ಮಾಫಿ ಸಾಕ್ಷಿಗಳಾಗುವ ಯತ್ನ: ವಿದ್ಯಾರ್ಥಿನಿ ಕುಟುಂಬದ ವಿರೋಧ

7

ಮಾಫಿ ಸಾಕ್ಷಿಗಳಾಗುವ ಯತ್ನ: ವಿದ್ಯಾರ್ಥಿನಿ ಕುಟುಂಬದ ವಿರೋಧ

Published:
Updated:
ಮಾಫಿ ಸಾಕ್ಷಿಗಳಾಗುವ ಯತ್ನ: ವಿದ್ಯಾರ್ಥಿನಿ ಕುಟುಂಬದ ವಿರೋಧ

ಬಲ್ಲಿಯಾ (ಪಿಟಿಐ): ದೆಹಲಿ ಅತ್ಯಾಚಾರ ಘಟನೆಯಲ್ಲಿ ಬಂಧಿತರಾದವರ ಪೈಕಿ ಇಬ್ಬರು ಆರೋಪಿಗಳು ಮಾಫಿ ಸಾಕ್ಷಿಗಳಾಗಲು ನಡೆಸಿರುವ ಯತ್ನವನ್ನು ತೀವ್ರವಾಗಿ ಖಂಡಿಸಿರುವ ಮೃತ ವಿದ್ಯಾರ್ಥಿನಿಯ ಕುಟುಂಬ ಸದಸ್ಯರು 'ಇದು ಗಲ್ಲು ಶಿಕ್ಷೆ ತಪ್ಪಿಸಿಕೊಳ್ಳಲು ನಡೆಸಿರುವ ಯತ್ನ. ಅವರ ಮನವಿಯನ್ನು ತಿರಸ್ಕರಿಸಬೇಕು' ಎಂದು ಆಗ್ರಹಿಸಿದ್ದಾರೆ.



'ಆರೋಪಿಗಳ ಪೈಕಿ ಇಬ್ಬರಿಗೆ ಮಾಫಿ ಸಾಕ್ಷಿಗಳಾಗಲು ಅವಕಾಶ ನೀಡುವುದು ಸರಿಯಲ್ಲ. ಇದು ಗಲ್ಲು ಶಿಕ್ಷೆ ತಪ್ಪಿಸಿಕೊಳ್ಳಲು ಅವರು ನಡೆಸಿರುವ ಯತ್ನವೇ ಹೊರತು ಬೇರೇನೂ ಅಲ್ಲ' ಎಂದು ಸಾಮೂಹಿಕ ಅತ್ಯಾಚಾರಕ್ಕೆ ಬಲಿಯಾಗಿ ನಂತರ ಅಸು ನೀಗಿದ 23ರ ಹರೆಯದ ವಿದ್ಯಾರ್ಥಿನಿಯ ಸಹೋದರ ಮೇದವಾರ್ ಕಲಾ ಗ್ರಾಮದಲ್ಲಿ ಪಿಟಿಐ ಜೊತೆಗೆ ಮಾತನಾಡುತ್ತಾ ಹೇಳಿದರು.



'ಘಟನೆಗೆ ಸಂಬಂಧಿಸಿದಂತೆ ಬೇಕಾದಷ್ಟು ಸಾಕ್ಷ್ಯಗಳಿವೆ. ಆರೋಪಿಗಳನ್ನು ಮಾಫಿ ಸಾಕ್ಷಿಗಳನ್ನಾಗಿ ಮಾಡುವ ಅಗತ್ಯ ಇಲ್ಲ' ಎಂದು ಮೃತ ವಿದ್ಯಾರ್ಥಿನಿಯ ತಂದೆ ನುಡಿದರು.



'ಬರ್ಬರ ಅಪರಾಧ ಎಸಗಿರುವ ಆರೋಪಿಗಳು ಯಾವುದೇ ರೀತಿಯ ಪರಿಹಾರವನ್ನೂ ಪಡೆಯಬಾರದು. ಅಥವಾ ಅವರನ್ನು ಮಾಫಿ ಸಾಕ್ಷಿಗಳನ್ನಾಗಿ ಮಾಡಬಾರದು' ಎಂದು ವಿದ್ಯಾರ್ಥಿನಿಯ ಅಜ್ಜ ಹಾಗೂ ಚಿಕ್ಕಪ್ಪ ಕೂಡಾ ಆಗ್ರಹಿಸಿದರು.



ಹದಿನಾಲ್ಕು ದಿನಗಳ ನ್ಯಾಯಾಂಗ ಬಂಧನದ ಮುಗಿದ ಬಳಿಕ ದೆಹಲಿಯ ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್ ಜ್ಯೋತಿ ಕ್ಲೇರ್ ಅವರ ಕೊಠಡಿಯಲ್ಲಿ ಭಾನುವಾರ ಹಾಜರು ಪಡಿಸಲಾಗಿದ್ದ ನಾಲ್ವರು ಆರೋಪಿಗಳ ಪೈಕಿ ಪವನ್ ಗುಪ್ತ ಮತ್ತು ವಿನಯ್ ಶರ್ಮಾ ವಕೀಲರ ನೆರವು ಪಡೆಯಲು ನಿರಾಕರಿಸಿದ್ದಲ್ಲದೆ ಸಾಮೂಹಿಕ ಅತ್ಯಾಚಾರ ಮತ್ತು ಕೊಲೆ ಪ್ರಕರಣದಲ್ಲಿ ಸರ್ಕಾರದ ಪರವಾಗಿ ಮಾಫಿ ಸಾಕ್ಷಿಗಳಾಗುವ ಇಚ್ಛೆ ವ್ಯಕ್ತ ಪಡಿಸಿದ್ದಾರೆ. ಒಬ್ಬ ಅಪ್ರಾಪ್ತ ವಯಸ್ಕ  ಸೇರಿದಂತೆ ಪ್ರಕರಣದಲ್ಲಿ ಒಟ್ಟು 6 ಮಂದಿ ಆರೋಪಿಗಳು ಇದ್ದಾರೆ.



ಅತ್ಯಾಚಾರ ಪ್ರಕರಣಗಳಲ್ಲಿ ಪ್ರಸ್ತುತ ವಿಧಿಸಲಾಗುತ್ತಿರುವ ಜೀವಾವಧಿ ಶಿಕ್ಷೆಯ ಗರಿಷ್ಠ ಸಜೆಯ ಸೆರೆವಾಸದ ಅವಧಿಯನ್ನು 30 ವರ್ಷಗಳಿಗೆ ಹೆಚ್ಚಿಸಬೇಕು ಎಂದೂ ವಿದ್ಯಾರ್ಥಿನಿಯ ಸಹೋದರ ಒತ್ತಾಯಿಸಿದ್ದಾರೆ.



ಹಾಲಿ ಅಪರಾಧ ನ್ಯಾಯದಾನದ ವ್ಯವಸ್ಥೆಯಲ್ಲಿರುವ ಹಾಲಿ ಅಪ್ರಾಪ್ತ ವಯಸ್ಕನ ವಯೋಮಿತಿಯನ್ನು 18 ವರ್ಷಗಳಿಂದ 14 ವರ್ಷಗಳಿಗೆ ಇಳಿಸಬೇಕು ಎಂದೂ ಅವರು ಆಗ್ರಹಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry