ಗುರುವಾರ , ಆಗಸ್ಟ್ 22, 2019
25 °C

ಮಾಫಿಯಾ ಹಿಡಿತ

Published:
Updated:

 ಅಧಿಕಾರಿಗಳ ವರ್ಗಾವಣೆ, ಅವರನ್ನು ನಿರ್ದಿಷ್ಟ ಹುದ್ದೆಗೆ ನೇಮಿಸುವುದು ಮತ್ತು ಶಿಸ್ತುಕ್ರಮ ಕೈಗೊಳ್ಳುವುದು ಅಧಿಕಾರದಲ್ಲಿರುವವರ ವಿವೇಚನೆಗೆ ಬಿಟ್ಟದ್ದು. ಇದನ್ನು ಬಳಸುವಾಗ ವಿವೇಕ ಮತ್ತು ಸಾರ್ವಜನಿಕ ಹಿತಾಸಕ್ತಿಯನ್ನು ಗಮನದಲ್ಲಿಡಬೇಕು. ಆದರೆ ಇದನ್ನು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಮೇಲಿಂದ ಮೇಲೆ ಉಲ್ಲಂಘಿಸಿದ ಉದಾಹರಣೆಗಳು ಇವೆ.ಇತ್ತೀಚೆಗೆ ನೊಯ್ಡಾದ ಮರಳು ಮಾಫಿಯಾ ವಿರುದ್ಧ ಕಠಿಣ ಕ್ರಮ ಕೈಗೊಂಡ ಉತ್ತರ ಪ್ರದೇಶದ ಗೌತಮಬುದ್ಧ ನಗರದ ಉಪವಿಭಾಗೀಯ ಮ್ಯಾಜಿಸ್ಟ್ರೇಟ್, ಐಎಎಸ್ ಅಧಿಕಾರಿ ದುರ್ಗಾ ಶಕ್ತಿ ನಾಗ್‌ಪಾಲ್ ಅವರನ್ನು ಅಮಾನತುಗೊಳಿಸಿದ ಕ್ರಮ ಇಂತಹ ಪ್ರಶ್ನಾರ್ಹ ಕ್ರಮಗಳಲ್ಲಿ ಇತ್ತೀಚಿನ ಉದಾಹರಣೆಯಾಗಿದೆ. ಉತ್ತರ ಪ್ರದೇಶದ ಐಎಎಸ್ ಅಧಿಕಾರಿಗಳ ಸಂಘ ಮತ್ತು ಸಾರ್ವಜನಿಕರು ಈ ಕ್ರಮದ ವಿರುದ್ಧ ಪ್ರತಿಭಟಿಸಿದ್ದಾರೆ. ಅವರ ವಿರುದ್ಧದ ಕ್ರಮ ಹಿಂತೆಗೆದುಕೊಳ್ಳುವಂತೆ ಒತ್ತಾಯಿಸಿದ್ದಾರೆ. ಶಿಸ್ತು ಕ್ರಮಕ್ಕೆ ಮರಳು ಮಾಫಿಯಾ ಕಾರಣ ಎನ್ನಲಾಗಿದೆ.ಅಕ್ರಮವಾಗಿ ಮರಳು ಗಣಿಗಾರಿಕೆಯಲ್ಲಿ ತೊಡಗಿದವರು ಮರಳು ಸಾಗಣೆ ಮಾಡುತ್ತಿದ್ದಾಗ ವಶಕ್ಕೆ ತೆಗೆದುಕೊಂಡು ಅವರ ವಿರುದ್ಧ ಕಾನೂನು ಕ್ರಮಕ್ಕೆ ಮುಂದಾಗಿರುವುದು ಅವರು ಮಾಡಿದ `ಅಪರಾಧ'ವಾಗಿದೆ. ಯಮುನಾ ಮತ್ತು ಹಿಂದೋನ್ ನದಿ ತೀರದಲ್ಲಿ ಅಕ್ರಮ ಮರಳು ಗಣಿಗಾರಿಕೆ, ಪರಿಸರದ ಮೇಲೆ ಕೆಟ್ಟ ಪರಿಣಾಮ ಬೀರಿದೆ. ಅಖಿಲೇಶ್ ಸರ್ಕಾರದ ಜತೆಗೆ ಮರಳು ಮಾಫಿಯಾ ರಾಜಕೀಯ ಸಂಪರ್ಕ ಹೊಂದಿದೆ ಎನ್ನಲಾಗಿದೆ.ಅಕ್ರಮಗಳಲ್ಲಿ ತೊಡಗಿದವರಿಗೆ ಸಹಕಾರ ನೀಡದೆ ಕಾನೂನು ಪಾಲನೆ ಮಾಡಿದ್ದೇ  ದುರ್ಗಾ ಶಕ್ತಿ ಅವರ ವಿರುದ್ಧದ ಶಿಕ್ಷೆಗೆ ಕಾರಣ ಎನ್ನಲಾಗಿದೆ.  