ಶುಕ್ರವಾರ, ಡಿಸೆಂಬರ್ 13, 2019
17 °C

ಮಾನಸಿಕ ಆರೋಗ್ಯ: ವೈದ್ಯರು, ಸಿಬ್ಬಂದಿ ಕೊರತೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮಾನಸಿಕ ಆರೋಗ್ಯ: ವೈದ್ಯರು, ಸಿಬ್ಬಂದಿ ಕೊರತೆ

ಬೆಂಗಳೂರು: `ದೇಶದಲ್ಲಿ ಮನಃಶಾಸ್ತ್ರಜ್ಞರು, ಮನೋರೋಗ ತಜ್ಞರು, ನರರೋಗ ತಜ್ಞರು, ಮನಃಶಾಸ್ತ್ರ ವಿಭಾಗದ ಅರೆ ವೈದ್ಯಕೀಯ ಸಿಬ್ಬಂದಿಯ ಕೊರತೆ ತೀವ್ರವಾಗಿದೆ. ಇದನ್ನು ನಿವಾರಿಸಲು ಕ್ರಮ ಕೈಗೊಳ್ಳಬೇಕಿದೆ~ ಎಂದು ಉಪ ರಾಷ್ಟ್ರಪತಿ ಎಂ.ಹಮೀದ್ ಅನ್ಸಾರಿ ಹೇಳಿದರು.ನಗರದ ಹೊಸೂರು ರಸ್ತೆಯಲ್ಲಿರುವ ನಿಮ್ಹಾನ್ಸ್ ಸಮ್ಮೇಳನ ಸಭಾಂಗಣದಲ್ಲಿ ಶುಕ್ರವಾರ ನಡೆದ 16ನೇ ಘಟಿಕೋತ್ಸವ ಸಮಾರಂಭದಲ್ಲಿ ಅವರು ಘಟಿಕೋತ್ಸವ ಭಾಷಣ ಮಾಡಿದರು.`ಇತ್ತೀಚಿನ ವರ್ಷಗಳಲ್ಲಿ ಮಾನಸಿಕ ಆರೋಗ್ಯ ಸಮಸ್ಯೆಯಿಂದ ಬಳಲುವವರ ಸಂಖ್ಯೆ ಹೆಚ್ಚುತ್ತಿದೆ. ಆದರೆ ಈ ಸಮಸ್ಯೆಯಿಂದ ಬಳಲುವವರಿಗೆ ಸೂಕ್ತ ಚಿಕಿತ್ಸೆ ದೊರೆಯದಂತಾಗಿದೆ. ಜಾಗತಿಕ ಮಟ್ಟದಲ್ಲಿ ದೊರೆಯುವ ವೈದ್ಯಕೀಯ ಸೇವೆಗೆ ಹೋಲಿಸಿದರೆ ದೇಶದಲ್ಲಿ ಮಾನಸಿಕ ಆರೋಗ್ಯ ಸೇವೆಗೆ ಲಭ್ಯವಿರುವ ವೈದ್ಯರು, ಸಿಬ್ಬಂದಿಯ ಸಂಖ್ಯೆ ಕಡಿಮೆ ಇದೆ~ ಎಂದರು.`ಜಾಗತಿಕ ಮಟ್ಟದಲ್ಲಿ ಒಂದು ಕೋಟಿ ಮಂದಿಗೆ ಸರಾಸರಿ 120 ಮಂದಿ ಮನೋರೋಗ ತಜ್ಞರಿದ್ದರೆ, ಭಾರತದಲ್ಲಿ 20 ಮಂದಿ ತಜ್ಞರಿದ್ದಾರೆ. ಹಾಗೆಯೇ ಒಂದು ಕೋಟಿ ಮಂದಿಗೆ ಅಂತರರಾಷ್ಟ್ರೀಯ ಮಟ್ಟದಲ್ಲಿ 20 ಮಂದಿ ನರರೋಗ ತಜ್ಞರಿದ್ದರೆ, ನಮ್ಮಲ್ಲಿ ಆರು ಮಂದಿ ತಜ್ಞರಷ್ಟೇ ಸಿಗುತ್ತಾರೆ. ಜಾಗತಿಕ ಮಟ್ಟದಲ್ಲಿ ಒಂದು ಕೋಟಿ ಜನರಿಗೆ 60 ಮಂದಿ ಮನಃಶಾಸ್ತ್ರಜ್ಞರಿದ್ದರೆ, ದೇಶದಲ್ಲಿ ಕೇವಲ ಮೂರು ಮಂದಿಯಷ್ಟೇ ಸೇವೆ ಸಲ್ಲಿಸುತ್ತಿದ್ದಾರೆ.ಅದೇ ರೀತಿ ಅರೆ ವೈದ್ಯಕೀಯ ಹಾಗೂ ಸಾಮಾಜಿಕ ಕಾರ್ಯಕರ್ತರ ಅನುಪಾತ ಕೂಡ ಬಹಳ ಕಡಿಮೆ ಇದೆ~ ಎಂದು ಕಳವಳ ವ್ಯಕ್ತಪಡಿಸಿದರು.