ಮಾಮರದ ಮುಡಿತುಂಬ ಹೂ ಗೊಂಚಲು

7

ಮಾಮರದ ಮುಡಿತುಂಬ ಹೂ ಗೊಂಚಲು

Published:
Updated:

ಹೊಳಲ್ಕೆರೆ: ‘ಮಾವಿನ ಮರಗಳಲ್ಲಿ ಎಲೆ ಕಾಣದಂತೆ ಜೋತು ಬಿದ್ದಿರುವ ಹೂ ಗೊಂಚಲು, ಮರದ ತುಂಬ ಗೋಲಿ ಗಾತ್ರದ ಮಾವಿನ ಮಿಡಿಗಳು, ಇಡೀ ಪ್ರದೇಶದಲ್ಲಿ ಘಮಘಮಿಸುವ ಸುವಾಸನೆ...’ ಇದು ತಾಲ್ಲೂಕಿನ ಮಾವಿನ ತೋಟಗಳ ಪ್ರಸಕ್ತ ಚಿತ್ರಣ.ತಾಲ್ಲೂಕಿನಲ್ಲಿ ಸುಮಾರು 600 ಹೆಕ್ಟೇರ್ ಪ್ರದೇಶದಲ್ಲಿ ಮಾವು ಬೆಳೆಯಲಾಗಿದ್ದು, ಈ ಬಾರಿ ಮಾವಿನ ತೋಟಗಳು ಸಮೃದ್ಧ ಹೂಗಳಿಂದ ನಳನಳಿಸುತ್ತಿವೆ. ಇಡೀ ಮರವೇ ಕಾಣದಂತೆ ತುಂಬಿರುವ ಹೂ ಗೊಂಚಲುಗಳು ಎಲ್ಲರನ್ನೂ ಬೆರಗುಗೊಳಿಸುವಂತಿದ್ದು, ರೈತ ಅಧಿಕ ಇಳುವರಿ ಪಡೆಯುವ ನಿರೀಕ್ಷೆಯಲ್ಲಿದ್ದಾನೆ. ಸಾಮಾನ್ಯವಾಗಿ ಎಲ್ಲಾ ಮರಗಳಲ್ಲೂ ಹೂರಾಶಿ ತುಂಬಿದ್ದು, ಉತ್ತಮ ಫಸಲಿನೊಂದಿಗೆ ಅಧಿಕ ಲಾಭ ಗಳಿಸಬಹದು ಎಂಬ ಲೆಕ್ಕಾಚಾರವೂ ಇಲ್ಲಿನ ರೈತರದು.ಬಿ. ದುರ್ಗ ಹೋಬಳಿಯ ಚಿಕ್ಕ ಎಮ್ಮಿಗನೂರು, ಹಿರೇ ಎಮ್ಮಿಗನೂರು, ಚಿಕ್ಕನಕಟ್ಟೆ, ಅಜ್ಜಿಕ್ಯಾತನಹಳ್ಳಿ, ನಂದಿಹಳ್ಳಿ, ತಾಳ್ಯ ಹೋಬಳಿಯ ಮದ್ದೇರು, ಮಲಸಿಂಗನಹಳ್ಳಿ ಮತ್ತು ಪಟ್ಟಣದ ಸುತ್ತಮುತ್ತ ಹೆಚ್ಚಿನ ಮಾವಿನ ತೋಟಗಳಿದ್ದು, ಸುಮಾರು 2,500 ಟನ್ ಇಳುವರಿ ನಿರೀಕ್ಷಿಸಲಾಗಿದೆ. ಹೆಚ್ಚಿನ ರೈತರು ಬಾದಾಮಿ (ಆಫೋಸ್), ತೋತಾಪುರಿ, ಬೆನೆಶಾನ್ (ಬಂಗನಪಲ್ಲಿ), ಮಲ್ಲಿಕಾ ತಳಿಯ ಮಾವು ಬೆಳೆದಿದ್ದಾರೆ. ಇದುವರೆಗೆ ರೋಗ ಲಕ್ಷಣಗಳೂ ಹೆಚ್ಚಾಗಿ ಕಂಡು ಬಂದಿಲ್ಲ. ಆದ್ದರಿಂದ ಬಂಪರ್ ಬೆಳೆ ನಿರೀಕ್ಷಿಸಲಾಗಿದೆ.‘10 ಎಕರೆಯಲ್ಲಿ ಏಳು ವರ್ಷ ಪ್ರಾಯದ, ಬಾದಾಮಿ ತಳಿಯ ಸುಮಾರು 600 ಮಾವಿನ ಮರಗಳಿವೆ. ಈ ಬಾರಿ ಸಮೃದ್ಧ ಮಳೆ ಆಗಿರುವುದರಿಂದ ಎಲ್ಲಾ ಮರಗಳೂ ಹೆಚ್ಚು ಹೂ ಬಿಟ್ಟಿವೆ. ಪ್ರತಿ ಗಿಡದಲ್ಲಿ ಸುಮಾರು 600 ರಿಂದ 1,000 ಮಾವಿನ ಕಾಯಿಗಳು ಸಿಗುವ ಅಂದಾಜಿದೆ. ಈಗಾಗಲೇ ಮೂರು ಬಾರಿ ಕೀಟನಾಶಕ ಸಿಂಪಡಿಸಿದ್ದು, ಸುಮಾರು 20 ಟನ್ ಇಳುವರಿ ನಿರೀಕ್ಷಿಸಿದ್ದೇನೆ. ಈಗಾಗಲೇ ಗಿಡಗಳಲ್ಲಿ ಗೋಲಿ ಗಾತ್ರದ ಕಾಯಿಗಳಾಗಿದ್ದು, ಶೇ. 