ಆದರೆ ವಿವಾದಾತ್ಮಕ ಸ್ಥಳದಲ್ಲಿರುವ ಪ್ರಾರ್ಥನಾ ಮಂದಿರದ ಹೊರಗೋಡೆ ಒಡೆಯಲು ಆದೇಶ ನೀಡ್ದ್ದಿದು ಕೋಮುಶಾಂತಿ ಕದಡಲು ಕಾರಣವಾಗಿದ್ದು ಅವರ ವಿರುದ್ಧದ ಶಿಸ್ತು ಕ್ರಮಕ್ಕೆ ಕಾರಣ ಎಂದು ಸರ್ಕಾರ ಹೇಳಿಕೊಂಡಿದೆ.ಇದೊಂದು ನೆಪ ಮಾತ್ರ. ಇಂತಹ ನೆಪದಿಂದ ಸರ್ಕಾರಕ್ಕೆ ರಾಜಕೀಯ ಲಾಭ ಕೂಡ ಸಿಗುತ್ತದೆ. ಅಲ್ಲಿ ಕೋಮು ಸೌಹಾರ್ದ ಅಥವಾ ಶಾಂತಿಕದಡಿದ ಯಾವುದೇ ಘಟನೆ ನಡೆದಿಲ್ಲ ಎನ್ನುವುದನ್ನು ಗಮನಿಸಬೇಕು. ವಿಚಾರಣೆ ನಡೆಸದೆ ಅವರನ್ನು ಅಮಾನತುಗೊಳಿಸಿರುವುದು ಕಾನೂನಿನ ದೃಷ್ಟಿಯಲ್ಲಿ ತಪ್ಪು. ರಾಜಕೀಯ ಹಿತಾಸಕ್ತಿಗಳ ವಿರುದ್ಧ ಕ್ರಮಕ್ಕೆ ಮುಂದಾಗಿ ಕಾನೂನನ್ನು ಎತ್ತಿಹಿಡಿಯುವ ಅಧಿಕಾರಿಗಳಿಗೆ ಶಿಕ್ಷೆ ಖಚಿತ ಎನ್ನುವ ಸಂದೇಶವನ್ನು ಸರ್ಕಾರ ನೀಡಿದೆ.ಅಕ್ರಮ ಮರಳು ಗಣಿಗಾರಿಕೆ ತಡೆಗಟ್ಟುವುದು ಕಾನೂನಿನ ಪ್ರಕಾರ ಸಹಜ ಮತ್ತು ಪರಿಸರದ ಸಂರಕ್ಷಣೆಯ ದೃಷ್ಟಿಯಿಂದ ಅಗತ್ಯವಾದದ್ದು. ಮರಳು ನೂರಾರು ವರ್ಷಗಳ ಕಾಲ ಪ್ರಕೃತಿಯಲ್ಲಿ ನಡೆಯುವ ಚಟುವಟಿಕೆಯ ಫಲ. ವಿವೇಚನೆ ಇಲ್ಲದೆ ಇವುಗಳ ಬಳಕೆ ಪ್ರಾಕೃತಿಕ ಸಂಪತ್ತಿಗೆ ಕನ್ನ ಹಾಕಿದಂತೆ. ಮರಳು ಮಾಫಿಯಾ ಸರ್ಕಾರ, ಪೊಲೀಸ್ ಮತ್ತು ಆಡಳಿತವನ್ನು ನಿಯಂತ್ರಿಸುತ್ತಿರುವುದು ಉತ್ತರ ಪ್ರದೇಶವೊಂದರ್ಲ್ಲಲೇ ಅಲ್ಲ, ಇತರ ರಾಜ್ಯಗಳಲ್ಲೂ ಇದು ನಡೆಯುತ್ತದೆ.ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳುವುದಕ್ಕೆ ನಿಯಮಗಳಿವೆ. ಆದರೆ ರಾಜಕೀಯ, ವೈಯಕ್ತಿಕ ಮತ್ತು ಇತರ ಕಾರಣಗಳಿಗಾಗಿ ಇವುಗಳ ಉಲ್ಲಂಘನೆಯಾಗುತ್ತದೆ. ಹಲವಾರು ಅಧಿಕಾರಿಗಳು ಕಾನೂನು ಪಾಲನೆಗೆ ಬೆಲೆ ತೆರಬೇಕಾದ ಪರಿಸ್ಥಿತಿ ದೇಶದಲ್ಲಿರುವುದು ದುರದೃಷ್ಟಕರ.

Post Comments (+)