ಜಾಗೃತಿ ಅಗತ್ಯ: `ಎಚ್‌ಐವಿ ಸೋಂಕು ಹಾಗೂ ಏಡ್ಸ್ ಕುರಿತು ಜನರಲ್ಲಿ ಜಾಗೃತಿ ಮೂಡಿಸಿರುವ ರೀತಿಯಲ್ಲೇ ಮಾನಸಿಕ ಆರೋಗ್ಯ ಸಮಸ್ಯೆ ಕುರಿತು ಅರಿವು ಮೂಡಿಸಬೇಕಿದೆ. ಮಹಿಳೆಯರು, ಮಕ್ಕಳು, ಮದ್ಯ- ಮಾದಕ ದ್ರವ್ಯ ವ್ಯಸನಿಗಳಲ್ಲೂ ಜಾಗೃತಿ ಮೂಡಿಸಬೇಕು. ಪದವಿ ಮುಗಿಸಿದವರು ಈ ಜನರಿಗೆ ಆರೋಗ್ಯ ಸೇವೆ ಒದಗಿಸಲು ಮುಂದಾಗಬೇಕು~ ಎಂದರು.ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಖಾತೆ ಸಚಿವ ಗುಲಾಂ ನಬಿ ಆಜಾದ್, `ದೇಶದಲ್ಲಿ ಸಾಂಕ್ರಾಮಿಕ ರೋಗಗಳ ಜತೆಗೆ ಇತರೆ ಆರೋಗ್ಯ ಸಮಸ್ಯೆಗಳು ತೀವ್ರವಾಗಿ ಕಾಡಲಾರಂಭಿಸಿವೆ. ಪ್ರತಿ ನಾಲ್ಕು ಸಾವುಗಳಲ್ಲಿ ಮೂರು ಮಂದಿ ಸಾಂಕ್ರಾಮಿಕವಲ್ಲದ ಕಾಯಿಲೆಅಥವಾ ಅಪಘಾತಗಳಿಂದ ಸಾವನ್ನಪ್ಪುತ್ತಿದ್ದಾರೆ. 2020ರ ವೇಳೆಗೆ ಭಾರತ ವಿಶ್ವದ ಸಾಂಕ್ರಾಮಿಕವಲ್ಲದ ರೋಗಗಳ ರಾಜಧಾನಿಯಾಗುವ ಅಪಾಯವಿದೆ~ ಎಂದು ಆತಂಕ ವ್ಯಕ್ತಪಡಿಸಿದರು.`ಆ ಹಿನ್ನೆಲೆಯಲ್ಲಿ `ಕ್ಯಾನ್ಸರ್, ಮಧುಮೇಹ, ಹೃದಯ ಸಂಬಂಧಿ ಸಮಸ್ಯೆ ಮತ್ತು ಪಾರ್ಶ್ವವಾಯು ತಡೆ ಹಾಗೂ ನಿಯಂತ್ರಣಕ್ಕಾಗಿ ರಾಷ್ಟ್ರೀಯ ಕಾರ್ಯಕ್ರಮ~ವನ್ನು (ಎನ್‌ಪಿಸಿಡಿಸಿಎಸ್) ಜಗತ್ತಿನಲ್ಲೇ ಮೊದಲ ಬಾರಿಗೆ ಜಾರಿಗೊಳಿಸಲಾಗಿದೆ. ಅದರಂತೆ 21 ರಾಜ್ಯಗಳಲ್ಲಿನ ನೂರು ಹಿಂದುಳಿದ ಜಿಲ್ಲೆಗಳಲ್ಲಿ ಈ ಕಾರ್ಯಕ್ರಮ ಜಾರಿಯಾಗಿದೆ~ ಎಂದು ಹೇಳಿದರು.`ಹೊಸದಾಗಿ 46 ವೈದ್ಯಕೀಯ ಕಾಲೇಜುಗಳನ್ನು ಸ್ಥಾಪಿಸಲಾಗಿದೆ. 8,577 ವೈದ್ಯಕೀಯ ಸೀಟು ಹಾಗೂ 8,181 ಸ್ನಾತಕೋತ್ತರ ಪದವಿ ಸೀಟುಗಳನ್ನು ಹೆಚ್ಚಿಸಲಾಗಿದ್ದು, ಆರೋಗ್ಯ ಸೇವೆಗೆ ಅಗತ್ಯವಿರುವ ವೃತ್ತಿಪರರನ್ನು ರೂಪಿಸಲು ಕ್ರಮ ಕೈಗೊಳ್ಳಲಾಗಿದೆ. ಪದವಿ, ಡಿಪ್ಲೊಮಾ ಮುಗಿಸಿದವರು ಬಡ ಹಾಗೂ ಗ್ರಾಮೀಣ ಜನರ ಆರೋಗ್ಯ ಸೇವೆಗೆ ಶ್ರಮಿಸಬೇಕು~ ಎಂದರು.ರಾಜ್ಯಪಾಲ ಎಚ್.ಆರ್. ಭಾರದ್ವಾಜ್, ಸಚಿವರಾದ ಎಸ್.ಎ. ರಾಮದಾಸ್, ಎಸ್. ಸುರೇಶ್‌ಕುಮಾರ್, ನಿಮ್ಹಾನ್ಸ್‌ನ ನಿರ್ದೇಶಕ ಹಾಗೂ ಕುಲಪತಿ ಡಾ. ಪಿ. ಸತೀಶ್ಚಂದ್ರ ಇದ್ದರು.

ಪ್ರತಿಕ್ರಿಯಿಸಿ (+)