75ರಷ್ಟು ಫಸಲು ಬರುವುದು ಗ್ಯಾರಂಟಿ’ ಎನ್ನುತ್ತಾರೆ ಪಟ್ಟಣದ ರೈತ ರೆಹಮತ್ ಉಲ್ಲಾಖಾನ್.ಬೆಲೆ ಕುಸಿತ ನಿಶ್ಚಿತ: ‘ಡಿಸೆಂಬರ್ ತಿಂಗಳಲ್ಲೇ ಮಾವಿನ ಮರಗಳು ಹೂವಾಗಿ, ಇಷ್ಟು ಹೊತ್ತಿಗೆ ಕಾಯಿ ಕಟ್ಟಬೇಕಿತ್ತು. ಈ ಬಾರಿ ಹೂ ಬಿಡುವುದು ವಿಳಂಬವಾಗಿದ್ದು, ಮೇ ತಿಂಗಳಲ್ಲಿ ಕಾಯಿ ಕಟಾವಿಗೆ ಬರುತ್ತದೆ. ಮಳೆಗಾಲ ಪ್ರಾರಂಭವಾಗುವುದರಿಂದ ಕಾಯಿಗಳ ಮೇಲೆ ಕೀಟಗಳು ಕೂತು, ಚುಕ್ಕೆಗಳಾಗುತ್ತವೆ. ಆಲಿಕಲ್ಲು ಬಿದ್ದರೆ, ಕಾಯಿಗಳು ಕೆಟ್ಟುಹೋಗುತ್ತವೆ. ಹಣ್ಣಿನಲ್ಲಿ ಹುಳುಗಳಾಗುವ ಸಂಭವವೂ ಇರುತ್ತದೆ. ಗುಣಮಟ್ಟ ಕಡಿಮೆಯಾದರೆ ಹೊರರಾಜ್ಯಗಳಿಗೆ ರಪ್ತು ಮಾಡಲಾಗುವುದಿಲ್ಲ. ನಮ್ಮ ಮಾವು ಬರುವುದರ ಒಳಗೇ ರತ್ನಗಿರಿ ಮಾವು ಮಾರುಕಟ್ಟೆಗೆ ಬರುತ್ತದೆ. ಆದ್ದರಿಂದ ಈ ಬಾರಿ ಮಾವಿನ ಬೆಲೆ ಕುಸಿಯುವುದು ನಿಶ್ಚಿತ’ ಎನ್ನುತ್ತಾರೆ ಪ್ರತೀ ವರ್ಷ ಸುಮಾರು ್ಙ 50 ಲಕ್ಷ ಮೌಲ್ಯದ ಮಾವಿನ ತೋಟ ಗುತ್ತಿಗೆ ಮಾಡುವ ಪಟ್ಟಣದ ಸಯ್ಯದ್ ಲತೀಫ್ ಮತ್ತು ಸೈಯದ್ ಜಾವೀದ್.ಮಾರುಕಟ್ಟೆ ಕೊರತೆ: ಮಾವು ಬೆಳೆಗಾರರು ಉತ್ತಮ ಇಳುವರಿ ಪಡೆದರೂ ಅದನ್ನು ಮಾರಾಟ ಮಾಡಲು ಸ್ಥಳಿಯವಾಗಿ ಉತ್ತಮ ಮಾರುಕಟ್ಟೆ ಸೌಲಭ್ಯ ಇಲ್ಲ. ಇಲ್ಲಿ ಮಾವು ಸಂಗ್ರಹಿಸಲು ಶೈತ್ಯಾಗಾರಗಳು, ಸಂಸ್ಕರಣಾ ಘಟಕಗಳ ಸೌಲಭ್ಯವೂ ಇಲ್ಲ. ದೂರದ ನಗರಗಳಿಗೆ ಸಾಗಿಸಲು ಸಾರಿಗೆ ವೆಚ್ಚ ಅಧಿಕವಾಗುವುದರಿಂದ ಸಿಕ್ಕಷ್ಟು ಬೆಲೆಗೆ ಮರಗಳನ್ನೇ ಗುತ್ತಿಗೆ ಕೊಡುತ್ತೇವೆ. ಇದರಿಂದ ರೈತರಿಗಿಂತ ಮಧ್ಯವರ್ತಿಗಳಿಗೇ ಹೆಚ್ಚಿನ ಲಾಭವಾಗುತ್ತದೆ’ ಎಂಬುದು ಹೆಚ್ಚಿನ ರೈತರ ದೂರು. 

  

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry