ಶುಕ್ರವಾರ, ಜೂನ್ 18, 2021
28 °C

ಮಾಫಿಯಾಗಳ ಮೇಲುಗೈ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮಧ್ಯಪ್ರದೇಶದ ಕಲ್ಲಿದ್ದಲು ಗಣಿ ಮಾಫಿಯಾದ ಹಂತಕರು ಕಳೆದ ತಿಂಗಳು ಪತ್ರಕರ್ತ ಚಂದ್ರಿಕಾ ರಾಯ್ ಹಾಗೂ ಅವರ ಪತ್ನಿ ಮತ್ತು ಇಬ್ಬರು ಮಕ್ಕಳನ್ನು ಹತ್ಯೆ ಮಾಡಿದ ಘಟನೆಯ ನೆನಪು ಹಸಿರಾಗಿರುವಾಗಲೇ ಅಲ್ಲಿನ ಕಲ್ಲು ಗಣಿ ಮಾಫಿಯಾ ಯುವ ಐಪಿಎಸ್ ಅಧಿಕಾರಿ ನರೇಂದ್ರಕುಮಾರ್ ಸಿಂಗ್ ಅವರನ್ನು ಬಲಿ ತೆಗೆದುಕೊಂಡಿದೆ. ಕಲ್ಲು ತುಂಬಿದ್ದ ಟ್ರ್ಯಾಕ್ಟರನ್ನು ಅವರ ಮೇಲೆ ಓಡಿಸಿ ಬರ್ಬರವಾಗಿ ಹತ್ಯೆ ಮಾಡಲಾಗಿದೆ. ಈ ಘಟನೆ ನಡೆದ ಮರುದಿನವೇ ಹೋಳಿ ಹಬ್ಬದ ಹಿನ್ನೆಲೆಯಲ್ಲಿ ನಿಷೇಧಾಜ್ಞೆ ಇದ್ದರೂ ಮದ್ಯ ಮಾರಾಟದಲ್ಲಿ ತೊಡಗಿದ್ದವರ ಮೇಲೆ ಕ್ರಮಕ್ಕೆ ಮುಂದಾದ ಐಪಿಎಸ್ ಅಧಿಕಾರಿ ಜಯಶೀಲನ್ ಅವರ ಮೇಲೆ ಬಿಜೆಪಿಯ ಮಾಜಿ ಶಾಸಕ ನರೇಂದ್ರ ಸಿಂಗ್ ಅವರ ಬೆಂಬಲಿಗರು ಹಲ್ಲೆ ಮಾಡಿದ್ದಾರೆ. ಅಕ್ರಮ ಮರಳು ದಂಧೆಯನ್ನು ನಿಯಂತ್ರಿಸಲು ಹೋದ ಅಧಿಕಾರಿಗಳ ಮೇಲೆ ಹಲ್ಲೆ ನಡೆದ ಇನ್ನೊಂದು ಪ್ರಕರಣವೂ ನಡೆದಿದೆ. ಅಂದರೆ ಮಧ್ಯಪ್ರದೇಶದಲ್ಲಿ ಅಕ್ರಮ ಗಣಿಗಾರಿಕೆ, ಕಲ್ಲುಗಣಿಗಾರಿಕೆ, ಮರಳು ಮಾಫಿಯಾಗಳ ಎದುರು ಸರ್ಕಾರ ಸಂಪೂರ್ಣ ನಿಷ್ಕ್ರಿಯವಾಗಿದೆ. ಅಕ್ರಮಗಳನ್ನು ತಡೆಯಲು ಮುಂದಾದ ಐಪಿಎಸ್ ದರ್ಜೆಯ ಅಧಿಕಾರಿಗಳಿಗೆ ಬೆಂಗಾವಲಾಗಿ ನಿಲ್ಲುವ ಮೂಲಕ ಸರ್ಕಾರ ಅವರಿಗೆ ನೈತಿಕ ಸ್ಥೈರ್ಯ ತುಂಬಬೇಕು ಎಂಬುದನ್ನೇ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಮರೆತಿದ್ದಾರೆ. ಅವರು ಅಕ್ರಮ ವ್ಯವಹಾರಗಳಿಗೆ ಕುಮ್ಮಕ್ಕು ಕೊಡುತ್ತಿದ್ದಾರೆ. ಸಿಂಗ್ ಹತ್ಯೆ ಪ್ರಕರಣವನ್ನು ನ್ಯಾಯಾಂಗ ತನಿಖೆಗೆ ಒಪ್ಪಿಸಿರುವುದು ರಾಜ್ಯ ಸರ್ಕಾರದ ವಿಳಂಬ ತಂತ್ರ. ಈ ಹತ್ಯೆಯ ಹಿಂದೆ ರಾಜಕೀಯ ವ್ಯಕ್ತಿಗಳ ಕೈವಾಡ ಇರುವುದರಿಂದ ಸಿಬಿಐ ತನಿಖೆಗೆ ವಹಿಸಬೇಕು.

ಮಧ್ಯಪ್ರದೇಶದಲ್ಲಿ ಕಲ್ಲಿದ್ದಲು, ಗ್ರಾನೈಟ್ ಮತ್ತಿತರ ಸಂಪನ್ಮೂಲಗಳನ್ನು ದೋಚುವ ದಂಧೆ ಬಹಳ ಹಿಂದಿನಿಂದ ವ್ಯವಸ್ಥಿತವಾಗಿ ನಡೆಯುತ್ತಿದೆ. ಈ ದಂಧೆಗಳಲ್ಲಿ ಎಲ್ಲ ಪಕ್ಷಗಳ ರಾಜಕಾರಣಿಗಳೂ ಇದ್ದಾರೆ. ಸರ್ಕಾರದ ಕೆಲವು ಹಿರಿಯ ಅಧಿಕಾರಿಗಳು ಮತ್ತು ಪೊಲೀಸ್ ಅಧಿಕಾರಿಗಳ ಬೆಂಬಲ ಇಲ್ಲದೆ ಅಕ್ರಮಗಳು ನಡೆಯಲು ಸಾಧ್ಯವಿಲ್ಲ. ಇಂತಹ ಸಾಧ್ಯತೆ ಮಧ್ಯಪ್ರದೇಶಕ್ಕೆ ಸೀಮಿತವಾದ ಬೆಳವಣಿಗೆ ಅಲ್ಲ. ಮಧ್ಯಪ್ರದೇಶ ಸೇರಿದಂತೆ ದೇಶದ ಬಹುತೇಕ ರಾಜ್ಯಗಳಲ್ಲಿ ಅಕ್ರಮ ಗಣಿಗಾರಿಕೆ ಮಿತಿಮೀರಿದೆ. ರಾಜಕೀಯ ಮುಖಂಡರೇ ಇಂತಹ ಅಕ್ರಮಗಳಲ್ಲಿ ತೊಡಗಿದ್ದಾರೆ. ಅಲ್ಲಿ ಗಳಿಸುವ ಹಣ ರಾಜಕೀಯಕ್ಕೆ ಬಳಕೆಯಾಗುತ್ತಿದೆ. ಇದೊಂದು ವಿಷವರ್ತುಲ. ಅದನ್ನು ನಿಯಂತ್ರಿಸಲು ಪ್ರಯತ್ನಿಸುವ ಸಾಹಸಿ ಅಧಿಕಾರಿಗಳು ಜೀವವನ್ನೇ ಕಳೆದುಕೊಳ್ಳುತ್ತಿದ್ದಾರೆ. ಇದು ನಿಲ್ಲಬೇಕು. ಅಕ್ರಮ ಗಣಿಗಾರಿಕೆ ಮೂಲಕ ದೇಶದ ಸಂಪತ್ತನ್ನು ಕೊಳ್ಳೆ ಹೊಡೆಯುತ್ತಿರುವ ಎಲ್ಲ ಪ್ರಕರಣಗಳನ್ನು ಸಿಬಿಐ ತನಿಖೆಗೆ ಒಪ್ಪಿಸಬೇಕು. ಸಿಬಿಐ ತನಿಖೆಗೆ ಕೆಲವು ರಾಜ್ಯ ಸರ್ಕಾರಗಳು ಹಿಂದೇಟು ಹಾಕುತ್ತಿರುವುದು ಸಮರ್ಥನೀಯವಲ್ಲ. ತಪ್ಪು ಮಾಡಿರುವವರನ್ನು ರಕ್ಷಿಸುವ ದುರುದ್ದೇಶ ಇಲ್ಲದಿದ್ದರೆ ರಾಜ್ಯ ಸರ್ಕಾರಗಳು ಯಾವುದೇ ಬಗೆಯ ತನಿಖೆಗೆ ಏಕೆ ಹಿಂಜರಿಯಬೇಕು? ಅದರಲ್ಲಿಯೂ ದೇಶದ ಸಂಪತ್ತನ್ನು ಲೂಟಿ ಮಾಡುತ್ತಿರುವವರನ್ನು ನಿರ್ದಾಕ್ಷಿಣ್ಯವಾಗಿ ನಿಗ್ರಹಿಸುವುದು ಎಲ್ಲ ರಾಜಕೀಯ ಪಕ್ಷಗಳ ರಾಷ್ಟ್ರೀಯ ಕರ್ತವ್ಯ. ಇದರಲ್ಲಿ ಭಿನ್ನಾಭಿಪ್ರಾಯಕ್ಕೆ ಆಸ್ಪದ ಇರಬಾರದು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.