ಮನೋರೋಗಗಳಲ್ಲಿ ಗಾಬರಿ, ಭಯ, ಎದೆಬಡಿತದ ಏರಿಳಿತ, ಬಾಯಿ ಒಣಗುವುದು, ನಿದ್ರಾಹೀನತೆ, ಜಿಗುಪ್ಸೆಗಳು ತೀರ ಸಾಮಾನ್ಯ. ಇಂಥವರು ತಮ್ಮ ಮೌಢ್ಯದಿಂದ ನೂರಾರು ವೈದ್ಯರ ಬಳಿ ತೆರಳಿ, ವೈದ್ಯರು ಬೇಡವೆಂದರೂ ಅನೇಕ ರಕ್ತಪರೀಕ್ಷೆ, ಇಸಿಜಿ ಪರೀಕ್ಷೆ, ಸ್ಕ್ಯಾನಿಂಗ್ ಮೊದಲಾದ ಪರೀಕ್ಷೆಗಳನ್ನು ಮಾಡಿಸಿಕೊಳ್ಳುತ್ತಾರೆ. ಒಂಥರ `ಡಾಕ್ಟರ್ ಶಾಪಿಂಗ್~ ನಡೆಸುವ ಇವರಿಗೆ ಸಮಾಧಾನ ಸಿಗದು. ಮನಶಾಸ್ತ್ರದಲ್ಲಿ ಇದಕ್ಕೆ `ಮನ್‌ಚಾಸನ್ ಸಿಂಡ್ರೋಮ್~ ಎಂದು ಕರೆಯುತ್ತಾರೆ. ಎಷ್ಟು ತಪಾಸಣೆ ಮಾಡಿದರೂ ಯಾವ ಶಾರೀರಿಕ ನ್ಯೂನತೆಯೂ ಸಿಗದು. ಇಂಥವರಿಗೆ ದೊರೆಯಬೇಕಾದದ್ದು ಸೂಕ್ತ ಮನೋಚಿಕಿತ್ಸೆ. ಮನೋರೋಗ ತಜ್ಞರು ಇವರಿಗೆ ಔಷಧಿ ಚಿಕಿತ್ಸೆ, ಕೌನ್ಸೆಲಿಂಗ್, ಮನೋ ವಿಶ್ಲೇಷಣೆಗಳ ಮುಖಾಂತರ ಸಂಪೂರ್ಣ ಗುಣಪಡಿಸುವರು.ಇನ್ನು ಹೆಚ್ಚಿನ ಪ್ರಮಾಣದಲ್ಲಿ ಕಂಡುಬರುವ ಸಿಗರೇಟು ಸೇದುವುದು, ತಂಬಾಕು ಜಗಿಯುವುದು, ಮದ್ಯಪಾನ ಮಾಡುವುದು ಎಲ್ಲವೂ ಮನೋದೈಹಿಕ ರೋಗಗಳೇ.ಮದ್ಯಪಾನ ಒಂದು ಮನೋರೋಗ. ಈ ಕುರಿತು ಜಾಗೃತಿ ಮೂಡಿಸುವುದು ಅವಶ್ಯವಾಗಿದೆ. ಸರ್ಕಾರ ಎಲ್ಲ ಬಾರ್‌ಗಳಲ್ಲಿ `ಮದ್ಯ ವ್ಯಸನವು ಒಂದು ಕಾಯಿಲೆ. ಅದನ್ನು ಚಿಕಿತ್ಸೆಯಿಂದ ಗುಣಪಡಿಸಿಕೊಳ್ಳಿ~ ಎಂದು ಭಿತ್ತಿಪತ್ರ ಅಂಟಿಸುವುದನ್ನು ಕಡ್ಡಾಯ ಮಾಡಬೇಕು. ಮತಿ ಭ್ರಾಂತಿ ಎಂಬ ರೋಗವುಳ್ಳವರು ಇತರರ ಮೇಲೆ ಅತಿಸಂಶಯ ಪಡುವರು. `ಅವನು ಕೆಟ್ಟವ, ನನ್ನನ್ನು ಕೊಲ್ಲುವನು, ನನ್ನನ್ನು ದೋಚುವನು. ನನ್ನ ಹೆಂಡತಿಯ ಜೊತೆ ಅನೈತಿಕ ಸಂಪರ್ಕ ಇಟ್ಟುಕೊಳ್ಳುವನು~ ಇವೇ ಮೊದಲಾಗಿ ಯೋಚಿಸಿ ತನ್ನ ಜೀವನವನ್ನು ಮಾತ್ರವಲ್ಲದೆ ಸಂಬಂಧಿಕರ ಜೀವನವನ್ನೂ ಹಾಳುಮಾಡುವರು.ಎಲ್ಲರೂ ಮಾನಸಿಕ ಆರೋಗ್ಯಕ್ಕೂ ಹೆಚ್ಚು ಒತ್ತು ನೀಡಬೇಕಿದೆ. ಬರೀ ರೋಗಿಗಳಷ್ಟೇ ಅಲ್ಲ, ಸಾಮಾನ್ಯರೂ ಕೂಡ ತಮ್ಮ ಆರೋಗ್ಯಕ್ಕಾಗಿ ಮನೋವೈದ್ಯರನ್ನು ಕಾಣಬೇಕು. ಚರ್ಚಿಸಬೇಕು. ಆಪ್ತ ಸಮಾಲೋಚನೆ ನಡೆಸಬೇಕು. ಮುಂದೆ ಏನೂ ಬರದಂತೆ ಎಚ್ಚರವಹಿಸಬೇಕು.ಮನೋರೋಗಗಳ ಬಗ್ಗೆ ಮೌಢ್ಯ ಸಾಕು. ಈ ರೋಗಗಳು ಮಾಟ, ಮಂತ್ರ, ಭಾನಾಮತಿಗಳಿಂದ ಖಂಡಿತವಾಗಿಯೂ ಬರುವುದಿಲ್ಲ. ಈ ರೋಗಗಳಿಗೆ ವೈಜ್ಞಾನಿಕ ತಳಹದಿ ಇದೆ. ವೈಜ್ಞಾನಿಕ ಚಿಕಿತ್ಸೆ ಲಭ್ಯವಿದೆ. ಈ ಕುರಿತು ನಿರ್ಲಕ್ಷ್ಯವನ್ನು ಇಂದೇ ನಿಲ್ಲಿಸೋಣ. `ಶೀಘ್ರ ಚಿಕಿತ್ಸೆ, ಶೀಘ್ರ ಗುಣಮುಖ~ ಎಂಬ ನಾಣ್ಣುಡಿಯನ್ನು ಜಾಗೃತಗೊಳಿಸೋಣ. ಮನಃಶಕ್ತಿಯಿಂದ, ಮಾನಸಿಕ ಆರೋಗ್ಯದಿಂದ ಹೊಸ ಸಮಾಜ ಕಟ್ಟೋಣ.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.